







ನಾಟಕ ನೋಡಬನ್ನಿ


ಇವತ್ತು ‘ಪರಿಚಯ ಪಾಂಬೂರು’ ಅವರ ವೇದಿಕೆಯಲ್ಲಿ ‘ರಂಗಾಯಣ’ ದವರ ‘ನಮ್ಮೊಳಗೊಬ್ಬ ಗಾಂಧಿ’ ನಾಟಕ ನೋಡಿದೆ. ನಾಟಕದ ರಚನೆಕಾರರಾದ ಡಿ. ಎಸ್. ಚೌಗಲೆಯವರು,”ನೋಡಿ ಹೇಳಬೇಕು” ಎಂದು ಮೂರು ಬಾರಿ ಹೇಳಿದ್ದರು. ಆದ್ದರಿಂದ ಹೇಳುತ್ತಿದ್ದೇನೆ.



ಗಾಂಧಿ ಪಾತ್ರವನ್ನು ರಂಗದ ಮೇಲೆ ತಾರದೆಯೇ ಗಾಂಧಿಯ ಅಸ್ತಿತ್ವದ ಇಂಪ್ಯಾಕ್ಟ್ ಅನ್ನು ಮಾಡಲು ಸಾಧ್ಯವಾಗಿರುವುದು ಬಹು ಮುಖ್ಯ ಅಂಶ. ನಾಟಕವು ಗಾಂಧಿಯವರ ಕಾಲವನ್ನೆ ದೃಶ್ಯೀಕರಿಸುತ್ತದೆ. ಆದರೆ ಗಾಂಧಿ ಎಲ್ಲೂ ಕಾಣಿಸುವುದಿಲ್ಲ. ಬದಲು ಒಂದೂರಿನ ಜನರ ಮೂಲಕವೇ ಗಾಂಧಿಯವರ ಇಂಪ್ಯಾಕ್ಟ್ ಅನ್ನು ಮಾಡುತ್ತದೆ. ಭಾರತದ ಅಂದಿನ ಜನರಿಗೆ ಗಾಂಧಿ ಯಾಕೆ ಮಹಾತ್ಮನಾಗಿ ಕಂಡರು ಎನ್ನುವುದನ್ನು ನಾಟಕ ಮನೋಜ್ಞವಾಗಿ ಚಿತ್ರಿಸುತ್ತದೆ. ಮದ್ಯ ಪಾನದಿಂದ ಕುಟುಂಬಗಳು ಹಾಳಾಗುವುದು, ಗಂಡ ಬಿಟ್ಟು ಹೋಗಿ ಹೆಣ್ಣು ಅನಾಥೆಯಾಗುವುದು, ಜಾತೀಯತೆ, ನಿರುದ್ಯೋಗ ಮತ್ತು ಬಡತನ, ಅನಾರೋಗ್ಯ- ಚಿಕಿತ್ಸೆಯ ಅಲಭ್ಯತೆ, ಪೊಲೀಸರು, ಬಡ್ಡಿಗೆ ದುಡ್ಡು ಕೊಡುವವರದ್ದೆಲ್ಲ ದೌರ್ಜನ್ಯಗಳು, ಶುಚಿತ್ವದ ಪ್ರಜ್ಞೆಯ ಕೊರತೆ ಇವೆಲ್ಲ ಆ ಕಾಲದ ಜನರ ಜೀವನದ ಸಮಸ್ಯೆಗಳಾಗಿದ್ದವು. ಗಾಂಧಿಯವರ ಬಳಿ ಈ ಎಲ್ಲದಕ್ಕೂ ಉತ್ತರವಿತ್ತು. ಆದ್ದರಿಂದ ಗಾಂಧಿ ತಮ್ಮ ಬಿಡುಗಡೆಯ ಮಹಾತ್ಮನಾಗಿ ಆ ಜನರಿಗೆ ಕಂಡರು ಎನ್ನುವುದು ನಾಟಕ ನೋಡಿದಾಗ ಅರ್ಥ ಆಗುತ್ತದೆ. “ವಿದ್ಯಾವಂತರು ಕಸ ಹಾಕುತ್ತಾರೆ. ಅವಿದ್ಯಾವಂತರು ಕಸವನ್ನು ಗುಡಿಸುತ್ತಾರೆ” ಎನ್ನುವುದು ಅಂದಿಗೂ ಇಂದಿಗೂ ಬಹಳ ಪವರ್ಫುಲ್ ಡಯಲಾಗ್ ಆಗಿ ನಾಟಕದಲ್ಲಿ ಬರುತ್ತದೆ. ಈ ಒಂದೇ ಮಾತಿನ ಮೂಲಕ ಸಮಗ್ರ ಶಿಕ್ಷಣ ವ್ಯವಸ್ಥೆಯ ಮೇಲೆ ಮಾಡುವ ವಿಡಂಬನೆ so beautiful. ಗಾಂಧಿ ತತ್ವಗಳು ಕ್ಯಾರಿ ಆಗುವ ದೃಷ್ಟಿಯಿಂದ ಗಾಂಧಿಯನ್ನು ರಂಗಕ್ಕೆ ತಾರದೆಯೇ ಗಾಂಧಿ ತತ್ವಗಳನ್ನು ತರುವ ಈ ಬಗೆಯ ಪ್ರಯತ್ನಗಳು ಬಹಳ ಪರಿಣಾಮಕಾರಿ. ಬಹುಶಃ ಮುಂದೆ ಇಂದಿನ ಕಾಲದಲ್ಲೆ ಗಾಂಧಿಯನ್ನು ನಮ್ಮೊಳಗೆ ಕಾಣಿಸುವಂತಹ ನಾಟಕಗಳು ಬಂದರೆ ಇನ್ನೂ ಒಳ್ಳೆಯದಾದೀತು.
