ಹಿರೇಬಂಡಾಡಿ ಗ್ರಾ.ಪಂ.: ಅಧಿಕಾರಿಗಳಿಲ್ಲದೆ ಸಮಸ್ಯೆ,ಜನರ ಕೆಲಸವಾಗುತ್ತಿಲ್ಲ- ಆರೋಪ

0

ಉಪ್ಪಿನಂಗಡಿ: ಇಲ್ಲಿನ ಹಿರೇಬಂಡಾಡಿ ಗ್ರಾ.ಪಂ.ನಲ್ಲಿ ಕೆಲದಿನಗಳಿಂದ ಇಲ್ಲಿನ ಪ್ರಭಾರ ಪಿಡಿಒ ಅವರು ತಾ.ಪಂ.ನಲ್ಲಿ ತನಗೆ ಕರ್ತವ್ಯ ಇದೆ ಎಂದು ಹೇಳಿ ತಾ.ಪಂ.ಗೆ ತೆರಳುತ್ತಿದ್ದು, ಅಧಿಕಾರಿಗಳು ಇಲ್ಲದ್ದರಿಂದ ಗ್ರಾಮ ಪಂಚಾಯತ್‌ಗೆ ಬರುವ ಜನಸಾಮಾನ್ಯರಿಗೆ ಸಮಸ್ಯೆಯುಂಟಾಗಿದೆ ಎಂಬ ಆರೋಪ ಕೇಳಿ ಬಂದಿದೆ.


ಹಿರೇಬಂಡಾಡಿ ಗ್ರಾ.ಪಂ.ನಲ್ಲಿ ಕಾರ್ಯದರ್ಶಿಯಾಗಿದ್ದ ಸತೀಶ ಅವರಿಗೆ ಇಲ್ಲಿನ ಪಿಡಿಒ ಹುದ್ದೆ ಖಾಲಿಯಾಗಿರುವುದರಿಂದ ಅದರ ಹೊಣೆಯನ್ನು ಪ್ರಭಾರವಾಗಿ ವಹಿಸಲಾಗಿತ್ತು. ಆದರೆ ಕಳೆದ ಸುಮಾರು 10 ದಿನಗಳಿಂದ ಪಿಡಿಒ ಅವರು ಗ್ರಾ.ಪಂ.ಗೆ ಬರುತ್ತಿಲ್ಲ. ಅವರು ತಾ.ಪಂ.ನಲ್ಲಿ ಕರ್ತವ್ಯವಿದೆಯೆಂದು ಅಲ್ಲಿಗೆ ತೆರಳುತ್ತಿದ್ದು, ಇಲ್ಲಿ ಅಧಿಕಾರಿಗಳು ಇಲ್ಲದಂತಾಗಿದೆ. ಇದರಿಂದಾಗಿ ಗ್ರಾ.ಪಂ.ಗೆ ಸಾರ್ವಜನಿಕ ಕೆಲಸಗಳಿಗೆ ಬರುವವರಿಗೆ ಕೆಲಸಗಳಾಗದೇ ತೊಂದರೆಯಾಗಿದೆ ಎಂದು ಸಾರ್ವಜನಿಕರು ತಿಳಿಸಿದ್ದಾರೆ.


ಈ ಬಗ್ಗೆ ಮಾತನಾಡಿದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ನವೀನ ಭಂಡಾರಿ, ಹಿರೇಬಂಡಾಡಿ ಗ್ರಾಮದ ಆಡಳಿತ ಮತ್ತು ಪಿಡಿಒ ಅವರ ಮಧ್ಯೆ ಸಮನ್ವಯತೆ ಇಲ್ಲ. ಈ ಬಗ್ಗೆ ನಾನು ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದು, ಮುಂದಿನ ದಿನಗಳಲ್ಲಿ ಇಲ್ಲಿಗೆ ಖಾಯಂ ಪಿಡಿಒ ಅವರನ್ನು ನೇಮಿಸಲು ಮೇಲಾಧಿಕಾರಿಗಳಿಗೆ ಮನವರಿಕೆ ಮಾಡಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದಾರೆ.

ಗ್ರಾ.ಪಂ.ಗೆ ಅಗತ್ಯ ಕೆಲಸಗಳಿಗೆ ಹೋದರೆ ಇಲ್ಲಿ ಅಧಿಕಾರಿಗಳು ಇಲ್ಲದೆ ಜನರ ಕೆಲಸಗಳಾಗುತ್ತಿಲ್ಲ. ಅಧಿಕಾರಿ ಮತ್ತು ಆಡಳಿತದ ನಡುವೆ ಹೊಂದಾಣಿಕೆ ಇಲ್ಲದಿದ್ದಲ್ಲಿ ಇಲ್ಲಿಗೆ ಬದಲಿ ಪಿಡಿಒರನ್ನು ಒದಗಿಸಲಿ.
ದಯಾನಂದ ಸರೋಳಿ
ಉಪಾಧ್ಯಕ್ಷರು, ಸಿಎ ಬ್ಯಾಂಕ್ ಉಪ್ಪಿನಂಗಡಿ

LEAVE A REPLY

Please enter your comment!
Please enter your name here