37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ, ಜಾಗೃತಿ ಜಾಥಾ

0

ಪುತ್ತೂರು: ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧೀಕಾರ, ಪೊಲೀಸ್ ಇಲಾಖೆ, ಸಾರಿಗೆ ಇಲಾಖೆ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿ ಇವುಗಳ ಸಂಯುಕ್ತ ಆಶ್ರಯದಲ್ಲಿ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ, ಕಾನೂನು ಮಾಹಿತಿ ಹಾಗೂ ಸುರಕ್ಷತಾ ಜಾಥಾವು ಜ.12ರಂದು ನಡೆಯಿತು.


ದರ್ಬೆ ಸಂತ ಫಿಲೋಮಿನಾ ಕಾಲೇಜಿನ ಮುಖ್ಯ ದ್ವಾರದ ಬಳಿ ನಡೆದ ಕಾರ್ಯಕ್ರಮದಲ್ಲಿ ಸುರಕ್ಷತಾ ಜಾಥಕ್ಕೆ ಚಾಲನೆ ನೀಡಿದ ಪ್ರಧಾನ ಹಿರಿಯ ವ್ಯವಹಾರಿಕ ನ್ಯಾಯಾಧೀಶರು, ತಾಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರಾಗಿರುವ ಪ್ರಕೃತಿ ಕಲ್ಯಾಣ್‌ಪುರ ಮಾತನಾಡಿ, ನಿಮ್ಮ ಜೀವ ನಿಮ್ಮ ಕೈಯಲ್ಲಿದೆ. ಸರಕಾರಕ್ಕೂ ನಿಮ್ಮ ಜೀವದ ಮೇಲೆ ಕಾಳಜಿಯಿದೆ. ವಿದ್ಯಾರ್ಥಿಗಳು ಬೆಳೆದು ಪ್ರಜೆಗಳಾಗಿ ದೇಶಕ್ಕಾಗಿ ಕೊಡುಗೆ ನೀಡಬೇಕು ಎಂಬ ಉದ್ದೇಶದಿಂದ ಎಲ್ಲರ ಜೀವ ರಕ್ಷಣೆಗಾಗಿಯೇ ಕಾನೂನುಗಳಿರುವುದು. ಪೊಲೀಸರು ನಮ್ಮ ಜೀವನ ರಕ್ಷಣೆ ಮಾಡುತ್ತಿದ್ದಾರೆ. ಹೀಗಾಗಿ ಪ್ರತಿಯೊಬ್ಬರು ನಿಯಮ ಪಾಲಿಸಿಕೊಂಡು ವಾಹನ ಚಲಾಯಿಸಬೇಕು. ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕು. ಪ್ರತಿಯೊಬ್ಬರೂ ಹೆಲ್ಮೆಟ್ ಧರಿಸಿಯೇ ದ್ವಿಚಕ್ರ ವಾಹನ ಚಲಾಯಿಸಬೇಕು ಎಂದು ಹೇಳಿದರು.


ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಮಾಹಿತಿ ನೀಡಿದ ಪ್ರಾದೇಶಿಕ ಸಾರಿಗೆ ಅಧಿಕಾರಿ ವಿಶ್ವನಾಥ ಅಜಿಲ ಮಾತನಾಡಿ, ರಸ್ತೆಯೇ ಎದ್ದು ಬಂದು ಯಾರಿಗೂ ಗಾಯ ಮಾಡುವುದಿಲ್ಲ. ವಾಹನಗಳಿಗೂ ಪರಸ್ಪರ ದ್ವೇಷ ಇಲ್ಲ. ಅವುಗಳು ಜಗಳವಾಡುವುದೂ ಇಲ್ಲ. ವಾಹನ ಚಾಲಾಯಿಸುವುದರಲ್ಲಿ ಸಮಸ್ಯೆಗಳಿವೆ. ಚಾಲಕರ ನಿರ್ಲಕ್ಷದಿಂದಾಗಿ ಶೇ.80ರಷ್ಟು ಅಪಘಾತಗಳು ಸಂಭವಿಸುತ್ತದೆ. ಶೇ.20ರಷ್ಟು ಮಾತ್ರ ಆಕಸ್ಮಿಕವಾಗಿ ಅಪಘಾತ ನಡೆಯುತ್ತದೆ. ಸವಾರರ ಸುರಕ್ಷತೆಗಾಗಿ ವಾಹನಗಳಲ್ಲಿ ಆಧುನಿಕವಾಗಿ ಸಾಕಷ್ಟು ಬದಲಾವಣೆಯಾಗಿದೆ. ರಸ್ತೆಯಿರುವುದು ಸ್ಪರ್ಧೆಗಾಗಿ ಅಲ್ಲ. ವೇಗಕ್ಕಾಗಿ ಅಲ್ಲ. ಸೌರ್ಹಾತೆಯುತವಾಗಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ತಲುಪಿಸುವ ಸಾಧನ. ಹೀಗಾಗಿ ಸವಾರರು ತಾಳ್ಮೆ, ಜವಾಬ್ದಾರಿಯಿಂದ ವಾಹನ ಚಲಾಯಿಸುವ ಮೂಲಕ ಶೇ.80ರಷ್ಟು ಅಪಘಾತ ತಪ್ಪಿಸಬಹುದು ಎಂದು ಹೇಳಿದರು.


ವಕೀಲರ ಸಂಘದ ಅಧ್ಯಕ್ಷ ಜಗನ್ನಾಥ ರೈ ಮಾತನಾಡಿ, ಜನರ ಸುರಕ್ಷತೆಗಾಗಿ ಸರಕಾರ ಕಾನೂನು ರೂಪಿಸುತ್ತದೆ. ಅದರ ಪಾಲನೆ ನಮ್ಮೆಲ್ಲರ ಜವಾಬ್ದಾರಿ. ಯುವ ಜನತೆ ಜಾಗೃತಿಗೊಂಡಾಗ ಸುರಕ್ಷತಾ ಮಾಸಾಚರಣೆಯು ಫಲಪ್ರದವಾಗಲಲು ಸಹಕಾರಿ. ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲನೆ ಮಾಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂಬಂತೆ ಪ್ರತಿಯೊಬ್ಬರೂ ಜಾಗೃತಗೊಳ್ಳಬೇಕು ಎಂದು ಹೇಳಿದರು.


ಸಂತ ಫಿಲೋಮಿನ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ನಮಗೆ ಜೀವನವಿರುವುದು ಒಂದೇ. ಅದನ್ನು ಕಾಪಾಡಿಕೊಳ್ಳಬೇಕಾದರೆ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಬೇಕು. ಜೀವನ ಒಂದು ಬಾರಿ ಕಳೆದುಕೊಂಡರೆ ಮತ್ತೆ ಪಡೆಯಲು ಸಾಧ್ಯವಿಲ್ಲ. ವಿದ್ಯಾರ್ಥಿಗಳು ಜಾಗೃತಗೊಂಡು ಜೀವನದಲ್ಲಿ ಅಳವಡಿಸಿಕೊಳ್ಳಲು ಜಾಗೃತಿ ಜಾಥಾವು ಸಹಕಾರಿಯಾಗಲಿದೆ ಎಂದರು.