ಒಂದು ಮೈನರ್ ಫ್ಯಾಕ್ಚುವಲ್ ಎರ್ರರ್ ಇದೆ. ಅದನ್ನು ಉದ್ದೇಶಪೂರ್ವಕವಾಗಿ ಮಾಡಿದರೊ ಏನೋ ಗೊತ್ತಿಲ್ಲ. ನಿರ್ದೇಶಕ ಚಿದಂಬರ ರಾವ್ ಜಂಬೆ, ರಚನೆಕಾರ ಚೌಗಲೆ ಇಬ್ಬರೂ ಅವರವರ ಕ್ಷೇತ್ರದ ಮಹಾನ್ ಸಾಧಕರು. ಹಾಗಿರುವಾಗ ಗೊತ್ತಿಲ್ಲದೆ ಆಗಿರಲಿಕ್ಕಿಲ್ಲ. ಅದು ಏನೆಂದರೆ ನಾಟಕದ ಉದ್ದಕ್ಕೂ ವೈಸರಾಯ್ ಆಡಳಿತವನ್ನು ‘ ಕಂಪನಿ ಸರ್ಕಾರ ಕಂಪನಿ ಸರ್ಕಾರ’ ಎಂದು ಹೇಳುತ್ತಾರೆ. ಆದರೆ ಗಾಂಧಿಯವರ ಕಾಲದಲ್ಲಿ ಇದ್ದದ್ದು ಈಸ್ಟ್ ಇಂಡಿಯಾ ಕಂಪನಿ ಸರ್ಕಾರದ ಆಡಳಿತ ಅಲ್ಲ. ಕಂಪನಿ ಸರ್ಕಾರದ ಆಡಳಿತ 1858 ರಲ್ಲಿ ಕೊನೆಗೊಂಡು ನಂತರ ಬ್ರಿಟಿಷ್ ಸರ್ಕಾರವೇ ಆಡಳಿತವನ್ನು ಕೈಗೆ ತೆಗೆದುಕೊಂಡಿದೆ. ಈ ಎರಡು ಬಗೆಯ ಆಡಳಿತದ ವ್ಯತ್ಯಾಸದ ಅರಿವಿಲ್ಲದಿದ್ದರೆ ಆಧುನಿಕ ಭಾರತದ ಇತಿಹಾಸವೆ ಸರಿಯಾಗಿ ಅರ್ಥ ಆಗುವುದಿಲ್ಲ. ಲೂಟಿ ಎರಡೂ ಅವಧಿಯಲ್ಲೂ ನಡೆದಿದೆ. ಆದರೆ ಖಾಸಗಿಯಾಗಿದ್ದ ಈಸ್ಟ್ ಇಂಡೊಯಾ ಕಂಪನಿಗೆ ಲೂಟಿಯೊಂದೇ ಧ್ಯೇಯ. ಆದರೆ ಬ್ರಿಟಿಷ್ ಸರ್ಕಾರ ಲೂಟಿ ಮಾಡುವಾಗಲೂ ತಾನು ಸರ್ಕಾರ ಎಂಬ ಅರಿವಿದ್ದು ಲೂಟಿ ಮಾಡಿತ್ತು. ಬ್ರಿಟಿಷ್ ಸರ್ಕಾರದ ಅವಧಿಯಲ್ಲಿ ಬಂದ 1909, 1919, 1935 ರ ಶಾಸನಗಳು ಭಾರತದ ಇಂದಿನ ಸಂವಿಧಾನದ ಬೆಳವಣಿಗೆಯನ್ನು ಮಾಡುತ್ತವೆ. ಅದರಲ್ಲೂ 1935 ರ ಕಾಯ್ದೆಯ ದೊಡ್ಡ ಭಾಗವನ್ನು