ಲಯನ್ಸ್ ಕ್ರೌನ್ ಗೆ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ

0

ಬದ್ಧತೆ,ದೂರದೃಷ್ಟಿ, ಪ್ರೀತಿ,ಸೇವಾ ಜವಾಬ್ದಾರಿಯಿದ್ದಾಗ ಉನ್ನತಿ-ಅರವಿಂದ ಶೆಣೈ

ಪುತ್ತೂರು:ನಾಯಕತ್ವ ಗುಣ ಬೆಳೆಸಬೇಕಾದರೆ ಆಂತರಿಕ ಆಸಕ್ತಿ ಇರಬೇಕು. ಸೇವೆಯ ಮೂಲಕ ಸುಂದರ ಜಗತ್ತನ್ನು ರೂಪಿಸಬಹುದು. ಬದ್ಧತೆ, ದೂರದೃಷ್ಟಿ, ಪ್ರೀತಿ, ಸೇವಾ ಜವಾಬ್ದಾರಿ ಇದ್ದಾಗ ಉನ್ನತಿ ಕಾಣಲು ಸಾಧ್ಯ ಎಂದು ಲಯನ್ಸ್ ಜಿಲ್ಲಾ ಗವರ್ನರ್ ಕುಡ್ಪಿ ಅರವಿಂದ ಶೆಣೈರವರು ಹೇಳಿದರು.

ಜ.15ರಂದು ಎಪಿಎಂಸಿ ರಸ್ತೆಯ ಕ್ರಿಸ್ಟೋಫರ್ ಸಭಾಂಗಣದಲ್ಲಿ ಜರಗಿದ ಲಯನ್ಸ್ ಜಿಲ್ಲಾ 317ಡಿ, ರೀಜ್ಹನ್ 7, ವಲಯ ಒಂದರ ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಗೆ ಲಯನ್ಸ್ ಜಿಲ್ಲಾ ಗವರ್ನರ್ ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಅವರು ಕ್ಲಬ್ ನ ವಿವಿಧ ಸಮಾಜಮುಖಿ ಕಾರ್ಯಗಳಿಗೆ ಚಾಲನೆ ನೀಡಿ ಮಾತನಾಡಿದರು.

ಪ್ರಾಂತ್ಯದಲ್ಲಿ ಟಾಪ್ ವನ್ ಆಗಿ ಮೂಡಿ ಬರಲಿ-ಸುದರ್ಶನ್ ಪಡಿಯಾರ್:
ಲಯನ್ಸ್ ಜಿಲ್ಲಾ ಸಾರ್ವಜನಿಕ ಸಂಪರ್ಕಾಧಿಕಾರಿ ಸುದರ್ಶನ ಪಡಿಯಾರ್ ಮಾತನಾಡಿ, ಐದು ವರ್ಷ ಹರೆಯದಲ್ಲಿನ ಕ್ಲಬ್ ಗಳಲ್ಲಿ ಈ ಕ್ರೌನ್ ಕ್ಲಬ್ ಉತ್ತಮ ಕಾರ್ಯಗಳನ್ನು ಮಾಡಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಕ್ಲಬ್ ಮತ್ತಷ್ಟು ಸಮಾಜಮುಖಿ ಕಾರ್ಯಗಳನ್ನು ಹಮ್ಮಿಕೊಂಡು ಪ್ರಾಂತ್ಯದಲ್ಲಿ ಟಾಪ್ ವನ್ ಆಗಿ ಮೂಡಿ ಬರಲಿ ಎಂದು ಹೇಳಿ ಜಿಲ್ಲೆಯ ವತಿಯಿಂದ ಅಧ್ಯಕ್ಷ ಅಂತೋನಿ ಒಲಿವೆರಾ, ಕಾರ್ಯದರ್ಶಿ ಲೀನಾ ಮಚಾದೋ, ಕೋಶಾಧಿಕಾರಿ ವಿಕ್ಟರ್ ಶರೋನ್ ಡಿ’ಸೋಜರವರಿಗೆ ಲಯನ್ಸ್ ಪಿನ್ ತೊಡಿಸಿ ಅಭಿನಂದಿಸಿದರು.

