







ಪೊಲೀಸರ ಕ್ರಮಕ್ಕೆ ರೊಚ್ಚಿಗೆದ್ದ ರಾಜ್ಯ ರೈತ ಸಂಘಟನೆಯಿಂದ ಪುತ್ತೂರು ಎಸಿ ಕಚೇರಿಗೆ ಮುತ್ತಿಗೆ !


ಪುತ್ತೂರು: ಜ.10 ರಂದು ಸುಬ್ರಹ್ಮಣ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಜಾನುವಾರು ಸಾಗಾಟಕ್ಕೆ ಸಂಬಂಧಿಸಿ ಪೊಲೀಸರು ಗಬ್ಬದ ಹಸುವನ್ನು ಮಾಂಸಕ್ಕಾಗಿ ಕೊಂಡೊಯ್ಯುತ್ತಿದ್ದಾರೆಂದು ಪ್ರಕರಣ ದಾಖಲಿಸಿಕೊಂಡಿರುವುದನ್ನು ವಿರೋಧಿಸಿ ಕರ್ನಾಟಕ ರಾಜ್ಯ ರೈತ ಸಂಘ ಪುತ್ತೂರು ತಾಲೂಕು ಆಡಳಿತ ಸೌಧಕ್ಕೆ ಮುತ್ತಿಗೆ ಹಾಕಿ ನ್ಯಾಯಕ್ಕಾಗಿ ಪಟ್ಟು ಹಿಡಿದ ಘಟನೆ ಜ.16ರಂದು ನಡೆದಿದೆ.




ಹಸುವನ್ನು ಕಸಾಯಿಖಾನೆಗೆ ಕೊಂಡೊಯ್ಯುವುದಾಗಿ ವರದಿ ನೀಡಿದ ಪೊಲೀಸರ ನಡೆ ಸರಿಯಿಲ್ಲ. ಯಾವ ಮಾನದಂಡದ ಮೇಲೆ ಅವರು ವರದಿ ನೀಡಿದ್ದಾರೆ. ಪಶು ವೈದ್ಯಕೀಯ ಅಧಿಕಾರಿಗಳು ಹಸುವನ್ನು ಇದು ಗಬ್ಬದ ಅಥವಾ ಗೊಡ್ಡದ ಎಂದು ಪರಿಶೀಲಿಸಬೇಕಾಗಿತ್ತು. ಹಾಗಾಗಿ ಇವತ್ತು ಸಂಜೆಯ ಒಳಗಡೆ ನಮಗೆ ಸರಿಯಾದ ವರದಿ ನೀಡಬೇಕು. ವರದಿ ಕೊಡುವ ತನಕ ನಾವು ಇಲ್ಲೇ ಕೂತುಕೊಳ್ಳುತ್ತೇವೆ. ಈ ಕುರಿತು ಎ.ಸಿಯವರು ನಮ್ಮೊಂದಿಗೆ ಮಾತನಾಡಿ, ವೈದ್ಯರು ಬಂದು ನಿಮ್ಮ ಮುಂದೆಯೇ ಪರಿಶೀಲಿಸಿ ವರದಿ ನೀಡುತ್ತಾರೆ ಎಂದು ತಿಳಿಸಿದ್ದಾರೆ. ಒಂದು ವೇಳೆ ಅವರು ವರದಿ ನೀಡದಿದ್ದರೆ ತಾಲೂಕು ದಂಡಾಧಿಕಾರಿ ಮುಂದೆ ಹಗಲು ರಾತ್ರಿ ಕೂತುಕೊಳ್ಳುತ್ತೇವೆ. ಇಲ್ಲಾಂದ್ರೆ ಬೀಗ ಜಡಿತ್ತೇವೆ. ಯಾರು ತಪ್ಪು ಮಾಡಿದ್ದಾರೋ ಅವರ ವಿರುದ್ದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಅರಳಾಪುರ ಮಂಜೇಗೌಡ್ರು ಆಗ್ರಹಿಸಿದ್ದಾರೆ.
ಯುವ ಘಟಕದ ಅಧ್ಯಕ್ಷ ವಿನೋದ್ ಗೌಡ, ಮಹಿಳಾ ಸಂಘದ ಅಧ್ಯಕ್ಷೆ ಅನ್ನಪೂರ್ಣೇಶ್ವರಿ, ಉತ್ತರಕನ್ನಡ, ಮೈಸೂರು, ಚಿಕ್ಕಮಗಳೂರು ಸಹಿತ ಹಲವು ಜಿಲ್ಲೆಗಳಿಂದ ನೂರಾರು ಮಂದಿ ತಾಲೂಕು ಆಡಳಿತ ಸೌಧದ ಮುಂದೆ ಜಮಾಯಿಸಿದ್ದರು.










