






ಕಾಂಗ್ರೆಸ್ನಿಂದ ಸುಳ್ಳು, ಭ್ರಷ್ಟಾಚಾರದ ಬದುಕು: ಛಲವಾದಿ ನಾರಾಯಣ ಸ್ವಾಮಿ


ಉಪ್ಪಿನಂಗಡಿ: ವಿಕಸಿತ ಭಾರತದ ದೃಷ್ಟಿಕೋನ ಪ್ರಧಾನಿ ನರೇಂದ್ರ ಮೋದಿಯವರದ್ದಾಗಿದ್ದು, ಅದಕ್ಕಾಗಿ ಅವರು ಶ್ರಮಿಸುತ್ತಿದ್ದಾರೆ. ಆದರೆ ಭ್ರಷ್ಟಾಚಾರ, ಸುಳ್ಳು, ವಂಚನೆಗಳಿಂದಲೇ ಬದುಕುತ್ತಿರುವ ಕಾಂಗ್ರೆಸ್ ತಪ್ಪು ಮಾಹಿತಿಗಳನ್ನು ನೀಡುವ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಕರ್ನಾಟಕ ವಿಧಾನಪರಿಷತ್ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣ ಸ್ವಾಮಿ ಹೇಳಿದರು. ವಿಕಸಿತ ಭಾರತ ರೋಜ್ಗಾರ್ ಮತ್ತು ಅಜೀವಿಕಾ ಮಿಷನ್ ಗ್ಯಾರಂಟಿ (ವಿಬಿ-ಜಿ ರಾಮ್ ಜಿ) ಕಾಯ್ದೆಯ ಮಹತ್ವದ ಬಗ್ಗೆ ಅರಿವು ಹಾಗೂ ಜನಜಾಗೃತಿ ಮೂಡಿಸಲು ಉಪ್ಪಿನಂಗಡಿಯಲ್ಲಿ ನಡೆದ ಜಾಥಾದಲ್ಲಿ ಭಾಗವಹಿಸಿ ಅವರು ಮಾತನಾಡಿದರು.




11 ವರ್ಷಗಳ ಹಿಂದೆ ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾಗಿದ್ದಾಗ ದೇಶದ ಆರ್ಥಿಕತೆ 11ನೇ ಸ್ಥಾನದಲ್ಲಿತ್ತು. ಆದರೆ ಈಗ ದೇಶದ ಆರ್ಥಿಕತೆ 4ನೇ ಸ್ಥಾನಕ್ಕೆ ಬಂದು ನಿಂತಿದೆ.2048ರಲ್ಲಿ ವಿಕಸಿತ ಭಾರತದ ಸೃಷ್ಟಿಯಾಗಬೇಕೆಂದು ನರೇಂದ್ರ ಮೋದಿಯವರ ಗುರಿಯಾಗಿದ್ದು, ಅದಕ್ಕಾಗಿ ಹಲವು ಬದಲಾವಣೆಗಳನ್ನು ತಂದಿದ್ದಾರೆ. ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕಾಂಗ್ರೆಸ್ ಸರಕಾರದ ಆಡಳಿತಾವಧಿಯಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದ್ದು, ನಕಲಿ ಗಾಂಧಿಗಳಿಂದ ಮಹಾತ್ಮಗಾಂಧಿಯವರ ಹೆಸರಿಗೆ ಕಳಂಕ ಉಂಟಾಗಿದೆ. ಆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಈ ಕಾಯ್ದೆಯಲ್ಲಿ ಬದಲಾವಣೆ ತಂದು ಅದರ ಹೆಸರನ್ನು ಬದಲಾಯಿಸಲಾಗಿದೆ. ಬಿಜೆಪಿಗೆ ಮಹಾತ್ಮ ಗಾಂಧಿಯವರ ಮೇಲೆ ಗೌರವ ಇದೆ. ಆದರೆ ಮಹಾತ್ಮ ಗಾಂಧಿಯವರ ಹೆಸರಿನಲ್ಲಿ ಭ್ರಷ್ಟಾಚಾರ ಮಾಡುವವರನ್ನು ಮೋದಿ ಸಹಿಸಲ್ಲ. ಈಗ ಈ ಕಾಯ್ದೆಯ ಹೆಸರು ವಿಬಿ-ಜಿ ರಾಮ್ ಜಿ ಎಂದು ಬದಲಾಯಿಸಲಾಗಿದ್ದು, ರಾಮನ ಮೇಲೆ ಭಕ್ತಿ ಇರುವವರು ಇದರಲ್ಲಿ ಭ್ರಷ್ಟಾಚಾರ ಮಾಡಲು ಸಾಧ್ಯವಿಲ್ಲ. ಗ್ರಾಮ ಸ್ವರಾಜ್ ಮೂಲಕ ದೇಶ ರಾಮ ರಾಜ್ಯವಾಗಬೇಕು ಎಂಬುದು ಮಹಾತ್ಮ ಗಾಂಧಿಯವರ ಕನಸಾಗಿತ್ತು. ಅದು ನರೇಂದ್ರ ಮೋದಿಯವರ ಕಾಲದಲ್ಲಿ ಈಡೇರಲಿದೆ ಎಂದರು.

