






ರಾಮಕುಂಜ; ಕಡಬ ತಾಲೂಕಿನ ರಾಮಕುಂಜ ಗ್ರಾಮದ ಪಾದೆ ನಿವಾಸಿ ವಸಂತ ಅಮೀನ್ ಹಾಗೂ ಜಯಶ್ರೀ ದಂಪತಿ ಪುತ್ರ ಮೋಕ್ಷ್(17ವ.) ಬಲಿ ಪಡೆದುಕೊಂಡ ಬಂದೂಕಿಗೆ ಬಲು ದೊಡ್ಡ ಇತಿಹಾಸವಿದೆ ಎಂಬ ಮಾಹಿತಿ ಬಹಿರಂಗವಾಗಿದೆ.


ಜ.24ರಂದು ಸಂಜೆ ರಾಮಕುಂಜ ಗ್ರಾಮದ ಪಾದೆ ಎಂಬಲ್ಲಿ ತಂದೆ ವಸಂತ ಅಮೀನ್ ಅವರು ಗಾಯಗೊಂಡು ಹಾಗೂ ಪುತ್ರ ಮೋಕ್ಷ್ ಬಂದೂಕಿನಿಂದ ಸಿಡಿದ ಗುಡಿಗೆ ಮೃತಪಟ್ಟಿದ್ದರು. ಮೋಕ್ಷ್ ಬಲಿ ಪಡೆದುಕೊಂಡ ಬಂದೂಕು ಇಂಗ್ಲೆಂಡ್ ಮೇಡ್ ಸಿಂಗಲ್ ಬ್ಯಾರಲ್ ಎಸ್ಬಿಬಿಎಲ್ ಬಂದೂಕು ಆಗಿದ್ದು ಇದು ವಸಂತ ಅಮೀನ್ ಅವರ ಸೋದರ ಮಾವ, ಹಿರಿಯ ಕಮ್ಯುನಿಸ್ಟ್ ಮುಖಂಡ ದಿ.ಮದನ್ ಸೇರಾಜೆ ಅವರಿಗೆ ಸೇರಿದ್ದಾಗಿತ್ತೆಂದು ಮದನ್ ಕುಟುಂಬಿಕರು ಮಾಹಿತಿ ನೀಡಿರುವುದಾಗಿ ವರದಿಯಾಗಿದೆ. ಪ್ರಭಾವಿ ಮುಖಂಡರಾಗಿದ್ದ ದಿ.ಮದನ್ ಸೇರಾಜೆ ಅವರು ಅವರ ಕಾಲದಲ್ಲಿ ನಾಡಿಗೆ ಬರುತ್ತಿದ್ದ ಹುಲಿಗಳನ್ನು ಇದೇ ಬಂದೂಕು ಮೂಲಕ ಹೊಡೆದುರುಳಿಸುತ್ತಿದ್ದರು. ಏಕ ಕಾಲಕ್ಕೆ ಎರಡು ಹುಲಿಗಳನ್ನು ಬೇಟೆಯಾಡಿದ ಛಾಯಾಚಿತ್ರಗಳು ಇಂದಿಗೂ ಮನೆಯಲ್ಲಿ ಕಾಣಬಹುದು ಎಂದು ಮೂಲಗಳಿಂದ ವರದಿಯಾಗಿದೆ. ಬಲು ಅಪರೂಪದ ಈ ಬಂದೂಕು ವಸಂತ ಅಮೀನ್ ಕೈ ಸೇರಿರುವುದಾದರೂ ಹೇಗೆ ಎಂಬ ಬಗ್ಗೆ ಮಾಹಿತಿಯಿಲ್ಲ. ಕೌಟುಂಬಿಕ ಕಲಹ ಬಾಲಕ ಮೋಕ್ಷ್ನನ್ನು ಬಲಿ ತೆಗೆದುಕೊಂಡಿರುವ ಬಗ್ಗೆ ಮದನ್ ಕುಟುಂಬಿಕರು ಬೇಸರ ವ್ಯಕ್ತಪಡಿಸಿರುವುದಾಗಿ ವರದಿಯಾಗಿದೆ.



