ಶಿಥಿಲಗೊಂಡಿರುವ ಹಲಗೆ: ನಾಲಾಯಗುಂಡಿ ಕಿಂಡಿ ಅಣೆಕಟ್ಟಿನಲ್ಲಿ ನೀರು ಸೋರಿಕೆ

0

ಉಪ್ಪಿನಂಗಡಿ: ಇಲ್ಲಿನ ಪುಳಿತ್ತಡಿ ಬಳಿಯ ನಾಲಾಯಗುಂಡಿ ಎಂಬಲ್ಲಿ ರೈತಾಪಿ ವರ್ಗದ ಉಪಯೋಗಕ್ಕಾಗಿ ನಿರ್ಮಾಣವಾದ ಕಿಂಡಿ ಅಣೆಕಟ್ಟಿನಲ್ಲಿ ಈ ಬಾರಿ ನೀರು ನಿಲ್ಲಿಸುವ ಕಾರ್ಯವಾದರೂ ಮೂರು ಕಿಂಡಿಗಳಲ್ಲಿನ ಹಲಗೆಗಳು ಶಿಥಿಲಗೊಂಡು ನೀರು ಸೋರಿಕೆಯಾಗುತ್ತಿರುವುದರಿಂದ ಕೆಲವೇ ದಿನಗಳಲ್ಲಿ ಇದರಲ್ಲಿ ಶೇಖರಣೆಗೊಂಡಿರುವ ನೀರು ಬರಿದಾಗುವ ಸಾಧ್ಯತೆ ಕಂಡು ಬಂದಿದೆ.


ಉಪ್ಪಿನಂಗಡಿ ಗ್ರಾಮದ ನಾಲಾಯಗುಂಡಿ ಎಂಬಲ್ಲಿ ಸಣ್ಣ ಹೊಳೆಗೆ 31.70 ಮೀಟರ್ ಎತ್ತರದ ಕಿಂಡಿ ಅಣೆಕಟ್ಟನ್ನು ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಸುಮಾರು 1 ಕೋ. ರೂ. ವೆಚ್ಚದಲ್ಲಿ ನಿರ್ಮಿಸಿತ್ತು. 2019ರ ಡಿಸೆಂಬರ್ 7ರಂದು ಇದು ಲೋಕಾರ್ಪಣೆಗೊಂಡಿತು. 1.95 ಎಂ.ಸಿ.ಎಫ್.ಟಿ. ನೀರು ಶೇಖರಣಾ ಸಾಮರ್ಥ್ಯ ಇದರದ್ದಾಗಿದ್ದು, ಇದರ ಅಚ್ಚುಕಟ್ಟು 40 ಎಕರೆ ಪ್ರದೇಶಕ್ಕೆ ವ್ಯಾಪಿಸಿತ್ತು. ಇದರಲ್ಲಿ 14 ಕಿಂಡಿಗಳಿದ್ದು, 1.80*3 ಮೀ. ಗೇಟಿನ ಗಾತ್ರವಿದೆ. ಇದಕ್ಕೆ ಕಿರಾಲ್ ಬೋಗಿ ಹಲಗೆಯನ್ನಿಟ್ಟು ನೀರು ನಿಲ್ಲಿಸಲಾಗುತ್ತಿತ್ತು. ಈ ಅಣೆಕಟ್ಟಿನ ಮೇಲೆ ದ್ವಿಚಕ್ರ ವಾಹನ, ಜೀಪು, ಪಿಕಾಪ್‌ನಂತರ ಮಧ್ಯಮ ವಾಹನಗಳ ಸಂಚಾರಕ್ಕೆ ಅನುಕೂಲವಾಗುಂತೆ ಇದರ ನಿರ್ಮಾಣವಾಗಿದ್ದು, ಇದರಿಂದ ನಾಲಾಯಗುಂಡಿಯಿಂದ ಹಿರೇಬಂಡಾಡಿಗೆ ಸಂಪರ್ಕ ಸೇತುವಾಗಿ ಇದು ಉಪಯೋಗ ಸಿಗುವಂತೆ ಮಾಡಲಾಗಿತ್ತು. ಒಂದೆರಡು ವರ್ಷ ಕಿಂಡಿ ಅಣೆಕಟ್ಟಿಗೆ ಹಲಗೆ ಅಳವಡಿಸದಿರುವುದರಿಂದ ಇಲ್ಲಿ ನೀರು ಶೇಖರಿಸುವ ಕಾರ್ಯ ಆಗಿರಲಿಲ್ಲ. ಈ ಬಾರಿ ಹಲಗೆ ಅಳವಡಿಸಲಾಗಿದ್ದು, ಆದರೆ ಹಲಗೆಗಳು ಗೆದ್ದಲು ತಿಂದು, ನೀರಿಗೆ ಒದ್ದೆಯಾಗಿ ಶಿಥಿಲಗೊಂಡ ಕಾರಣ ಯಥೇಚ್ಛ ಪ್ರಮಾಣದಲ್ಲಿ ನೀರು ಕಿಂಡಿ ಅಣೆಕಟ್ಟಿನಿಂದ ಹೊರಗೆ ಹರಿದು ಹೋಗುತ್ತಿದೆ. ಇದೇ ಪ್ರಮಾಣದಲ್ಲಿ ನೀರು ಹರಿದು ಹೋದರೆ ಕೆಲವೇ ದಿನಗಳಲ್ಲಿ ಕಿಂಡಿ ಅಣೆಕಟ್ಟು ಬರಿದಾಗುವ ಸಾಧ್ಯತೆ ಇದೆ.

