







ಪುತ್ತೂರು: ಕರ್ನಾಟಕ ಪ್ರದೇಶ ಕೃಷಿಕ ಸಮಾಜ ಬೆಂಗಳೂರು, ದ.ಕ ಜಿಲ್ಲಾ ಕೃಷಿಕ ಸಮಾಜ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.,ಸಿ ಟ್ರಸ್ಟ್, ಮಹಾಲಿಂಗೇಶ್ವರ ದೇವಸ್ಥಾನ, ಸುದ್ದಿ ಮಾಹಿತಿ ಟ್ರಸ್ಟ್ ಮತ್ತು ಸುದ್ದಿ ಅರಿವು ಕೇಂದ್ರ, ರೈತ ಕುಡ್ಲ ಪ್ರತಿಷ್ಠಾನ ಇವುಗಳ ಸಹಯೋಗದೊಂದಿಗೆ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಜ.10ರಂದು ಆರಂಭಗೊಂಡಿರುವ ಮೈಸೂರು ವಿಭಾಗ ಮಟ್ಟದ ‘ಕೃಷಿ ಮೇಳ-ಸಸ್ಯಜಾತ್ರೆಯ 2ನೇ ದಿನವಾದ ಜ.11ರಂದೂ ಸಾರ್ವಜನಿಕರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದೆ.


2ನೇ ದಿನ ಕೃಷಿ ಬೆಳೆಗಳ ವಿವಿಧ ಗೋಷ್ಠಿ ನಡೆಯಿತು. ಕೃಷಿಕರು, ಉದ್ಯೋಗಿಗಳು, ಉದ್ಯಮಿಗಳು, ವಿವಿಧ ವೃತ್ತಿ ನಿರತರು ಸೇರಿದಂತೆ ಮಕ್ಕಳು, ಮಹಿಳೆಯರೆನ್ನದೆ ಸಾರ್ವಜನಿಕರು ಬೆಳಿಗ್ಗೆಯಿಂದಲೇ ಭೇಟಿ ನೀಡುವ ಮೂಲಕ ಜನಜಾತ್ರೆಯಾಗಿ ಮಾರ್ಪಟ್ಟಿತು. ವಿವಿಧ ಸ್ಟಾಲ್ಗಳಲ್ಲಿ ಖರೀದಿಯ ಭರಾಟೆಯೂ ಭರ್ಜರಿಯಾಗಿ ನಡೆದಿದೆ.




ಎರಡು ಗೋಷ್ಠಿ:
ಕೃಷಿಮೇಳ, ಸಸ್ಯಜಾತ್ರೆಯ ಎರಡನೇ ದಿನವಾದ ಜ.11ರಂದು ತೋಟಗಾರಿಕಾ ಇಲಾಖೆ ಜಿ.ಪಂ ಮಂಗಳೂರು ಸಹಯೋಗದಲ್ಲಿ ಎರಡು ಗೋಷ್ಠಿಗಳು ನಡೆಯಿತು. ಬೆಳಗ್ಗಿನ ಅವಧಿಯಲ್ಲಿ ಅಡಿಕೆ ಮತ್ತು ಕಾಳುಮೆಣಸಿನ ಬೆಳೆಗಳಲ್ಲಿ ನೂತನ ತಾಂತ್ರಿಕತೆಗಳು ಹಾಗೂ ತೋಟಗಾರಿಕೆ ಬೆಳೆಗಳಲ್ಲಿ ನೀರಿನ ಸಮರ್ಪಕ ಬಳಕೆಗಳ ಗೋಷ್ಠಿ ನಡೆಯಿತು. ವಿಟ್ಲ ಸಿಪಿಸಿಆರ್ಐನ ವಿಜ್ಞಾನಿ ಡಾ.ನಾಗರಾಜ್ ಅವರು ಅಡಿಕೆ ಮತ್ತು ಕಾಳು ಮೆಣಸುಗಳ ವಿವಿಧ ತಳಿಗಳು, ಕೃಷಿ ವಿಧಾನ, ಅವುಗಳಿಗೆ ನೀಡಬೇಕಾದ ಪೋಷಕಾಂಶಗಳು ಹಾಗೂ ನೀರಾವರಿಯ ವಿಧಾನಗಳ ಹಾಗೂ ತಾಂತ್ರಿಕ ವಿಧಾನಗಳ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು. ಬಳಿಕ ರೈತರ ಪ್ರಶ್ನೆಗಳಿಗೆ ಉತ್ತರಿಸಿದರು. ಸಾಧಕ ಕಾಳುಮೆಣಸು ಕೃಷಿಕರಾದ ಸುರೇಶ್ ಭಟ್ ಬಲ್ನಾಡು, ಪಲ್ಲತ್ತಡ್ಕ ಅನಂತರಾಮಕೃಷ್ಣ ಅವರು ಕೃಷಿಯ ಅನುಭವಗಳನ್ನು ಹಂಚಿಕೊಂಡರು. ಅಪರಾಹ್ನ ಕಾಫಿ, ಹಣ್ಣು ಹಾಗೂ ಇನ್ನಿತರ ಪರ್ಯಾಯ ಬೆಳೆಗಳ ಕುರಿತು ಗೋಷ್ಠಿ ನಡೆಯಿತು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಸಾಧಕ ಕಾಫಿ ಬೆಳೆ, ಕಾಳುಮೆಣಸು ಕೃಷಿಕ ಅಜಿತ್ಪ್ರಸಾದ್ ರೈ, ಸಾಧಕ ಕಾಫಿ ಬೆಳೆ ಕೃಷಿಕ ಚಂದ್ರಶೇಖರ ತಾಳ್ತಜೆ, ಸಾಧಕ ಹಣ್ಣಿನ ಬೆಳೆ ಕೃಷಿಕ ಕೆ.ಪಿ ಮುಹಮ್ಮದ್ ಸಾದಿಕ್ ಅವರು ಕೃಷಿಯ ವಿಧಾನಗಳು, ಅವುಗಳ ಉತ್ಪತ್ತಿ, ಕೊಯಿಲುಗಳ ಬಗ್ಗೆ ಮಾಹಿತಿ ನೀಡಿದರು. ವಿವಿಧ ತಾಲೂಕುಗಳಿಂದ ಆಗಮಿಸಿದ ನೂರಾರು ಮಂದಿ ರೈತರು ಗೋಷ್ಠಿಯಲ್ಲಿ ಭಾಗವಹಿಸಿ ಮಾಹಿತಿ ಪಡೆದುಕೊಂಡರು.