ಈ ಕಾಯ್ದೆಯಲ್ಲಿದ್ದ ಮಹಾತ್ಮಗಾಂಧಿಯವರ ಹೆಸರನ್ನು ತೆಗೆಯಲಾಗಿದೆ ಎಂಬ ಕಾರಣಕ್ಕೆ ಅಪಪ್ರಚಾರ ಮಾಡುವ ಮೂಲಕ ಜನರ ದಾರಿ ತಪ್ಪಿಸುವ ಕಾಂಗ್ರೆಸ್ ತನ್ನ ಆಡಳಿತಾವಧಿಯಲ್ಲಿ ಎಂಟು ಬಾರಿ ಈ ಕಾಯ್ದೆಯ ಹೆಸರನ್ನು ಬದಲಾವಣೆ ಮಾಡಿತ್ತು. ಆಗ ಅವರಿಗೆ ಮಹಾತ್ಮ ಗಾಂಧಿಯ ನೆನಪಿರಲಿಲ್ಲ ಯಾಕೆ ಎಂದು ಪ್ರಶ್ನಿಸಿದರಲ್ಲದೆ, ಇಲ್ಲಿನ ಶಾಸಕರು ತಾಕತ್ತಿದ್ದರೆ. ಈ ವೇದಿಕೆಯ ಮೇಲೆ ಬಂದು ನಿಲ್ಲಲಿ. ಕಾಂಗ್ರೆಸ್ ಸುಳ್ಳುಗಳಿಗೆ ನಾನು ಉತ್ತರ ಕೊಡುತ್ತೇನೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿವೇಕ ಇಲ್ಲದ ಮನುಷ್ಯನಾಗಿದ್ದು, ನಂಬರ್ ಒನ್ ಟ್ರೋಲ್ ಮಾಸ್ಟರ್ ಆಗಿದ್ದಾರೆ. ವಂಚನೆ, ಮೋಸದಲ್ಲೇ ಕಾಂಗ್ರೆಸ್ ಬದುಕ್ತಾ ಇದ್ದು, ಅಭಿವೃದ್ಧಿ ಶೂನ್ಯವಾಗಿದೆ. ರಸ್ತೆಗಳ ಗುಂಡಿ ಮುಚ್ಚಲೂ ಸರಕಾರದ ಬಳಿ ಹಣವಿಲ್ಲದ ಪರಿಸ್ಥಿತಿ ಉಂಟಾಗಿದೆ. ಮುಂದಿನ ಚುನಾವಣೆಗೆ ಜನತೆ ಈ ಗುಂಡಿಯಲ್ಲೇ ಕಾಂಗ್ರೆಸ್ ಅನ್ನು ಮುಚ್ಚಿ ಬಿಡುತ್ತಾರೆ ಎಂದರು.

