ಕೆದಂಬಾಡಿ : 17 ನೇ ಅಕ್ರಮ ಸಕ್ರಮ ಬೈಠಕ್

0

ಬಡವರ ಒಂದೇ ಒಂದು ಅಕ್ರಮ ಸಕ್ರಮ ಕಡತವನ್ನು ವಿಲೇವಾರಿ ಮಾಡಿರಲಿಲ್ಲ; ಶಾಸಕ ಅಶೋಕ್ ರೈ


ಪುತ್ತೂರು: ನಾನು ಶಾಸಕನಾಗಿ ಆಯ್ಕೆಯಾಗುವ ವೇಳೆ ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಒಟ್ಟು 32 ಸಾವಿರ ಅಕ್ರಮ ಸಕ್ರಮ ಕಡತಗಳನ್ನು ವಿಲೇವಾರಿ ಮಾಡದೇ ಹಾಗೇ ಬಿಟ್ಟು ಯಾರೆಲ್ಲಾ ಲಂಚ ಕೊಟ್ಟಿದ್ದಾರೋ ಅವರ ಕಡತಗಳನ್ನು ವಿಲೇವಾರಿ ಕೊಡುವ ಮೂಲಕ ಬಡ ಫಲಾನುಭವಿಗಳಿಗೆ ದ್ರೋಹ ಮಾಡಿದ್ದರು ಎಂದು ಶಾಸಕ ಅಶೋಕ್ ರೈ ಹೇಳಿದರು.


ಅವರು ಕೆದಂಬಾಡಿ ಗ್ರಾಪಂ ಸಭಾಂಗಣದಲ್ಲಿ ನಡೆದ ಪುತ್ತೂರು ವಿಧಾನಸಭಾ ಕ್ಷೇತ್ರದ 17 ನೇ ಅಕ್ರಮ ಸಕ್ರಮ ಬೈಠಕ್‌ನಲ್ಲಿ ಮಾತನಾಡಿದರು.


ಶಾಸಕನಾಗಿ ಆಯ್ಕೆಯಾದ ಬಳಿಕ ಪ್ರತೀ ಗ್ರಾಮಕ್ಕೆ ತೆರಳಿ ಅಕ್ರಮ ಸಕ್ರಮ ಬೈಠಕ್ ಮಾಡುತ್ತಿದ್ದೇನೆ. ಜನರ ಮನೆ ಬಾಗಿಲಿಗೆ ಬಂದು ಜನರ ಮುಂದೆಯೇ ಬೈಠಕ್ ನಡೆಯುತ್ತಿದೆ. ಬಾಕಿ ಇರುವ ಕಡತಗಳನ್ನು ಒಂದೊಂದಾಗಿ ವಿಲೇವಾರಿ ಮಾಡುತ್ತಿದ್ದೇವೆ. ಅಕ್ರಮ ಸಕ್ರಮಕ್ಕೆ ಹಣ ಕೊಡಬೇಡಿ ಎಂದು ಹೋದಲ್ಲೆಲ್ಲಾ ಹೇಳುತ್ತಿದ್ದೇನೆ ಆದರೂ ಕದ್ದುಮುಚ್ಚಿ ಕೆಲವರು ಹಣ ನೀಡುತ್ತಿದ್ದಾರೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. ಬಡವರಿಂದ ಹಣ ಪಡೆದವರು ಯಾರೂ ಬರ್ಕತ್ತಾಗುವುದಿಲ್ಲ ಎಂಬುದನ್ನು ನೆನಪಿಟ್ಟುಕೊಳ್ಳಿ ಎಂದು ಹೇಳಿದರು. ನಾಲ್ಕು ಗೋಡೆಯ ಮಧ್ಯೆ ನಡೆಯುತ್ತಿದ್ದ ಅಕ್ರಮ ಸಕ್ರಮವನ್ನು ಹೊರ ಜಗತ್ತಿಗೆ ಪರಿಚಯಿಸಿದ್ದೇನೆ, ಜನರು ನಮ್ಮ ಕ್ರಮವನ್ನು ಒಪ್ಪಿಕೊಳ್ಳುತ್ತಾರೆ ಎಂಬ ಪೂರ್ಣ ನಂಬಿಕೆಯೂ ಇದ್ದು ಮುಂದಿನ ಚುನಾವಣೆಯಲ್ಲಿ ಆಶೀರ್ವಾದ ಮಾಡುತ್ತಾರೆ ಎಂಬ ವಿಶ್ವಾಸವೂ ಇದೆ ಎಂದು ಶಾಸಕರು ಹೇಳಿದರು.