ಹೆಚ್ಚುವರಿ ವ್ಯವಹಾರಿಕ ನ್ಯಾಯಾಧೀಶ ಶಿವಣ್ಣ ಹೆಚ್.ಆರ್., ತಾಲೂಕು ಆರೋಗ್ಯಧಿಕಾರಿ ಡಾ.ದೀಪಕ್ ರೈ, ವಕೀಲರಾದ ಚಿನ್ಮಯ ರೈ, ದೇವಾನಂದ ಕೆ., ಹರಿಣಾಕ್ಷಿ ಜೆ.ಶೆಟ್ಟಿ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಚೇರಿಯ ಅಧೀಕ್ಷಕರಾದ ದೀಪಕ್, ಆಸ್ಕರ್ ಸಂತೋಷ್, ಹಿರಿಯ ಮೋಟಾರು ನಿರೀಕ್ಷಕರಾದ ಆಶ್ವಾನ್, ಆಶಾ ಮತ್ತು ಸಿಬ್ಬಂದಿಗಳು ಪೊಲೀಸ್ ಇಲಾಖೆಯ ಸಿಬ್ಬಂದಿಗಳು ಸಂತ ಫಿಲೋಮಿನಾ ಕಾಲೇಜಿನ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ಬಳಿಕ ನಡೆದ ಜಾಥವು ಫಿಲೋಮಿನಾ ಕಾಲೇಜಿನ ಬಳಿಯಿಂದ ಹೊರಟು ದರ್ಬೆ ವೃತ್ತದ ತನಕ ಸಾಗಿ ಅಲ್ಲಿಂದ ಹಿಂತಿರುಗಿ ಕಾಲೇಜಿನ ಮುಖ್ಯ ದ್ವಾರವ ಬಳಿ ಸಮಾಪನಗೊಂಡಿತು.


ಅಪ್ರಾಪ್ತರು ವಾಹನ ಚಲಾಯಿಸಿದರೆ ವಾಹನದ ಮ್ಹಾಲಕರಿಗೆ ರೂ.25,000 ದಂಡ ಜೊತೆಗೆ 6 ತಿಂಗಳ ಜೈಲು ಶಿಕ್ಷೆಯಿದೆ. ಅಲ್ಲದೆ ವಾಹನದ ಆರ್.ಸಿಯನ್ನು ಒಂದು ವರ್ಷ ಅಮಾನತು ಮಾಡಲಾಗುತ್ತಿದೆ. ಚಲಾಯಿಸಿದ ಅಪ್ರಾಪ್ತರಿಗೆ 25 ವರ್ಷದ ತನಕ ಲೈಸನ್ಸ್ ನೀಡಲಾಗುವುದಿಲ್ಲ. ಇನ್ಸೂರೆನ್ಸ್ ಇಲ್ಲದ ವಾಹನ ಅಪಘಾತ ನಡೆದರೆ ಯಾವುದೇ ಪರಿಹಾರ ದೊರೆಯುವುದಿಲ್ಲ. ಜೊತೆಗೆ ರೂ.1000 ದಂಡವಿದೆ. ಅಂತಹ ವಾಹನ ಮುಟ್ಟುಗೋಲು ಹಾಕಿ, ಇನ್ಯೂರೆನ್ಸ್ ಆದ ಬಳಿಕವೇ ಬಿಡುಗಡೆ ಮಾಡುವ ನಿಯಮವಿದೆ. ಹೆಲ್ಮೆಟ್ ಧರಿಸುವುದರಿಂದ ಸುರಕ್ಷತೆ ಜೊತೆಗೆ ಮೆಡಿಕಲ್ ಕ್ಲೈಮ್‌ಗೂ ಉಪಯೋಗವಾಗಲಿದೆ. ಹೆಲ್ಮೆಟ್ ಧರಿಸದೇ, ಸೀಟ್ ಬೆಲ್ಟ್ ಹಾಕದೇ ಓವರ್ ಸ್ಟೀಡ್ ಲೈಸನ್ಸ್‌ನ್ನು 3 ತಿಂಗಳ ಅಮಾನತು ಮಾಡಲಾಗುವುದು. ಓವರ್‌ಲೋಡ್, ಓವರ್‌ಸ್ಪೀಡ್‌ಗೆ 500ರಿಂದ 1000 ದಂಡವಿದೆ. ಮತ್ತೆ ಪುನರಾವರ್ತನೆಯಾದರೆ ದಂಡ ದುಪ್ಪಟ್ಟು ಆಗಲಿದೆ.
ವಿಶ್ವನಾಥ ಅಜಿಲ, ಪ್ರಾದೇಶಿಕ ಸಾರಿಗೆ ಅಧಿಕಾರಿಗಳು

LEAVE A REPLY

Please enter your comment!
Please enter your name here