9/11ನ ಸಮಸ್ಯೆಯಿಂದ ಜನರು ಹೈರಾಣು : ಗ್ರಾ.ಪಂ. ಸದಸ್ಯರು ತಾ.ಪಂ.ಗೆ ಮುತ್ತಿಗೆ ಹಾಕಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿ – ಬಜತ್ತೂರು ಗ್ರಾಮ ಸಭೆಯಲ್ಲಿ ಆಗ್ರಹ

0

ಉಪ್ಪಿನಂಗಡಿ: ಗ್ರಾಮ ಪಂಚಾಯತ್ ಎಂದರೆ ಗ್ರಾಮದ ಸರಕಾರವಿದ್ದಂತೆ. ಗ್ರಾಮ ಸಭೆಯೆನ್ನುವುದು ಗ್ರಾಮದ ಜನರ ಸಮಸ್ಯೆಗಳಿಗೆ ಪರಿಹಾರ ನೀಡಲು ಇರುವುದು. ಆದರೆ ಗ್ರಾ.ಪಂ.ನಲ್ಲಿ ಈಗ 9/11 ಸೇರಿದಂತೆ ಯಾವುದೇ ಕೆಲಸಗಳು ಆಗದೇ ಜನರಿಗೆ ಸಮಸ್ಯೆಯುಂಟಾಗಿದೆ. ಪರಿಸ್ಥಿತಿ ಹೀಗಿರುವಾಗ ಗ್ರಾಮ ಸಭೆ ನಡೆಸುವ ಔಚಿತ್ಯವಾದರೂ ಏನು ಎಂದು ಪ್ರಶ್ನಿಸಿದ ಗ್ರಾಮಸ್ಥ ಗಣೇಶ್ ಕುಲಾಲ್, ಈ ಬಗ್ಗೆ ಪಂಚಾಯತ್ ಪ್ರತಿನಿಧಿಗಳು ತಾ.ಪಂ.ಗೆ ಮುತ್ತಿಗೆ ಹಾಕುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದ ಘಟನೆ ಬಜತ್ತೂರು ಗ್ರಾಮ ಸಭೆಯಲ್ಲಿ ನಡೆಯಿತು.


