







✍️ ಅಶ್ವಿನಿರಾಘವೇಂದ್ರ ಶೆಣೈ


“ಓಂ ಆದಿತ್ಯಾಯ ವಿದ್ಮಹೇ, ಭಾಸ್ಕರಾಯ ಧೀಮಹಿ, ತನ್ನೋ ಸೂರ್ಯಃ ಪ್ರಚೋದಯಾತ್”
ಈ ಶ್ಲೋಕದ ಅರ್ಥವೇನೆಂದರೆ ನಮಗೆ ಪ್ರತಿನಿತ್ಯ ಬೆಳಕನ್ನು ನೀಡುತ್ತಿರುವ, ಹಾಗೆಯೇ ನಮ್ಮ ದಿನವನ್ನು ಆರಂಭ ಮಾಡುವ ಸೂರ್ಯದೇವನು ಇನ್ನಷ್ಟು ಪ್ರಕಾಶವನ್ನು ಕೊಟ್ಟು ನಮ್ಮ ಜೀವನವನ್ನು ಬೆಳಗಿಸಲಿ ಎನ್ನುವಂತದ್ದಾಗಿದೆ.



ನಾವೆಲ್ಲರೂ ಹಿಂದೂಗಳು. ನಮ್ಮ ದೇಶವು ಹಿಂದೂ ರಾಷ್ಟ್ರ. ಹಬ್ಬಗಳು ನಮ್ಮ ಸಂಸ್ಕೃತಿಯ ದ್ಯೋತಕವಾಗಿವೆ. ಹೀಗಿರುವಾಗ ಪ್ರತಿಯೊಂದು ಹಬ್ಬಕ್ಕೂ ಅದರದೇ ಆದ ಮಹತ್ವವಿದೆ. ಪ್ರತಿಯೊಂದು ಹಬ್ಬವು ಕೂಡ ಜೀವನಕ್ಕೆ ಸಂದೇಶವನ್ನು ಹಾಗೂ ಬದುಕುವ ರೀತಿಯನ್ನು ತಿಳಿಸಿಕೊಡುತ್ತದೆ. ಮಕರ ಸಂಕ್ರಾಂತಿ ಹಬ್ಬವನ್ನು ನಾವು ಪ್ರತಿ ವರ್ಷ ಜನವರಿ 14ರಂದು ಆಚರಣೆ ಮಾಡುತ್ತೇವೆ. ಈ ಹಬ್ಬವು ನಮಗೆ ಹೊಸತನ ಹಾಗೂ ಹುಮ್ಮಸ್ಸನ್ನು ತುಂಬುತ್ತದೆ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವುದನ್ನು ಸೂಚಿಸುವುದಾಗಿದೆ. ಮನುಷ್ಯನಲ್ಲಿ ಕೆಟ್ಟ ಗುಣಗಳು ನಿರ್ನಾಮವಾಗಿ ಒಳ್ಳೆಯ ಗುಣಗಳು ಬೆಳೆಯಲಿ ಎನ್ನುವಂತಹ ಉದ್ದೇಶದಿಂದ ಈ ಹಬ್ಬವನ್ನು ಪರಿವರ್ತನಾ ಘಳಿಗೆ ಎಂತಲೂ ಕರೆಯಲಾಗುತ್ತದೆ. ಇದು ಸುಗ್ಗಿ ಹಬ್ಬವಾಗಿದ್ದು ಎಳ್ಳು ಬೆಲ್ಲದ ಉಂಡೆಗಳ ವಿನಿಮಯ, ಗಾಳಿಪಟ ಹಾರಿಸುವುದು ಮತ್ತು ಪುಣ್ಯಸ್ನಾನಗಳ ಆಚರಣೆಯೊಂದಿಗೆ ದೇವಸ್ಥಾನಗಳಿಗೆ ಭೇಟಿ ನೀಡುವ ಮೂಲಕ ದೇವರನ್ನು ಆರಾಧಿಸುವ ಹಬ್ಬವಾಗಿದೆ. ಒಂದು ಪೂರ್ಣ ಧನ್ಯವಾದಗಳೊಂದಿಗೆ ಸೂರ್ಯದೇವನನ್ನು ನೆನೆಸಿ ಕೃತಜ್ಞತೆ ಸಲ್ಲಿಸುವ ಹಬ್ಬವಾಗಿದೆ.
