ಪುತ್ತೂರು ಮಾಯ್ ದೆ ದೇವುಸ್ ಚರ್ಚ್‌ನ ವಾರ್ಷಿಕ ಹಬ್ಬ

0

ಬಡವ ಬಲ್ಲಿದರಿಗೆ, ಕಷ್ಟದಲ್ಲಿರುವವರಿಗೆ ಸಹಾಯಹಸ್ತ ನೀಡಿ-ಡಾ|ಡುಮಿಂಗ್ ಡಾಯಸ್

ಪುತ್ತೂರು: ಪುತ್ತೂರು ಮಾಯ್ ದೆ ದೇವುಸ್ ಚರ್ಚ್‌ನ ವಾರ್ಷಿಕ ಹಬ್ಬ ಜ.21ರಂದು ನಡೆಯಿತು. ಮಾಯ್ ದೆ ದೇವುಸ್ ಚರ್ಚ್‌ನ ಪಾಲಕರಾದ ತಾಯಿ ಮರಿಯಮ್ಮನವರನ್ನು ಗೌರವಿಸಿ ಭಗವಂತನಿಗೆ ಆಚರಿಸುವ ದೊಡ್ಡ ಹಬ್ಬ ಇದಾಗಿದೆ.


ಬೆಳಿಗ್ಗೆ 7 ರಿಂದ ದಿವ್ಯ ಬಲಿಪೂಜೆ, 10 ರಿಂದ ಸಂಭ್ರಮದ ದಿವ್ಯ ಬಲಿಪೂಜೆ ನಡೆಯಿತು. ಕಾರವಾರ ಧರ್ಮಕ್ಷೇತ್ರದ ಧರ್ಮಾಧ್ಯಕ್ಷರು ಹಾಗೂ ಪ್ರಧಾನಗುರುಗಳಾದ ಪರಮ ಪೂಜ್ಯ ಡಾ|ಡುಮಿಂಗ್ ಡಾಯಸ್ ದಿವ್ಯ ಬಲಿಪೂಜೆ ನೆರವೇರಿಸಿ ಸಂದೇಶ ನೀಡಿ ಯೇಸುವು ದೀನದಲಿತರಿಗೆ, ಬಡವ ಬಲ್ಲಿದರಿಗೆ ಹೇಗೆ ಸಹಾಯ ಮಾಡಿದರೋ ಹಾಗೆಯೇ ನಾವು ಕೂಡ ಅದೇ ರೀತಿ ಸಹಾಯ ಮಾಡಬೇಕು. ಪರರರನ್ನು ಪ್ರೀತಿಸಬೇಕು. ಗೌರವಿಸಬೇಕು. ಕಷ್ಟದಲ್ಲಿರುವವರಿಗೆ ಸಹಾಯಹಸ್ತ ನೀಡಬೇಕು ಎಂದು ಕರೆ ನೀಡಿದರು. ಅಷ್ಟೇ ಅಲ್ಲದೆ ದೇವರಲ್ಲಿ ವಿಶ್ವಾಸವಿದ್ದರೆ ಮಾತ್ರ ಸಾಕಾಗುವುದಿಲ್ಲ. ವಿಶ್ವಾಸಭರಿತ ಕೆಲಸವನ್ನು ಮಾಡಬೇಕು ಎಂದು ಸಂದೇಶ ನೀಡಿದರು.


ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನಸ್, ಸಹಾಯಕ ಧರ್ಮಗುರು ವಂ|ಮರ್ವಿನ್ ಪ್ರವೀಣ್ ಲೋಬೊ, ಸಂತ ಫಿಲೋಮಿನಾ ಪದವಿ ಕಾಲೇಜಿನ ಪ್ರಾಂಶುಪಾಲರೂ, ಬೆಳ್ಳಾರೆ ಹಾಲಿ ಕ್ರಾಸ್ ಚರ್ಚ್‌ನ ಧರ್ಮಗುರುಗಳಾದ ವಂ|ಡಾ|ಆಂಟನಿ ಪ್ರಕಾಶ್ ಮೊಂತೆರೊ, ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ವಂ|ಅಶೋಕ್ ರಾಯನ್ ಕ್ರಾಸ್ತಾ, ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯ ಮುಖ್ಯಶಿಕ್ಷಕರಾದ ವಂ|ಮ್ಯಾಕ್ಸಿಂ ಡಿಸೋಜ, ಸೇರಿದಂತೆ ಹಲವಾರು ಧರ್ಮಗುರುಗಳು, ಧರ್ಮಭಗಿನಿಯರು ಪಾಲ್ಗೊಂಡರು, ಚರ್ಚ್ ಪಾಲನಾ ಪರಿಷದ್ ಉಪಾಧ್ಯಕ್ಷ ರೋಶನ್ ಲಸ್ರಾದೊ, ಕಾರ್ಯದರ್ಶಿ ನಿರ್ಮಲ ಮೊರಾಸ್, 21 ಆಯೋಗದ ಸಂಯೋಜಕ ಪಾವ್ಲ್ ಹೆರಾಲ್ಡ್ ಮಸ್ಕರೇನಸ್ ಹಾಗೂ ವಾರ್ಡ್‌ಗಳ ಗುರಿಕಾರರು, ಪ್ರತಿನಿಧಿಗಳು, ಸದಸ್ಯರು, ಭಕ್ತಾದಿಗಳು ಭಾಗವಹಿಸಿದರು.

