







ಶಾಸಕ ಅಶೋಕ್ ರೈ ಭೇಟಿ-ಪರಿಶೀಲನೆ: 2 ಕೋಟಿ ರೂ.ವೆಚ್ಚದಲ್ಲಿ ಹೊಸ ಅಣೆಕಟ್ಟಿನ ಭರವಸೆ
ಪುತ್ತೂರು; ಒಳಮೊಗ್ರು ಗ್ರಾಮದ ಎರ್ಮೆಟ್ಟಿ ಕಿಂಡಿ ಅಣೆಕಟ್ಟು ನಾದುರಸ್ಥಿಯಲ್ಲಿದ್ದ ಇದನ್ನು ದುರಸ್ಥಿ ಮಾಡುವಂತೆ ಸ್ಥಳೀಯ ಗ್ರಾಮಸ್ಥರು ಶಾಸಕ ಅಶೋಕ್ ರೈ ಯವರಿಗೆ ಕೆಲದಿನಗಳ ಹಿಂದೆ ಮನವಿ ಮಾಡಿದ್ದು, ಜ.18ರಂದು ಗ್ರಾಮಕ್ಕೆ ತೆರಳಿ ಅಣೆಕಟ್ಟು ವೀಕ್ಷಣೆ ಮಾಡಿ, ಹೊಸ ಅಣೆಕಟ್ಟು ನಿರ್ಮಾಣಕ್ಕೆ 2 ಕೋಟಿ ರೂ. ಅನುದಾನ ಮಂಜೂರಾತಿಯ ಭರವಸೆ ನೀಡಿದರು.



ಎರ್ಮೆಟ್ಟಿ ಕಿಂಡಿಅಣೆಕಟ್ಟು ಈ ಭಾಗದ ಕೃಷಿಕರಿಗೆ ಹೆಚ್ಚು ಪ್ರಯೋಜನಕಾರಿಯಾಗಿದ್ದು ಸುಮಾರು 45 ವರ್ಷಗಳ ಹಿಂದೆ ನಿರ್ಮಾಣ ಮಾಡಲಾಗಿದೆ. ಆ ನಂತದ ಇದರ ದುರಸ್ಥಿ ಕಾರ್ಯ ನಡೆದಿಲ್ಲ ಮತ್ತು ಒಂದೆರಡು ವರ್ಷ ಇದಕ್ಕೆ ಸರಕಾರದಿಂದ ಹಲಗೆಯನ್ನು ನೀಡಲಾಗಿತ್ತು. ಇದೀಗ ಅಣೆಕಟ್ಟು ಸಂಪೂರ್ಣ ಶಿಥಿಲಗೊಂಡಿದೆ ಮಾತ್ರವಲ್ಲದೆ ಗ್ರಾಮಸ್ಥರು ಹಲಗೆಯಿಲ್ಲದೆ ಅಡಿಕೆ ಮರದ ತುಂಡು ಜೋಡಿಸಿ ನೀರು ಶೇಖರಣೆ ಮಾಡುತ್ತಿದ್ದಾರೆ. ಇದರ ದುರಸ್ತಿಗೆ ಗ್ರಾಮಸ್ಥರು ಮನವಿ ಮಾಡಿದ್ದರು.




2 ಕೋಟಿ ಅನುದಾನದಲ್ಲಿ ಹೊಸ ಕಿಂಡಿ
ವೀಕ್ಷಣೆ ಮಾಡಿದ ಶಾಸಕರು ಹೊಸ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ 2 ಕೋಟಿ ರೂ. ಪ್ರಸ್ತಾವನೆಯನ್ನು ಕಳುಹಿಸಲಾಗಿದ್ದು ಮುಂದಿನ ವರ್ಷ ಇದರ ಕೆಲಸ ಕಾರ್ಯಗಳು ಪ್ರಾರಂಭವಾಗಬಹುದು ಅಲ್ಲಿಯ ತನಕ ಇರುವ ಅಣೆಕಟ್ಟನ್ನು ಉಳಿಸಿಕೊಳ್ಳುವಂತೆ ತಿಳಿಸಿದರು. ಕರ್ನಾಟಕದ ಸಿದ್ದರಾಮ್ಯಯ ನೇತೃತ್ವದ ಕಾಂಗ್ರೆಸ್ ಸರಕಾರ ಕೃಷಿಗೆ ಹೆಚ್ಚು ಉತ್ತೇಜನವನ್ನು ನೀಡುತ್ತಿದೆ. ಪುತ್ತೂರಿಗೆ ಅನೇಕ ಕಿಂಡಿಅಣೆಕಟ್ಟುಗಳು ಮಂಜೂರಾಗಿದೆ. ಈ ಹಿಂದೆ ಮಂಜೂರಾದ ಕಿಂಡಿಅಣೆಕಟ್ಟುಗಳು ನಿರ್ವಹಣೆಯಿಲ್ಲದೆ ಪಾಳು ಬಿದ್ದಂತಾಗಿದೆ. ಕೆಲವು ಕಡೆಗಳಲ್ಲಿ ಕೃಷಿಕರೇ ಇದನ್ನು ವಿವಿಧ ರೀತಿಯಲ್ಲಿ ಬಳಸಿಕೊಳ್ಳುತ್ತಿದ್ದಾರೆ ಎಂದು ಶಾಸಕರು ಹೇಳಿದರು.
