






ಪುತ್ತೂರು: ಹತ್ತು ಹಲವು ಕಾರಣಿಕತೆಗಳ ಮೂಲಕ ಹತ್ತೂರಿನಲ್ಲಿ ಪ್ರಸಿದ್ಧಿ ಪಡೆದುಕೊಂಡಿರುವ ಪುತ್ತೂರಿನ ಒಳಮೊಗ್ರು ಗ್ರಾಮದ ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಶ್ರೀ ಬ್ರಹ್ಮಬೈದರ್ಕಳ ಪುನರ್ ಪ್ರತಿಷ್ಠಾ ಚೈತನ್ಯ ಬ್ರಹ್ಮಕಲಶಾಭಿಷೇಕ ಕಾರ್ಯಕ್ರಮ ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಯವರ ನೇತೃತ್ವದಲ್ಲಿ ಫೆ.07 ಮತ್ತು 08 ರಂದು ವಿಜೃಂಭಣೆಯಿಂದ ಜರಗಲಿದೆ.


ಫೆ.7 ರಂದು ಸಂಜೆ ತಂತ್ರಿಗಳ ಆಗಮನದೊಂದಿಗೆ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ಸುದರ್ಶನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ವಾಸ್ತು ಪುಣ್ಯಾಹಾಂತ, ಪ್ರಕಾರ ಬಲಿ ಇತ್ಯಾದಿ ವೈಧಿಕ ಕಾರ್ಯಕ್ರಮಗಳು ನಡೆದು ಪ್ರಸಾದ ವಿತರಣೆ ನಡೆಯಲಿದೆ.ಸಂಜೆ ತುಳು ನಾಟಕ ಪ್ರದರ್ಶನಗೊಳ್ಳಲಿದ್ದು ರಾತ್ರಿ ಅನ್ನ ಪ್ರಸಾದ ವಿತರಣೆ ನಡೆಯಲಿದೆ.