ಹಾಗಾದರೆ ನಾವಿಂದು ಮಕರ ಸಂಕ್ರಾಂತಿ ಎಂದರೇನು ಎಂಬುದನ್ನು ತಿಳಿದುಕೊಳ್ಳೋಣ. ಸೂರ್ಯನು ಧನು ರಾಶಿಯಿಂದ ಮಕರ ರಾಶಿಗೆ ಪ್ರವೇಶಿಸುವುದೇ ಮಕರ ಸಂಕ್ರಾಂತಿ . ಈ ದಿನದಿಂದ ಸೂರ್ಯನ ಉತ್ತರಾಯಣದ ಅವಧಿ ಆರಂಭವಾಗುತ್ತದೆ. ಇದನ್ನು ಜನರು ಮಂಗಳಕರವೆಂದು ಪರಿಗಣಿಸುತ್ತಾರೆ. ಮಕರ ಸಂಕ್ರಾಂತಿ ಹಬ್ಬವನ್ನು ಸುಗ್ಗಿಯ ಹಬ್ಬವೆಂತಲೂ ಕರೆಯುತ್ತಾರೆ. ರೈತರು ಜೂನ್ ತಿಂಗಳಿಂದ ಹೊಲದಲ್ಲಿ ಬಿಸಿಲು, ಮಳೆ, ಗಾಳಿ ಎನ್ನದೆ ಪರಿಶ್ರಮಪಟ್ಟು ಕೊನೆ ಹಂತಕ್ಕೆ ತಲುಪುವ ಅಂದರೆ ಮಕರ ಸಂಕ್ರಾಂತಿಯ ಆಚರಣೆಯೊಂದಿಗೆ ಬೆಳೆಗಳ ಸಮೃದ್ಧಿಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸುವ ಹಬ್ಬವಾಗಿದೆ.
ಮಕರ ಸಂಕ್ರಾಂತಿ ಹಬ್ಬವನ್ನು ನಮ್ಮ ಕರ್ನಾಟಕದಲ್ಲಿ ಎಳ್ಳುಬೆಲ್ಲದ ವಿನಿಮಯದೊಂದಿಗೆ ಆಚರಿಸಲಾಗುತ್ತದೆ. ಹಾಗೆಯೇ ಮಹಾರಾಷ್ಟ್ರದಲ್ಲಿ ‘ ತಿಳ್ಗುಳ್’ ಉಂಡೆಗಳನ್ನು ಹಂಚುತ್ತಾರೆ. ಗುಜರಾತ್ ನಲ್ಲಿ ಗಾಳಿಪಟದ ಹಾರಿಸುವಿಕೆಯೊಂದಿಗೆ ಮಕರ ಸಂಕ್ರಾಂತಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮಕರ ಸಂಕ್ರಾಂತಿ ಹಬ್ಬವನ್ನು ತಮಿಳುನಾಡಿನಲ್ಲಿ ಪೊಂಗಲ್ ಹಬ್ಬ ಎಂದು ಕರೆಯುತ್ತಾರೆ. ಅಂದರೆ ಪೊಂಗಲ್ ಮಾಡಿ ಸೇವಿಸುವ ಮೂಲಕ ಆಚರಣೆ ಮಾಡಲಾಗುತ್ತದೆ. ಹಾಗೆಯೇ ಪಂಜಾಬ್ ನಲ್ಲಿ ಲೋಹರಿ ಎಂದು ಕರೆಯಲಾಗುತ್ತದೆ. ನಮ್ಮ ನೆರೆಯ ತೆಲಂಗಾಣ ರಾಜ್ಯದಲ್ಲಿ ಸಂಕ್ರಾಂತಿ ಹಬ್ಬ ಎಂದು ಕರೆಯುವ ಮೂಲಕ ಬಹಳ ಸಡಗರದಿಂದ ಆಚರಣೆ ಮಾಡಲಾಗುತ್ತದೆ. ಭಾರತದ ಚಹಾ ತೋಟವಾದ ಅಸ್ಸಾಂ ರಾಜ್ಯದಲ್ಲಿ ಸಂಕ್ರಾಂತಿ ಹಬ್ಬವನ್ನು ಮಾಘ ಬಿಹು ಎಂದು ಕರೆಯಲಾಗುತ್ತದೆ. ಹಾಗೆಯೇ ಭಾರತದಲ್ಲಿರುವ ಥಾರ್ ಮರುಭೂಮಿಗೆ ಪ್ರಸಿದ್ಧಿಯನ್ನು ಪಡೆದ ರಾಜಸ್ಥಾನದಲ್ಲಿ ಮಕರ ಸಂಕ್ರಾಂತಿ ಹಬ್ಬವನ್ನು ಉತ್ತರಾಯಣ ಎಂದು ಕರೆಯುವುದರ ಮೂಲಕ ಬಹಳ ಸಂಭ್ರಮದಿಂದ ಆಚರಿಸಲಾಗುತ್ತದೆ.