ಇಂದಿನ ನಮ್ಮ ಸಂವಿಧಾನ ಅಳವಡಿಸಿಕೊಂಡಿದೆ. ಕಂಪನಿ ಸರ್ಕಾರಕ್ಕೆ ಈ ಬಗೆಯ ಕಾಯ್ದೆಗಳನ್ನು ಮಾಡುವ ಶಕ್ತಿಯೂ ಇರಲಿಲ್ಲ, ಇಚ್ಛೆಯೂ ಇರಲಿಲ್ಲ. ಬ್ರಿಟಿಷ್ ಸರ್ಕಾರ ಅಧಿಕಾರ ವಹಿಸಿಕೊಂಡು ಮೂರೇ ವರ್ಷದಲ್ಲಿ ಅಂದರೆ 1861 ರಲ್ಲಿ ವೈಸರಾಯ್ ಲೆಜಿಸ್ಲೇಟಿವ್ ಕೌನ್ಸಿಲ್ನಲ್ಲಿ ಭಾರತೀಯರಿಗೆ ಪ್ರತಿನಿಧಿತ್ವವನ್ನು ಕೊಟ್ಟಿತ್ತು. ಹೀಗೆಲ್ಲ ಇರುವಾಗ ಬ್ರಿಟಿಷ್ ಸರ್ಕಾರದ ಆಡಳಿತವನ್ನು ‘ಕಂಪನಿ ಸರ್ಕಾರ’ ಎನ್ನುವಾಗ ಹಾಗೆ ಹೇಳುವುದರ ಉದ್ದೇಶ ಅರ್ಥವಾಗುವ ಹಾಗೆ ನಾಟಕದಲ್ಲಿ ಒಂದು ಕ್ಲೂ ಇಟ್ಟರೆ ಚೆನ್ನಾಗಿರುತ್ತದೆ.
ಕಲಾವಿದರೆಲ್ಲರೂ ಅತ್ಯುತ್ತಮವಾಗಿ ಪಾತ್ರ ನಿರ್ವಹಣೆ ಮಾಡಿದ್ದರು. ಅದರಲ್ಲೂ ಅಜ್ಜನ ಪಾತ್ರ, ಅಜ್ಜನ ಸೊಸೆಯ ಪಾತ್ರ ಮತ್ತು ಮೂಕಮ್ಮನ ಪಾತ್ರ, ಶಾನುಭಾಗರ ಪಾತ್ರ ನಿರ್ವಹಣೆ ಅದ್ಭುತವಾಗಿತ್ತು. ಅಜ್ಜನ ಪಾತ್ರ ಅದರ maximum height ಅನ್ನು ತಲುಪಿ ಆಗಿದೆ. ಆದರೆ ಮೂಕಮ್ಮನ ಪಾತ್ರವನ್ನು ಮತ್ತು ರಹೀಮನ ಪಾತ್ರವನ್ನು ಇನ್ನಷ್ಟು ಪವರ್ಫುಲ್ ಮಾಡಲು ಸಾಧ್ಯವಿದೆ. ಇವೆರಡರಲ್ಲಿ ರಹೀಮನ ಪಾತ್ರವನ್ನು ಪವರ್ಫುಲ್ ಮಾಡಬೇಕಾದರೆ ಪಾತ್ರದ ಮೂಲ ಸ್ವರೂಪದಲ್ಲೆ ಬದಲಾವಣೆ ಬೇಕಾಗುತ್ತದೆ. ಆದರೆ ಮೂಕಮ್ಮನ ಪಾತ್ರವನ್ನು ಈಗಿರುವ ಸ್ವರೂಪದಲ್ಲೆ ಇನ್ನಷ್ಟು ಶ್ರೀಮಂತಗೊಳಿಸಬಹುದು.
