







ಪುತ್ತೂರು: ಇತಿಹಾಸ ಪ್ರಸಿದ್ಧ ಪರ್ಪುಂಜ ರಾಮಜಾಲು ಶ್ರೀ ಬ್ರಹ್ಮಬೈದರ್ಕಳ ಗರಡಿಯಲ್ಲಿ ಫೆ.08ರಂದು ನಡೆಯುವ ಶ್ರೀ ಬ್ರಹ್ಮಬೈದೇರುಗಳ ಪುನರ್ ಪ್ರತಿಷ್ಠಾ ಚೈತನ್ಯ ಬ್ರಹ್ಮಕಲಶಾಭಿಷೇಕದ ಅಂಗವಾಗಿ ಫೆ.07ರಂದು ಸಂಜೆ ಕ್ಷೇತ್ರಕ್ಕೆ ಬ್ರಹ್ಮಶ್ರೀ ಕೆಮ್ಮಿಂಜೆ ಲಕ್ಷ್ಮೀಶ ತಂತ್ರಿಗಳ ಆಗಮನದೊಂದಿಗೆ ವಿವಿಧ ವೈಧಿಕ ಕಾರ್ಯಕ್ರಮಗಳು ನಡೆಯಿತು. ಆರಂಭದಲ್ಲಿ ತಂತ್ರಿಗಳನ್ನು ಪೂರ್ಣಕುಂಭದೊಂದಿಗೆ ಸ್ವಾಗತಿಸಲಾಯಿತು. ಬಳಿಕ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಪ್ರಾಸಾದ ಶುದ್ಧಿ, ಸುದರ್ಶನ ಹೋಮ, ವಾಸ್ತು ಹೋಮ, ವಾಸ್ತು ಪೂಜಾ ಬಲಿ, ವಾಸ್ತು ಪುಣ್ಯಾಹಾಂತ, ಪ್ರಾಕಾರ ಬಲಿ ನಡೆದು ಪ್ರಸಾದ ವಿತರಣೆ ನಡೆಯಿತು. ರಾತ್ರಿ ಭಕ್ತಾಧಿಗಳಿಗೆ ಅನ್ನಪ್ರಸಾದ ವಿತರಣೆ ನಡೆಯಿತು. ಊರಪರವೂರ ಸಾವಿರಾರು ಭಕ್ತರು ಆಗಮಿಸಿ ಅನ್ನ ಪ್ರಸಾದ ಸ್ವೀಕರಿಸಿದರು. ಗರಡಿಯ ಆಡಳಿತ ಮೊಕ್ತೇಸರರಾದ ಕೆ.ಸಂಜೀವ ಪೂಜಾರಿ ಕೂರೇಲುರವರು ಭಕ್ತಾಧಿಗಳನ್ನು ಸ್ವಾಗತಿಸಿ, ಪ್ರಸಾದ ನೀಡಿ ಸತ್ಕರಿಸಿದರು. ಸರಸ್ವತಿ ಸಂಜೀವ ಪೂಜಾರಿ, ಉಪನ್ಯಾಸಕ ಹರ್ಷಿತ್ ಕುಮಾರ್ ಕೂರೇಲು ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.



ಮನರಂಜಿಸಿದ ‘ನಂಬಿಕೆದಾಯೆ’ ನಾಟಕ
ಬ್ರಹ್ಮಕಲಶಾಭಿಷೇಕದ ಅಂಗವಾಗಿ ಸಂಜೆ ಸಂಸಾರ ಕಲಾವಿದರು ಪುತ್ತೂರು ಇವರು ಅಭಿನಯಿಸಿದ ‘ನಂಬಿಕೆದಾಯೆ’ ಎಂಬ ಭಕ್ತಿಪ್ರಧಾನ, ಹಾಸ್ಯಮಯ, ಸಾಮಾಜಿಕ ತುಳು ನಾಟಕ ಪ್ರದರ್ಶನಗೊಂಡಿತು. ನೂರಾರು ಮಂದಿ ಆಗಮಿಸಿ ನಾಟಕ ವೀಕ್ಷಿಸಿ ಸಂಭ್ರಮಿಸಿದರು.




ಇಂದು ಪುನರ್ ಪ್ರತಿಷ್ಠಾ ಚೈತನ್ಯ ಬ್ರಹ್ಮಕಲಶಾಭಿಷೇಕ
ಫೆ.೦8 ರಂದು ಬೆಳಿಗ್ಗೆ ಬ್ರಹ್ಮಕಲಶಪೂಜೆ, ಮಹಾಗಣಪತಿ ಹೋಮ ನಡೆದು 8.13ರಿಂದ 8.56 ರ ಕುಂಭ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ಬ್ರಹ್ಮಬೈದೇರುಗಳಿಗೆ ಪುನರ್ ಪ್ರತಿಷ್ಠಾ ಚೈತನ್ಯ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ಶ್ರೀ ನಾಗದೇವರಿಗೆ ಪ್ರಾಯಶ್ಚಿತವಾಗಿ ಆಶ್ಲೇಷಾ ಬಲಿ ಪೂಜೆ, ಕಲಶಾಭಿಷೇಕ, ತಂಬಿಲ ಸೇವೆ ನಡೆದು ಮಧ್ಯಾಹ್ನ ಮಹಾಪೂಜೆ ಬಳಿಕ ಪ್ರಸಾದ ಹಾಗೂ ಅನ್ನ ಪ್ರಸಾದ ವಿತರಣೆ ನಡೆಯಲಿದೆ. ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಗರಡಿಯ ಪ್ರಕಟಣೆ ತಿಳಿಸಿದೆ.










