







ಪುತ್ತೂರು: ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದ ಸವಾರನಿಗೆ ಪುತ್ತೂರು ನ್ಯಾಯಾಲಯ ರೂ. 10ಸಾವಿರ ದಂಡ ವಿಧಿಸಿದೆ.


ಬೈಕ್ (ಕೆ.ಎ21 ಡಬ್ಲ್ಯು 9496) ನ ಮಾಲಕ ಗಣೇಶ್ ನಾಯಕ್ ಎಂಬವರು ಮದ್ಯ ಸೇವನೆ ಮಾಡಿ ಬೈಕ್ ಚಲಾಯಿಸಿ ದಂಡ ಪಾವತಿ ಶಿಕ್ಷೆಗೆ ಒಳಗಾದವರು. 2024ರ ಆ.14 ರಂದು ರಾತ್ರಿ ನರಿಮೊಗರು ಗ್ರಾಮದ ಪುರುಷರಕಟ್ಟೆ ಜಂಕ್ಷನ್ ನಲ್ಲಿ ಪೊಲೀಸ್ ಉಪನಿರೀಕ್ಷಕ ಕುಟ್ಟಿಮೇರ ಕೆ ಮತ್ತು ಕಾನ್ಸ್ಟೇಬಲ್ ವಿಜಯಕುಮಾರ್ ಅವರು ರೌಂಡ್ಸ್ ಕರ್ತವ್ಯದಲ್ಲಿದ್ದ ಸಂದರ್ಭ ಗಣೇಶ್ ನಾಯಕ್ ಎಂಬವರು ಹೆಲ್ಮೆಟ್ ಇಲ್ಲದೆ ಬೈಕ್ ಚಲಾಯಿಸಿಕೊಂಡು ಬರುತ್ತಿರುವುದನ್ನು ನಿಲ್ಲಿಸಿ, ತಪಾಸಣೆ ಮಾಡುವ ಸಮಯ ಅವರು ಮದ್ಯ ಸೇವನೆ ಮಾಡಿರುವುದು ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಸವಾರ ಗಣೇಶ್ ನಾಯಕ್ ಅವರಿಗೆ ನೋಟೀಸ್ ನೀಡಿದ್ದರು. ಬಳಿಕ ಪೊಲೀಸ್ ಉಪನಿರೀಕ್ಷಕರು ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಿದ್ದರು. ಪ್ರಕರಣದ ಪರ ಸಹಾಯಕ ಸರಕಾರಿ ಅಭಿಯೋಜಕಿ ಕವಿತಾ ಅವರು ವಾದಿಸಿದ್ದರು. ಹಿರಿಯ ಪ್ರಧಾನ ಸಿವಿಲ್ ನ್ಯಾಯಾಧೀಶರಾಗಿರುವ ದಂಡಾಧಿಕಾರಿ ಪ್ರಕೃತಿ ಕಲ್ಯಾಣಪುರ ಅವರು ಪ್ರಕರಣದ ವಿಚಾರಣೆ ನಡೆಸಿ ಬೈಕ್ ಸವಾರನ ವಿರುದ್ಧದ ಆರೋಪ ಸಾಬೀತಾದ ಹಿನ್ನಲೆಯಲ್ಲಿ ಆರೋಪಿ ಬೈಕ್ ಸವಾರನಿಗೆ ರೂ. 10 ಸಾವಿರ ದಂಡ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.












