






ಜ.15 ರಜತ ನೃತ್ಯಾಂತರ್ಯಾನ, ರಜತ ಮಹೋತ್ಸವ ಕಾರ್ಯಕ್ರಮಗಳ ಉದ್ಘಾಟನೆ


ಪುತ್ತೂರು: ವೈಷ್ಣವೀ ನಾಟ್ಯಾಲಯ ಪುತ್ತೂರು ಇದರ ‘ರಜತ ನೃತ್ಯಾಂತರ್ಯಾನ-2026’ ರಜತ ಮಹೋತ್ಸವ ಕಾರ್ಯಕ್ರಮಗಳ ಉದ್ಘಾಟನೆಯು ಜ.15ರಂದು ಸಂಜೆ ತೆಂಕಿಲ ನರೇಂದ್ರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.



2001ರಲ್ಲಿ ಈಶ್ವರಮಂಗಲದಲ್ಲಿ ಪ್ರಾರಂಭಗೊಂಡಿರುವ ಸಂಸ್ಥೆಯು ಕಲಾಭಿಮಾನಿಗಳ ಪ್ರೋತ್ಸಾಹ ಮತ್ತು ವಿದ್ಯಾರ್ಥಿಗಳ ಸಹಕಾರದಿಂದ ಪುತ್ತೂರು, ಬೆಳ್ಳಾರೆ, ಬದಿಯಡ್ಕ ಹಾಗೂ ವಿಟ್ಲದಲ್ಲಿ ನಾಟ್ಯಾಲಯದ ತರಗತಿಗಳು ನಡೆಯುತ್ತಿವೆ. ಸಂಸ್ಥೆಯ ಮೂಲಕ ಸುಮಾರು 1000ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಭರತನಾಟ್ಯ ಶಿಕ್ಷಣವನ್ನು ಪಡೆದಿರುತ್ತಾರೆ. ಗುರುವಾಯೂರು, ಉಡುಪಿ ರಾಜಾಂಗಣ, ಕೊಲ್ಲೂರು ಮೂಕಾಂಬಿಕೆ, ಕುಕ್ಕೆ ಸುಬ್ರಹ್ಮಣ್ಯ, ಕಟೀಲು, ಮಧೂರು, ಮಹಾಲಿಂಗೇಶ್ವರ ದೇವಸ್ಥಾನ ಪುತ್ತೂರು ಅಲ್ಲದೆ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಹಲವಾರು ವೇದಿಕೆಗಳಲ್ಲಿ ಸುಮಾರು 400 ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡಿರುತ್ತದೆ. ಭೂಕೈಲಾಸ, ಶಬರಿಮಲೆ ಸ್ವಾಮಿ ಅಯ್ಯಪ್ಪ, ಭಕ್ತ ಪ್ರಹ್ಲಾದ, ಕಣಿಪುರ ಬಾಲ ಗೋಪಾಲ, ಶ್ರೀರಾಮ ಪುನರಾಗಮನ ನೃತ್ಯರೂಪಕಗಳು ವೈಷ್ಣವೀ ನಾಟ್ಯಾಲಯದಿಂದ ಪ್ರದರ್ಶನಗೊಂಡು ಜನರ ಮೆಚ್ಚುಗೆಗೆ ಪಾತ್ರವಾಗಿದೆ.
2012 ಜನವರಿ 1ರಂದು ನಾಟ್ಯಾಲಯವು ಈಶ್ವರಮಂಗಲದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ತನ್ನ ದಶಮಾನೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿ ಇದೀಗ ನಾಟ್ಯಾಲಯವು ರಜತ ಸಂಭ್ರಮದಲ್ಲಿದೆ.