ಗ್ರಾ.ಪಂ. ಅಧ್ಯಕ್ಷ ಗಂಗಾಧರ ಪಿ.ಎನ್. ಅವರ ಅಧ್ಯಕ್ಷತೆಯಲ್ಲಿ ಫೆ.4ರಂದು ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಗ್ರಾ.ಪಂ.ನಲ್ಲಿ ನೇರವಾಗಿ ಈ ಹಿಂದೆ ಸಿಗುತ್ತಿದ್ದ ಕಟ್ಟಡ ಪರವಾನಿಗೆ, ಡೋರ್ ನಂಬರ್‌ಗೆ ಈಗ ಪುಡಾಕ್ಕೆ ಹೋಗಬೇಕಿದೆ. 9/11 ಮಾಡಿಸಲು ಕೂಡಾ ಪುಡಾಕ್ಕೆ ಹೋಗಬೇಕಾಗಿದ್ದು, ಆದರೆ ಸುಮಾರು ಎರಡು ತಿಂಗಳಿಂದ ಪುಡಾದಲ್ಲಿ ಕೂಡಾ 9/11 ಆಗುತ್ತಿಲ್ಲ. ಕಾರಣ ಕೇಳಿದರೆ ಸಾಫ್ಟ್‌ವೇರ್ ಸಮಸ್ಯೆ ಎಂಬ ಉತ್ತರ ಅಧಿಕಾರಿಗಳಿಂದ ಬರುತ್ತಿದೆ. ಅಲ್ಲದೇ, ಈಗಿನ ನಿಯಮಾವಳಿ ಪ್ರಕಾರ 9/11 ವಿನ್ಯಾಸ ನಕ್ಷೆ ಪುಡಾದಿಂದ ಮಾಡಿಸಬೇಕು. ಬಳಿಕ ಅದಕ್ಕೆ ಕಾರ್ಯದರ್ಶಿ, ಪಿಡಿಒ, ತಾ.ಪಂ. ಇಒ ಹಾಗೂ ಗ್ರಾ.ಪಂ. ಅಧ್ಯಕ್ಷರ ತಂಬು ಆಗಿ ಆಮೇಲೆ ಮತ್ತೆ ಪಿಡಿಒ ಅವರ ತಂಬು ಆದ ಬಳಿಕವೇ 9/11 ಆಗುತ್ತದೆ. ಇನ್ನೇನು ಕೆಲ ದಿನಗಳಲ್ಲಿ ಗ್ರಾ.ಪಂ. ಸದಸ್ಯರ ಅಧಿಕಾರವಧಿ ಮುಗಿಯುತ್ತದೆ. ಆಗ ಅಧ್ಯಕ್ಷರ ತಂಬುಗಾಗಿ ಏನು ಮಾಡಬೇಕು. ಸಾಫ್ಟ್‌ವೇರ್ ಸಮಸ್ಯೆ ಸರಿಯಾದರೂ ಮತ್ತೆ 9/11 ಮಾಡಿಸಲು ಮತ್ತೆ ಇದು ತೊಂದರೆ ಕೊಡಬಹುದು ಎಂದರಲ್ಲದೆ, ಈಗ ಟೆಕ್ನಾಲಜಿ ಬಹಳಷ್ಟು ಮುಂದುವರಿದಿದೆ. ಆದರೂ ಸಾಫ್ಟ್‌ವೇರ್ ಸಮಸ್ಯೆ ಅಂತ ಹೇಳುವುದು ಸರಿಯಲ್ಲ. ಅಧಿಕಾರಿಗಳಿಗೆ ಇಚ್ಛಾಶಕ್ತಿಯ ಕೊರತೆ ಇರುವುದೇ ಈ ಸಮಸ್ಯೆಗೆ ಕಾರಣ. ಆದ್ದರಿಂದ ಈ ಬಗ್ಗೆ ಗ್ರಾ.ಪಂ. ಸದಸ್ಯರು ಹೋರಾಟ ನಡೆಸಬೇಕು. ತಾ.ಪಂ.ಗೆ ಮುತ್ತಿಗೆ ಹಾಕಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವ ಕಾರ್ಯ ಮಾಡಬೇಕು ಎಂದರು.


ಗ್ರಾಮಸ್ಥ ಮಹೇಂದ್ರವರ್ಮ ಪಡ್ಪು ಮಾತನಾಡಿ, ಚುನಾವಣೆಗೆ ಸಂಬಂಧಿಸಿ ಸರಕಾರಿ ಶಾಲೆಯ ಶಿಕ್ಷಕರನ್ನು ಹಾಗೂ ಅಂಗನವಾಡಿ ಕಾರ್ಯಕರ್ತೆಯರನ್ನು ಬಿಎಲ್‌ಒಗಳನ್ನಾಗಿ ನೇಮಕ ಮಾಡಲಾಗುತ್ತದೆ. ಈಗ ಶೈಕ್ಷಣಿಕ ಅವಧಿಯ ಕೊನೆಯ ಹಂತ. ಮುಂದಕ್ಕೆ ಪರೀಕ್ಷೆಗಳು ಬರಲಿವೆ. ಆದ್ದರಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿದೆ. ಆದ್ದರಿಂದ ಅವರನ್ನು ಬಿಎಲ್‌ಒಗಳನ್ನಾಗಿ ನೇಮಕ ಮಾಡದಂತೆ ನಿರ್ಣಯ ಮಾಡಲು ಆಗ್ರಹಿಸಿದರು. ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.


