






- ಮನುಷ್ಯ ಪ್ರಯತ್ನ, ದೇವರ ಅನುಗ್ರಹದಿಂದ ಕಾರ್ಯಕ್ರಮ ಯಶಸ್ವಿ -ಬ್ರಹ್ಮಶ್ರೀ ರವೀಶ ತಂತ್ರಿ
- ಜಿಲ್ಲೆಯಲ್ಲಿಯೇ ವಿಭಿನ್ನ ಪರಿಕಲ್ಪನೆಯ ಬ್ರಹ್ಮಕಲಶವಾಗಲಿದೆ -ನಳಿನ್ ಕುಮಾರ್ ಕಟೀಲ್
- ಹಿಂದೂ ಸಮಾಜದ ಶಕ್ತಿ, ಭಕ್ತಿ ಸಂಗಮ ಆಗಬೇಕು -ಡಾ|ರವೀಶ್ ಪಡುಮಲೆ
- ಬ್ರಹ್ಮಕಲಶ ಕಾರ್ಯಕ್ರಮ ಸುಸೂತ್ರವಾಗಿ ನಡೆಯಲಿ -ಶಕುಂತಳಾ ಶೆಟ್ಟಿ
- ಸಮಾಜದಲ್ಲಿ ಧಾರ್ಮಿಕ ಜಾಗೃತಿಯುಂಟು ಮಾಡಬೇಕು-ನನ್ಯ ಅಚ್ಚುತ ಮೂಡಿತ್ತಾಯ
ಪುತ್ತೂರು: ಎ.9 ರಿಂದ 12ರವರೆಗೆ ನಡೆಯಲಿರುವ ಹನುಮಗಿರಿ ಪಂಚಮುಖಿ ಶ್ರೀಆಂಜನೇಯ ಹಾಗೂ ಶ್ರೀಕೋದಂಡರಾಮ ದೇವರ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ಪೂರ್ವಭಾವಿಯಾಗಿ ಬ್ರಹ್ಮಕಲಶೋತ್ಸವ ಸಮಿತಿ ಸಭೆ ಹಾಗೂ ಹನುಮಗಿರಿ ಭಕ್ತರ ಸಮಾಗಮ ಕಾರ್ಯಕ್ರಮ ಕ್ಷೇತ್ರದ ವೈದೇಹಿ ಸಭಾಭವನದಲ್ಲಿ ನಡೆಯಿತು.



ಮನುಷ್ಯ ಪ್ರಯತ್ನ, ದೇವರ ಅನುಗ್ರಹದಿಂದ ಕಾರ್ಯಕ್ರಮ ಯಶಸ್ವಿ:
ದೀಪ ಪ್ರಜ್ವಲಿಸಿ ಕಾರ್ಯಕ್ರಮ ಉದ್ಘಾಟಿಸಿದ ಕ್ಷೇತ್ರದ ತಂತ್ರಿವರ್ಯರಾದ ಕುಂಟಾರು ಬ್ರಹ್ಮಶ್ರೀ ರವೀಶ ತಂತ್ರಿ ಮಾತನಾಡಿ ಕಲಿಯುಗದಲ್ಲಿ ಮನುಕುಲದಲ್ಲಿನ ಏಕಾಗ್ರತೆಯ ಕೊರತೆ, ಚಾಂಚಲ್ಯಚಿತ್ತದ ಕಾರಣದಿಂದ ಮೂರ್ತಿ ಆರಾಧನೆ ಬಂತು. ಆಗಮ, ಜ್ಯೋತಿಷ್ಯ, ಶಿಲ್ಪಶಾಸ್ತ್ರ ಸೇರಿಸಿ ರೂಪಿಸಿದ ವ್ಯವಸ್ಥೆಯೇ ದೇವಾಲಯವಾಗಿದೆ. ಇದರ ಪಾಣಿಪೀಠ, ಬಿಂಬ ಸದೃಢವಾಗಿಸಲು ಅಷ್ಟಬಂಧ ಮಾಡಲಾಗುತ್ತದೆ. ಮನುಷ್ಯನ ಪ್ರಯತ್ನ, ದೇವರ ಅನುಗ್ರಹವಿದ್ದರೆ ಯಾವುದೇ ಕಾರ್ಯಕ್ರಮ ಯಶಸ್ವಿಯಾಗುತ್ತದೆ. ದೇವರ ನಿಮಿತ್ತವಾಗಿ ಸಮಾಜವನ್ನು ಜಾಗೃತಗೊಳಿಸಲು ಧಾರ್ಮಿಕ ಶ್ರದ್ಧಾಕೇಂದ್ರಗಳು ಅಗತ್ಯವಾಗಿರುತ್ತದೆ ಎಂದರು. ಈ ಕ್ಷೇತ್ರದಲ್ಲಿ ಹನುಮನ ಬಳಿಕ ಶ್ರೀರಾಮನ ಪ್ರತಿಷ್ಠಾಪನೆ ಆಗಿದೆ. ಇವರಿಬ್ಬರು ನಮ್ಮ ಮನೆಯವರ ಹಾಗೆ. ಇವರಿಬ್ಬರಿಗೂ ಎಪ್ರಿಲ್ನಲ್ಲಿ ಬ್ರಹ್ಮಕಲಶ ನಡೆಯುತ್ತದೆ. ಕಾರ್ಯಕ್ರಮದಲ್ಲಿ ಕೋಟಿರಾಮ ತಾರಕ ಜಪಯಜ್ಷ, ರಾಮಜ್ಯೋತಿ ರಥಯಾತ್ರೆ ನಡೆಯಲಿದೆ ಇದರಿಂದ ಸಮಾಜ ಪರಿವರ್ತನೆಯಾಗಲಿದೆ ಎಂದ ಅವರು ಕಾರ್ಯಕ್ರಮಗಳು ಯಶಸ್ವಿಯಾಗಿ ನೆರವೇರಿ ಭಾರತಕ್ಕೆ ಮಂಗಳಕರವಾಗಲಿ ಎಂದರು.




ಜಿಲ್ಲೆಯಲ್ಲಿಯೇ ವಿಭಿನ್ನ ಪರಿಕಲ್ಪನೆಯ ಬ್ರಹ್ಮಕಲಶವಾಗಲಿದೆ:
ಅಧ್ಯಕ್ಷತೆ ವಹಿಸಿದ್ದ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾದ ನಳಿನ್ ಕುಮಾರ್ ಕಟೀಲ್ ಮಾತನಾಡಿ ಜಿಲ್ಲೆಯಲ್ಲಿರುವ ನಾಗಾರಾಧನೆ, ದೇವಾರಾಧನೆ, ದೈವಾರಾಧನೆ, ನಾಗಮಂಡಲ ಮುಂತಾದ ಕಾರ್ಯಕ್ರಮಗಳು ತುಳುನಾಡ ಪರಂಪರೆಯಾಗಿದೆ. ಇದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. 12 ವರ್ಷಗಳಿಗೊಮ್ಮೆ ದೇವಾಲಯ, ದೈವಾಲಯಗಳಲ್ಲಿ ಆರಾಧನಾ ಪದ್ಧತಿ ಬ್ರಹ್ಮಕಲಶ ಕಾರ್ಯಕ್ರಮಗಳು ನಡೆಯುತ್ತಿದೆ ಎಂದರು. ಹನುಮಗಿರಿಯಲ್ಲಿ ನಡೆಯಲಿರುವ ಬ್ರಹ್ಮಕಲಶ ಕೇವಲ ಬ್ರಹ್ಮಕಲಶ ಅಲ್ಲ. ಈ ಕಾರ್ಯಕ್ರಮ ವಿಶಿಷ್ಟತೆಯಲ್ಲಿ ನಡೆಯಲಿದೆ. ಸಂಸ್ಕೃತಿ, ಪರಂಪರೆ, ಧಾರ್ಮಿಕ ನಂಬಿಕೆ ಕಣ್ಮರೆಯಾಗುತ್ತಿರುವ ಕಾಲಘಟ್ಟದಲ್ಲಿ ಸಮಾಜಕ್ಕೆ ಧರ್ಮಮಾರ್ಗದ ಮೂಲಕ ಶಕ್ತಿ ನೀಡುವ ಅದ್ಭುತ ಪರಿಕಲ್ಪನೆಯನ್ನು ಕೋಟಿರಾಮ ತಾರಕ ಜಪ, ಲಕ್ಷ ನಾರಿಕೇಳ, ಶ್ರೀರಾಮ, ಹನುಮ ಜ್ಯೋತಿ ರಥಯಾತ್ರೆ ಮುಂತಾದ ಕಾರ್ಯಕ್ರಮಗಳಲ್ಲಿ ಜೋಡಿಸಿಕೊಳ್ಳಲಾಗುತ್ತಿದೆ. ಇಂತಹ ಪರಿಕಲ್ಪನೆಗಳು ನಡೆಯುತ್ತಿರುವುದು ದ.ಕ.ಜಿಲ್ಲೆಯಲ್ಲಿಯೇ ಮೊದಲ ಬಾರಿ ನಮ್ಮ ಹನುಮಗಿರಿಯಲ್ಲಿ ನಡೆಯುತ್ತಿದೆ. ಈ ಬ್ರಹ್ಮಕಲಶ ಕಾರ್ಯಕ್ರಮದಲ್ಲಿ ನೀವೆಲ್ಲರೂ ರಾಮ ಅನುಗ್ರಹಕ್ಕೆ ಪಾತ್ರರಾಗಿದ್ದೀರಿ. ಇದು ರಾಮ, ಹನುಮರ ಸಂಕಲ್ಪವಾಗಿದೆ ಎಂದು ಹೇಳಿದ ಅವರು ನಾವೆಲ್ಲರೂ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಎಂದರು.

ಹಿಂದೂ ಸಮಾಜದ ಶಕ್ತಿ, ಭಕ್ತಿ ಸಂಗಮ ಆಗಬೇಕು:
ಬ್ರಹ್ಮಕಲಶೋತ್ಸವ ಸಮಿತಿಯ ಸ್ವಾಗತ ಸಮಿತಿ ಅಧ್ಯಕ್ಷರಾದ ಡಾ|ರವೀಶ್ ಪಡುಮಲೆ ಮಾತನಾಡಿ ಭಾರತ ದೇಶ ವಿಶೇಷವಾಗಿ ಎಲ್ಲರಿಗೂ ಮಾದರಿಯಾದ ದೇಶ. ರಾಮ ಮತ್ತು ಹನುಮಂತ ದೇವರು ನಮ್ಮ ದೇಶದ ಶಕ್ತಿಗಳು. ರಾಮ, ಹನುಮಂತ ಹಾಗೂ ಭಾರತ ಮಾತೆಯನ್ನು ಒಟ್ಟಿಗೆ ಪೂಜಿಸುವ ಸ್ಥಳ ಹನುಮಗಿರಿಯಾಗಿದೆ. ಈ ಮೂಲಕ ಹಿಂದೂ ಶಕ್ತಿಯನ್ನು ಒಟ್ಟುಗೂಡಿಸಿ ಕಾರ್ಯಕ್ರಮಗಳು ನಡೆಯುತ್ತದೆ ಎಂದರು. ಮುಂದಿನ ಬ್ರಹ್ಮಕಲಶ ಕಾರ್ಯಕ್ರಮದಲ್ಲಿ ಹಿಂದೂ ಸಮಾಜದ ಶಕ್ತಿ ಮತ್ತು ಭಕ್ತಿ ಸಂಗಮ ಆಗಬೇಕು. ಈ ನಿಟ್ಟಿನಲ್ಲಿ ಇದು ಎಲ್ಲರಿಗೂ ಮಾದರಿಯಾಗಬೇಕು ಎಂದ ಅವರು ನಮ್ಮ ಅಡೆತಡೆ, ಜಾತಿ, ಮತ ಬಿಟ್ಟು ನಾವೆಲ್ಲರೂ ಜತೆಯಾಗಬೇಕು. ಹಿಂದೂಗಳೆಲ್ಲರೂ ಒಗ್ಗೂಟಿಕೊಂಡು ಕಾರ್ಯಕ್ರಮ ಯಶಸ್ವಿಯಾಗಲು ಕಾರ್ಯಪ್ರವೃತ್ತರಾಗೋಣ ಎಂದರು.
