ಕೆಯ್ಯೂರು: ಒಡಿಯೂರು ಗ್ರಾಮ ವಿಕಾಸ ಯೋಜನೆ ಕೆಯ್ಯೂರು-ಕೆದಂಬಾಡಿ ಘಟ ಸಮಿತಿಯ ವಾರ್ಷಿಕೋತ್ಸವ: ಸಾರ್ವಜನಿಕ ಶ್ರೀ ಸತ್ಯದತ್ತ ವ್ರತ ಪೂಜೆ

0

ಭಗವಂತನನ್ನು ಸಂತೃಪ್ತಿಗೊಳಿಸುವುದೇ ಧರ್ಮದ ನಿಜವಾದ ಆಚರಣೆ: ಒಡಿಯೂರು ಶ್ರೀ

ಪುತ್ತೂರು: ಸಂಸ್ಕಾರ, ಸಂಘಟನೆ ಮತ್ತು ಸಹಕಾರ ಇವುಗಳು ಒಬ್ಬ ವ್ಯಕ್ತಿಯ ಜೀವನದಲ್ಲಿ ಅವಶ್ಯವಾಗಿ ಇರಬೇಕು ಗುಣಗಳಾಗಿವೆ. ಸಂಸ್ಕಾರ ಇಲ್ಲದೇ ಬದುಕು ಬದುಕಾಗಲು ಸಾಧ್ಯವೇ ಇಲ್ಲ, ಯಾರಲ್ಲಿ ಮಾನವೀಯತೆ ಇಲ್ಲವೋ ಅವರು ಮನುಷ್ಯರಾಗಲೂ ಸಾಧ್ಯವಿಲ್ಲ ಆದ್ದರಿಂದ ನಮ್ಮಲ್ಲಿ ಸಂಸ್ಕಾರವನ್ನು ಬೆಳೆಸಿಕೊಂಡು ಸಂಘಟನೆಯ ಮೂಲಕ ಪರರಿಗೆ ಸಹಕಾರವನ್ನು ಮಾಡುವ ಮೂಲಕ ಧರ್ಮ ಕಾರ್ಯಗಳನ್ನು ಮಾಡಿ ಭಗವಂತವನ್ನು ಸಂತೃಪ್ತಿಗೊಳಿಸುವ ಕೆಲಸವನ್ನು ಮಾಡಬೇಕಾಗಿದೆ. ಯಾರು ಭಗವಂತನನ್ನು ಸಂತೃಪ್ತಿಗೊಳಿಸುವ ಕಾರ್ಯವನ್ನು ಮಾಡುತ್ತಾನೋ ಅದೇ ನಿಜವಾದ ಧರ್ಮದ ಆಚರಣೆಯಾಗಿದೆ ಎಂದು ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್‌ನ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಹೇಳಿದರು. ಅವರು ಫೆ.10 ರಂದು ಕೆಯ್ಯೂರು ಜಯ ಕರ್ನಾಟಕ ಸಭಾಭವನದಲ್ಲಿ ನಡೆದ ಒಡಿಯೂರು ಶ್ರೀ ಪಬ್ಲಿಕ್ ಚಾರಿಟೇಬಲ್ ಟ್ರಸ್ ಶ್ರೀ ಗುರುದೇವದತ್ತ ಸಂಸ್ಥಾನಮ್, ಒಡಿಯೂರು ಸಂಚಾಲಿತ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಕೆಯ್ಯೂರು-ಕೆದಂಬಾಡಿ ಘಟ ಸಮಿತಿಯ ವಾರ್ಷಿಕೋತ್ಸವ ಹಾಗೂ ಸಾರ್ವಜನಿಕ ಶ್ರೀ ಸತ್ಯದತ್ತ ವ್ರತ ಪೂಜೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು. ನಾವು ರಾಜರಂತೆ ಬದುಕುಬೇಕು ಆದರೆ ಸನ್ಯಾಸಿಯಂತೆ ಯೋಚನೆ ಮಾಡಬೇಕು ಎಂದ ಸ್ವಾಮೀಜಿಯವರು, ನಮ್ಮ ಭಾರತೀಯ ಪರಂಪರೆ ಅತ್ಯಂತ ಶ್ರೇಷ್ಠವಾದದ್ದು ಅದನ್ನು ಉಳಿಸುವ ಕೆಲಸವನ್ನು ಮಾಡಬೇಕು, ನಮ್ಮ ಗ್ರಾಮಗಳು ವಿಕಾಸವಾಗದೇ ದೇಶ ವಿಕಾಸವಾಗಲು ಸಾಧ್ಯವಿಲ್ಲ ಈ ನಿಟ್ಟಿನಲ್ಲಿ ಗ್ರಾಮ ವಿಕಾಸ ಕಾರ್ಯವನ್ನು ಮಾಡುವ ಕೆಲಸ ಆಗುತ್ತಿದೆ ಎಂದು ಒಡಿಯೂರು ಶ್ರೀ ಹೇಳಿದರು.


ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕೆದಂಬಾಡಿ ಗ್ರಾಪಂ ಅಧ್ಯಕ್ಷೆ ಸುಜಾತ ಮುಳಿಗದ್ದೆಯವರು ಮಾತನಾಡಿ, ಒಡಿಯೂರು ಗ್ರಾಮ ವಿಕಾಸ ಯೋಜನೆಯಿಂದ ಸಾಮಾಜಿಕವಾಗಿ, ಆರ್ಥಿಕವಾಗಿ ಸಬಲರಾಗಲು ಸಾಧ್ಯವಾಗಿದೆ, ಶ್ರೀ ಸ್ವಾಮೀಜಿಯವರು ಆಶೀರ್ವಾದ ನಮ್ಮೆಲ್ಲರ ಮೇಲಿರಲಿ ಎಂದು ಹೇಳಿ ಶುಭ ಹಾರೈಸಿದರು.

ಕೆಯ್ಯೂರು ಶ್ರೀ ಮಹಿಷಮರ್ಧಿನಿ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎ.ಕೆ ಜಯರಾಮ ರೈ ಮಾತನಾಡಿ, ಒಡಿಯೂರು ಸಂಘಟನೆಯಿಂದ ಹಮ್ಮಿಕೊಂಡು ಈ ಧರ್ಮ ಕಾರ್ಯ ಅತ್ಯಂತ ಒಳ್ಳೆಯ ಕೆಲಸವಾಗಿದೆ, ನಾವೆಲ್ಲರೂ ಒಗ್ಗಟ್ಟಾಗಿ ಸೇರಲು ಇದು ಸಹಕಾರಿಯಾಗಿದೆ. ಒಡಿಯೂರು ಕ್ಷೇತ್ರದಿಂದ ಈಗಾಗಲೇ ಬಹಳಷ್ಟು ಗ್ರಾಮ ವಿಕಾಸ ಕಾರ್ಯಗಳು ನಡೆಯುತ್ತಿದ್ದು ವ್ಯಕ್ತಿಯಲ್ಲಿ ಸಂಸ್ಕಾರ ಬೆಳೆಸುವ ಕಾರ್ಯದಿಂದ ಹಿಡಿದು ಗ್ರಾಮದಲ್ಲಿ ಸಮೃದ್ಧಿಯನ್ನು ಉಂಟು ಮಾಡುವ ಕೆಲಸ ಆಗುತ್ತಿರುವುದು ಒಳ್ಳೆಯ ವಿಚಾರವಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ಕೆದಂಬಾಡಿ ಕೆಯ್ಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣಕುಮಾರ್ ರೈ ಕೆದಂಬಾಡಿಗುತ್ತುರವರು ಸಂದರ್ಭೋಚಿತವಾಗಿ ಮಾತನಾಡಿ ಶುಭ ಹಾರೈಸಿದರು. ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾತೇಶ್ ಭಂಡಾರಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಈಗಾಗಲೇ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳು ಸೇರಿದಂತೆ ಒಡಿಯೂರು ಗ್ರಾಮವಿಕಾಸ ಯೋಜನೆಯ 8 ಸಾವಿರಕ್ಕೂ ಅಧಿಕ ಘಟಕಗಳಿದ್ದು ಸುಮಾರು 60 ಸಾವಿರಕ್ಕೂ ಅಧಿಕ ಸದಸ್ಯರುಗಳಿದ್ದಾರೆ. ಸಾಮಾಜಿಕವಾಗಿ ಪರಿವರ್ತನೆ, ಬದಲಾವಣೆ,ಸುಸ್ಥಿರ ಸಮಾಜ ನಿರ್ಮಾಣವೇ ಗ್ರಾಮ ವಿಕಾಸ ಯೋಜನೆ ಉದ್ದೇಶಗಳಾಗಿದೆ ಎಂದು ಗ್ರಾಮ ವಿಕಾಸ ಯೋಜನೆಯ ಬಗ್ಗೆ ತಿಳಿಸಿದರು.