ಸಾಂಸ್ಕೃತಿಕ ಕಾರ್ಯಕ್ರಮ:
ದ.ಕ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಗುರುಪ್ರಿಯಾ ಶಿವಾನಂದ ಕಾಮತ್ ನಿರ್ದೇಶನದಲ್ಲಿ ಸುಪ್ರಸಿದ್ದ ಗಾಯಕ, ನಿರೂಪಕರ ಸಮ್ಮಿಲನ ಮತ್ತು ಗುರುಕುಲ ಕಲಾಕೇಂದ್ರ ಪುರುಷರಕಟ್ಟೆಯ ವಿದ್ಯಾರ್ಥಿಗಳಿಂದ ಗಾನ ನೃತ್ಯ ಸಂಭ್ರಮ-2026 ನಡೆಯಿತು.
ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆ:
ಮಕ್ಕಳನ್ನು ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಮಕ್ಕಳಿಗೆ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಎಲ್ಕೆಜಿಯಿಂದ 3ನೇ ತರಗತಿ ಮತ್ತು 4ರಿಂದ 7ನೇ ತರಗತಿ ತನಕ ಐಚ್ಚಿಕ ವಿಷಯದಲ್ಲಿ ಚಿತ್ರಕಲಾ ಸ್ಪರ್ಧೆ ಹಾಗೂ 8 ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಸ್ಥಳದಲ್ಲೇ ವಿಷಯ ನೀಡಿ ಚಿತ್ರಕಲಾ ಸ್ಪರ್ಧೆ ನಡೆಸಲಾಯಿತು. ವಿವಿಧ ಶಾಲೆಗಳ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದರು.