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ತಾನು ತಿನ್ನಲ್ಲ. ಇನ್ಯಾರನ್ನೂ ತಿನ್ನಲು ಬಿಡಲ್ಲ ಅನ್ನುವ ನಡೆ ನರೇಂದ್ರ ಮೋದಿಯವರದ್ದು. ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಸ್ವಚ್ಛ ಭಾರತ್ ಮೆಷಿನ್ ಯೋಜನೆಯಡಿ 12 ಕೋ. ಶೌಚಾಲಯಗಳ ನಿರ್ಮಾಣ ಮಾಡಿದರು. ಜಲಜೀವನ್ ಮೆಷಿನ್ ಮೂಲಕ 15 ಕೋ. ನಳ್ಳಿ ನೀರಿನ ಸಂಪರ್ಕ ಕೊಡಿಸಿದರು. 50 ಕೋ. ಬ್ಯಾಂಕ್ ಖಾತೆಗಳನ್ನು ಜನಧನ್ ಯೋಜನೆ ಮೂಲಕ ಮಾಡಿಸಿದರು. ಆದರೆ ಕಾಂಗ್ರೆಸ್ ಗಾಂಧೀಜಿಯವರ ಹೆಸರಿನಲ್ಲಿ ರಾಜಕೀಯ ಮಾಡಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ನರೇಗಾ ಯೋಜನೆಯಲ್ಲಿ ಆದ ಭ್ರಷ್ಟಾಚಾರದ ಕೇಸುಗಳು ರಾಜ್ಯದಲ್ಲಿ 1.94 ಲಕ್ಷ ಇದೆ. ಈ ಕಾಯ್ದೆಯ ಹೆಸರು ಬದಲಾವಣೆ ಮಾಡಿದ್ದಕ್ಕೆ ಕಾಂಗ್ರೆಸ್ನವರು ಸುಳ್ಳು ಅಪಪ್ರಚಾರ ಮಾಡುತ್ತಿದ್ದು, ಈ ಬಗ್ಗೆ ಗ್ರಾಮ ಗ್ರಾಮಕ್ಕೆ ಹೋಗಿ ಜನಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು ಎಂದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ ಮಾತನಾಡಿ, ಕಾಂಗ್ರೆಸ್ ಜನಪರವಾಗಿ ಬೀದಿಗಿಳಿದ ಇತಿಹಾಸವಿಲ್ಲ. ಅದರ ಹೋರಾಟವೇನಿದ್ದರೂ ತಮ್ಮ ಸ್ವಾರ್ಥ ಲಾಭಕ್ಕಾಗಿ. ಅಟಲ್ ಬಿಹಾರಿ ವಾಜಪೇಯಿ ಅವರಿಂದ ಹಿಡಿದು ನರೇಂದ್ರ ಮೋದಿಯವರ ತನಕ ಬಿಜೆಪಿ ಪಕ್ಷದಿಂದ ಆರಿಸಿ ಬಂದ ಪ್ರಧಾನಿಗಳು ದೇಶದ ಅಭಿವೃದ್ಧಿ ಮಾಡುವ ಮೂಲಕ ಕಾಂಗ್ರೆಸ್ಗೆ ಆಗದ್ದನ್ನು ಮಾಡಿಸಿ ತೋರಿಸಿದ್ದಾರೆ. ಗ್ರಾ.ಪಂ.ಗಳಲ್ಲಿ ಬೀದಿ ದೀಪ, ಕುಡಿಯುವ ನೀರು ಬರಲು ಕಾರಣ ನರೇಂದ್ರ ಮೋದಿ ಸರಕಾರ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಒಂದೇ ಒಂದು ಮನೆ ಕೊಡುವ ಕೆಲಸವಾಗಿಲ್ಲ. 9/11 ಕೊಡುವ ಕೆಲಸನೂ ಆಗುತ್ತಿಲ್ಲ. ಆದರೆ ಬಿಜೆಪಿಯ ಅಭಿವೃದ್ಧಿಯನ್ನು ಸಹಿಸದೇ ಕಾಂಗ್ರೆಸ್ ಅಪಪ್ರಚಾರದಲ್ಲಿ ತೊಡಗಿದೆ. ರಾಮಮಂದಿರದ ವಿಷಯವಾಗಲಿ, ಕಾಶ್ಮೀರ ಬಗ್ಗೆ ತಗೊಂಡ ದೃಢ ನಿಲುವಿನ ಬಗೆಯಾಗಲಿ ಕಾಂಗ್ರೆಸ್ಗೆ ಸಮಾಧಾನ ಇಲ್ಲ. ನಮ್ಮದು ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸೋಲಿಸಿದ ಪಕ್ಷ ಅಲ್ಲ. ರಾಜ್ಯ ಕಾಂಗ್ರೆಸ್ ಆಡಳಿತಾವಧಿಯಲ್ಲಿ ಅಭಿವೃದ್ಧಿಗೆ ಹಣವಿಲ್ಲದಂತಹ ಪರಿಸ್ಥಿತಿ ಬಂದಿದೆ. ಮಹಾತ್ಮಗಾಂಧಿ ನರೇಗಾ ಕಾಯ್ದೆಯ ಹೆಸರನ್ನು ವಿಬಿ-ಜಿ ರಾಮ್ ಜಿ ಎಂದು ಬದಲಾವಣೆ ಮಾಡುವ ಮೂಲಕ ಇದರಲ್ಲಿ ನಡೆಯುವ ಭ್ರಷ್ಟಾಚಾರಕ್ಕೆ ತೆರೆ ಎಳೆಯಲಾಗಿದೆ. 100 ದಿನವಿದ್ದ ಉದ್ಯೋಗವನ್ನು 125 ದಿನಕ್ಕೆ ಏರಿಸಲಾಗಿದೆ ಎಂದರು.
ವೇದಿಕೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ಮಾರ್ತ, ಬಿಜೆಪಿ ಪುತ್ತೂರು ನಗರ ಮಂಡಲದ ಅಧ್ಯಕ್ಷ ಶಿವಕುಮಾರ್, ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಕಾರ್ಯದರ್ಶಿ ಆರ್.ಸಿ. ನಾರಾಯಣ, ರಾಜ್ಯ ಮಾಧ್ಯಮ ಪ್ರಮುಖ್ ಕರುಣಾಕರ, ಜಿಲ್ಲಾ ಬಿಜೆಪಿ ಕಾರ್ಯದರ್ಶಿ ವಿದ್ಯಾಗೌರಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡರಾದ ಡಾ. ಪ್ರಸನ್ನ, ಅಪ್ಪಯ ಮಣಿಯಾಣಿ, ಚನಿಲ ತಿಮ್ಮಪ್ಪ ಶೆಟ್ಟಿ, ಸಾಜ ರಾಧಾಕೃಷ್ಣ ಆಳ್ವ, ಯುವರಾಜ್, ಚಂದಪ್ಪ ಮೂಲ್ಯ, ಚಂದ್ರಶೇಖರ ಬಪ್ಪಳಿಗೆ, ಜಯಂತ ಪೊರೋಳಿ, ಮುಕುಂದ ಬಜತ್ತೂರು, ಬೂಡಿಯಾರ್ ರಾಧಾಕೃಷ್ಣ ರೈ, ಕಂಗ್ವೆ ವಿಶ್ವನಾಥ ಶೆಟ್ಟಿ, ವಿದ್ಯಾಧರ ಜೈನ್, ಪ್ರಸಾದ್ ಬಂಡಾರಿ, ಚಂದ್ರಹಾಸ ಹೆಗ್ಡೆ, ಮೋಹನ್ ಪಕಳ, ರಾಜೇಶ್ ಶೆಟ್ಟಿ, ಗಂಗಾಧರ ಪಿ.ಎನ್., ಸದಾನಂದ ನೆಕ್ಕಿಲಾಡಿ, ಲಕ್ಷ್ಮಣ್ ಬೆಳ್ಳಿಪ್ಪಾಡಿ, ರಾಮಣ್ಣ ಗುಂಡೋಲೆ, ರಾಮಚಂದ್ರ ಪೂಜಾರಿ, ಚಂದ್ರಶೇಖರ ಮಡಿವಾಳ, ಆದೇಶ್ ಶೆಟ್ಟಿ, ದಯಾನಂದ ಸರೋಳಿ, ನಿತಿನ್ ತಾರಿತ್ತಡಿ, ಸುಜಾತ ರೈ ಅಲಿಮಾರ್, ಉಷಾ ಮುಳಿಯ, ಉಮೇಶ್ ಶೆಣೈ, ಹರಿಪ್ರಸಾದ್ ಶೆಟ್ಟಿ ಬೊಳ್ಳಾವು, ಧರ್ನಪ್ಪ ನಾಯ್ಕ, ಸಂತೋಷ್ ಕುಮಾರ್ ಪಂರ್ದಾಜೆ, ವಸಂತ ಪಿಜಕ್ಕಳ, ಪುರುಷೋತ್ತಮ ಮುಂಗ್ಲಿಮನೆ ಮತ್ತಿತರರು ಉಪಸ್ಥಿತರಿದ್ದರು.