ಕಾರ್ಯಕ್ರಮ ಸುಸೂತ್ರವಾಗಿ ನಡೆಯಲಿ:
ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಮಾತನಾಡಿ ಹಿಂದೆ ರಾಮಜ್ಯೋತಿ ಆಗಮನ ಸಂದರ್ಭದಲ್ಲಿ ರಥಯಾತ್ರಯಲ್ಲಿ, ರಾಮಮಂದಿರಕ್ಕೆ ಇಟ್ಟಿಗೆ ಹೊರುವ ಕೆಲಸದಲ್ಲಿ ಪಾಲ್ಗೊಂಡಿದ್ದೇನೆ. ಈ ಮೂಲಕ ರಾಮಾಂಜನೇಯನ ಆಶೀರ್ವಾದ ನನಗೆ ಅಂದೇ ಸಿಕ್ಕಿದೆ. ಅಯೋಧ್ಯೆಯಲ್ಲಿ ಶ್ರೀರಾಮನ ಮೂರ್ತಿ ಏರಿಸಿದ ಹಾಗೆ ಇಲ್ಲಿನ ಕಾರ್ಯಕ್ರಮವೂ ಸುಸೂತ್ರವಾಗಿ ನಡೆಯಲಿ ಎಂದು ಹೇಳಿ ಕಾರ್ಯಕ್ರಮದಲ್ಲಿ ಸಾಧ್ಯವಾದಷ್ಟು ಭಾಗಿಯಾಗುತ್ತೇನೆ ಎಂದರು.
ಸಮಾಜದಲ್ಲಿ ಧಾರ್ಮಿಕ ಜಾಗೃತಿಯುಂಟು ಮಾಡಬೇಕು:
ಕ್ಷೇತ್ರದ ಧರ್ಮಶ್ರೀ ಪ್ರತಿಷ್ಠಾನದ ಆಡಳಿತ ಧರ್ಮದರ್ಶಿ ನನ್ಯ ಅಚ್ಚುತ ಮೂಡಿತ್ತಾಯರವರು ಪ್ರಾಸ್ತಾವಿಕವಾಗಿ ಮಾತನಾಡಿ 2026ನೇ ಎಪ್ರಿಲ್ 9 ರಿಂದ 12ರವರೆಗೆ ಬ್ರಹ್ಮಕಲಶ ನಡೆಯಲಿದೆ. ಹನುಮಗಿರಿಯ ಬ್ರಹ್ಮಕಲಶ ಕಾರ್ಯಕ್ರಮ ಸಮಾಜದಲ್ಲಿ ಧಾರ್ಮಿಕ ಜಾಗೃತಿಯುಂಟು ಮಾಡಬೇಕು. ಮನೆಯಲ್ಲಿ ದೇವರ ಸ್ಮರಣೆ ನಿತ್ಯ ಇರಬೇಕು ಎಂಬ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. ಕೋಟಿರಾಮ ತಾರಕ ಜಪಯಜ್ಞ, ಶ್ರೀರಾಮ ಹನುಮ ಜ್ಯೋತಿ ರಥಯಾತ್ರೆ, ಲಕ್ಷನಾರಿಕೇಳ ಸಮರ್ಪಣೆ, ಭಜನಾ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಈ ಹಿನ್ನಲೆಯಲ್ಲಿ 60 ಗ್ರಾಮ ಸಮಿತಿ ಮಾಡಬೇಕೆಂಬ ಯೋಜನೆ ಇತ್ತು. ಆದರೆ 41 ಗ್ರಾಮಸಮಿತಿ ರಚನೆ ಮಾಡಲು ಸಾಧ್ಯವಾಗಿದೆ. ಇದಕ್ಕೆ ಎಲ್ಲಾ ಗ್ರಾಮದಲ್ಲಿ ಉತ್ತಮ ಸ್ಪಂದನೆ ಕೂಡ ಸಿಕ್ಕಿದೆ ಎಂದ ಅವರು ಮುಂದಿನ ದಿನಗಳಲ್ಲಿ ಇನ್ನೊಮ್ಮೆ ಸಭೆ ಸೇರಿ ವಿವಿಧ ಸಮಿತಿಗಳಿಗೆ ಜವಾಬ್ದಾರಿ ನೀಡಲಾಗುವುದು ಎಂದರು.