ಸಿಗದ ಸ್ಪಷ್ಟತೆ;
ಕೌಟುಂಬಿಕ ಕಲಹದಿಂದ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದ್ದರೂ ಘಟನೆ ನಡೆದು ನಾಲ್ಕೈದು ದಿನವಾದರೂ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ. ಬಾಲಕನ ತಾಯಿ ಜಯಶ್ರೀ ಅವರು 5 ತಿಂಗಳಿನಿಂದ ಪೆರ್ಲ ಏಣ್ಮಕಜೆಯ ತಾಯಿ ಮನೆಯಲ್ಲಿದ್ದು ಪಾದೆ ಮನೆಯಲ್ಲಿ ವಸಂತ ಅಮೀನ್ ಹಾಗೂ ಬಾಲಕ ಮೋಕ್ಷ್ ಮಾತ್ರ ಇದ್ದರು. ಜ.24ರಂದು ಬೆಳಗ್ಗೆ ಮೋಕ್ಷ್ಗೆ ಚಿಕಿತ್ಸೆಗೆ ಮಂಗಳೂರಿನ ವೈದ್ಯರ ಬಳಿಗೆ ತೆರಳಿ ಮನೆಗೆ ಬಂದಿದ್ದ ತಂದೆ, ಮಗನ ನಡುವೆ ಏನು ನಡೆದಿದೆ. ಘಟನೆ ಹೇಗೆ ನಡೆದಿದೆ ಎಂಬುದು ನಿಗೂಢವಾಗಿಯೇ ಇದೆ. ತಂದೆ ವಸಂತ ಅಮೀನ್ ಅವರೇ ಮಗ ಮೋಕ್ಷ್ನನ್ನು ಕೊಲೆ ಮಾಡಿರುವುದಾಗಿದೆ ಎಂದು ತಾಯಿ ಜಯಶ್ರೀ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ಘಟನಾ ದಿನ ಸ್ಥಳಕ್ಕೆ ಬಂದಿದ್ದ ಜಯಶ್ರೀ ಅವರ ಸಹೋದರರೂ ವಸಂತ ಅಮೀನ್ ಅವರೇ ಈ ಕೃತ್ಯ ಎಸಗಿರುವುದಾಗಿ ಆರೋಪಿಸಿದ್ದಾರೆ. ಘಟನೆ ಕುರಿತಂತೆ ಪೊಲೀಸರೂ ಪ್ರಾಥಮಿಕ ಮಾಹಿತಿ ಮಾತ್ರ ನೀಡಿದ್ದು ದೂರು ದಾಖಲಾಗಿರುವ ಬಗ್ಗೆ ಇನ್ನೂ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ. ಇದರಿಂದಾಗಿ ಘಟನೆ ಕುರಿತಂತೆ ಇನ್ನೂ ಸ್ಪಷ್ಟತೆ ಸಿಗದೇ ಇರುವುದು ಜನರಲ್ಲಿ ಗೊಂದಲ ಉಂಟಾಗಿದೆ.
ಅಮೀನ್ ದೇಹದಲ್ಲಿ ಗುಂಡು ಪತ್ತೆ ?;
ಮಗ ಮೋಕ್ಷ್ ನನಗೆ ಇರಿದು ಗಾಯಗೊಳಿಸಿ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಮೃತಪಟ್ಟಿರುವುದಾಗಿ ಆರಂಭದಲ್ಲಿ ವಸಂತ ಅಮೀನ್ ಅವರು ಸ್ಥಳಕ್ಕೆ ಬಂದ ಪೊಲೀಸರಿಗೆ ಮಾಹಿತಿ ನೀಡಿದ್ದರೂ ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್ ವೇಳೆ ಅವರ ದೇಹದಲ್ಲಿ ಗುಂಡು ಪತ್ತೆಯಾಗಿತ್ತು. ಕಿಬ್ಬೊಟ್ಟೆ ಭಾಗದಲ್ಲಿ ಗುಂಡು ಹೊಕ್ಕು ಬೆನ್ನು ಮೂಲೆಯ ತನಕ ಹೊಕ್ಕಿದೆ. ಇದರಿಂದ ಬೆನ್ನು ಮೂಳೆಗೆ ಪೆಟ್ಟಾಗಿದೆ ಎಂದು ವೈದ್ಯರು ತಿಳಿಸಿರುವುದಾಗಿ ವಸಂತ ಅಮೀನ್ ಅವರ ಆಪ್ತ ವಲಯದಿಂದ ಕೇಳಿ ಬಂದಿದೆ. ಆದ್ದರಿಂದ ಪೊಲೀಸರ ಸಮಗ್ರ ತನಿಖೆಯಿಂದಷ್ಟೇ ಪ್ರಕರಣದ ನೈಜತೆ ತಿಳಿಯಬಹುದಾಗಿದೆ.