ಫೆ.08 ರಂದು ಬೆಳಿಗ್ಗೆ 5 ಗಂಟೆಯಿಂದ ಬ್ರಹ್ಮಕಲಶ ಪೂಜೆ, ಮಹಾಗಣಪತಿ ಹೋಮ ನಡೆದು ಬೆಳಿಗ್ಗೆ ಗಂಟೆ 8.13 ರಿಂದ 8.56 ರವರೆಗಿನ ಕುಂಭ ಲಗ್ನದ ಶುಭ ಮುಹೂರ್ತದಲ್ಲಿ ಪುನರ್ ಪ್ರತಿಷ್ಠಾ ಚೈತನ್ಯ ಬ್ರಹ್ಮಕಲಶಾಭಿಷೇಕ ನಡೆದು ಶ್ರೀ ನಾಗದೇವರಿಗೆ ಪ್ರಾಯಶ್ಚಿತ ಆಶ್ಲೇಷಾ ಬಲಿ ಪೂಜೆ, ಕಲಶಾಭಿಷೇಕ, ತಂಬಿಲ ಸೇವೆ ನಡೆದು ಮಹಾಪೂಜೆ ಬಳಿಕ ಭಕ್ತಾಧಿಗಳಿಗೆ ಪ್ರಸಾದ ವಿತರಣೆ, ಮಹಾ ಅನ್ನ ಪ್ರಸಾದ ವಿತರಣೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಬ್ರಹ್ಮಬೈದೇರುಗಳ ಕೃಪೆಗೆ ಪಾತ್ರರಾಗುವಂತೆ ಗರಡಿಯ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಲಭಾಗ್ಯ,ವಿವಾಹ ಭಾಗ್ಯ,ಸಂತಾನ ಭಾಗ್ಯಕ್ಕೆ ಪ್ರಸಿದ್ಧಿ ಈ ಗರಡಿ
ರಾಮಜಾಲು ಗರಡಿಯು ಒಂದಷ್ಟು ವಿಶೇಷತೆಗಳಿಗೆ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದು ಈಗಾಗಲೇ ಇಲ್ಲಿ ಬಂದು ಭಕ್ತಿಯಿಂದ ಕೈಮುಗಿದ ಭಕ್ತರ ಇಷ್ಟಾರ್ಥಗಳನ್ನು ಇಲ್ಲಿನ ದೈವ ಶಕ್ತಿಗಳು ಈಡೇರಿಸಿದ್ದಕ್ಕೆ ಬಹಳಷ್ಟು ನಿದರ್ಶನಗಳು ಕಾಣಸಿಗುತ್ತವೆ. ವಿಶೇಷವಾಗಿ ಭೂಮಿಯಲ್ಲಿನ ಜಲ ಭಾಗ್ಯ, ವಿವಾಹ ಭಾಗ್ಯ, ಸಂತಾನ ಭಾಗ್ಯ ಹಾಗೇ ಗೃಹ ಭಾಗ್ಯಕ್ಕೆ ಈ ಗರಡಿ ಹೆಸರುವಾಸಿಯಾಗಿದೆ.ಬೋರ್ವೆಲ್ನಲ್ಲಿ ನೀರು ದೊರೆತಿದ್ದು,ಮಕ್ಕಳಿಲ್ಲದವರಿಗೆ ಮಕ್ಕಳಾಗಿದ್ದು, ಮನೆ ಕಟ್ಟಬೇಕು ಎಂಬ ಕನಸು ಕಂಡಿದ್ದವರಿಗೆ ಮನೆ ಭಾಗ್ಯ, ಮದುವೆ ಭಾಗ್ಯ ಹೀಗೆ ಭಕ್ತರ ಇಷ್ಟಾರ್ಥಗಳು ಶ್ರೀ ಕೋಟಿ ಚೆನ್ನಯರ ಬ್ರಹ್ಮಬೈದೇರುಗಳ ಅನುಗ್ರಹದಿಂದ ಕೂಡಿ ಬರುತ್ತಿದೆ. ಇಂತಹ ಕಾರಣಿಕತೆಯ ಗರಡಿಯಲ್ಲಿ ಮತ್ತೊಮ್ಮ ಚೈತನ್ಯ ಕಲಶಾಭಿಷೇಕ ನಡೆಯುತ್ತಿದೆ.
ಫೆ.07 ನಂಬಿಕೆದಾಯೆ ತುಳು ನಾಟಕ
ಬ್ರಹ್ಮಕಲಶಾಭಿಷೇಕದ ಅಂಗವಾಗಿ ಫೆ.07 ರಂದು ಸಂಜೆ 7 ಗಂಟೆಯಿಂದ ಸಂಸಾರ ಕಲಾವಿದರು ಪುತ್ತೂರು ಇವರು ಅಭಿನಯಿಸುವ ಭಕ್ತಿ ಪ್ರಧಾನ, ಹಾಸ್ಯಮಯ ಸಾಮಾಜಿಕ ತುಳು ನಾಟಕ ‘ ನಂಬಿಕೆದಾಯೆ’ ಪ್ರದರ್ಶನಗೊಳ್ಳಲಿದೆ. ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿನಂತಿ.
ಪುನರ್ ಪ್ರತಿಷ್ಠೆಗೊಂಡ 18 ವರ್ಷಗಳು…
ರಾಮಜಾಲು ಶ್ರೀ ಬ್ರಹ್ಮಬೈದೇರುಗಳ ಗರಡಿಯು ಸಂಪೂರ್ಣ ನವೀಕರಣಗೊಂಡು ನೂತನ ಗರಡಿ ನಿರ್ಮಾಣದೊಂದಿಗೆ 2008 ರಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವನ್ನು ಪಡೆದುಕೊಂಡಿದ್ದು 2026 ಕ್ಕೆ 18 ವರ್ಷಗಳು ತುಂಬುತ್ತಿದೆ. ಪ್ರಶ್ನಾ ಚಿಂತನೆಯಲ್ಲಿ ಕಂಡು ಬಂದಂತೆ ಗರಡಿಗೆ ಜೀವಕಳೆ ನೀಡುವ ಮೂಲಕ ಇಲ್ಲಿನ ದೈವ ಶಕ್ತಿಗಳಿಗೆ ಮತ್ತೊಮ್ಮೆ ಚೈತನ್ಯ ನೀಡುವ ಉದ್ದೇಶದಿಂದ ಫೆ.8 ರಂದು ತಂತ್ರಿಗಳ ಮೂಲಕ ಚೈತನ್ಯ ಬ್ರಹ್ಮಕಲಶಾಭಿಷೇಕ ನಡೆಯುತ್ತಿದೆ.