ಕೆದಂಬಾಡಿ ಘಟ ಸಮಿತಿಯ ಉಪಾಧ್ಯಕ್ಷ ದಿನೇಶ್ ಶೆಟ್ಟಿ ಸಭಾಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಜಯಕರ್ನಾಟಕ ಸಭಾಭವನದ ಸಂಚಾಲಕ ದಿವಾಕರ ರೈ ಸಣಂಗಳ, ಗುರುದೇವ ಸೇವಾ ಬಳಗದ ತಾಲೂಕು ಅಧ್ಯಕ್ಷ ಸುಧೀರ್ ನೋಂಡ, ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆಯ ಕೆದಂಬಾಡಿ ಘಟ ಸಮಿತಿ ಅಧ್ಯಕ್ಷ ವಿಶ್ವನಾಥ ಶೆಟ್ಟಿ ಸಾಗು, ಕೆಯ್ಯೂರು ಘಟ ಸಮಿತಿಯ ಅಧ್ಯಕ್ಷೆ ದೇವರಾಣಿ ಉಪಸ್ಥಿತರಿದ್ದರು. ಸುಶೀಲಾ ಪ್ರಾರ್ಥಿಸಿದರು. ಕೆದಂಬಾಡಿ ಘಟ ಸಮಿತಿಯ ಕಾರ್ಯದರ್ಶಿ ಶಾಲಿನಿ ಎಸ್.ರೈ ತೆಗ್ಗು ವರದಿ ವಾಚಿಸಿದರು. ಉಪಾಧ್ಯಕ್ಷ ದಿನೇಶ್ ಶೆಟ್ಟಿ ಸ್ವಾಗತಿಸಿದರು. ಕಮಲಾ, ದೇವರಾಣಿ, ಶಾಲಿನಿ ಎಸ್.ರೈ, ದಿನೇಶ್ ಶೆಟ್ಟಿ, ರವೀಂದ್ರ ರೈ ನಂಜೆ, ಗುಲಾಬಿರವರುಗಳು ಅತಿಥಿಗಳಿಗೆ ಶಾಲು, ವೀಳ್ಯ ನೀಡಿ ಸ್ವಾಗತಿಸಿದರು. ಶಾಲಿನಿ ಎಸ್.ರೈ ವಂದಿಸಿದರು. ನ್ಯಾಯವಾದಿ ಹರಿಣಾಕ್ಷಿ ಜೆ.ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಪುತ್ತೂರು ವಲಯ ಮೇಲ್ವಿಚಾರಕಿ ಸವಿತಾ, ವಲಯ ಸಂಯೋಜಕಿ ಶಶಿ ಡಿ.ತಿಂಗಳಾಡಿ ಸೇರಿದಂತೆ ಕೆದಂಬಾಡಿ ಕೆಯ್ಯೂರು ಘಟ ಸಮಿತಿಯ ಪದಾಧಿಕಾರಿಗಳು, ಸದಸ್ಯರುಗಳು ಸಹಕರಿಸಿದ್ದರು.