ಜನ ಜಾತ್ರೆಯಾದ ಮಳಿಗೆಗಳು;
ಕೃಷಿಮೇಳ, ಸಸ್ಯಜಾತ್ರೆಯ 2ನೇ ದಿನವಾದ ಜ.11ರಂದೂ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿವಿಧ ಸ್ಟಾಲ್ಗಳಿಗೆ ಜನರು ಭೇಟಿ ನೀಡಿ ಖರೀದಿಯಲ್ಲಿ ನಿರತರಾಗಿದ್ದರಲ್ಲದೆ, ಕೃಷಿ ಯಂತ್ರೋಪಕರಣ, ಸಾವಯವ ಉತ್ಪನ್ನಗಳು, ಗೊಬ್ಬರಗಳ ಬಗ್ಗೆ ವಿವಿಧ ಮಾಹಿತಿ ಪಡೆದುಕೊಳ್ಳುತ್ತಿದ್ದರು. ಸುಮಾರು 160ಕ್ಕೂ ಅಧಿಕ ಮಳಿಗೆಗಳಿದ್ದು ಬೆಳಿಗ್ಗೆಯಿಂದಲೇ ಜನರು ಆಗಮಿಸಿ ವಿವಿಧ ಸ್ಟಾಲ್ಗಳಲ್ಲಿ ಖರೀದಿಯಲ್ಲಿ ತೊಡಗುತ್ತಿದ್ದರು. ವಾರದ ರಜಾ ದಿನವಾದ ಆದಿತ್ಯವಾರ ಉದ್ಯೋಗಿಗಳು, ಗೃಹಿಣಿಯರು, ಕೃಷಿಕರು, ವಿದ್ಯಾರ್ಥಿಗಳು ತಂಡೋಪ ತಂಡವಾಗಿ ಆಗಮಿಸಿ, ಮಳಿಗೆಗಳಿಗೆ ಭೇಟಿ ನೀಡಿ ಭರ್ಜರಿ ವ್ಯಾಪಾರದಲ್ಲಿ ತೊಡಗಿಕೊಂಡಿದ್ದರು. ನರ್ಸರಿ ಮಳಿಗೆಗಳಂತೂ ಮಹಿಳೆಯರಿಂದಲೇ ತುಂಬಿಕೊಂಡಿತ್ತು. ಕೆಲವು ಮಳಿಗೆಗಳಲ್ಲಿ ಉತ್ಪನ್ನಗಳು ಖಾಲಿಯಾಗಿ ಬೇಗನೆ ಬಂದ್ ಮಾಡಿ ತೆರಳಿರುವುದು ಕಂಡು ಬಂದಿದೆ. ವಿವಿಧ ಮಳಿಗೆಗಳಿಂದ ಖರೀದಿ ಮಾಡುತ್ತಿದ್ದ ಜನತೆ ಇನ್ನೊಂದು ಭಾಗದಲ್ಲಿದ್ದ ಆಹಾರ ಮಳಿಗೆಗೆ ಭೇಟಿ ನೀಡಿ ಅಲ್ಲಿ ಘಮ ಘಮಿಸುತ್ತಿದ್ದ ನಾನಾ ಬಗೆಯ ಖಾದ್ಯಗಳನ್ನು ಸವಿಯುತ್ತಾ ರಜಾ ದಿನವನ್ನು ಸಂಭ್ರಮಿಸಿದರು.

ಇಂದು ಸಮಾರೋಪ
ಕೃಷಿಮೇಳ, ಸಸ್ಯಜಾತ್ರೆಯ ಮೂರನೇ ದಿನವಾದ ಜ.12ರಂದು ಬೆಳಿಗ್ಗೆ ಕೃಷಿ ಇಲಾಖೆ ಮಂಗಳೂರು ಇವರ ಸಹಯೋಗದಲ್ಲಿ ಭತ್ತದ ಕೃಷಿ ಹಾಗೂ ಮಣ್ಣು ಪರೀಕ್ಷೆಯ ಮಹತ್ವದ ವಿಷಯದಲ್ಲಿ ಮಾಹಿತಿ ಗೋಷ್ಠಿ ನಡೆಯಲಿದೆ. ಸಾವಯವ ಭತ್ತದ ಕೃಷಿಕ ಎ.ಪಿ ಸದಾಶಿವ ಮರಿಕೆ ಹಾಗೂ ಮಂಗಳೂರು ಕೆವಿಕೆ ವಿಜ್ಞಾನಿಗಳು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾಹಿತಿ ನೀಡಲಿದ್ದಾರೆ. ಅಪರಾಹ್ನ ಮೂರು ದಿನಗಳ ಕಾಲ ನಡೆದ ಕೃಷಿಮೇಳ, ಸಸ್ಯಜಾತ್ರೆಯ ಸಮಾರೋಪ ಸಮಾರಂಭ ದ.ಕ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ರಮಾನಾಥ ರೈ, ಮೂಡಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ, ಮಾಜಿ ಶಾಸಕ ಸಂಜೀವ ಮಠಂದೂರು, ದ.ಕ ಜಿಲ್ಲಾ ಸಹಕಾರಿ ಯೂನಿಯನ್ನ ಅಧ್ಯಕ್ಷರು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರಾಗಿರುವ ಶಶಿಕುಮಾರ್ ರೈ ಬಾಲ್ಯೊಟ್ಟು, ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ನ ನಿರ್ದೇಶಕರಾದ ಎಸ್.ಬಿ ಜಯರಾಮ ರೈ, ಕುಶಾಲಪ್ಪ ಗೌಡ ಪೂವಾಜೆ, ಎಸ್.ಎನ್ ಮನ್ಮಥ, ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ರಾಜ್ಯ ನಿರ್ದೇಶಕ ಪದ್ಮನಾಭ ರೈ ಕಲ್ಲಡ್ಕ, ಕ್ಯಾಂಪ್ಕೋ ನಿರ್ದೇಶಕರಾದ ಮಾಲಿನಿ ಪ್ರಸಾದ್, ಮುರಳಿಕೃಷ್ಣ ಚಳ್ಳಂಗಾರು, ಎ.ವಿ ತೀರ್ಥರಾಮ, ದ.ಕ ಹಾಲು ಒಕ್ಕೂಟದ ನಿರ್ದೇಶಕರಾದ ಭರತ್ ನೆಕ್ರಾಜೆ, ಚಂದ್ರಶೇಖರ ನಿಽಮುಂಡ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಆನಂದ ಸುವರ್ಣ, ದ.ಕ ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಪದ್ಮನಾಭ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.