ಗ್ಯಾರಂಟಿಯ ಜೊತೆಗೆ ಅಭಿವೃದ್ದಿ ಕಾರ್ಯ
ರಾಜ್ಯದ ಕಾಂಗ್ರೆಸ್ ಸರಕಾರ ಜನತೆಗೆ ಪಂಚ ಗ್ಯಾರಂಟಿಯನ್ನು ನೀಡಿದೆ, ಈ ಗ್ಯಾರಂಟಿ ಯೋಜನೆಯಿಂದ ಕೆಲವೊಂದು ಕುಟುಂಬಗಳು ಸ್ವಾಭಿಮಾನದ ಜೀವನ ನಡೆಸುವಂತಾಗಿದೆ. ಮಹಿಳೆಯರ ಕೈ ಬಲಪಡಿಸುವ ಉದ್ದೇಶ ಮತ್ತು ಕುಟುಂಬದ ಅಭಿವೃದ್ದಿ ದೃಷ್ಟಿಯಿಂದ ಸರಕಾರ ಬಡವರ ಪರ ಯೋಜನೆಯನ್ನು ಜಾರಿ ಮಾಡುತ್ತಿದೆ. ಯಾವ ಸರಕಾರವೂ ನೀಡಿದ ಗ್ಯಾರಂಟಿ ಯೋಜನೆಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ನೀಡುತ್ತಿದ್ದು ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ದಿಗೆ ಇನ್ನಷ್ಟು ಅನುದಾನಗಳು ದೊರೆಯಲಿದೆ ಎಂದು ಶಾಸಕರು ಹೇಳಿದರು.
ಅಶೋಕ್ ರೈ ಅಭಿವೃದ್ದಿ ಪರ ಶಾಸಕ: ಸೀತಾರಾಮ ರೈ
ಪುತ್ತೂರು ಶಾಸಕ ಅಶೋಕ್ ರೈ ಅವರು ಅಭಿವೃದ್ದಿ ಪರ ಶಾಸಕರು. ಅವರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಹಲವಾರು ಅಭಿವೃದ್ದಿ ಕೆಲಸಗಳು ಆಗುತ್ತಿದೆ. ಪುತ್ತೂರಿನ ಮೆಡಿಕಲ್ ಕಾಲೇಜು ಅವರ ಇಚ್ಚಾಶಕ್ತಿಗೆ ಸಾಕ್ಷಿಯಾಗಿದೆ. ಯಾರಿಂದಲೂ ಆಗದ ಕೆಲಸವನ್ನು ಮಾಡಿ ತೋರಿಸಿದ ಖ್ಯಾತಿ ಶಾಸಕರಿಗೆ ಸಲ್ಲುತ್ತದೆ ಎಂದರು. ಎರ್ಮೆಟ್ಟಿ ಕಿಂಡಿ ಅಣೆಕಟ್ಟು ನಿರ್ಮಾಣವಾಗಿ 45 ವರ್ಷ ಕಳೆದಿದೆ ಆದರೆ ಅದರ ಮೇಲೆ ನಡೆದುಕೊಂಡು ಬಂದ ಏಕೈಕ ಶಾಸಕ ಅಶೋಕ್ ರೈಯವರು ಅವರಿಗೆ ಕ್ಷೇತ್ರದ ಅಭಿವೃದ್ದಿಯಲ್ಲಿ ಉತ್ತಮ ಆಸಕ್ತಿಯಿದ್ದು, ಇದರಿಂದ ಪುತ್ತೂರು ಅಭಿವೃದ್ದಿಯಾಗುವುದು ನಿಶ್ಚಿತ ಎಂದು ಪ್ರಗತಿಪರ ಕೃಷಿಕರಾದ ಸೀತಾರಾಮ ರೈ ಕೈಕಾರ ಹೇಳಿದರು.