ಸಾರ್ವಜನಿಕ ಶ್ರೀ ಸತ್ಯದತ್ತ ವ್ರತ ಪೂಜೆ
ವೇದಮೂರ್ತಿ ಶ್ರೀಕೃಷ್ಣ ಉಪಾಧ್ಯಾಯ ಪಟ್ಲಮೂಲೆಯವರ ನೇತೃತ್ವದಲ್ಲಿ ಬೆಳಿಗ್ಗೆ 8.೦೦ ಕ್ಕೆ ಸಾಮೂಹಿಕ ಪ್ರಾರ್ಥನೆಯೊಂದಿಗೆ ಶ್ರೀ ಸತ್ಯದತ್ತ ವ್ರತ ಪೂಜೆ ಆರಂಭಗೊಂಡಿತು. ಇದೇ ಸಂದರ್ಭದಲ್ಲಿ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಒಡಿಯೂರು ಶ್ರೀಗಳ ಉಪಸ್ಥಿತಿಯಲ್ಲಿ ಶ್ರೀ ಸತ್ಯದತ್ತ ವ್ರತ ಪೂಜೆಯ ಮಹಾ ಮಂಗಳಾರತಿಯೊಂದಿಗೆ ಪ್ರಸಾದ ವಿತರಣೆ ಬಳಿಕ ಅನ್ನಸಂತರ್ಪಣೆ ನಡೆಯಿತು.

ಸಾಧಕರಿಗೆ ಸನ್ಮಾನ ಕಾರ್ಯಕ್ರಮ
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಈ ಸಂದರ್ಭದಲ್ಲಿ ಸ್ವಾಮೀಜಿಯವರು ಶಾಲು ಹಾಕಿ ಸನ್ಮಾನಿಸಿ ಗೌರವಿಸಿದರು. ಸಾಧಕರಾದ ಭಾರತೀಯ ಸೇನೆಯ ಸಾಧಕರಾದ ನೌಕಾ ಪಡೆಯ ಮಾಜಿ ಸೈನಿಕ ಜಗನ್ನಾಥ ರೈ ಕೆದಂಬಾಡಿಮಠ, ನಿವೃತ್ತ ಹವಾಲ್ದಾರರಾದ ಲಕ್ಷ್ಮೀಶ ಕೆ ಕಡಮಜಲು, ಕೇಂದ್ರೀಯ ಭಾರತೀಯ ಸೇನೆಯ ತಿರುಮೂರ್ತಿ, ನಾಟಿ ವೈದ್ಯೆ ಸುಳ್ಯದ ವೆಂಕಮ್ಮ, ರಾಷ್ಟ್ರಮಟ್ಟದ ಕಬಡ್ಡಿ ಆಟಗಾರ ಅದೀಶ್ ಶೆಟ್ಟಿಯವರ ಪರವಾಗಿ ಅವರ ತಂದೆ ದಿನೇಶ್ ಶೆಟ್ಟಿಯವರಿಗೆ ಹಾಗೇ ಸುಟ್ಟ ಗಾಯಗಳಿಗೆ ಔಷಧಿ ನೀಡುವುದರಲ್ಲಿ ಹೆಸರುವಾಸಿಯಾದ ನಾಟಿ ವೈದ್ಯ ಸನ್ಯಾಸಿಗುಡ್ಡೆಯ ಜಮದಗ್ನಿ ಕುಟೀರದ ರವಿರಾಮ ಭಟ್ ಸನ್ಯಾಸಿಗುಡ್ಡೆರವರುಗಳನ್ನು ಶಾಲು, ಸ್ಮರಣಿಕೆ, ಫಲಪುಷ್ಪ, ಸನ್ಮಾನಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರ ಸನ್ಮಾನ ಪತ್ರಗಳನ್ನು ಪುತ್ತೂರು ವಲಯ ಸಂಯೋಜಕಿ ಶಶಿ ಡಿ ತಿಂಗಳಾಡಿ, ಸುಮಿತ್ರಾ, ನಯನಾ, ಗೀತಾ, ರೇಷ್ಮಾರವರುಗಳು ವಾಚಿಸಿದರು.

ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಕೆದಂಬಾಡಿ ಕೆಯ್ಯೂರು ಘಟ ಸಮಿತಿಯಲ್ಲಿ ಒಟ್ಟು 52 ಗ್ರಾಮ ವಿಕಾಸ ಸ್ವಸಹಾಯ ಸಂಘಗಳಿದ್ದು ಒಟ್ಟು 257 ಮಹಿಳೆಯರು 117 ಪುರುಷರು ಸದಸ್ಯರಿದ್ದಾರೆ.

LEAVE A REPLY

Please enter your comment!
Please enter your name here