ದೂರದೃಷ್ಟಿ ಯೋಜನೆಯನ್ನಿಟ್ಟುಕೊಂಡು ಈ ಅಣೆಕಟ್ಟು ನಿರ್ಮಾಣ ಮಾಡಿದ್ದರೂ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಕಾಲಕಾಲಕ್ಕೆ ಇದರ ನಿರ್ವಹಣೆಯ ಉಸ್ತುವಾರಿಯನ್ನು ವಹಿಸದಿರುವುದರಿಂದ ಈ ದುಸ್ಥಿತಿ ಬಂದೊದಗಿದೆ. ಹೀಗೆ ಆದಲ್ಲಿ ಇದರ ಮೂಲ ಉದ್ದೇಶವೇ ಈಡೇರದೇ ಇದಕ್ಕೆ ವೆಚ್ಚವಾದ ಒಂದು ಕೋ.ರೂ. ಸಾರ್ವಜನಿಕ ಹಣ ವ್ಯರ್ಥಾವಾಗಲಿದೆ.
ರಾಮಚಂದ್ರ ಮಣಿಯಾಣಿ
ಮಾಜಿ ಅಧ್ಯಕ್ಷರು, ಉಪ್ಪಿನಂಗಡಿ ಗ್ರಾ.ಪಂ.

ಕಿಂಡಿ ಅಣೆಕಟ್ಟುಗಳಿಗೆ ಅಳವಡಿಸಲಾಗಿರುವ ಹಲಗೆ ಬಹುತೇಕ ಗೆದ್ದಲು ಹಿಡಿದು ಹೋಗಿದ್ದು, ನೀರು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಈ ಬಗ್ಗೆ ಈಗಾಗಲೇ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಗೆ ಮನವರಿಕೆ ಮಾಡಲಾಗಿದ್ದು, ಇಲ್ಲಿಗೆ ಫೈಬರ್ ಹಲಗೆಯ ಬೇಡಿಕೆಯ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಲೊಕೇಶ್ ಬೆತ್ತೋಡಿ
ಸದಸ್ಯರು, ಉಪ್ಪಿನಂಗಡಿ ಗ್ರಾ.ಪಂ.

LEAVE A REPLY

Please enter your comment!
Please enter your name here