







ಕಾಣಿಯೂರು: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು, ಕರ್ನಾಟಕ ಸರಕಾರದ ಜೀವ ವೈವಿಧ್ಯ ಮಂಡಳಿ ವತಿಯಿಂದ ‘ಜೀವವೈವಿಧ್ಯ’ ಪ್ರಶಸ್ತಿಯನ್ನು ಪಡೆದಿರುವ ಹಾಗೂ ಔಷಧೀಯ ಸಸ್ಯ ಸಂರಕ್ಷಣೆ, ಉರಗಗಳ ಸಂರಕ್ಷಣೆ ಮತ್ತು ಪರಿಸರದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿರುವುದಕ್ಕಾಗಿ ಕರ್ನಾಟಕ ಸರಕಾರದ ‘ರಾಜೀವ ಗಾಂಧಿ ಪರಿಸರ ಪ್ರಶಸ್ತಿ’ ಗೆ ಭಾಜನರಾಗಿರುವ ಪುತ್ತೂರಿನ ಖ್ಯಾತ ಉರಗತಜ್ಞ ಡಾಕ್ಟರ್ ರವೀಂದ್ರನಾಥ ಐತಾಳ್ ಇವರಿಂದ ‘ಪರಿಸರದಲ್ಲಿ ನಾವು ಮತ್ತು ಹಾವು’ ಎಂಬ ವಿಷಯದ ಬಗ್ಗೆ ಮಾಹಿತಿ ಕಾರ್ಯಾಗಾರವನ್ನು ಶಾಲಾ ‘ಅವನಿ ಪರಿಸರ ಸಂಘ’ದ ವತಿಯಿಂದ ಕುದ್ಮಾರು ಸ. ಉ. ಹಿ. ಪ್ರಾ. ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.


ಪರಿಸರದಲ್ಲಿ ಕಂಡು ಬರುವ ವಿವಿಧ ವಿಷಯುಕ್ತ ಹಾವುಗಳು, ವಿಷರಹಿತ ಹಾವುಗಳು, ಹಾವುಗಳ ಆವಾಸ ಸ್ಥಾನ ಮತ್ತು ಗುಣ ಲಕ್ಷಣಗಳು, ಪರಿಸರದಲ್ಲಿ ಹಾವುಗಳ ಮಹತ್ವ, ಅವುಗಳ ಉಳಿಯುವಿಕೆಯ ಅಗತ್ಯತೆ, ಹಾವಿನ ಕಡಿತಕ್ಕೆ ನೀಡಲಾಗುವ ಪ್ರಥಮ ಚಿಕಿತ್ಸೆ ಇನ್ನಿತರ ವಿಷಯಗಳ ಬಗ್ಗೆ ಸವಿವರವಾಗಿ ತಿಳಿಸಿದರು. ಹಾವುಗಳ ಬಗ್ಗೆ ಜನರಿಗೆ ಇರುವ ಮೂಢನಂಬಿಕೆಗಳು ಹಾಗೂ ಅವುಗಳ ವೈಜ್ಞಾನಿಕ ಸತ್ಯಾಸತ್ಯಗಳ ಬಗ್ಗೆ ಮನೋಜ್ಞವಾಗಿ ತಿಳಿಸಿದರು.



ಇದರೊಂದಿಗೆ ಹಲವಾರು ಮನೆ ಔಷಧಿಗಳ ಬಗ್ಗೆಯೂ ಮಾಹಿತಿ ನೀಡಿ, ಎಲ್ಲಾ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆ ಮಾಡುವ ಮೂಲಕ ಜೀವ ವೈವಿಧ್ಯತೆ ಯನ್ನು ಕಾಪಾಡುತ್ತಾ ಪರಿಸರ ಸಮತೋಲನತೆಗೆ ಸಹಕರಿಸಿ ಹೇಳಿದರು. ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಕ ವೃಂದ, ವಿದ್ಯಾರ್ಥಿಗಳು ಹಾಗೂ ಪೋಷಕರು ಭಾಗವಹಿಸಿದ್ದರು. ಶಾಲಾ ಮುಖ್ಯಗುರು ಮಿನಿ ವರ್ಗಿಸ್ ಸ್ವಾಗತಿಸಿದರು.