ಮಕರ ಸಂಕ್ರಾಂತಿ ಹಬ್ಬದ ವಿಶೇಷತೆ ಏನು ಎಂದರೆ ನೆರೆಹೊರೆಯವರು ಎಳ್ಳು ಬೆಲ್ಲವನ್ನು ಒಬ್ಬರಿಗೊಬ್ಬರು ಕೊಟ್ಟು ಪರಸ್ಪರ ಸೌಹಾರ್ದ ಭಾವನೆಯನ್ನು ಮೂಡಿಸುವುದರೊಂದಿಗೆ ಸಹಬಾಳ್ವೆಯನ್ನು ತೋರಿಸಿಕೊಡುವುದಾಗಿದೆ. ಮಕರ ಸಂಕ್ರಾಂತಿ ಹಬ್ಬದ ಕುರಿತಾಗಿ ಎಳ್ಳು, ಬೆಲ್ಲ ನೀಡಿ ಒಳ್ಳೆಯ ಮಾತಾಡಿ ಎನ್ನುವ ಗಾದೆಯೇ ಇದೆ. ದೇವರನ್ನು ನೆನೆಸುವ ಮೂಲಕ ಸೂರ್ಯದೇವನಿಗೆ ಪೂಜೆ ಸಲ್ಲಿಸುವುದು, ಸೂರ್ಯ ನಮಸ್ಕಾರ ಮಾಡುವುದು ಮತ್ತು ಆದಿತ್ಯ ಹೃದಯ ಸ್ತೋತ್ರದ ಪಠಣದ ಮೂಲಕ ದೇವರಲ್ಲಿ ಯಶಸ್ಸು ಹಾಗೂ ಆರೋಗ್ಯವನ್ನು ಬೇಡಿಕೊಳ್ಳುವಂತದ್ದಾಗಿರುತ್ತದೆ. ಹಾಗೆಯೇ ಸೂರ್ಯನ ಆರಾಧನೆ, ಎಳ್ಳಿನ ಬಳಕೆ ಮತ್ತು ದಾನ, ಧರ್ಮಗಳಿಂದ ಆಯುಷ್ಯದ ವೃದ್ಧಿ, ಉತ್ತಮ ಆರೋಗ್ಯ ಮತ್ತು ಸಂಪತ್ತು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯು ನಮ್ಮ ಹಿರಿಯರಲ್ಲಿ ತಲೆತಲಾಂತರಗಳಿಂದಲೂ ಬೆಳೆದುಕೊಂಡು ಬಂದಿದೆ. ನಾವಿಂದು ಅವರನ್ನು ಅನುಸರಿಸುತ್ತಿದ್ದೇವೆ.
