






ಪುತ್ತೂರು: ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಾಲಯದ ಜಾತ್ರಾ ಗದ್ದೆಯಲ್ಲಿ ಇತ್ತೀಚೆಗೆ ನಡೆದ 33ನೇ ವರ್ಷದ ಕೋಟಿ ಚೆನ್ನಯ ಜೋಡುಕರೆ ಕಂಬಳದಲ್ಲಿ ಶ್ರೀ ಪಂಚಲಿಂಗೇಶ್ವರ ಉರುವಾಲು ನಾರಾಳುಗುತ್ತು ಸದಾನಂದ ಗೌಡ ಅವರ ಕುಟ್ಟಿ-ಕಾಲೆ ಕೋಣಗಳ ಜೋಡಿ ಅತಿ ವೇಗದ ಓಟದ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ. ಆ ಮೂಲಕ ತಿಂಗಳ ಹಿಂದೆ ಮಂಗಳೂರು ಕಂಬಳದಲ್ಲಿ ಸೃಷ್ಟಿಯಾಗಿದ್ದ ಕಂಬಳದ ಅತಿ ವೇಗದ ಓಟದ ದಾಖಲೆಯನ್ನು ಮುರಿದಿವೆ.


ಕೋಣಗಳು 125 ಮೀ. ದೂರವನ್ನು ಕೇವಲ 10.65 ಸೆಕೆಂಡ್ಗಳಲ್ಲಿ ಕ್ರಮಿಸುವ ಮೂಲಕ ಈ ಸಾಧನೆ ಮಾಡಿವೆ. ಈ ಲೆಕ್ಕಾಚಾರದಂತೆ 100 ಮೀ ದೂರವನ್ನು 8.52 ಸೆಕೆಂಡ್ಗಳಲ್ಲಿ ಕ್ರಮಿಸಿದಂತಾಗಿದೆ. ಈ ಕೋಣಗಳನ್ನು ಓಡಿಸಿದ 22 ವರ್ಷದ ಪಡುಸಾಂತೂರು ಪೃಥ್ವಿರಾಜ್ ಪೂಜಾರಿ ಅವರು ಕಂಬಳದ ಉಸೈನ್ ಬೋಲ್ಟ್ ಎಂಬ ಹೆಸರನ್ನು ತನ್ನದಾಗಿಸಿಕೊಂಡಿದ್ದಾರೆ.



ಕಳೆದ ತಿಂಗಳು ಮಂಗಳೂರಿನಲ್ಲಿ ನಡೆದ ರಾಮ -ಲಕ್ಷ್ಮಣ ಜೋಡುಕರೆ ಕಂಬಳದ ನೇಗಿಲು ಹಿರಿಯ ವಿಭಾಗದ ಫೈನಲ್ ಸ್ಪರ್ಧೆಯಲ್ಲಿ ಕುಂದ ಬಾರಂದಡಿ ಮಾಸ್ತಿಕಟ್ಟೆಯ ಸ್ವರೂಪ್ ಕುಮಾರ್ ಅವರು ಓಡಿಸಿದ್ದ ಶ್ರೀಕಾ ಸಂದೀಪ್ ಶೆಟ್ಟಿ ಮಾಲಕತ್ವದ ಗಾಂಧಿ ಮೈದಾನ ಸಂತು ಮತ್ತು ಸುರತ್ಕಲ್ ಪಾಂಚ ಕೋಣಗಳು 125 ಮೀ. ದೂರವನ್ನು 10.87 ಸೆಕೆಂಡ್ಗಳಲ್ಲಿ ಕ್ರಮಿಸಿದ್ದವು. ಈ ಲೆಕ್ಕಾಚಾರದಂತೆ 100 ಮೀ ದೂರವನ್ನು 8.69 ಸೆಕೆಂಡ್ಗಳಲ್ಲಿ ಕ್ರಮಿಸಿದಂತಾಗಿತ್ತು. ಇದೀಗ ಈ ದಾಖಲೆಯನ್ನು ಕುಟ್ಟಿ ಮತ್ತು ಕಾಲೆ ಕೋಣಗಳು ಮುರಿದಿವೆ.
ಪೃಥ್ವಿರಾಜ್ ಅವರು ಉಡುಪಿಯ ಪಡುಸಾಂತೂರಿನ ರಾಮ ಪೂಜಾರಿ ಮತ್ತು ರಂಜನಿ ಅವರ ಪುತ್ರನಾಗಿದ್ದು, ಡಿಪ್ಲೊಮಾ ಸಿವಿಲ್ ಎಂಜಿನಿಯರಿಂಗ್ ಪದವೀಧರರಾಗಿದ್ದಾರೆ. ತನ್ನ ಮನೆಯಲ್ಲೇ ಇರುವ ಕಂಬಳದ ಕೋಣಗಳನ್ನು ಓಡಿಸಿದ್ದ ಅನುಭವವನ್ನು ಇವರು ಹೊಂದಿದ್ದಾರೆ. ಇವರ ಕಂಬಳದ ಸಾಧನೆಗೆ ವಿಶೇಷ ಬಹುಮಾನವನ್ನು ನೀಡಿ ಗೌರವಿಸಲಾಗಿದೆ.
2021ರಲ್ಲಿ ಕಕ್ಯಪದವು ಕಂಬಳದಲ್ಲಿ ಮಿಜಾರು ಪ್ರಸಾದ್ ನಿಲಯ ಶಕ್ತಿ ಪ್ರಸಾದ್ ಅವರ ಮಾಳ ಪುಟ್ಟ ಮತ್ತು ಮಿಜಾರ್ಅಪ್ಪು ಕೋಣಗಳು 125 ಮೀಟರ್ಅನ್ನು 10.95 ಸೆಕೆಂಡ್ ಗಳಲ್ಲಿ ಕ್ರಮಿಸಿದ್ದವು. 100 ಮೀ ದೂರವನ್ನು 8.76 ಸೆಕೆಂಡ್ಗಳಲ್ಲಿ ಕ್ರಮಿಸಿದ್ದವು. ಈ ಕೋಣಗಳನ್ನು ಓಡಿಸಿದ್ದ ಮಿಜಾರು ಅಶ್ವತ್ಥಪುರದ ಶ್ರೀನಿವಾಸ ಗೌಡ ಅವರು ಕಂಬಳದ ಉಸೈನ್ ಬೋಲ್ಟ್ ಎಂದೇ ಹೆಸರು ಪಡೆದಿದ್ದರು.