ಅಭಿವೃದ್ಧಿ ಕೆಲಸಗಳ ಸಂದರ್ಭ ಇಲ್ಲಿ ಅಲ್ಪಸಂಖ್ಯಾತರಿರುವ ಪ್ರದೇಶವನ್ನು ಕಡೆಗಣಿಸಿರುವುದು ಕಂಡು ಬರುತ್ತಿದೆ ಎಂದು ಗ್ರಾಮಸ್ಥ ಬದ್ರುದ್ದೀನ್ ಆರೋಪಿಸಿದಾಗ ಸದಸ್ಯ ಉಮೇಶ ಓಡ್ರಪಾಲ್ ಮಾತನಾಡಿ ಎಲ್ಲಿ ಕಾಮಗಾರಿಗಳು ನಡೆದಿಲ್ಲ ಎಂದು ಪ್ರಶ್ನಿಸಿದರು. ಅದಕ್ಕೆ ಬದ್ರುದ್ದೀನ್ ಅಲ್ಪಸಂಖ್ಯಾತರ ಕಾಲನಿಗಳಲ್ಲಿ ದಾರಿದೀಪ, ಚರಂಡಿ, ರಸ್ತೆ ಆಗಿಲ್ಲ ಎಂದು ಉತ್ತರಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಉಮೇಶ ಓಡ್ರಪಾಲ್, ನಿಮ್ಮ ಆರೋಪ ಸರಿಯಲ್ಲ. ಅಭಿವೃದ್ಧಿಯಲ್ಲಿ ನಾವು ತಾರತಮ್ಯ ಮಾಡಿಲ್ಲ. ನಮ್ಮಲ್ಲಿರುವ ಅಲ್ಪ ಅನುದಾನದಲ್ಲಿ ಎಲ್ಲಾ ಕಡೆ ಹಂಚಿ ಕಾಮಗಾರಿ ನಡೆಸಿದ್ದೇವೆ. ಶಾಸಕರಿಗೂ ಮನವಿ ನೀಡಿ ಅವರಿಂದಲೂ ಅನುದಾನವನ್ನು ತರಿಸುವ ಪ್ರಯತ್ನ ಮಾಡಿದ್ದೇವೆ ಎಂದರಲ್ಲದೆ, ಮಳೆಗಾಲದಲ್ಲಿ ಜೋರು ಸಿಡಿಲು ಇದ್ದ ಎರಡು ತಿಂಗಳಲ್ಲಿ ಕೆಟ್ಟು ಹೋದ ದಾರಿದೀಪಗಳನ್ನು ಅಳವಡಿಸಲು ಸಾಧ್ಯವಾಗಿಲ್ಲ ಎಂದರು. ಹಾಕಿದ ಒಂದು ತಿಂಗಳಲ್ಲೇ ದಾರಿ ದೀಪ ಕೆಟ್ಟು ಹೋಗಲು ಕಾರಣವೇನು ಎಂದು ಬದ್ರುದ್ದೀನ್ ಪ್ರಶ್ನಿಸಿದಾಗ, ಕೆಲವು ಕಾಲನಿಗಳಲ್ಲಿ ವಿದ್ಯುತ್ ತಂತಿಗಳಿಗೆ ತೆಂಗಿನ ಗರಿಗಳು ತಾಗಿಕೊಂಡಿವೆ. ಅದನ್ನು ತೆರವುಗೊಳಿಸಲು ಹೋದರೆ ಅಲ್ಲಿನವರು ಬಿಡುತ್ತಿಲ್ಲ. ಆದ್ದರಿಂದ ವಿದ್ಯುತ್ ದೀಪಗಳು ಕೆಟ್ಟು ಹೋಗುತ್ತವೆ. ಪಂಚಾಯತ್‌ನೊಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು. ಆಗ ಮಾತ್ರ ಎಲ್ಲವನ್ನೂ ಸುಸೂತ್ರವಾಗಿ ನಡೆಸಲು ಸಾಧ್ಯ ಎಂದರು. ಗ್ರಾ.ಪಂ. ಅಧ್ಯಕ್ಷ ಗಂಗಾಧರ ಪಿ.ಎನ್. ಮಾತನಾಡಿ, ನಾವು ಅಭಿವೃದ್ಧಿಯಲ್ಲಿ ಯಾವುದೇ ರಾಜಕೀಯ, ಧರ್ಮ ಬೇಧ ಮಾಡಿಲ್ಲ. ಎಲ್ಲಾ ಕಡೆಗಳಲ್ಲೂ ಅಭಿವೃದ್ಧಿ ಕೆಲಸಗಳನ್ನು ನಡೆಸಲಾಗಿದೆ ಎಂದರು.