ಗ್ರಾಮ ಸಮಿತಿ ರಚನಾ ಸಮಿತಿ ಸಂಚಾಲಕರಾದ ಸಾಜ ರಾಧಾಕೃಷ್ಣ ಆಳ್ವ, ರಾಮ ಹನುಮ ಜ್ಯೋತಿ ರಥಯಾತ್ರೆ ಸಮಿತಿ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ, ಕೋಟಿರಾಮ ತಾರಕ ಜಪಯಜ್ಞ ಸಮಿತಿ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಲಕ್ಷೆತ್ತರ ನಾರಿಕೇಳ ಸಮರ್ಪಣೆ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಸಹಸಂಚಾಲಕ ಮುಂಡ್ಯ ಶ್ರೀಕೃಷ್ಣ ಭಟ್ ಹಾಗೂ ಸಾಮಾಜಿಕ ಜಾಲತಾಣ ಸಮಿತಿ ಸಂಚಾಲಕ ಹರಿಪ್ರಸಾದ್ರವರು ಕಾರ್ಯಕ್ರಮಗಳ ಮಾಹಿತಿ, ವರದಿ ನೀಡಿ ಭಕ್ತಾದಿಗಳು ಭಾಗವಹಿಸುವಂತೆ ತಿಳಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಬೂಡಿಯಾರು ರಾಧಾಕೃಷ್ಣ ರೈ, ರವಿಕಿರಣ್ ಶೆಟ್ಟಿ ಬೆದ್ರಾಡಿ, ಡಾ.ಸುರೇಶ್ ಪುತ್ತೂರಾಯ, ಜಗದೀಶ್ ಶೆಟ್ಟಿ ನೆಲ್ಲಿಕಟ್ಟೆ, ಬಾಮಿ ಅಶೋಕ್ ಶೆಣೈ, ರಾಧಾಕೃಷ್ಣ ಬೋರ್ಕರ್, ಕಾವು ಹೇಮನಾಥ ಶೆಟ್ಟಿ, ರಾಜೇಶ್ ಬನ್ನೂರು, ಸವಿತಾ ರೈ ನೆಲ್ಲಿತ್ತಡ್ಕ, ಸುದರ್ಶನ್ ಮೂಡಬಿದ್ರೆ, ಗ್ರಾಮ ಸಮಿತಿ ರಚನಾ ಸಮಿತಿ ಸಂಚಾಲಕ ಸಾಜ ರಾಧಾಕೃಷ್ಣ ಆಳ್ವ, ರಾಮ ಹನುಮ ಜ್ಯೋತಿ ರಥಯಾತ್ರೆ ಸಮಿತಿ ಸಂಚಾಲಕ ಮುರಳಿಕೃಷ್ಣ ಹಸಂತಡ್ಕ, ಕೋಟಿರಾಮ ತಾರಕ ಜಪಯಜ್ಞ ಸಮಿತಿ ಸಂಚಾಲಕ ಸೀತಾರಾಮ ರೈ ಕೆದಂಬಾಡಿಗುತ್ತು, ಲಕ್ಷೆತ್ತರ ನಾರಿಕೇಳ ಸಮರ್ಪಣೆ ಸಮಿತಿ ಸಂಚಾಲಕ ಅರುಣ್ ಕುಮಾರ್ ಪುತ್ತಿಲ, ಪ್ರಧಾನ ಕಾರ್ಯದರ್ಶಿ ಆರ್.ಸಿ.ನಾರಾಯಣ ರೆಂಜ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕ್ಷೇತ್ರದಲ್ಲಿ ಶ್ರಮದಾನ ಮಾಡಿ ಸಹಕರಿಸಿದ ಸಂಘ ಸಂಸ್ಥೆಗಳನ್ನು ಗೌರವಿಸಲಾಯಿತು. ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಚನಿಯಪ್ಪ ನಾಯ್ಕ ಸುಳ್ಯಪದವುರವರಿಗೆ ಅಭಿನಂದನೆ ಸಲ್ಲಿಸಲಾಯಿತು. ರಾಜಶ್ರೀ ಪ್ರಾರ್ಥಿಸಿದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಆರ್.