






ಹೊರೆಕಾಣಿಕೆ ಸಮರ್ಪಣೆ | ರಂಗಪೂಜೆ | ಸಭಾ ಕಾರ್ಯಕ್ರಮ | ಸಾಂಸ್ಕೃತಿಕ ಕಾರ್ಯಕ್ರಮ


ನೆಲ್ಯಾಡಿ: ಕಡಬ ತಾಲೂಕಿನ ಕೊಣಾಲು ಗ್ರಾಮದ ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದಲ್ಲಿ ಪ್ರತಿಷ್ಠಾ ದಿನ ಹಾಗೂ ಜಾತ್ರಾ ಮಹೋತ್ಸವದ ಅಂಗವಾಗಿ ಫೆ.9ರಂದು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.




ಸಂಜೆ ಗ್ರಾಮದ ಭಕ್ತರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಿತು. ಚೆಂಡೆಯೊಂದಿಗೆ ಹೊರೆಕಾಣಿಕೆ ಮೆರವಣಿಗೆಯು ದೇವಸ್ಥಾನಕ್ಕೆ ಆಗಮಿಸಿತು. ಬಳಿಕ ಶ್ರೀ ವಿಷ್ಣುಮೂರ್ತಿ ಭಜನಾ ಮಂಡಳಿಯವರಿಂದ ಭಜನಾ ಕಾರ್ಯಕ್ರಮ ನಡೆಯಿತು. ನಂತರ ಅಂಗನವಾಡಿ ಮಕ್ಕಳಿಂದ ನೃತ್ಯ ವೈಭವ, ಜ್ಯೋತಿರ್ವೈದ್ಯ ಸಂಗೀತ ಸಂಗಮ ಬಳಗದವರಿಂದ ಸಂಗೀತ ಕಾರ್ಯಕ್ರಮ, ಪ್ರಸಿದ್ಧ ನಾಟ್ಯ ಕಲಾವಿದರಿಂದ ಭರತನಾಟ್ಯ ವೈಭವ, ರಾತ್ರಿ ಕಾಂಚನ ಶ್ರೀ ಲಕ್ಷ್ಮೀನಾರಾಯಣ ಅನುದಾನಿತ ಹಿ.ಪ್ರಾ.ಶಾಲೆಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ರಂಗಪೂಜೆ;
ರಾತ್ರಿ ಶ್ರೀ ಮಹಾವಿಷ್ಣುಮೂರ್ತಿಗೆ ರಂಗಪೂಜೆ, ಕೊಣಾಲು ದೇವತೆಗೆ ತಂಬಿಲ ನಡೆಯಿತು. ದೇವಸ್ಥಾನದ ಪ್ರಧಾನ ಅರ್ಚಕರಾದ ವೇದಮೂರ್ತಿ ಅಮೃತರಾಜ ಸರಳಾಯ ಅವರು ಪೂಜಾವಿಧಿವಿಧಾನ ನೆರವೇರಿಸಿದರು. ಆಡಳಿತ ಮೊಕ್ತೇಸರರಾದ ಮಾಧವ ಸರಳಾಯ ಹಾಗೂ ಭಕ್ತರು ಉಪಸ್ಥಿತರಿದ್ದರು.