ಉಪ್ಪಿನಂಗಡಿಯ ಮೇಲ್ಸೇತುವೆ ಬಳಿಯಿಂದ ನಡೆದ ಪಾದಯಾತ್ರೆಯು ಹಳೆ ಬಸ್ನಿಲ್ದಾಣವಾಗಿ ಬಸ್ ನಿಲ್ದಾಣಕ್ಕೆ ಆಗಮಿಸಿ ಬಳಿಕ ಅಲ್ಲಿ ಸಭಾ ಕಾರ್ಯಕ್ರಮ ನಡೆಸಲಾಯಿತು. ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ದಯಾನಂದ ಶೆಟ್ಟಿ ಉಜಿರೆಮಾರ್ ಸ್ವಾಗತಿಸಿದರು. ಬಿಜೆಪಿ ಗ್ರಾಮಾಂತರ ಮಂಡಲದ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ದಡ್ಡು ವಂದಿಸಿದರು. ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ಅತ್ರಮಜಲು ಕಾರ್ಯಕ್ರಮ ನಿರೂಪಿಸಿದರು.
ಮಾಜಿ ಶಾಸಕ ಸಂಜೀವ ಮಠಂದೂರು ಮಾತನಾಡಿ, ಭ್ರಷ್ಟಾಚಾರವನ್ನು ಮರೆಮಾಚಲು ರಾಜ್ಯ ಕಾಂಗ್ರೆಸ್ ಕೇಂದ್ರದ ವಿರುದ್ಧ ಗೂಬೆ ಕೂರಿಸುವ ಕೆಲಸ ಮಾಡುತ್ತಿದೆ. ಒಬ್ಬರು 13 ಜನ ಶಾಸಕರು ಧ್ವನಿಯೆತ್ತಬೇಕು ಎನ್ನುತ್ತಾರೆ. ಆದರೆ ರಾಜ್ಯದಲ್ಲಿ ಯಾವ ಸರಕಾರ ಆಡಳಿತದಲ್ಲಿರುವುದು ಅನ್ನುವುದನ್ನು ಅವರು ತಿಳಿದುಕೊಳ್ಳಲಿ. ಬಿಜೆಪಿ ಆಡಳಿತವಿರುವಾಗ ಕೋಳಿ ಅಂಕ ನಿಂತಿಲ್ಲ. ಕಲ್ಲು, ಮರಳಿನ ಸಮಸ್ಯೆ ಬಂದಿಲ್ಲ. ಮಧ್ಯರಾತ್ರಿ 12 ಗಂಟೆಯ ಬಳಿಕ ಧ್ವನಿವರ್ಧಕ ಬಳಸಬಾರದು ಎಂಬ ನಿಯಮ ಜಾರಿಯಾಗಿಲ್ಲ. ಇದೆಲ್ಲಾ ಆಗಿದ್ದು ಕಾಂಗ್ರೆಸ್ ಸರಕಾರದ ಅವಧಿಯಲ್ಲಿ. ಇದಕ್ಕೆ ಎಸ್ಪಿ ಅಡ್ಡಿ ಪಡಿಸುತ್ತಾರೆ ಎಂದಾದರೆ ಅವರನ್ನು ವರ್ಗಾವಣೆಗೊಳಿಸಿ ಎಂದರಲ್ಲದೆ, ಐದು ವರ್ಷವಾದರೂ ಜಿ.ಪಂ., ತಾ.ಪಂ. ಚುನಾವಣೆ ನಡೆಸಲು ಕಾಂಗ್ರೆಸ್ ಸರಕಾರಕ್ಕೆ ಸಾಧ್ಯವಾಗಿಲ್ಲ. ರಾಜ್ಯ ಕಾಂಗ್ರೆಸ್ ಸರಕಾರ ಆರ್ಥಿಕವಾಗಿ ದಿವಾಳಿಯಾಗಿದ್ದು, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ ಎಂದರು.