ಸಿ ನಾರಾಯಣ ರೆಂಜ ವಂದಿಸಿದರು. ರಾಜೇಂದ್ರ ಪ್ರಸಾದ್ ಮೇನಾಲ ಕಾರ್ಯಕ್ರಮ ನಿರೂಪಿಸಿದರು. ಹನುಮಗಿರಿ ಕ್ಷೇತ್ರದ ಧರ್ಮದರ್ಶಿ ಶಿವರಾಮ ಪಿ., ಬ್ರಹ್ಮಕಲಶೋತ್ಸವ ಸಮಿತಿ ಹಾಗೂ ವಿವಿಧ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕಂಚಿಕಾಮ ಕೋಟಿ ಶ್ರೀಗಳು ಬ್ರಹ್ಮಕಲಶೋತ್ಸವಕ್ಕೆ ಆಗಮನ : ಸಭಾ ಕಾರ್ಯಕ್ರಮವಿಲ್ಲದ ಬ್ರಹ್ಮಕಲಶ ಕಾರ್ಯಕ್ರಮ
ಬ್ರಹ್ಮಕಲಶೋತ್ಸವ ಕಾರ್ಯಕ್ರಮ ವಿಶೇಷವಾಗಿ ನಡೆಯಲಿದೆ. ಕಾರ್ಯಕ್ರಮದಲ್ಲಿ ಕಂಚಿ ಕಾಮಕೋಟಿ ಸ್ವಾಮೀಜಿಯವರು ಭಾಗವಹಿಸಲಿದ್ದಾರೆ. ಈ ಮೂಲಕ ದ.ಕ.ಜಿಲ್ಲೆಗೆ ಮೊದಲ ಬಾರಿಗೆ ಶ್ರೀಗಳು ಆಗಮಿಸಲಿದ್ದಾರೆ. ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಯಾವುದೇ ಸಭಾಕಾರ್ಯಕ್ರಮ ಇರುವುದಿಲ್ಲ. ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮ ಮಾತ್ರ ನಡೆಯುತ್ತದೆ.
ನಳಿನ್ ಕುಮಾರ್ ಕಟೀಲ್, ಅಧ್ಯಕ್ಷರು, ಬ್ರಹ್ಮಕಲಶೋತ್ಸವ ಸಮಿತಿ
ಬ್ರಹ್ಮಕಲಶೋತ್ಸವದ ಲಾಂಛನ ಬಿಡುಗಡೆ
ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ನೂತನ ಲಾಂಛನ ಬಿಡುಗಡೆಗೊಳಿಸಲಾಯಿತು. ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಡಾ. ಸುರೇಶ್ ಪುತ್ತೂರಾಯರವರು ಲಾಂಛನ ಬಿಡುಗಡೆಗೊಳಿಸಿದರು.
41 ಗ್ರಾಮ ಸಮಿತಿಗಳಿಗೆ ಗೌರವಾರ್ಪಣೆ
ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಎಲ್ಲಾ ಭಕ್ತಾದಿಗಳು ಪಾಲ್ಗೊಳ್ಳಬೇಕೆಂಬ ದೃಷ್ಟಿಯಿಂದ ಈಗಾಗಲೇ 41 ಗ್ರಾಮ ಸಮಿತಿ ರಚನೆ ಮಾಡಲಾಗಿದೆ. ಈ 41 ಗ್ರಾಮ ಸಮಿತಿಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳಿಗೆ ಶಲ್ಯ ಹಾಗೂ ಕ್ಷೇತ್ರದ ಪ್ರಸಾದ ನೀಡಿ ಗೌರವಿಸಲಾಯಿತು. ದೇವಾಲಯ, ಭಜನಾ ಮಂದಿರಗಳ ಆಡಳಿತ ಮೊಕ್ತೇಸರರಿಗೆ ಹಾಗೂ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಿಗೆ ಶಲ್ಯ ಮತ್ತು ಪ್ರಸಾದ ವಿತರಣೆ ಮಾಡಲಾಯಿತು. ಗ್ರಾಮ ಸಮಿತಿ ರಚನಾ ಸಮಿತಿ ಸಂಚಾಲಕರಾದ ಸಾಜ ರಾಧಾಕೃಷ್ಣ ಆಳ್ವರವರು ಕಾರ್ಯಕ್ರಮ ನಿರ್ವಹಿಸಿದರು.










