ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯಲ್ಲಿ ಮೊಣಗಂಟು ಬದಲಾವಣೆ ಶಸ್ತ್ರಚಿಕಿತ್ಸೆ – ಆಸ್ಪತ್ರೆಯಲ್ಲಿ ಮೊದಲ ಬಾರಿಗೆ ನಡೆದ ಪ್ರಯೋಗದಲ್ಲಿ ವೈದ್ಯರ ತಂಡ ಯಶಸ್ವಿ

0

ನೆಲ್ಯಾಡಿ: ಇಲ್ಲಿನ ಅಶ್ವಿನಿ ಆಸ್ಪತ್ರೆಯಲ್ಲಿ ಇದೇ ಮೊದಲ ಬಾರಿಗೆ ನಡೆದ ಸಂಪೂರ್ಣ ಮೊಣಗಂಟು ಬದಲಾವಣೆ (ಟೋಟಲ್ ನೀ ರಿಪ್ಲೇಸ್ಮೆಂಟ್) ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆದಿದೆ. ಈ ಮೂಲಕ ಗ್ರಾಮೀಣ ಪ್ರದೇಶದ ಆಸ್ಪತ್ರೆಯೊಂದು ಹೊಸ ಮೈಲುಗಲ್ಲು ಸ್ಥಾಪಿಸಿದೆ.

ಗೋಳಿತ್ತೊಟ್ಟು ಗ್ರಾಮದ ಮಹಿಳೆಯೊಬ್ಬರು ಕಳೆದ 12 ವರ್ಷಗಳಿಂದ ತೀವ್ರ ಮೊಣಗಂಟು ನೋವಿನಿಂದ ಬಳಲುತ್ತಿದ್ದು, ನಡೆಯಲು ಸಹ ತೊಂದರೆ ಅನುಭವಿಸುತ್ತಿದ್ದರು. ಅವರಿಗೆ ನೆಲ್ಯಾಡಿಯ ಅಶ್ವಿನಿ ಆಸ್ಪತ್ರೆಯಲ್ಲಿ ನಡೆದ ಈ ಶಸ್ತ್ರಚಿಕಿತ್ಸೆಯಿಂದ ಅವರು ಈಗ ಚೇತರಿಸಿಕೊಳ್ಳುತ್ತಿದ್ದಾರೆ. ಆಧುನಿಕ ವೈದ್ಯಕೀಯ ತಂತ್ರಜ್ಞಾನ ಬಳಸಿಕೊಂಡು ಡಾ.ಶರತ್ ಬಾಲೆಮನೆ, ಡಾ.ಶಮಂತ್ ವೈ.ಕೆ., ಡಾ. ನಿಶಾಂತ್ ಹಾಗೂ ಡಾ.ಮಹಿನ್ ಅವರನ್ನೊಳಗೊಂಡ ಪರಿಣಿತ ವೈದ್ಯರ ತಂಡ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನೆರವೇರಿಸಿದೆ. ಅನಸ್ಥೇಷಿಯಾ ವಿಭಾಗದಲ್ಲಿ ಡಾ ಅನಿಶ್ ಹಾಗೂ ದಾದಿಯರಾದ ಲೀಲಾವತಿ, ಬಿನ್ಸಿ ಸಹಕರಿಸಿದರು.

ಗ್ರಾಮೀಣ ಪ್ರದೇಶವಾದ ನೆಲ್ಯಾಡಿಯಲ್ಲಿರುವ ಅಶ್ವಿನಿ ಆಸ್ಪತ್ರೆ ಈ ಭಾಗದ ಜನರ ಜೀವ ರಕ್ಷಕ. ರಾಷ್ಟ್ರೀಯ ಹೆದ್ದಾರಿಯಲ್ಲಿ ಯಾವುದೇ ಅಪಘಾತ ನಡೆದರೂ ಗಾಯಾಳುವನ್ನು ಮೊದಲು ಕರೆ ತರುವುದೇ ನೆಲ್ಯಾಡಿ ಅಶ್ವಿನಿ ಆಸ್ಪತ್ರೆಗೆ. ಇಲ್ಲಿನ ವೈದ್ಯರ ಹಾಗೂ ಸಿಬ್ಬಂದಿಗಳ ತಂಡ ಗಾಯಾಳುವಿಗೆ ಅಗತ್ಯವಿರುವ ಪ್ರಥಮ ಚಿಕಿತ್ಸೆ ನೀಡಿ ಆರೈಕೆ ಮಾಡುತ್ತದೆ. ಗಾಯಾಳುವಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದಲ್ಲಿ ಜೀವ ರಕ್ಷಕ ಸಾಧನದೊಂದಿಗೆ ಆಂಬುಲೆನ್ಸ್‌ನಲ್ಲಿ ಪುತ್ತೂರು, ಮಂಗಳೂರಿನ ಆಸ್ಪತ್ರೆಗೂ ಕರೆದೊಯ್ಯುವ ಮೂಲಕ ಗಾಯಾಳುಗಳ ಜೀವ ರಕ್ಷಿಸುವಲ್ಲಿ ಕೆಲಸ ಮಾಡುತ್ತಿದೆ. ನೂರಾರು ರೋಗಿಗಳಿಗೂ ಕಡಿಮೆ ವೆಚ್ಚದಲ್ಲಿ ಸಕಾಲದಲ್ಲಿ ಚಿಕಿತ್ಸೆ ನೀಡುತ್ತಿದೆ. ಇದೀಗ ದೊಡ್ಡ ದೊಡ್ಡ ನಗರಗಳಲ್ಲಿನ ಆಸ್ಪತ್ರೆಗಳಲ್ಲಿ ನಡೆಯುತ್ತಿದ್ದ ಅತ್ಯಂತ ಕ್ಲಿಷ್ಟಕರವಾದ ಸಂಪೂರ್ಣ ಮೊಣಗಂಟು ಬದಲಾವಣೆ (ಟೋಟಲ್ ನೀ ರಿಪ್ಲೇಸ್ಮೆಂಟ್) ಶಸ್ತ್ರ ಚಿಕಿತ್ಸೆಯನ್ನು ಯಶಸ್ವಿಯಾಗಿ ನಿಭಾಯಿಸುವಲ್ಲಿ ಯಶಸ್ವಿಯಾಗಿದೆ. ಇದು ರೋಗಿಗಳಿಗೆ ಆಸ್ಪತ್ರೆಯ ಮೇಲಿನ ಆತ್ಮವಿಶ್ವಾಸವನ್ನೂ ಹೆಚ್ಚಿಸಿದೆ.

ಶಸ್ತ್ರಚಿಕಿತ್ಸೆ ಯಾವುದೇ ಅಡಚಣೆ ಇಲ್ಲದೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ರೋಗಿ ನಿರಂತರ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ. ರೋಗಿಯು ಸಂಪೂರ್ಣವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಗ್ರಾಮೀಣ ಪ್ರದೇಶದಲ್ಲಿಯೇ ಉನ್ನತ ಮಟ್ಟದ ಚಿಕಿತ್ಸೆಗೆ ದಾರಿ ತೆರೆದಂತಾಗಿದೆ.
-ಡಾ.ಮುರಳೀಧರ ವೈ.ಕೆ.
ವೈದ್ಯಕೀಯ ನಿರ್ದೇಶಕರು, ಅಶ್ವಿನಿ ಆಸ್ಪತ್ರೆ ನೆಲ್ಯಾಡಿ

LEAVE A REPLY

Please enter your comment!
Please enter your name here