ಗ್ರಾಮಸ್ಥ ಗಣೇಶ್ ಕುಲಾಲ್ ಮಾತನಾಡಿ, ಪೌತಿ ಖಾತೆಯು ಎಲ್ಲಾ ಕಡೆಗಳಲ್ಲಿ 15 ದಿನಗಳಲ್ಲಿ ಆಗುತ್ತದೆ. ಆದರೆ ಬಜತ್ತೂರು ಗ್ರಾಮದ ವಿಎಯವರು ಒಂದು ತಿಂಗಳಾದರೂ ಅಪ್‌ಲೋಡ್ ಮಾಡುತ್ತಿಲ್ಲ ಎಂದು ಆರೋಪಿಸಿದರು. ಗ್ರಾಮಸ್ಥ ವಸಂತ ಪಿಜಕ್ಕಳ ಮಾತನಾಡಿ, ರಾಷ್ಟ್ರೀಯ ಹೆದ್ದಾರಿ ಬದಿಯ ನೇತ್ರಾವತಿ ರೆಸಾರ್ಟ್ ಬಳಿ ವಿದ್ಯುತ್ ತಂತಿಗಳು ಕೆಳಭಾಗದಲ್ಲಿ ಜೋತು ಬಿದ್ದಿವೆ. ಇದರಿಂದ ಅಪಾಯವುಂಟಾಗುವ ಸಾಧ್ಯತೆಯ ಬಗ್ಗೆ ಸಭೆಯ ಗಮನಕ್ಕೆ ತಂದರು. ಹೊಸಗದ್ದೆ ಶಾಲೆ ಬಳಿಯಿಂದ ಪಂರ್ದಾಜೆಯವರೆಗೆ ಸರಕಾರಿ ನೆಡುತೋಪಿನ ಮರಗಳು ವಿದ್ಯುತ್ ತಂತಿಗಳ ಮೇಲೆ ಬಾಗಿಕೊಂಡಿವೆ. ಇದರಿಂದ ವಿದ್ಯುತ್ ಸಮಸ್ಯೆಯುಂಟಾಗುತ್ತದೆ. ಕಳೆದ ಗ್ರಾಮ ಸಭೆಯಲ್ಲಿಯೇ ಇದರ ತೆರವಿಗೆ ಒತ್ತಾಯಿಸಿದ್ದೆವು. ಆದರೆ ಇಷ್ಟರವರೆಗೆ ಅದರ ತೆರವು ಆಗಿಲ್ಲ ಎಂದು ಸದಸ್ಯ ಸಂತೋಷ್ ಕುಮಾರ್ ಪಂರ್ದಾಜೆ ತಿಳಿಸಿದರು. ಈ ಬಗ್ಗೆ ಕ್ರಮ ಕೈಗೊಳ್ಳುವ ಭರವಸೆ ಮೆಸ್ಕಾಂ ಇಲಾಖಾಧಿಕಾರಿಯಿಂದ ಈ ಸಂದರ್ಭ ದೊರೆಯಿತು.
ಬಜತ್ತೂರಿನಲ್ಲಿ ಕಾಡಾನೆಗಳು ಬೀಡು ಬಿಡುತ್ತಿವೆ. ಕೃಷಿಗೆ ಬಹಳಷ್ಟು ತೊಂದರೆ ಮಾಡುತ್ತಿವೆ. ಆದ್ದರಿಂದ ಅರಣ್ಯ ಇಲಾಖೆಯ ಅಧಿಕಾರಿಗಳು ಇವುಗಳನ್ನು ಬೇರೆ ಕಡೆ ಓಡಿಸಬೇಕು. ಇಲ್ಲದಿದ್ದಲ್ಲಿ ಅದನ್ನು ಹಿಡಿಯುವ ಕಾರ್ಯಾಚರಣೆ ನಡೆಸಬೇಕು ಎಂದು ಗ್ರಾಮಸ್ಥ ಗಣೇಶ್ ಕುಲಾಲ್ ತಿಳಿಸಿದರು. ಇಲ್ಲಿ ಅತೀ ಹೆಚ್ಚು ಕೃಷಿ ಹಾನಿಯಾಗುತ್ತಿರುವುದು ಮಂಗಗಳಿಂದ. ಆದರೆ ಅರಣ್ಯ ಇಲಾಖೆಯು ಅದಕ್ಕೆ ಯಾವ ಪರಿಹಾರವನ್ನು ನೀಡುತ್ತಿಲ್ಲ. ಈ ಬಗ್ಗೆ ಸರಕಾರಕ್ಕೆ ಪತ್ರ ಬರೆದು ಮಂಗಗಳಿಂದ ಕೃಷಿ ಹಾನಿಯಾದರೂ ಕೃಷಿಕನಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಬೇಕೆಂಬ ಆಗ್ರಹ ಸಭೆಯಲ್ಲಿ ಕೇಳಿ ಬಂತು.
ಈಗಿನ ವಿಎ ಅವರು ವಾರಕ್ಕೆ ಎರಡು ಸಲ ಮಾತ್ರ ಇಲ್ಲಿಗೆ ಬರೋದು. ಆದ್ದರಿಂದ ನಮ್ಮ ಗ್ರಾಮಕ್ಕೆ ಖಾಯಂ ವಿಎಯನ್ನು ನಿಯೋಜಿಸಬೇಕು ಹಾಗೂ ಬಜತ್ತೂರು ಗ್ರಾಮದಲ್ಲಿ ಮಳೆ ಮಾಪಕ ಇಲ್ಲ. ಮಳೆಮಾಪಕವನ್ನು ಅಳವಡಿಸಬೇಕು ಎಂಬ ಆಗ್ರಹ ಕೇಳಿಬಂತು.


ಸಭೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷೆ ವಿಮಲ, ಸದಸ್ಯರಾದ ಮೋನಪ್ಪ ಗೌಡ, ಮಾಧವ ಪೂಜಾರಿ, ಗಂಗಾಧರ ಕೆ.ಎಸ್., ಸ್ಮಿತಾ, ರತ್ನಾ, ಭಾಗೀರಥಿ, ಪ್ರೆಸಿಲ್ಲಾ ಡಿಸೋಜ, ಯಶೋಧಾ, ಪ್ರೇಮ ಉಪಸ್ಥಿತರಿದ್ದರು. ಪುತ್ತೂರು ಸಾಮಾಜಿಕ ಅರಣ್ಯ ಇಲಾಖೆಯ ವಲಯ ಅರಣ್ಯಾಧಿಕಾರಿ ವಿದ್ಯಾರಾಣಿ ನೋಡಲ್ ಅಧಿಕಾರಿಯಾಗಿ ಸಭೆಯನ್ನು ಮುನ್ನಡೆಸಿದರು. ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಗ್ರಾಮಸ್ಥರಾದ ದೇರಣ್ಣ ಗೌಡ, ಎನ್. ಉಮೇಶ್, ಆದಂ ಕೆ., ಮೋನಮ್ಮ, ರಮ್ಯ ಕೆ. ಮತ್ತಿತರರು ಉಪಸ್ಥಿತರಿದ್ದರು. ಗ್ರಾ.ಪಂ. ಪಿಡಿಒ ಶ್ರೀಮತಿ ಚಿತ್ರಾವತಿ ವರದಿ ಮಂಡಿಸಿದರು. ಕಾರ್ಯದರ್ಶಿ ಕೊರಗಪ್ಪ ಕೆ. ವಂದಿಸಿದರು. ಸಿಬ್ಬಂದಿ ರಮೇಶ ಸಹಕರಿಸಿದರು.

LEAVE A REPLY

Please enter your comment!
Please enter your name here