ನಾಟ್ಯಾಲಯದ ನಿರ್ದೇಶಕಿಯಾಗಿರುವ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ಅವರು ಕರ್ನಾಟಕ ಕಲಾಶ್ರೀ ವಿದ್ವಾನ್ ಕುದ್ಮಾಡಿ ವಿಶ್ವನಾಥ ರೈ, ಕಲಾಶ್ರೀ ವಿದುಷಿ ನಯನ ವಿ. ರೈ, ಕಲಾಮಂಡಲಮ್ ಲತಾ ಪಯ್ಯನ್ನೂರು, ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ ಮಂಗಳೂರು ಇವರಲ್ಲಿ ನೃತ್ಯಾಭ್ಯಾಸ ಹಾಗೂ ವಿದುಷಿ ಪಾರ್ವತಿ ಗಣೇಶ್ ಭಟ್ ಹೊಸಮೂಲೆ ಇವರಲ್ಲಿ ಸಂಗೀತ ಅಭ್ಯಾಸವನ್ನು ಮಾಡಿದ್ದು ಕಲಾ ಕ್ಷೇತ್ರದ ಸಾಧನೆಗಾಗಿ ಹಲವಾರು ಸಂಘ ಸಂಸ್ಥೆಗಳಿಂದ ಗೌರವಕ್ಕೆ ಪಾತ್ರರಾಗಿರುತ್ತಾರೆ.
ಕಾರ್ಯಕ್ರಮಗಳು ಸಂಜೆ 5 ಗಂಟೆಯಿಂದ ಪ್ರಾರಂಭಗೊಳ್ಳಲಿದೆ. ಪ್ರಾರಂಭದಲ್ಲಿ ನೃತ್ಯಪ್ರಸ್ತುತಿ ನಡೆದ ಬಳಿಕ 6.30ರಿಂದ ಸಭಾ ಕಾರ್ಯಕ್ರಮ ನಡೆಯಲಿದೆ. ವಿಶ್ವಕಲಾನಿಕೇತನ ಆರ್ಟ್ಸ್&ಕಲ್ಚರ್ ಪುತ್ತೂರು ಇದರ ನಿರ್ದೇಶಕಿ ಕಲಾಶ್ರೀ ವಿದುಷಿ ನಯನಾ ವಿ.ರೈ ಉದ್ಘಾಟಿಸಲಿದ್ದಾರೆ. ಮುಳಿಯ ಗೋಲ್ಡ್ & ಡೈಮಂಡ್ನ ಚೇರ್ಮೆನ್ ಮತ್ತು ಆಡಳಿತ ನಿರ್ದೇಶಕ ಕೇಶವ ಪ್ರಸಾದ್ ಮುಳಿಯ ಅಧ್ಯಕ್ಷತೆ ವಹಿಸಲಿದ್ದಾರೆ. ಗಾನ ನೃತ್ಯ ಅಕಾಡೆಮಿ ಮಂಗಳೂರು ಇದರ ನಿರ್ದೇಶಕಿ ವಿದುಷಿ ವಿದ್ಯಾಶ್ರೀ ರಾಧಾಕೃಷ್ಣ, ಪುತ್ತೂರು ವಿವೇಕಾನಂದ ಶಿಶು ಮಂದಿರದ ಅಧ್ಯಕ್ಷ ರಾಜ್ಗೋಪಾಲ್, ಸಂಶೋಧನ ಪ್ರಾಧ್ಯಾಪಕರು ಮತ್ತು ತರಬೇತಿದಾರ ಡಾ.ರಾಜೇಶ್ ಬೆಜ್ಜಂಗಳ ಅತಿಥಿಗಳಾಗಿ ಆಗಮಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ದಶಾವತಾರ- “ವಂದೇ ವಿಷ್ಣುಂ ಭವಭಯಹರಂ ಸರ್ವ ಲೋಕೈಕನಾಥಂ” ನೃತ್ಯ ರೂಪಕ ನಡೆಯಲಿದೆ. ಈ ಕಾರ್ಯಕ್ರಮ ಹಿಮ್ಮೇಳದಲ್ಲಿ , ನಟುವಾಂಗ ಮತ್ತು ನೃತ್ಯ ನಿರ್ದೇಶನ ವಿದುಷಿ ಯೋಗೀಶ್ವರಿ ಜಯಪ್ರಕಾಶ್, ಹಾಡುಗಾರಿಕೆಯಲ್ಲಿ ವಿದ್ವಾನ್ ವೆಳ್ಳಿಕೋತ್ ವಿಷ್ಣುಭಟ್ ಮತ್ತು ವಸಂತ ಕುಮಾರ್ ಗೋಸಾಡ, ಮೃದಂಗದಲ್ಲಿ ಗೀತೇಶ್ ನಿಲೇಶ್ವರ, ಕೊಳಲಿನಲ್ಲಿ ರಾಜಗೋಪಾಲ ಕಾಞಂಗಾಡ್ ಸಹಕರಿಸಲಿದ್ದಾರೆ ಎಂದು ವೈಷ್ಣವೀ ನಾಟ್ಯಾಲಯದ ವಿದುಷಿ ಯೋಗೀಶ್ವರಿ ಜಯಪ್ರಕಾಶ್ ತಿಳಿಸಿದ್ದಾರೆ.