ಪ್ರತಿ ವರ್ಷ ನಾವು ಮಕರ ಸಂಕ್ರಾಂತಿ ಹಬ್ಬವನ್ನು ಆಚರಣೆ ಮಾಡುತ್ತೇವೆ. ಹಬ್ಬವನ್ನು ಆಚರಣೆ ಮಾಡುವ ಮುಖ್ಯ ಉದ್ದೇಶವೇನೆಂದರೆ ನಮ್ಮಲ್ಲಿರುವ ಕೆಟ್ಟ ಗುಣಗಳನ್ನು ತೊಡಗಿಸುವ ಮೂಲಕ ಹೊಸ ಜೀವನಕ್ಕೆ ಕಾಲಿಡುವುದನ್ನು ಮಕರ ಸಂಕ್ರಾಂತಿ ಹಬ್ಬವು ಸಂಕೇತಿಸುತ್ತದೆ. ಹಬ್ಬಗಳ ಆಚರಣೆ ಕೇವಲ ಆಚರಣೆಗೆ ಮಾತ್ರ ಸೀಮಿತವಾಗಿರಬಾರದು. ಮನುಷ್ಯನಲ್ಲಿ ದೇವರು ಅಪಾರ ಶಕ್ತಿಯನ್ನು ಕರುಣಿಸಿದ್ದಾರೆ. ಹಾಗಾಗಿ ಅದನ್ನು ಸರಿಯಾಗಿ ಉಪಯೋಗಿಸಿಕೊಳ್ಳುವುದು ನಮ್ಮ ಕರ್ತವ್ಯವಾಗಿದೆ. ಮನುಷ್ಯ ಜನ್ಮ ಎನ್ನುವಂತಹುದು ಪವಿತ್ರ ಜನ್ಮ. ನಾವೆಲ್ಲರೂ ಮಾಡುವಂತಹ ಒಳ್ಳೆಯ ಕೆಲಸಗಳು ನಮ್ಮನ್ನು ಸದ್ಗತಿಯತ್ತ ಕೊಂಡೊಯ್ಯುತ್ತದೆ. ಹಾಗೆಯೇ ನಾವು ಮಾಡುವಂತಹ ಕೆಟ್ಟ ಕೆಲಸಗಳು ನಮಗೆ ಅವನತಿಯ ದಾರಿಯನ್ನು ತೋರಿಸುತ್ತದೆ. ಮಾನವನು ಸಂಘಜೀವಿ. ಪರಿಸರ ಬಿಟ್ಟು ಮಾನವನಿಲ್ಲ, ಮಾನವನನ್ನು ಬಿಟ್ಟು ಪರಿಸರವಿಲ್ಲ. ಹೀಗಿರುವಾಗ ಯಾರಿಗೂ ನೋವಾಗದಂತೆ ತೊಂದರೆಯಾಗದಂತೆ ಬದುಕುವುದು ನಮ್ಮ ಧರ್ಮವಾಗಿದೆ. ಇಂದಿನ ಸಮಾಜದಲ್ಲಿ ಅಧರ್ಮ ತಾಂಡವವಾಡುತ್ತಿದೆ. ಭ್ರಷ್ಟಾಚಾರವು ತುತ್ತತುದಿಯಲ್ಲಿ ನಿಂತು ಕೇಕೆ ಹಾಕುತ್ತಿದೆ.ಅವುಗಳನ್ನು ನಾವು ನಮ್ಮ ಆಧ್ಯಾತ್ಮಿಕತೆಯ ನೆಲೆಯಲ್ಲಿ ತೊಲಗಿಸಲು ಸಾಧ್ಯವಿದೆ. ಪರಿವರ್ತನೆ ಜಗದ ನಿಯಮ. ಹಾಗಾಗಿ ಒಂದಲ್ಲ ಒಂದು ದಿನ ಅಧರ್ಮದ ಅಂತ್ಯವಾಗಲೇಬೇಕು. ಮಕರ ಸಂಕ್ರಾಂತಿ ಹಬ್ಬವು ಕತ್ತಲೆಯೊಂದಿಗೆ ಬೆಳಕಿನ ವಿಜಯವನ್ನು, ದುಷ್ಟ ಶಕ್ತಿಗಳ ನಾಶವನ್ನು ಮತ್ತು ಎಲ್ಲರಲ್ಲೂ ಹೊಸತನವನ್ನು ತುಂಬುವುದರೊಂದಿಗೆ ಎಲ್ಲರಿಗೂ ಮಂಗಳಕರವನ್ನು ತರಲಿ ಎನ್ನುವ ಆಶಯದೊಂದಿಗೆ ವಿರಮಿಸುತ್ತಿದ್ದೇನೆ.










