







ಯಕ್ಷಗಾನ ದೇಶದ ಸಂಸ್ಕೃತಿ, ಸಂಸ್ಕಾರ ಉಳಿಸುವ ಕಲೆ-ಭಾಗೀರಥಿ ಮುರುಳ್ಯ


ಪುತ್ತೂರು: ಪಟ್ಲ ಫೌಂಡೇಶನ್ ಸಂಸ್ಥೆಯು ಹಿರಿಯರ ಮಾರ್ಗದರ್ಶನ, ದಾನಿಗಳ ನೆರವಿನೊಂದಿಗೆ ಯಕ್ಷ ಶಿಕ್ಷಣವನ್ನು ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯ. ಯಕ್ಷಗಾನ ದೇಶದ ಸಂಸ್ಕೃತಿ, ಸಂಸ್ಕಾರ ಉಳಿಸುವ ಕಲೆ, ಇದನ್ನು ನಾವು ಉಳಿಸಿ ಬೆಳೆಸಬೇಕಾಗಿದೆ ಎಂದು ಸುಳ್ಯ ವಿಧಾನಸಭೆಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.



ಜ.11ರಂದು ಸಂತ ಫಿಲೋಮಿನಾ ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ಭಾಗವತ ದಿನೇಶ್ ಅಮ್ಮಣ್ಣಾಯ ವೇದಿಕೆಯಲ್ಲಿ ಜರಗಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು, ಸಂತ ಫಿಲೋಮಿನಾ(ಸ್ವಾಯತ್ತ) ಕಾಲೇಜು ಪುತ್ತೂರು, ಭಾರತೀಯ ಶಾಸ್ತ್ರೀಯ ಮತ್ತು ಜಾನಪದ ಕಲೆಗಳ ಅಧ್ಯಯನ ಕೇಂದ್ರ ಯಕ್ಷಕಲಾ ಕೇಂದ್ರ, ಯಕ್ಷಧ್ರುವ ಪಟ್ಲ ಪ್ರಾದೇಶಿಕ ಘಟಕಗಳ ಸಹಯೋಗದೊಂದಿಗೆ ಸುಳ್ಯ ಮತ್ತು ಪುತ್ತೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಯಕ್ಷಧ್ರುವ-ಯಕ್ಷಶಿಕ್ಷಣ ಯೋಜನೆಯ ವಿದ್ಯಾರ್ಥಿಗಳಿಂದ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ-2025-26 ಕಾರ್ಯಕ್ರಮದಲ್ಲಿ ಅವರು ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಅಧ್ಯಕ್ಷತೆ ವಹಿಸಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಸುಳ್ಯ ಘಟಕದ ಗೌರವಾಧ್ಯಕ್ಷ ದಯಕರ ಆಳ್ವ ಮಾತನಾಡಿ, ಯಕ್ಷಗಾನ ಗಂಡು ಕಲೆಯಾಗಿದ್ದು ಅದಕ್ಕೆ ಅದರದ್ದೇ ಆದ ವೈಶಿಷ್ಟ್ಯತೆಯಿದೆ. ಉತ್ತಮ ಹಾಡುಗಾರಿಕೆ ಹೊಂದಿರುವ ಯಕ್ಷಗಾನದ ಹಿರಿಮೆ ಪಟ್ಲ ಸತೀಶ್‌ರವರು ಬರುತ್ತಾರೆ ಅಂದ್ರೆ ಕಾರ್ಯಕ್ರಮದ ಎರಡು ಗಂಟೆ ಮುಂಚಿತವಾಗಿ ಪ್ರೇಕ್ಷಕರು ಹಾಜರಿರುವುದೇ ಪಟ್ಲ ಸತೀಶ್‌ರವರ ಪ್ರತಿಭೆಗೆ ಸಾಕ್ಷಿಯಾಗಿದೆ. ಸುಳ್ಯದಲ್ಲಿ ಯಕ್ಷಗಾನದ ಅಪ್ರತಿಮರು ಇದ್ದು ಸುಳ್ಯ ಮತ್ತು ಪುತ್ತೂರಿಗೆ ಯಕ್ಷಗಾನಕ್ಕೆ ಅವಿನಾಭಾವ ಸಂಬಂಧ ಇದ್ದಂತಿದೆ ಎಂದರು.
ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಗೌರವಾಧ್ಯಕ್ಷ ಕೆ.ಸೀತಾರಾಮ ರೈ ಸವಣೂರು ಮಾತನಾಡಿ, ಯಕ್ಷಗಾನವು ಇನ್ನೇನು ಅಳಿಸಿ ಹೋಗುತ್ತಿದೆ ಅನ್ನುವಾಗ ಯಕ್ಷಗಾನಕ್ಕೆ ಜೀವ ತುಂಬಿದವರು ಪಟ್ಲ ಸತೀಶ್ ಶೆಟ್ಟಿಯವರು. ಇಂದು ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಯಕ್ಷಗಾನವು ಸದ್ದು ಮಾಡುತ್ತಿದೆ ಎಂದಾದರೆ ಅದು ಪಟ್ಲ ಸತೀಶ್ ಶೆಟ್ಟಿಯವರು ಕಾರಣ. ಯಕ್ಷಗಾನ ಕಲಿತವರಲ್ಲಿ ಜ್ಞಾನ, ಮಾತುಗಾರಿಕೆ ಚಾತುರ್ಯ ಹೆಚ್ಚುತ್ತದೆ ಎಂದರು.
