






ಹಿಂದೂ ಧರ್ಮ ಜಗತ್ತಿಗೆ ಜೀವನ ಮೌಲ್ಯವನ್ನು ಹೇಳಿಕೊಟ್ಟ ಧರ್ಮ- ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ
ಆಲಂಕಾರು: ಆಲಂಕಾರು ಹಿಂದೂ ಸಂಗಮ ಆಯೋಜನಾ ಸಮಿತಿ ಕಡಬ ತಾಲ್ಲೂಕು ಕುಂತೂರು ಮಂಡಲದ ಹಿಂದೂ ಸಂಗಮ ದುರ್ಗಾಂಬಾ ಮೈದಾನ ಆಲಂಕಾರಿನಲ್ಲಿ ನಡೆಯಿತು. ಶ್ರೀ ಸಂಪುಟ ನರಸಿಂಹ ಮಠ ಸುಬ್ರಹ್ಮಣ್ಯ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿ ಮಾತನಾಡಿ ಹಿಂದೂ ಧರ್ಮ
ಜಗತ್ತಿಗೆ ಜೀವನ ಮೌಲ್ಯವನ್ನು ಹೇಳಿಕೊಟ್ಟ ಧರ್ಮ.



ಹಿಂದೂ ಧರ್ಮ ಏಕ ವ್ಯಕ್ತಿಯಿಂದ ಬೆಳೆದಿಲ್ಲ ಸಂಸ್ಕೃತಿ, ಸಂಸ್ಕಾರದ ಆಧಾರದ ಮೇಲೆ ಬೆಳೆದಿದೆ ಮಾತ್ರವಲ್ಲದೇ ಎಲ್ಲರಿಗೂ ಶ್ರೇಯಸ್ಸನ್ನು ಬಯಸುವ ಧರ್ಮವಾಗಿದೆ. ಅದ್ದರಿಂದ ನಮ್ಮ ದೇಶ ಭಾರತ ಸರ್ವಧರ್ಮಿಯರ ಆಶ್ರಯ ತಾಣವಾಗಿದೆ. ಆದರೆ ಕೆಲವರು ಮತಾಂತರ ಮಾಡುವ ಮೂಲಕ ಹಿಂದು ಧರ್ಮವನ್ನು ನಾಶ ಮಾಡುವ ಹುನ್ನಾರಗಳು ನಡೆಯುತ್ತಿದೆ. ನಾವು ಈ ಬಗ್ಗೆ ಎಚ್ಚರಿಕೆ ಹಾಗೂ ಜಾಗೃತಿಯಿಂದ ಇರಬೇಕು ಎಂದು ತಿಳಿಸಿದ ಸ್ವಾಮೀಜಿಗಳು ನಾವು ನಮ್ಮ ಆಚರಣೆಗಳ ಮೇಲೆ ನಂಬಿಕೆ ಇರಬೇಕು, ಭಾರತೀಯ ಸಂಸ್ಕಾರ ಸಂಸ್ಕೃತಿಯ ಆಧಾರದಲ್ಲಿ ನಮ್ಮ ಜೀವನ ರೂಪಿಸಿಕೊಳ್ಳಬೇಕು ಎಂದರು.



ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಣ್ಣೂರು ವಿಭಾಗ ಕಾರ್ಯವಾಹಕ ಲೋಕೇಶ್ ಜೋಡುಕಲ್ಲು ಮಾತನಾಡಿ, ಹಿಂದುತ್ವ ಎಂದರೆ ಈ ದೇಶದ ರಾಷ್ಟ್ರೀಯತೆ ಗುರುತು ಹಿಂದುತ್ವಕ್ಕೆ ಪರಂಪರೆ ಮತ್ತು ವಿಜ್ಞಾನದ ಅವಿನಾಭಾವ ಸಂಬಂಧವಿದೆ. ಈ ಕಾರಣದಿಂದಾಗಿ ಸಾವಿರಾರು ವರ್ಷದ ಇತಿಹಾಸ ಇರುವ ಹಿಂದೂ ಧರ್ಮದ ಮೇಲೆ ಅನ್ಯ ಮತಿಯರು ನಾನಾ ರೀತಿಯಲ್ಲಿ ದಾಳಿ ಮಾಡಿದರೂ ಅದನ್ನು ಅಲುಗಾಡಿಸಲು ಸಾಧ್ಯವಾಗಿಲ್ಲ. ಹಿಂದೂ ಸಮಾಜದ ಸಂಸ್ಕಾರ ಸಂಸ್ಕೃತಿಗೆ ಆಘಾತವಾದಾಗ ಸೆಟೆದು ನಿಲ್ಲುವ ಶಕ್ತಿ ಹಿಂದುಗಳಲ್ಲಿ ಇದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ನೂರು ವರ್ಷದಲ್ಲಿ ಉತ್ತಮ ಕೆಲಸ ಕಾರ್ಯಗಳನ್ನು ಮಾಡಿ ವಿಶ್ವದ ಅತ್ಯಂತ ದೊಡ್ಡ ಸ್ವಯಂ ಸೇವ ಸಂಘವಾಗಿ ಬೆಳೆದಿದೆ ಎಂದರು.
ಆಲಂಕಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೌರವ ಶಿಕ್ಷಕಿ ಅಮಿತಾ ಜಿ ಮಾತನಾಡಿ ಸಂಸ್ಕಾರ ಎಂಬುವುದು ಪಠ್ಯ ಪುಸ್ತಕದಿಂದ ಬರುವ ವಿಷಯವಲ್ಲ. ಪೋಷಕರ ಆಚಾರ ವಿಚಾರ ಸಂಸ್ಕಾರದಲ್ಲಿ ನಿರ್ಧಾರವಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಂಶುಪಾಲರಾದ ಎ. ಕೃಷ್ಣಪ್ಪ ಪೂಜಾರಿಯವರು ಮಾತನಾಡಿ ನಮಗೆ ರಾಷ್ಟ್ರವೇ ನಮಗೆ ದೇವರಾಗಬೇಕು, ದೇವರಿಲ್ಲದ ರಾಷ್ಟ್ರ ರಾಷ್ಟ್ರವಾಗಿ ಉಳಿಯಲು ಸಾಧ್ಯವಿಲ್ಲ, ನಮ್ಮ ಧರ್ಮ ಸಂಸ್ಕೃತಿ ಮೌಲ್ಯಗಳಿಗೆ ಬೆಲೆಕೊಟ್ಟಾಗ ಮಾತ್ರ ನಮ್ಮ ಧರ್ಮ ಹೆಮ್ಮರವಾಗಿ ಬೆಳೆಯುತ್ತದೆ. ನಾವು ಯಾವತ್ತೂ ಮತಾಂತರ ಆಗಬಾರದು, ಹಿಂದೂವಾಗಿ ಹುಟ್ಟಿ ಹಿಂದೂವಾಗಿ ಬಾಳಬೇಕು ಎಂದರು. ವೇದಿಕೆಯಲ್ಲಿ ಹಿಂದೂ ಸಂಗಮ ಆಯೋಜನಾ ಸಮಿತಿಯ ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಪಡ್ಡಿಲ್ಲಾಯ, ಉಪಾಧ್ಯಕ್ಷ ಜಯಕರ ಪೂಜಾರಿ ಕಲ್ಲೇರಿ, ಸುರುಳಿ ಬಾಲಸುಬ್ರಹ್ಮಣ್ಯ ದೇವಸ್ಥಾನದ ಖಾಯಂ ಟ್ರಸ್ಟಿ ರಾಮಮೋಹನ ರೈ ಸುರುಳಿ, ಅರ್ಬಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮುಖ್ಯಸ್ಥರಾದ ಕೃಷ್ಣ ಕುಮಾರ್ ಅತ್ರಿಜಾಲು, ಬಲ್ಯ ಉಮಾಮೇಶ್ವರಿ ಸೇವಾ ಟ್ರಸ್ಟ್ ಪ್ರಮುಖರಾದ ರಾಮಚರಣ್ ರೈ, ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮಕ್ಕೆ ಮುನ್ನ ಆಲಂಕಾರು ಪೇಟೆಯಿಂದ ಚೆಂಡೆ ಮತ್ತು ಭಜನಾ ತಂಡಗಳಿಂದ ಭಜನೆಯೊಂದಿಗೆ ಶೋಭಾಯಾತ್ರೆ ನಡೆಯಿತು. ಶೋಭಾಯಾತ್ರೆಯನ್ನು ನಿವೃತ್ತ ಶಿಕ್ಷಕರಾದ ನಾಗಪ್ಪ ಗೌಡ ಮರವಂತಿಲ ಉದ್ಟಾಟಿಸಿ, ಶುಭಹಾರೈಸಿದರು. ನಂತರ ಗೋಪೂಜೆ, ಭಾರತ ಮಾತೆಗೆ ಪುಷ್ಪಾರ್ಚನೆಗೈದು ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಪ್ರಾರಂಭವಾಯಿತು. ಪ್ರಮುಖರಾದ ಈಶ್ವರ ಭಟ್ ಕೊಂಡಾಡಿ ಸ್ವಾಗತಿಸಿ, ಆಯೋಜನಾ ಸಮಿತಿಯ ಸಹ ಸಂಯೋಜಕಿ ಗಾಯತ್ರಿ ಸುರೇಶ್ ವಂದಿಸಿದರು. ಶಿಕ್ಷಕ ಚಂದ್ರಹಾಸ ಕೆ. ಸಿ. ಕಾರ್ಯಕ್ರಮ ನಿರೂಪಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಹಿಂದೂ ಸಂಗಮ ಆಯೋಜನಾ ಸಮಿತಿ ಕಡಬ ತಾಲ್ಲೂಕು ಕುಂತೂರು ಮಂಡಲದ ಪ್ರಮುಖರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಸಹಕರಿಸಿದರು.









