ಉದನೆಯೋ….ಉಡಾನೆ ಯೋ..?- ನಗೆಪಾಟಲಿಗೀಡಾದ ದಾರಿ ಸೂಚಕ

0

ವರದಿ; ಹರೀಶ್ ಬಾರಿಂಜ


ನೆಲ್ಯಾಡಿ: ದಾರಿಸೂಚಕದಲ್ಲಿ ‘ಉದನೆ’ಯನ್ನು ‘ಉಡಾನೆ’ ಎಂದು ಕನ್ನಡದಲ್ಲಿ ತಪ್ಪಾಗಿ ನಮೂದಿಸಿರುವುದು ನಗೆಪಾಟಲಿಗೀಡಾಗುವುದರ ಜೊತೆಗೆ ಜನರ ಕೆಂಗಣ್ಣಿಗೂ ಗುರಿಯಾಗಿದೆ.


ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಗ್ರಾಮದ ಅಡ್ಡಹೊಳೆಯಿಂದ ಬಿ.ಸಿ.ರೋಡ್ ತನಕ ಹೆದ್ದಾರಿ ಅಗಲೀಕರಣ ಹಾಗೂ ಚತುಷ್ಪಥ ಕಾಮಗಾರಿ ನಡೆದಿದೆ. ಈ ಪೈಕಿ ಅಡ್ಡಹೊಳೆಯಿಂದ ಪೆರಿಯಶಾಂತಿ ತನಕ ಹೆದ್ದಾರಿ ಅಗಲೀಕರಣ ಹಾಗೂ ಚತುಷ್ಪಥ ಕಾಮಗಾರಿ ಗುತ್ತಿಗೆ ವಹಿಸಿಕೊಂಡಿರುವ ಕಂಪನಿ ಬಹುತೇಕ ಕಾಮಗಾರಿ ಪೂರ್ಣಗೊಳಿಸಿದೆ. ಆ ಬಳಿಕ ಹೆದ್ದಾರಿಯಲ್ಲಿ ಬರುವ ಪ್ರಮುಖ ಊರುಗಳಲ್ಲಿ ಆ ಊರಿನ ಹೆಸರಿರುವ ನಾಮಫಲಕ ಅಳವಡಿಸಿದೆ. ಅದೇ ರೀತಿ ಉದನೆಯಲ್ಲೂ ನಾಮಫಲಕ ಅಳವಡಿಸಲಾಗಿದ್ದು ಇದರಲ್ಲಿ ಉದನೆಯನ್ನು ಕನ್ನಡದಲ್ಲಿ ‘ಉಡಾನೆ’ ಎಂದು ನಮೂದಿಸುವ ಮೂಲಕ ನಗೆಪಾಟಲಿಗೀಡಾಗುವುದರೊಂದಿಗೆ ಜನರ ಆಕ್ರೋಶಕ್ಕೂ ಕಾರಣವಾಗಿದೆ.

ಉದನೆ ಪೇಟೆಯ ಪಕ್ಕದಲ್ಲೇ ಈ ನಾಮಫಲಕ ಅಳವಡಿಸಲಾಗಿದೆ. ಇದರಲ್ಲಿ ಮಂಗಳೂರು ಹಾಗೂ ಉದನೆಗೆ ಇರುವ ದೂರ ನಮೂದು ಮಾಡಲಾಗಿದೆ. ಎರಡು ಊರುಗಳ ಹೆಸರನ್ನು ಕನ್ನಡ, ಹಿಂದಿ ಹಾಗೂ ಇಂಗ್ಲಿಷ್ ಭಾಷೆಯಲ್ಲಿ ನಮೂದಿಸಲಾಗಿದೆ. ಈ ಪೈಕಿ ಉದನೆಯನ್ನು ಕನ್ನಡದಲ್ಲಿ ಬರೆಯುವಾಗ ಉಡಾನೆ ಎಂದು ಬರೆಯಲಾಗಿದೆ. ಈ ರೀತಿಯಾಗಿ ಊರಿನ ಹೆಸರನ್ನು ತಪ್ಪಾಗಿ ನಮೂದು ಮಾಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದ್ದು ನಾನಾ ಅರ್ಥಕಲ್ಪಿಸಿ ವೈರಲ್ ಮಾಡಲಾಗುತ್ತಿದೆ. ಕನ್ನಡ ನಾಡಿನಲ್ಲೇ ಕನ್ನಡ ಭಾಷೆಯ ಕಗ್ಗೊಲೆಯಾಗಿರುವುದು ಕನ್ನಡಿಗರ ಕಣ್ಣು ಕೆಂಪಾಗಿಸಿದೆ. ಸಂಬಂಧಪಟ್ಟವರು ಇನ್ನಾದರೂ ಎಚ್ಚೆತ್ತುಕೊಂಡು ಊರಿನ ಹೆಸರು ಸರಿಪಡಿಸಬೇಕೆಂಬ ಒತ್ತಾಯ ಊರಿನ ಜನರಿಂದ ಕೇಳಿಬಂದಿದೆ.

ಹಾಕುವಾಗಲೇ ಗಮನಕ್ಕೆ ತರಲಾಗಿದೆ
ಈ ದಾರಿ ಸೂಚಕ ಫಲಕಗಳನ್ನು ಪುಣೆಯಲ್ಲಿ ಪ್ರಿಂಟ್ ಮಾಡಿ ಇಲ್ಲಿಗೆ ತರಲಾಗಿದೆ ಎಂದು ನಮಗೆ ಮಾಹಿತಿ ನೀಡಿದ್ದಾರೆ. ಉದನೆಯಲ್ಲಿ ನಾಮಫಲಕ ಹಾಕುವ ಸಂದರ್ಭದಲ್ಲೇ ಹೆಸರು ತಪ್ಪಾಗಿ ಬರೆದಿರುವುದನ್ನು ಕಂಪನಿಯವರ ಗಮನಕ್ಕೆ ತಂದಿದ್ದೇವೆ. ಸರಿ ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ನಾಮಫಲಕ ಅಳವಡಿಸಿ ಈಗ 1 ವರ್ಷ ಕಳೆದರೂ ಈ ತನಕ ಸರಿಮಾಡಿಲ್ಲ. ಇವರು ಕಾಮಗಾರಿ ವಿಚಾರದಲ್ಲೂ ಜನರ, ಜನಪ್ರತಿನಿಧಿಗಳ ಮಾತಿಗೆ ಮನ್ನಣೆ ನೀಡಿಲ್ಲ. ಉದನೆಯಲ್ಲಿ ’ವಾಕಿಂಗ್ ಫೂಟ್ ಓವರ್’ಗೆ ಫೌಂಡೇಶನ್ ಮಾಡಿ ಹೋಗಿದ್ದಾರೆ. ಶಿರಾಡಿಯಲ್ಲಿ ಮಾರ್ಕ್ ಮಾಡಿ ಹೋಗಿದ್ದಾರೆ. ಆದರೆ ಈ ಬಗ್ಗೆ ನಮಗೆ ಯಾವುದೇ ಮಾಹಿತಿ ನೀಡುತ್ತಿಲ್ಲ.
-ಕಾರ್ತಿಕೇಯನ್, ಅಧ್ಯಕ್ಷರು, ಗ್ರಾಮ ಪಂಚಾಯತ್ ಶಿರಾಡಿ

LEAVE A REPLY

Please enter your comment!
Please enter your name here