






ಲಯನ್ ಕ್ಲಬ್ ವತಿಯಿಂದ ರೂ.9 ಲಕ್ಷ ವೆಚ್ಚದಲ್ಲಿ ತಡೆಬೇಲಿ ನಿರ್ಮಾಣ ಕಾರ್ಯ


ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ನದಿಗೆ ಸೇತುವೆ ಮೇಲಿನಿಂದ ತ್ಯಾಜ್ಯ, ಕಸ ಎಸೆಯುವುದನ್ನು ತಡೆಯುವ ಉದ್ದೇಶದಿಂದ ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ಸೇತುವೆಯ ಎರಡೂ ಬದಿ ತಡೆಬೇಲಿ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ನದಿ ಮಲಿನ ತಡೆ ಉದ್ದೇಶದ ಬಹುಬೇಡಿಕೆ ಈಡೇರುವ ಹಂತದಲ್ಲಿದೆ.




ಯಾತ್ರಾ ಕ್ಷೇತ್ರವಾಗಿರುವ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ದಿನಂಪ್ರತಿ ಸಾವಿರಾರು ಭಕ್ತರು ಭೇಟಿ ನೀಡುತ್ತಾರೆ. ಆದರೆ ಕ್ಷೇತ್ರಕ್ಕೆ ಆಗಮಿಸುವವರಲ್ಲಿ ಕೆಲವರು ಕ್ಷೇತ್ರದ ಪರಿಸರ, ನದಿ ಮಲಿನಕ್ಕೂ ಕಾರಣ ಆಗುತ್ತಿರುವ ಬೇಸರ ಸಂಗತಿಯೂ ಇಲ್ಲಿ ನಡೆಯುತ್ತಿದೆ. ಮುಖ್ಯವಾಗಿ ಕುಮಾರಧಾರ ಸೇತುವೆಯಿಂದ ನದಿಗೆ ಬಟ್ಟೆ, ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯುವ ಹಲವು ಪ್ರಕರಣಗಳನ್ನು ಪತ್ತೆ ಹಚ್ಚಲಾಗಿತ್ತು, ದಂಡವನ್ನೂ ವಿಧಿಸಲಾಗಿತ್ತು. ನದಿಗೆ ಸೇತುವೆಯಿಂದ ತ್ಯಾಜ್ಯ ಎಸೆಯುವುದನ್ನು ತಡೆಯಲು ಸೇತುವೆಯ ಎರಡೂ ಬದಿಗೆ ತಡೆಬೇಲಿ ನಿರ್ಮಾಣದ ಬೇಡಿಕೆ, ಯೋಜನೆ ಮುಂದಿರಿಸಲಾಗಿತ್ತು.
ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ವತಿಯಿಂದ ತಡೆಬೇಲಿ
ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಹಾಗೂ ಲಯನ್ಸ್ ಪ್ರಾಂತ್ಯ 8ರ ವತಿಯಿಂದ ಮತ್ತು ದಾನಿಗಳ ಸಹಕಾರದಲ್ಲಿ ಸುಮಾರು ರೂ.9 ಲಕ್ಷ ವೆಚ್ಚದಲ್ಲಿ ಸೇತುವೆಯ ಎರಡೂ ಬದಿಗೆ ತಡೆಬೇಲಿ ನಿರ್ಮಾಣ ಕೆಲಸ ನಡೆಯುತ್ತಿದೆ. ಒಂದು ಬದಿಗೆ 465 ಫೀಟ್ ಉದ್ದ ಹಾಗೂ 8 ಫೀಟ್ ಎತ್ತರದಂತೆ ಎರಡೂ ಬದಿ ತಡೆಬೇಲಿ ನಿರ್ಮಾವಾಗಲಿದೆ. ಲಯನ್ಸ್ ಪ್ರಾಂತೀಯ ಸಮ್ಮೇಳನದ ನೆನಪಿಗಾಗಿ ಪ್ರಾಂತೀಯ ಅಧ್ಯಕ್ಷ ಕೆ.ರಂಗಯ್ಯ ಶೆಟ್ಟಿಗಾರ್ ಅವರ ನೇತೃತ್ವದಲ್ಲಿ ಶಾಶ್ವತ ಯೋಜನೆಯಾಗಿ ತಡೆಬೇಲಿ ನಿರ್ಮಾಣ ಕಾರ್ಯ ನಡೆಸಲಾಗುತ್ತಿದೆ. ಲಯನ್ಸ್ ಪ್ರಾಂತ್ಯ 8ರ, ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಸದಸ್ಯರು ಹಾಗೂ ದಾನಿಗಳ ಸಹಕಾರದಲ್ಲಿ ವೆಚ್ಚ ಭರಿಸಲಾಗುತ್ತಿದೆ.
ತ್ಯಾಜ್ಯ ಎಸೆತಕ್ಕೆ ತಡೆ ಬೀಳಲಿದೆ
ಕುಮಾರಧಾರ ಸೇತುವೆಯಿಂದ ನದಿಗೆ ತ್ಯಾಜ್ಯ ಎಸೆಯುತ್ತಿರುವ ಪ್ರಕರಣ ನಿಯಂತ್ರಿಸಿದಷ್ಟು ನಡೆಯುತ್ತಲೇ ಇದೆ. ಈಗಾಗಲೇ ಹಲವರಿಗೆ ದಂಡ ವಿಧಿಸಲಾಗಿದೆ. ಸೇತುವೆ ಬಳಿ ಸಿಸಿ ಕೆಮರಾವನ್ನೂ ಅಳವಡಿಸಲಾಗಿದೆ. ಇದೀಗ ಇದರ ಮುಂದುವರಿದ ಭಾಗವೆಂಬಂತೆ ಸೇತುವೆಯ ಎರಡೂ ಬದಿ ತಡೆಬೇಲಿ ನಿರ್ಮಾಣ ಮಾಡುವುದರೊಂದಿಗೆ ನದಿಗೆ ತ್ಯಾಜ್ಯ ಎಸೆಯುವುದಕ್ಕೆ ತಡೆ ಬಿದ್ದಂತಾಗಿದೆ.
ಕುಮಾರಧಾರ ನದಿಗೆ ಸೇತುವೆಯಿಂದ ತ್ಯಾಜ್ಯ, ಕಸ ಎಸೆಯುವುದನ್ನು ತಡೆಯಲು ಸುಬ್ರಹ್ಮಣ್ಯ ಲಯನ್ ಕ್ಲಬ್ ವತಿಯಿಂದ ದಾನಿಗಳ ಸಹಕಾರದಲ್ಲಿ ರೂ.9 ಲಕ್ಷ ವೆಚ್ಚದಲ್ಲಿ ತಡೆಬೇಲಿ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ನದಿಗೆ ತ್ಯಾಜ್ಯ ಎಸೆಯುವುದಕ್ಕೆ ತಡೆ ಬೀಳಲಿದೆ.
ಕೆ.ರಂಗಯ್ಯ ಶೆಟ್ಟಿಗಾರ್, ಪ್ರಾಂತೀಯ 8ರ ಅಧ್ಯಕ್ಷರು ಲಯನ್ಸ್ ಜಿಲ್ಲೆ 317D