ಕ್ರೌನ್ ಕ್ಲಬ್ ನಲ್ಲಿನ ಸದಸ್ಯರ ಒಗ್ಗಟ್ಟು, ಸಮಯದ ಪರಿಪಾಲನೆ ಮೆಚ್ಚುವಂತಹುದು-ಆನಂದ ರೈ:
ಲಯನ್ಸ್ ಪ್ರಾಂತ್ಯ ಅಧ್ಯಕ್ಷ ಆನಂದ ರೈ ಮಾತನಾಡಿ, ಕ್ರೌನ್ ಕ್ಲಬ್ ನಲ್ಲಿನ ಸದಸ್ಯರ ಒಗ್ಗಟ್ಟು ಹಾಗೂ ಸಮಯದ ಪರಿಪಾಲನೆ ಮೆಚ್ಚುವಂತಹುದು. ನೂತನ ಕ್ಲಬ್ ಆದರೂ ಒಂದು ಎಂಜೆಎಫ್ ಪದವಿ ಹೊಂದುವ ಮೂಲಕ ಪ್ರಾಂತ್ಯವನ್ನು ಬಲಪಡಿಸಿದ್ದಾರೆ ಈ ಕ್ರೌನ್ ಕ್ಲಬ್. ಮುಂದಿನ ಫೆಬ್ರವರಿ ತಿಂಗಳಲ್ಲಿ ನಡೆಯುವ ಪ್ರಾಂತ್ಯ ಸಮಾವೇಶವನ್ನು ನಾವೆಲ್ಲರೂ ಯಶಸ್ವಿಗೊಳಿಸೋಣ ಎಂದರು.

ಕ್ಲಬ್ ಬೆಳವಣಿಗೆಯಲ್ಲಿ ಕೈಜೋಡಿಸಿದವರಿಗೆ ಕೃತಜ್ಞತೆಗಳು-ಅಂತೋನಿ ಒಲಿವೆರಾ:
ಅಧ್ಯಕ್ಷತೆ ವಹಿಸಿದ ಕ್ಲಬ್ ಅಧ್ಯಕ್ಷ ಅಂತೋನಿ ಒಲಿವೆರಾರವರು ಮಾತನಾಡಿ, ನಮ್ಮ ಕ್ಲಬ್ ನ ಯಾವುದೇ ಕಾರ್ಯಕ್ರಮಗಳಿಗೆ ಲಯನ್ಸ್ ಜಿಲ್ಲೆಯುವ ಉತ್ತಮ ಸಹಕಾರ ನೀಡಿದೆ. ಜೊತೆಗೆ ನಮ್ಮ ಕ್ಲಬ್ ಸ್ಥಾಪಕಾಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಕ್ಲಬ್ ಬೆಳವಣಿಗೆಯಲ್ಲಿ ನನ್ನೊಂದಿಗೆ ಕೈಜೋಡಿಸಿದ್ದಾರೆ. ಮುಂದಿನ ದಿನಗಳಲ್ಲೂ ನಿಮ್ಮ ಸಹಕಾರ ಇದೇ ರೀತಿ ಮುಂದುವರೆಯಲಿ ಎಂದರು.

ಹೊಸ ಸದಸ್ಯರ ಸೇರ್ಪಡೆ: 
ಎಪಿಎಂಸಿ ರಸ್ತೆ ಜೆಎಂಜೆ ಕಾಂಪ್ಲೆಕ್ಸ್ ನಲ್ಲಿ ಪುತ್ತೂರು ಡೆಂಟಲ್ ಕೇರ್ ವೈದ್ಯ ಡಾ.ಶನನ್ ಜೋಶುವಾ ಮಸ್ಕರೇನ್ಹಸ್, ಸಂಪ್ಯ ಅಕ್ಷಯ ಕಾಲೇಜಿನ ಉಪನ್ಯಾಸಕಿ ಕ್ಯಾರಲ್ ಫೆರ್ನಾಂಡೀಸ್, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಲ್ಯಾಬ್ ಅಸಿಸ್ಟೆಂಟ್ ಜೋಸೆಫ್ ಮಸ್ಕರೇನ್ಹಸ್, ಮಂಗಳೂರು ಹಾಗೂ ಮಣಿಪಾಲ್ ಕೆಎಂಸಿ ಆಸ್ಪತ್ರೆಯಲ್ಲಿ ನರ್ಸಿಂಗ್ ವೃತ್ತಿ ನಿರ್ವಹಿಸಿ ಸ್ವಯಂ ನಿವೃತ್ತಿ ಪಡೆದುಕೊಂಡ ಜೆಸಿಂತಾ ಪಿರೇರಾ ಮಿತ್ತೂರುರವರುಗಳನ್ನು ಕ್ಲಬ್ ಗೆ ನೂತನ ಸದಸ್ಯರಾಗಿ ಸೇರ್ಪಡೆಗೊಳಿಸಲಾಗಿದ್ದು ಲಯನ್ಸ್ ಮಾಜಿ ಜಿಲ್ಲಾ ಗವರ್ನರ್ ಮೆಲ್ವಿನ್ ಡಿ’ಸೋಜರವರು ನೂತನ ಸದಸ್ಯರಿಗೆ ಲಯನ್ಸ್ ಪಿನ್ ತೊಡಿಸಿ, ಪ್ರತಿಜ್ಞಾವಿಧಿಯನ್ನು ನೆರವೇರಿಸಿದರು.