ಯಕ್ಷಧ್ರುವ ಯಕ್ಷಶಿಕ್ಷಣ ಪ್ರದಾನ ಸಂಚಾಲಕ ಪಣಂಬೂರು ವಾಸುದೇವ ಐತಾಳ, ಉದ್ಯಮಿ ಮಿಥುನ್ ಶೆಣೈ ಬೆಳ್ಳಾರೆ, ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಪರೀಕ್ಷಾಂಗ ವಿಭಾಗದ ಕುಲಸಚಿವ ಡಾ|ವಿನಯಚಂದ್ರ, ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಘಟಕದ ಕೋಶಾಧಿಕಾರಿ ಸಿಎ ಸುದೇಶ್ ಕುಮಾರ್ ರೈ, ಯಕ್ಷಧ್ರುವ ಪಟ್ಲ ಫೌಂಡೇಶನ್ ಪುತ್ತೂರು ಘಟಕದ ಅಧ್ಯಕ್ಷ ಕರುಣಾಕರ ರೈ ದೇರ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಸ್ವಾಗತಿಸಿದರು. ಯಕ್ಷಧ್ರುವ ಯಕ್ಷಶಿಕ್ಷಣ ಸಂಯೋಜಕ ದೀವಿತ್ ಎಸ್.ಕೆ ಪೆರಾಡಿ ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಯಕ್ಷಧ್ರುವ ಯಕ್ಷಶಿಕ್ಷಣ ಸಲಹಾ ಸಮಿತಿ ಸದಸ್ಯ ಪ್ರಶಾಂತ್ ರೈ ಮುಂಡಾಳಗುತ್ತು ಸಹಕರಿಸಿದರು.
12500 ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ
ಯಕ್ಷಗಾನ ಕಲಾವಿದರಿಗೆ ಹಾಗೂ ಕಲೆಗೆ ಏನು ಕೊಡಬೇಕು ಎನ್ನುವ ನಿಟ್ಟಿನಲ್ಲಿ ಯಕ್ಷಶಿಕ್ಷಣವನ್ನು ಆರಂಭಿಸಲಾಯಿತು. ಯಕ್ಷಗಾನದ ಪಾತ್ರಧಾರಿಗಳನ್ನು ವೇದಿಕೆಯಲ್ಲಿ ಆಡಿಸಲು ಸುಲಭ. ಆದರೆ ಆ ಕಲಾವಿದರನ್ನು ತಯಾರು ಮಾಡಿಸಲು ತಗಲುವ ಖರ್ಚು-ವೆಚ್ಚಗಳು ಅಧಿಕ. ಓರ್ವ ಕಲಾವಿದನ ಮೇಕಪ್ ಸಿದ್ಧಪಡಿಸಲು ಕನಿಷ್ಟ ಮುಕ್ಕಾಲು ಗಂಟೆ ಬೇಕಾಗುತ್ತದೆ. ದ.ಕ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಯ 89 ಶಾಲೆಯ 12500 ಮಕ್ಕಳಿಗೆ ಕಲಿಸುವ ಆರು ತಿಂಗಳ ಉಚಿತ ಕೋರ್ಸ್ ಆಗಿರುವ ಈ ಯಕ್ಷಶಿಕ್ಷಣಕ್ಕೆ ಯಕ್ಷಧ್ರುವ ಪಟ್ಲ ಫೌಂಡೇಶನ್ ದಾನಿಗಳ ನೆರವಿನಿಂದ ವಿದ್ಯಾರ್ಥಿಗಳ ಶಿಕ್ಷಣದ ವೆಚ್ಚವನ್ನು ಭರಿಸುತ್ತದೆ. ಯಕ್ಷಗಾನ ಕಲೆಯನ್ನು ವಿದ್ಯಾರ್ಥಿಗಳು ಸಣ್ಣ ಹರೆಯದಲ್ಲಿಯೇ ಕಲಿತಾಗ ಮುಂದೆ ಯಕ್ಷಗಾನದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ.
ಸತೀಶ್ ಶೆಟ್ಟಿ ಪಟ್ಲ, ಸ್ಥಾಪಕಾಧ್ಯಕ್ಷರು, ಯಕ್ಷಧ್ರುವ ಪಟ್ಲ ಫೌಂಡೇಶನ್ ಮಂಗಳೂರು
5 ಶಾಲೆಯ ವಿದ್ಯಾರ್ಥಿಗಳಿಂದ ಯಕ್ಷಗಾನ ಪ್ರದರ್ಶನ
ಬಲ್ನಾಡು ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ ಸುದರ್ಶನ ವಿಜಯ' *ಸುಳ್ಯ ಮಂಡೆಕೋಲು ಸರಕಾರಿ ಉನ್ನತೀಕರಿಸಿದ ಹಿ.ಪ್ರಾ. ಶಾಲೆಯಿಂದಮುರಾಸುರ ವಧೆ’
ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯೇಶ್ವರ ಪ.ಪೂ ಕಾಲೇಜಿನಿಂದ ಸುದರ್ಶನ ವಿಜಯ' *ಬಾಳಿಲ ಮಹರ್ಷಿ ವಾಲ್ಮೀಖಿ ಆದಿವಾಸಿ ಬುಡಕಟ್ಟು ವಸತಿ ಶಾಲೆಯಿಂದಸುದರ್ಶನ ವಿಜಯ’
ಪಂಜ ಮೊರಾರ್ಜಿ ದೇಸಾಯಿ ವಸತಿ ಶಾಲೆಯಿಂದ `ಕುಶ-ಲವ’