ಜಾತ್ರಾ ಸಂತೆ:
ವಾರ್ಷಿಕ ಹಬ್ಬದ ಪ್ರಯುಕ್ತ ಚರ್ಚ್ ವಠಾರದಲ್ಲಿ ಜಾತ್ರಾ ಸಂತೆ ವಿಶೇಷವಾಗಿತ್ತು. ಸಂತೆಯಲ್ಲಿ ತಿಂಡಿ ತಿನಿಸುಗಳು, ಐಸಕ್ರೀಮ್ ಸೇರಿದಂತೆ ವಿವಿಧ ಅಂಗಡಿ ಮುಂಗಟ್ಟುಗಳು ವ್ಯಾಪಾರದಲ್ಲಿ ತೊಡಗಿಕೊಂಡಿದ್ದವು. ಆಕರ್ಷಕವಾದ ಗೇಮ್ಸ್, ಲಕ್ಕಿ ಕೂಪನ ಡ್ರಾ. ಆಯೋಜನೆ ಮಾಡಲಾಗಿತ್ತು.

ಮೆರವಣಿಗೆ, ದೇವರ ವಾಕ್ಯದ ಸಂಭ್ರಮ:
ವಾರ್ಷಿಕ ಹಬ್ಬದ ಪ್ರಯುಕ್ತ ಜ.20ರಂದು ಸಂಜೆ ಮೆರವಣಿಗೆ ಮತ್ತು ದೇವರ ವಾಕ್ಯದ ಸಂಭ್ರಮ ಕಾರ್ಯಕ್ರಮ ನಡೆಯಿತು. ಮೇರಿ ಮಾತೆಯ ಪ್ರತಿಮೆಯ ಜತೆಗೆ ಮೊಂಬತ್ತಿ ಮೆರವಣಿಗೆ ನಡೆಯಿತು. ಚರ್ಚ್ ವಠಾರದಿಂದ ಹೊರಟ ಮೆರವಣಿಗೆ ಎಮ್.ಟಿ. ರಸ್ತೆ, ಕೋರ್ಟ್ ರಸ್ತೆ ಮೂಲಕ ಸಾಗಿ ಚರ್ಚ್‌ಗೆ ಆಗಮಿಸಿ ಸಮಾಪಗೊಂಡಿತು. ಬಳಿಕ ದೇವರ ವಾಕ್ಯದ ಸಂಭ್ರಮ ನಡೆಯಿತು. ಪವಿತ್ರ ಬೈಬಲ್‌ನಲ್ಲಿರುವ ಮಾನವ ಜೀವನವನ್ನು ಬೆಳಗಿಸುವ ದೇವರ ವಾಕ್ಯವನ್ನು ಸ್ಮರಿಸಿ ಅದರ ಪ್ರಕಾರ ತಮ್ಮ ಬಾಳನ್ನು ಕಟ್ಟಿಕೊಳ್ಳಲು ಕರೆಕೊಡುವಂತಹ ದಿನದ ಸಂಭ್ರಮ ನಡೆಯಿತು. ಮುಕ್ಕಾ ಪವಿತ್ರ ಆತ್ಮ ಚರ್ಚ್ ಪ್ರಧಾನ ಧರ್ಮಗುರು ವಂ|ಸ್ಯ್ಟಾನಿ ಪಿಂಟೊ ಕಾರ್ಯಕ್ರಮ ನಡೆಸಿಕೊಟ್ಟರು. ಮಾಯ್ ದೆ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನಸ್, ಸಹಾಯಕ ಧರ್ಮಗುರು ವಂ|ಮರ್ವಿನ್ ಪ್ರವೀಣ್ ಲೋಬೊ ಸಹಿತ ಇತರ ಚರ್ಚ್‌ನ ಧರ್ಮಗುರುಗಳು, ಧರ್ಮಭಗಿನಿಯರು, ಭಕ್ತಾದಿಗಳು ಭಾಗವಹಿಸಿದರು.

LEAVE A REPLY

Please enter your comment!
Please enter your name here