ಸ್ಥಳೀಯರಾದ ಸತೀಶ್ ರೈ ಮಾತನಾಡಿ ಪುತ್ತೂರು ಶಾಸಕ ಅಶೋಕ್ ರೈಯವರು ಬೆಂಗಳೂರಿನಲ್ಲಿ ಇರಬೇಕಾದ ಶಾಸಕರು ಎಂಬಂತೆ ಬಾಸವಾಗುತ್ತದೆ. ಅವರ ಕಚೇರಿಗೆ ಬರುವ ಜನರನ್ನು ನೋಡಿದರೆ ನಮಗೂ ಆಶ್ಚರ್ಯವಾಗುತ್ತದೆ, ಬಡವ ಸೇವೆ ಮಾಡುತ್ತಿರುವ ಕಾರಣ ಜನ ಅವರನ್ನು ಇಷ್ಟಪಡುತ್ತಾರೆ ಎಂದು ಹೇಳಿದರು. ಎರ್ಮೆಟ್ಟಿಯಲ್ಲಿ 2 ಕೋಟಿ ರೂ. ವೆಚ್ಚದ ಕಿಂಡಿ ಅಣೆಕಟ್ಟು ನಿರ್ಮಾಣ ಮಾಡಲು ಅದು ಅಶೋಕ್ ರೈ ಅವರಿಂದ ಮಾತ್ರ ಅವರು ನುಡಿದಂತೆ ನಡೆಯುವ ದ.ಕ ಜಿಲ್ಲೆಯ ಏಕೈಕ ಶಾಸಕರಾಗಿದ್ದಾರೆ. ಅವರ ಕೈ ಬಲಪಡಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದು ಹೇಳಿದರು.
ಅಭಿವೃದ್ದಿ ಕಾಂಗ್ರೆಸ್ನಿಂದ ಮಾತ್ರ ಸಾಧ್ಯ: ಕೆ ಪಿ ಆಳ್ವ
ಕಾಂಗ್ರೆಸ್ ಸರಕಾರ, ಕಾಂಗ್ರೆಸ್ ಶಾಸಕರಿದ್ದಲ್ಲಿ ಮಾತ್ರ ಅಭಿವೃದ್ದಿ ಸಾಧ್ಯ ಎಂಬುದು ಕರ್ನಾಟಕದ ಜನತೆಗೆ ಗೊತ್ತಾಗಿದೆ. ಎರ್ಮೆಟ್ಟಿಯ ಕಿಂಡಿಅಣೆಕಟ್ಟು ಈ ಭಾಗದ ದೊಡ್ಡ ಸೊತ್ತು. ಇದರಿಂದ ಈ ಭಾಗದ ಕೃಷಿಕರಿಗೆ ತುಂಬಾ ಪ್ರಯೋಜನವಾಗುತ್ತದೆ. ಶಾಸಕರ ಮೂಲಕ ಇಲ್ಲಿ ಹೊಸ ಕಿಂಡಿ ಅಣೆಕಟ್ಟು ನಿರ್ಮಾಣವಾಗುತ್ತಿರುವುದು ಸಂತಸದ ವಿಚಾರವಾಗಿದೆ. ಈ ಭಾಗದಲ್ಲಿ ನಾನು ಮುಂಚೆ ಗ್ರಾ.ಪಂ ಚುನಾವಣೆಗೂ ಸ್ಪರ್ಧಿಸಿ ಸೋತಿದ್ದೆ. ಆದರೆ ಈಗ ಸಂಪೂರ್ಣ ಬದಲಾಗಿದೆ ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಪುತ್ತೂರು ಇನ್ನಷ್ಟು ಅಭಿವೃದ್ದಿಯಾಗಬೇಕಿದ್ದು ಅದಕ್ಕಾಗಿ ಶಾಸಕರಿಗೆ ಬೆಂಬಲ ನೀಡುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡಬೇಕು ಎಂದು ಹೇಳಿದರು.
ಅಡಿಕೆ ತೋಟದಲ್ಲಿ ಕಾರ್ಯಕ್ರಮ
ಕಾರ್ಯಕ್ರಮವನ್ನು ಅಡಿಕೆ ತೋಟದ ನಡುವೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಶಾಸಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ವೇದಿಕೆಯಲ್ಲಿ ರಘುರಾಮ ರೈ ಎರ್ಮೆಟ್ಟಿ, ಸತೀಶ್ ರೈ ನೀರ್ಪಾಡಿ, ರಘುರಾಮ ರೈ ಮಾಪಲ, ರಾಧಾಕೃಷ್ಣ ರೈ ಮಾಪಲ ಉಪಸ್ಥಿತರಿದ್ದರು. ಮನ್ಮಥ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.