ಯಾವುದೆಲ್ಲಾ ಆಗುವುದೇ ಇಲ್ಲ ಅಂದ್ರು ಅದೆಲ್ಲವನ್ನೂ ಮಾಡಿದ್ದೇನೆ
ಮೆಡಿಕಲ್ ಕಾಲೇಜು ಆಗುವುದಿಲ್ಲ ಎಂದು ತಮಾಷೆ ಮಾಡಿದರು ಅದನ್ನು ಮಾಡಿದ್ದೇನೆ, ಸರಕಾರಿ ಜಾಗದಲ್ಲಿರುವ ಧಾರ್ಮಿಕ ಕೇಂದ್ರಗಳನ್ನು ಸಕ್ರಮ ಮಾಡಿದ್ದೇನೆ, ಯಾವುದೇ ದಾಖಲೆ ಇಲ್ಲದಿದ್ದರೂ ಬಡವರ ಮನೆಗೆ ವಿದ್ಯುತ್ ಸಂಪರ್ಕದ ವ್ಯವಸ್ಥೆ ಮಾಡಿದ್ದೇನೆ, ಕುಡಿಯುವ ನೀರಿಗೆ 1006 ಕೋಟಿ ರೂ ತಂದಿದ್ದೇನೆ, ಮುಂಡೂರಿನಲ್ಲಿ ಬೃಹತ್ ಕ್ರೀಡಾಂಗಣ ಮತ್ತು ಆರ್‌ಟಿಒ ಟ್ರ್ಯಾಕ್ ಬಂದಿದೆ, ಪುತ್ತೂರಿನ ಮಹಾಲಿಂಗೇಶ್ವರ ದೇವರ ಜಾಗದಲ್ಲಿದ್ದ ಅಕ್ರಮ ಮನೆಗಳನ್ನು ತೆರವು ಮಾಡಿದ್ದೇನೆ ಹೀಗೇ ಯಾವುದೆಲ್ಲಾ ಆಗುವುದೇ ಇಲ್ಲ ಎಂದು ಕೆಲವರು ಹೇಳಿದ್ದರು ಅದೆಲ್ಲವನ್ನೂ ಮಾಡಿದ್ದೇನೆ ಎಂದು ಶಾಸಕರು ಹೇಳಿದರು.

94ಸಿ,94 ಸಿಸಿ ಬಗ್ಗೆ ಗಮನವಿಡಿ
ಬಡವರು 9 ಸೆಂಟ್ಸ್ , 2.34 ಸೆಂಟ್ಸ್ ಜಾಗದಲ್ಲಿ ಮನೆ ಕಟ್ಟಿ ಅದರ ಅಡಿಸ್ಥಳಕ್ಕೆ ಅರ್ಜಿ ಹಾಕಿದ್ದು ಅದನ್ನು ಯಾವುದೇ ಕಾರಣಕ್ಕೂ ತಿರಸ್ಕಾರ ಮಾಡಬಾರದು ಎಂದು ವಿ ಎ ಗಳಿಗೆ ಶಾಸಕರು ಸೂಚನೆ ನೀಡಿದರು. ಮಾಜಿ ಶಾಸಕರ ಅವಧಿಯಲ್ಲಿ ತಿರಸ್ಕೃತಗೊಂಡ 4500 94 ಸಿ ಕಡತಗಳನ್ನು ವಾಪಸ್ ತರಿಸಿದ್ದು ಅದನ್ನು ಕಾನೂನು ಪ್ರಕಾರವೇ ಬಡವರಿಗೆ ನೀಡಲಿದ್ದೇನೆ. ಬಡವರ ಮನಸ್ಸಿಗೆ ಯಾರೂ ನೋವುಂಟು ಮಾಡಬಾರದು ಅದನ್ನು ನಾನು ಸಹಿಸುವುದಿಲ್ಲ. ಕಾನೂನು ಪಾಲನೆಯ ಜೊತೆಗೆ ಮಾನವೀಯತೆಯನ್ನು ಮರೆಯಬಾರದು ಎಂದು ಶಾಸಕರು ಹೇಳಿದರು.