ಅಭಿನಂದನೆ: 
ಲಯನ್ಸ್ ಕ್ಲಬ್ ಪುತ್ತೂರು ಕ್ರೌನ್ ಉದಯಕ್ಕೆ ಕಾರಣರಾದ ಲ್ಯಾನ್ಸಿ ಮಸ್ಕರೇನ್ಹಸ್, ಬನ್ನೂರು ಸಂತ ಅಂತೋನಿ ಚರ್ಚ್ ವಿವಿಧ ವಾಳೆಗಳ ಪ್ರತಿನಿಧಿಗಳಾಗಿ ಆಯ್ಕೆಯಾದ ಕ್ಲಬ್ ಸದಸ್ಯರಾದ ಅನಿತಾ ಡಿ’ಸೋಜ, ಲ್ಯಾನ್ಸಿ ಮಸ್ಕರೇನ್ಹಸ್, ಲೀನಾ ಮಚಾದೋ, ನಿಶಾ ಮಿನೇಜಸ್ ರವರನ್ನು ಅಭಿನಂದಿಸಲಾಯಿತು.

ಹುಟ್ಟುಹಬ್ಬವನ್ನು ಆಚರಿಸಿದ ಕ್ಲಬ್ ಸದಸ್ಯೆ ಲೀನಾ ರೇಗೊರವರು ಸಿಹಿಯ ಪ್ರತೀಕವಾದ ಕೇಕ್ ಕತ್ತರಿಸಿ ಹುಟ್ಟುಹಬ್ಬವನ್ನು ಆಚರಿಸಿದರು. ಕ್ಲಬ್ ಸದಸ್ಯರಾದ ಮೋನಿಕಾ ಮಾಡ್ತಾ, ಲೀನಾ ರೇಗೊ ಪ್ರಾರ್ಥಿಸಿದರು. ಬೆಂಜಮಿನ್ ಡಿ’ಸೋಜ ಧ್ವಜವಂದನೆ, ನೀತಿ ಸಂಹಿತೆಯನ್ನು ಐರಿನ್ ಡಿ’ಸೋಜ ನೆರವೇರಿಸಿದರು. ಈ ಸಂದರ್ಭದಲ್ಲಿ ವಿಶ್ವಶಾಂತಿಗಾಗಿ ಒಂದು ನಿಮಿಷದ ಪ್ರಾರ್ಥನೆ ಸಲ್ಲಿಸಲಾಯಿತು. ಕ್ಲಬ್ ಅಧ್ಯಕ್ಷ ಅಂತೋನಿ ಒಲಿವೆರಾ ಸ್ವಾಗತಿಸಿ, ಕಾರ್ಯದರ್ಶಿ ಲೀನಾ ಮಚಾದೋ ವರದಿ ಮಂಡಿಸಿದರು.  ಲ್ಯಾನ್ಸಿ ಮಸ್ಕರೇನ್ಹಸ್ ಸೇಡಿಯಾಪು, ವಿಲ್ಮಾ ಗೊನ್ಸಾಲ್ವಿಸ್, ಅನಿತಾ ಡಿ’ಸೋಜ, ಪ್ರಿಯಲತಾ ಡಿಸಿಲ್ವರವರು ಅತಿಥಿಗಳಿಗೆ ಹೂ ನೀಡಿ ಸ್ವಾಗತಿಸಿದರು. ಜಿಲ್ಲಾ ಗವರ್ನರ್ ಪರಿಚಯವನ್ನು ಸದಸ್ಯ ಲ್ಯಾನ್ಸಿ ಮಸ್ಕರೇನ್ಹಸ್ ಸೇಡಿಯಾಪು ಮಾಡಿದರು.  ಸದಸ್ಯೆ ನಿಶಾ ಮಿನೇಜಸ್ ಕಾರ್ಯಕ್ರಮ ನಿರೂಪಿಸಿದರು.

ಸೇವಾ ಚಟುವಟಿಕೆಗಳು..
ಕ್ಯಾನ್ಸರ್ ರೋಗದಿಂದ ಬಳಲುತ್ತಿರುವ ಈರ್ವರು ಫಲಾನುಭವಿಗಳಿಗೆ ಸದಸ್ಯರಾದ ಅನಿತಾ ಡಿ’ಸೋಜ ಹಾಗೂ ಮೋಲಿ ಪಿಂಟೊರವರು ತಲಾ ರೂ.15 ಸಾವಿರ, ನಿಕಟಪೂರ್ವ ಅಧ್ಯಕ್ಷೆ ವಿಲ್ಮಾ ಗೊನ್ಸಾಲ್ವಿಸ್ ರವರು ಸೂರಪ್ಪರವರ ಮದುವೆ ಖರ್ಚಿಗೆ ರೂ‌.50 ಸಾವಿರ, ಬೊಳ್ವಾರು ಸರಕಾರಿ ಶಾಲೆಯ ಸ್ವಚ್ಛತಾ ಕಾರ್ಯ ಹಾಗೂ ಶಾಲೆಯ ಅಭಿವೃದ್ಧಿಗೆ ಅಧ್ಯಕ್ಷ ಅಂತೋನಿ ಒಲಿವೆರಾರವರಿಂದ ರೂ.10 ಸಾವಿರ, ಬಡ ಕುಟುಂಬವೊಂದಕ್ಕೆ ಸದಸ್ಯೆ ಪ್ರಿಯಲತಾ ಡಿಸಿಲ್ವರವರು ಚೆಕ್ ಅನ್ನು ಈ ಸಂದರ್ಭದಲ್ಲಿ ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು.

ಸನ್ಮಾನ…
ಕ್ಲಬ್ ಸದಸ್ಯೆ, ಇತ್ತೀಚೆಗೆ ನಿರ್ವಹಣಾ ಶಾಸ್ತ್ರದಲ್ಲಿ ಕೆ-ಸೆಟ್ ಪರೀಕ್ಷೆಯಲ್ಲಿ ತೇರ್ಗಡೆಗೊಂಡ ಪ್ರಿಯಲತಾ ಡಿಸಿಲ್ವ, ಮುಚ್ಚುವಂತಹ ಹಂತದಲ್ಲಿರುವ ಬೊಳ್ವಾರು ಸರಕಾರಿ ಶಾಲೆಯನ್ನು ಉಳಿಸುವ ಪ್ರಯತ್ನ ಮಾಡುತ್ತಿರುವ ಮುಖ್ಯ ಶಿಕ್ಷಕಿ ಮೋನಿಕಾ ಪಿ.ಮಾಡ್ತಾ, ಬನ್ನೂರು ಸಂತ ಅಂತೋನಿ ಚರ್ಚ್ ನ ಪಾಲನಾ ಸಮಿತಿಯ ನೂತನ ಉಪಾಧ್ಯಕ್ಷರಾಗಿ ಆಯ್ಕೆಯಾದ ನಿಕಟಪೂರ್ವ ಅಧ್ಯಕ್ಷೆ ವಿಲ್ಮಾ ಗೊನ್ಸಾಲ್ವಿಸ್, ಲಯನ್ಸ್ ಎಂಜಿಎಫ್ ಪದವಿಗೆ ಭಾಜನರಾದ ಕ್ಲಬ್ ಅಧ್ಯಕ್ಷ ಅಂತೋನಿ ಒಲಿವೆರಾ, ಇತ್ತೀಚೆಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಲಯನ್ಸ್ ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಸುದರ್ಶನ್ ಪಡಿಯಾರ್ ರವರುಗಳನ್ನು ಸನ್ಮಾನಿಸಲಾಯಿತು. 

LEAVE A REPLY

Please enter your comment!
Please enter your name here