ಸಭಾ ಕಾರ್ಯಕ್ರಮ;
ರಾತ್ರಿ ಸಭಾ ಕಾರ್ಯಕ್ರಮ ಹಾಗೂ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆ ನಡೆಯಿತು. ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಾಧವ ಸರಳಾಯ ಅಧ್ಯಕ್ಷತೆ ವಹಿಸಿದ್ದರು. ದೇವಸ್ಥಾನದ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಶಿವಾನಂದ ಕಾರಂತ್ ಕಾಂಚನ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ಅಜಿತ್ಕುಮಾರ್ ಪಾಲೇರಿ, ಉದಯ ಶೆಟ್ಟಿ ಸಂದರ್ಭೋಚಿತವಾಗಿ ಮಾತನಾಡಿದರು. ಉತ್ಸವ ಸಮಿತಿ ಅಧ್ಯಕ್ಷ ಸುಂದರ ಶೆಟ್ಟಿ ಪುರ, ಉಪಾಧ್ಯಕ್ಷ ಪ್ರವೀಣ್ ಭಂಡಾರಿ ಪುರ, ತಿರ್ಲೆ ಶ್ರೀ ವಿಷ್ಣುಮೂರ್ತಿ ಭಜನಾ ಸಮಿತಿ ಕಾರ್ಯದರ್ಶಿ ಪುರಂದರ ಪೂಜಾರಿ, ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ಇಂದಿರಾನೋಣಯ್ಯ ಗೌಡ ಡೆಬ್ಬೇಲಿ, ಗೆಳೆಯರ ಬಳಗದ ಕಾರ್ಯದರ್ಶಿ ಚಂದ್ರಹಾಸ ತಿರ್ಲೆ, ಹಿರಿಯರಾದ ಕಮಲಮಧು ನಾಯ್ಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಜಾತ್ರೋತ್ಸವ ಪ್ರಯುಕ್ತ ಶ್ರೀ ವಿಷ್ಣು ಗೆಳೆಯರ ಬಳಗದ ಆಶ್ರಯದಲ್ಲಿ ನಡೆದ ವಿವಿಧ ಆಟೋಟ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಾಲಚಂದ್ರ ರೈ ಪಾತೃಮಾಡಿ ಸ್ವಾಗತಿಸಿ, ಜಯಂತ ಅಂಬರ್ಜೆ ವಂದಿಸಿದರು. ಆರತಿ ರವಿಕುಮಾರ್ ನಿರೂಪಿಸಿದರು. ಅಜಯ್ ಸರಳಾಯ, ಅರುಣ್ ಸರಳಾಯ, ರವಿಕುಮಾರ್ ಹೊಳ್ಳ, ಉತ್ಸವ ಸಮಿತಿ ಕಾರ್ಯದರ್ಶಿ ಲೋಕೇಶ ಅಗರ್ತ ಮತ್ತಿತರರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.

ಇಂದು ದರ್ಶನ ಬಲಿ;
ಫೆ.10ರಂದು ಬೆಳಿಗ್ಗೆ ಉಷಾಪೂಜೆ, ದೇವತಾಪ್ರಾರ್ಥನೆ, ಮಹಾಗಣಪತಿ ಹೋಮ, ಪಂಚವಿಂಶತಿ ಕಲಶಪೂಜೆ, ನಾಗತಂಬಿಲ, ನಾಳಿಕೇರ ಅಭಿಷೇಕ, ಪಂಚಾಮೃತ ಅಭಿಷೇಕ, ಪಂಚಗವ್ಯ ಅಭಿಷೇಕ, ಪಂಚವಿಂಶತಿ ಕಲಶಾಭಿಷೇಕ, ಅಶ್ವತ್ಥ ಪೂಜೆ, ಶ್ರೀ ಕೊಣಾಲುದೇವತೆಯ ಸನ್ನಿಧಾನದಲ್ಲಿ ತಂಬಿಲ ಸೇವೆ, ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಭಜನಾ ಸೇವೆ, ದೇವರ ಬಲಿಹೊರಟು ಶ್ರೀ ಭೂತಬಲಿ ಮಹೋತ್ಸವ, ವಸಂತಕಟ್ಟೆಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ರಾತ್ರಿ ಶ್ರೀ ಆದಿ ಧೂಮಾವತಿ ಶ್ರೀ ದೇಯಿಬೈದೆತಿ ಕೃಪಾಪೋಷಿತ ಯಕ್ಷಗಾನ ಮಂಡಳಿ ಮೂಲಸ್ಥಾನ ಗೆಜ್ಜೆಗಿರಿ ಇವರಿಂದ ’ನಾಗರತಿ’ ತುಳು ಹಾಸ್ಯಪ್ರಧಾನ ಸಾಮಾಜಿಕ ಪ್ರಸಂಗ ಯಕ್ಷಗಾನ ಬಯಲಾಟ ನಡೆಯಲಿದೆ.