ಅಶೋಕ್ ರೈ ಪುತ್ತೂರಿನ ನೆಪೋಲಿಯನ್: ಬಡಗನ್ನೂರು
ನೆಪೋಲಿಯನ್‌ನ ಡೈರಿಯಲ್ಲಿ ಆಗುವುದಿಲ್ಲ ಎಂಬ ಪದವೇ ಇರಲಿಲ್ಲ ಅದೇ ರೀತಿ ಪುತ್ತೂರು ಶಾಸಕರ ಡೈರಿಯಲ್ಲಿ ಆಗುವುದಿಲ್ಲ ಎಂಬ ಶಬ್ದವೇ ಇಲ್ಲ ಆ ಕಾರಣ ಇವರು ಪುತ್ತೂರಿನ ನೆಪೋಲಿಯನ್ ಆಗಿದ್ದಾರೆ ಎಂದು ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಹೇಳಿದರು.


ಪುತ್ತೂರಿನಲ್ಲಿ ಈ ಹಿಂದೆಯೂ ಅನೇಕ ಮಂದಿ ಶಾಸಕರಾಗಿದ್ದರು, ಪುತ್ತೂರಿನವರು ಮಂತ್ರಿ, ಮುಖ್ಯಮಂತ್ರಿಯೂ ಆಗಿದ್ದರು ಆದರೆ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಲು ಯಾರಿಂದಲೂ ಸಾಧ್ಯವಾಗಿಲ್ಲ, ಇಂದು ದಿನೇ ಪುತ್ತೂರು ಅಭಿವೃದ್ದಿಯಾಗುತ್ತಿದೆ ಇದಕ್ಕೆ ಶಾಸಕರ ಮುತುವರ್ಜಿಯೇ ಕಾರಣವಾಗಿದೆ. ದ ಕ ಜಿಲ್ಲೆಯ ಯಾವ ಕ್ಷೇತ್ರದಲ್ಲೂ ಅಕ್ರಮ ಸಕ್ರಮ ನಡೆಯುತ್ತಿಲ್ಲ , ಪುತ್ತೂರಿನಲ್ಲಿ ಮಾತ್ರ ನಡೆಯುತ್ತಿರುವುದು ಶಾಸಕರ ಇಚ್ಚಾಶಕ್ತಿಯೇ ಕಾರಣವಾಗಿದೆ. ಬಡವರ ಕೆಲಸ ಮಾಡದ ಅಧಿಕಾರಿಗಳ ಮೇಲೆ ಶಾಸಕರು ಕೋಪ ಮಾಡಿಕೊಂಡರೂ ಅವರ ಮೇಲೆ ಅಷ್ಟೇ ಪ್ರೀತಿಯನ್ನು ತೋರಿಸುತ್ತಾರೆ. ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಒಂದೇ ಒಂದು 94 ಸಿ ಬಾಕಿ ಇಲ್ಲದೆ ಎಲ್ಲವನ್ನೂ ಕೆಲವೇ ದಿನಗಳಲ್ಲಿ ವಿಲೇವಾರಿ ಮಾಡಲಿದ್ದಾರೆ ಎಂದು ಹೇಳಿದರು.


ತಹಶಿಲ್ದಾರ್ ಕೂಡ್ಲಿಗಿ ಮಾತನಾಡಿ, ಶಾಸಕರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಅಕ್ರಮ ಸಕ್ರಮ ಬೈಠಕ್ ಪ್ರತೀ ವಾರ ನಡೆಯುತ್ತಿದೆ. ಶಾಸಕರ ಸೂಚನೆಯಂತೆ ನಾವು ಪ್ರತೀ ಗ್ರಾಮಗಳಲ್ಲಿ ಕಡತವನ್ನು ಸಿದ್ದಪಡಿಸುತ್ತಿದ್ದೇವೆ. ಯಾರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ಹೇಳಿದರು.


ವೇದಿಕೆಯಲ್ಲಿ ಅಕ್ರಮ ಸಕ್ರಮ ಸಮಿತಿ ಸದಸ್ಯೆ ರೂಪರೇಖಾ ಆಳ್ವ, ರಾಮಣ್ಣ ಪಿಲಿಂಜ,ಸುಜಾತಾ ಉಪಸ್ಥಿತರಿದ್ದರು. ಗ್ರಾಮಕರಣಿಕ ಉಮೇಶ್ ಕಾವಾಡಿಗ ಸ್ವಾಗತಿಸಿ, ಕಂದಾಯ ನಿರಿಕ್ಷಕ ಗೋಪಾಲ್ ವಂದಿಸಿದರು. ಶಾಸಕರ ಕಚೇರಿ ಸಿಬಂದಿ ಪ್ರವೀಣ್ ಸಹಕರಿಸಿದರು.

LEAVE A REPLY

Please enter your comment!
Please enter your name here