ನಾಟಕದಲ್ಲಿ ಉದ್ದಕ್ಕೂ ಬಹಳಕೆಯಾಗುವ ಹಾಡುಗಳು, ಅದರ ಸಂಗೀತ, ಬೆಳಕಿನ ವರ್ಣ ಸಂಯೋಜನೆ ಸೂಪರ್ಬ್.ವಿದ್ವಾಂಸರ ಚರ್ಚೆಯಲ್ಲಿ ಸಾಮಾನ್ಯವಾಗಿ ಎಲ್ಲೂ ಕಾಣಿಸದ ಸಂವೇದನಾಶೀಲ ಎಚ್ಚರವೊಂದು ನಾಟಕದಲ್ಲಿದೆ. ನಾರಾಯಣ ಆಪ್ಟೆ ಗಾಂಧಿಯ ಪ್ರಾರ್ಥನಾ ಸಭೆಗೆ ಬಾಂಬ್ ಹಾಕಿದ್ದನ್ನು ಹೇಳುವಾಗಲೂ ನಾರಾಯಣ ಆಪ್ಟೆಯ ಹೆಸರನ್ನು ತೆಗೆದುಕೊಳ್ಳುವುದಿಲ್ಲ. ಗಾಂಧಿ ಹಂತಕನ ಹೆಸರನ್ನೂ ತೆಗೆದುಕೊಳ್ಳುವುದಿಲ್ಲ. ಯಾವನೊ ಅಯೋಗ್ಯ ಗುಂಡು ಹೊಡೆದಿದ್ದಾನೆ ಎಂಬ ಸ್ಟೈಲ್ನಲ್ಲಿ ಡಯಲಾಗ್ ಡೆಲಿವರಿ ಇದೆ. ಮತ್ತು ಇದನ್ನೇ ಮಾಡಬೇಕಾದ್ದು. ಇತಿಹಾಸದಲ್ಲಿ ಅವರಿಗಿರುವ ಸ್ಥಾನ ಅಷ್ಟೆ; ಹೆಸರು ಹೇಳಬೇಕಾದಂಥ ಕೊಡುಗೆಯೇನೂ ಅವರದ್ದು ಇಲ್ಲ.
ನಾಟಕದೊಳಗಿನ ನಾಟಕವಾಗಿ ಹರಿಶ್ಚಂದ್ರ ಗಾಂಧಿ ಬರುತ್ತಾನೆ. ಎತ್ತರದಲ್ಲಿ ನಿಂತು,”ನಾನು ಮಹಾರಾಜ ಯಾರಾದರೂ ಕೊಳ್ಳುತ್ತೀರಾ?” ಎಂದು ಕೇಳುವುದು, ಯಾರೂ ಕೊಳ್ಳದೆ ಇದ್ದಾಗ ಒಂದು ಸ್ಟೆಪ್ ಇಳಿದು,”ನಾನು ರಾಜ. ಯಾರಾದರೂ ಕೊಳ್ಳುತ್ತೀರಾ?” ಎಂದು ಕೇಳುವುದು, ಆಗಲೂ ಕೊಳ್ಳದೆ ಇದ್ದಾಗ ಪೂರ್ತಿ ನೆಲಕ್ಕಿಳಿದು,”ನಾನು ಮನುಷ್ಯ. ಯಾರಾದರೂ ಕೊಳ್ಳುತ್ತೀರಾ?” ಎಂದು ಕೇಳುವುದು ಬಹಳ ಮಾರ್ಮಿಕವಾಗಿದೆ.
ನಾನು ನೂರು ಭಾಷಣ ಮಾಡುವಷ್ಟು ಪರಿಣಾಮವನ್ನು ಈ ಬಗೆಯ ಒಂದು ನಾಟಕದ ಉಂಟು ಮಾಡಬಲ್ಲುದು. ಇಂಥ ಅತ್ಯುತ್ತಮ ನಾಟಕವನ್ನು ಕೊಟ್ಟದ್ದಕ್ಕಾಗಿ ಚೌಗಲೆಯವರಿಗೂ, ಜಂಬೆಯವರಿಗೂ ಅಭಿನಂದನೆಗಳು. ನಮಗಿದನ್ನು ತೋರಿಸಿದ್ದಕ್ಕಾಗಿ ‘ಪರಿಚಯ ಪಾಂಬೂರು’ ಅವರಿಗೆ ಕೃತಜ್ಞತೆಗಳು.
ನಾಟಕ ನೋಡಲು ಒಂದು ಕಾಲಕ್ಕೆ ಗಾಂಧೀಜಿಯ ಪ್ರಬಲ ಟೀಕಾಕಾರರಾಗಿದ್ದ ಎಡಪಂಥೀಯರೂ ಕೆಲವರು ಬಂದಿದ್ದರು. ಮುಂದೊಂದು ದಿನ ಬಲಪಂಥೀಯರೂ ಬರಲೇ ಬೇಕಾಗುತ್ತದೆ. ಆಂತರಿಕವಾಗಿಯೇ ಸತ್ವ ಶಾಲಿಯಾದದ್ದನ್ನು ಯಾರು ಏನೂ ಮಾಡಲು ಸಾಧ್ಯವಿಲ್ಲ.










