






ನೆಲ್ಯಾಡಿ: ಉದನೆ ಸಮೀಪ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಕಾಡಾನೆಯೊಂದು ಕಾಣಿಸಿಕೊಂಡು ಪ್ರಯಾಣಿಕರಲ್ಲಿ ಆತಂಕ ಸೃಷ್ಟಿಸಿದ ಘಟನೆ ಜ.೧೨ರಂದು ಸಂಜೆ ನಡೆದಿದೆ.


ಶಿರಾಡಿ ಗ್ರಾಮದಲ್ಲಿ ಉದನೆ ನರ್ಸರಿ ಸಮೀಪ ಕಾಂಕ್ರಿಟ್ ಚರಂಡಿ ದಾಟಿ ಅರಣ್ಯ ಪ್ರದೇಶದಿಂದ ಹೆದ್ದಾರಿಗೆ ಬರಲು ಆನೆ ಪ್ರಯತ್ನಿಸಿದೆ. ಆನೆ ಹೆದ್ದಾರಿಗೆ ಬರುವ ಆತಂಕದಲ್ಲಿ ಕೆಲ ಕಾಲ ವಾಹನ ಸವಾರರು ಆತಂಕದಿಂದ ವಾಹನ ನಿಲ್ಲಿಸಿ ಆನೆಯ ಚಲನವಲನ ಗಮಿಸಿದರು. ಬಳಿಕ ಆನೆ ಹೆದ್ದಾರಿಗೆ ಬರದೇ ಮತ್ತೆ ಕಾಡಿನ ಕಡೆಗೆ ಪ್ರಯಾಣಿಸಿದ್ದು ವಾಹನ ಸವಾರರು ನಿಟ್ಟುಸಿರು ಬಿಡುವಂತೆ ಆಗಿದೆ. ಬಳಿಕ ವಾಹನ ಸಂಚಾರ ಮತ್ತೆ ಆರಂಭಗೊಂಡಿದೆ.




ತೋಟಕ್ಕೆ ನುಗ್ಗಿ ಕೃಷಿ ಹಾನಿ;
ಇದಾದ ಬಳಿಕ ರಾತ್ರಿ ವೇಳೆಯಲ್ಲಿ ಆನೆ ಸಮೀಪದ ಕೃಷಿ ತೋಟಗಳಿಗೆ ನುಗ್ಗಿ ಭಾರೀ ಹಾನಿ ಮಾಡಿದೆ. ಎಂಜಿರ ಬೂಡು ನಿವಾಸಿ ಸತ್ಯನಾರಾಯಣ ಭಟ್ ಎಂಬವರ ಕೃಷಿ ತೋಟಕ್ಕೆ ನುಗ್ಗಿದ ಕಾಡಾನೆ 50ಕ್ಕೂ ಹೆಚ್ಚು ಬಾಳೆಗಿಡ ಹಾಗೂ 10ಕ್ಕಿಂತ ಹೆಚ್ಚು ಅಡಿಕೆ ಗಿಡ ಹಾನಿಗೊಳಿಸಿದೆ. ಪಕ್ಕದಲ್ಲೇ ಇರುವ ಕಿಟ್ಟಣ್ಣ ಶೆಟ್ಟಿ ಎಂಬವರ ಕೃಷಿ ತೋಟಕ್ಕೂ ಆನೆ ನುಗ್ಗಿದ್ದು, 50ಕ್ಕೂ ಹೆಚ್ಚು ಬಾಳೆಗಿಡ, ಫಲಭರಿತ ತೆಂಗಿನ ಮರ ಹಾಗೂ 20ಕ್ಕೂ ಹೆಚ್ಚು ಅಡಿಕೆ ಗಿಡಗಳನ್ನು ಧ್ವಂಸಗೊಳಿಸಿದೆ ಎಂದು ವರದಿಯಾಗಿದೆ. ಘಟನೆಯ ಮಾಹಿತಿ ಪಡೆದ ಉಪ್ಪಿನಂಗಡಿ ಉಪ ವಲಯಾರಣ್ಯಾಧಿಕಾರಿ ಯತೀಂದ್ರ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.










