ಕೌಕ್ರಾಡಿ ಗ್ರಾಮಸಭೆ : ಗ್ರಾಮವಿಕಾಸ ಯೋಜನೆ ಉಳಿಕೆ ಅನುದಾನ ಬಳಕೆ ಮಾಡಿ-ಗ್ರಾಮಸ್ಥರ ಒತ್ತಾಯ, ಧರಣಿ ನಡೆಸುವ ಎಚ್ಚರಿಕೆ

0

ನೆಲ್ಯಾಡಿ: ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಇಚ್ಲಂಪಾಡಿ ಗ್ರಾಮದಲ್ಲಿ ಅಂಬೇಡ್ಕರ್ ಭವನ, ಜಿಮ್ ಕಟ್ಟಡ ಕಾಮಗಾರಿ ನಡೆದು ಉಳಿಕೆ ಅನುದಾನದಲ್ಲಿ ಸದ್ರಿ ಕಟ್ಟಡದ ಮುಂಭಾಗ ಇಂಟರ್‌ಲಾಕ್, ಆವರಣ ಗೋಡೆ ಸಹಿತ ವಿವಿಧ ಅಭಿವೃದ್ಧಿ ಕೆಲಸಗಳಿಗೆ ಬಳಕೆ ಮಾಡಲು ಸಚಿವರು, ಶಾಸಕರು ಒಪ್ಪಿಗೆ ಸೂಚಿಸಿದ್ದರೂ ಜಿ.ಪಂ.ಸಿಇಒ ಅನುಮತಿ ನೀಡುತ್ತಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು, ಸದ್ರಿ ಅನುದಾನ ಅಭಿವೃದ್ಧಿ ಕೆಲಸಗಳಿಗೆ ಬಳಕೆ ಮಾಡಬೇಕು. ಇಲ್ಲದೇ ಇದ್ದಲ್ಲಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದ ಘಟನೆ ಕೌಕ್ರಾಡಿ ಗ್ರಾಮಸಭೆಯಲ್ಲಿ ನಡೆದಿದೆ.

ಸಭೆ ಫೆ.16ರಂದು ಗ್ರಾ.ಪಂ. ಅಧ್ಯಕ್ಷ ಉದಯಕುಮಾರ್ ಗೌಡ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು. ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಶಿವಪ್ರಕಾಶ್ ನೋಡೆಲ್ ಅಧಿಕಾರಿಯಾಗಿದ್ದರು. ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದ ಗ್ರಾಮಸ್ಥರಾದ ವರ್ಗೀಸ್ ಅಬ್ರಹಾಂ, ಅಲೆಕ್ಸ್ ವರ್ಗೀಸ್, ಸುನೀಶ್ ಟಿ.ಪಿ., ಜೆ.ತೋಮಸ್, ರಾಜನ್ ಕೆ. ಮ್ಯಾಥ್ಯು, ಬಿಜುಕುಮಾರ್ ಮತ್ತಿತರರು, ಮುಖ್ಯಮಂತ್ರಿ ಗ್ರಾಮ ವಿಕಾಸ ಯೋಜನೆಯಡಿ ಇಚ್ಲಂಪಾಡಿಯಲ್ಲಿ ಅಂಬೇಡ್ಕರ್ ಭವನ ಹಾಗೂ ಜಿಮ್ ಕಟ್ಟಡ ನಿರ್ಮಾಣಕ್ಕೆ ತಲಾ 12 ಲಕ್ಷ ರೂ.ಅನುದಾನ ಬಿಡುಗಡೆಗೊಂಡಿತ್ತು. ಸದ್ರಿ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು ಉಳಿಕೆ ಅನುದಾನದಲ್ಲಿ ಅಂಬೇಡ್ಕರ್ ಭವನದ ಮುಂಭಾಗಕ್ಕೆ ಇಂಟರ್‌ಲಾಕ್ ಅಳವಡಿಕೆ, ನೀರಿನ ಟ್ಯಾಂಕ್ ಹಾಗೂ ಇತರೇ ದುರಸ್ತಿ ಕಾಮಗಾರಿ ನಡೆಸಲು ಮತ್ತು ಜಿಮ್ ಕಟ್ಟಡಕ್ಕೆ ಆವರಣ ಗೋಡೆ ರಚನೆ, ಗೇಟು ಅಳವಡಿಕೆ ಕಾಮಗಾರಿಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕ್ರೀಯಾಯೋಜನೆ ತಯಾರಿಸಿ, ಕಾಮಗಾರಿ ಅನುಷ್ಠಾನಗೊಳಿಸಲು ನಿರ್ಣಯಿಸಲಾಗಿತ್ತು. ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರಿಗೂ ಮಾಹಿತಿ ನೀಡಿ ಪತ್ರ ಪಡೆಯಲಾಗಿದೆ. ಆದರೆ ಕಾಮಗಾರಿ ನಡೆಸಲು ಜಿ.ಪಂ.ಮುಖ್ಯಕಾರ್ಯನಿರ್ವಾಹಕ ಅಧಿಕಾರಿಯವರು ಒಪ್ಪಿಗೆ ನೀಡುತ್ತಿಲ್ಲ ಎಂದು ಆರೋಪಿಸಿದರು. ಸಚಿವರು, ಶಾಸಕರ ಮಾತಿಗೆ ಬೆಲೆ ಇಲ್ಲವೇ ಎಂದು ಪ್ರಶ್ನಿಸಿದ ಗ್ರಾಮಸ್ಥರು, ಸದ್ರಿ ಕ್ರೀಯಾಯೋಜನೆಗೆ ಒಪ್ಪಿಗೆ ನೀಡದೇ ಇದ್ದಲ್ಲಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು. ಈ ಬಗ್ಗೆ ಚರ್ಚೆ ನಡೆದು ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಿಗೆ ಮನವಿ ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಗ್ರಾಮಸಭೆ ಬೇಕೋ?, ಬೇಡವೋ?-1 ಗಂಟೆ ಚರ್ಚೆ;
10.30ಕ್ಕೆ ಆರಂಭವಾಗಬೇಕಿದ್ದ ಸಭೆ 11.15ಕ್ಕೆ ಆರಂಭವಾಯಿತು. ಬಳಿಕ ಸಭೆಯಲ್ಲಿ ಗ್ರಾಮಸ್ಥರ ಕೊರತೆ ವಿಚಾರ ಪ್ರಸ್ತಾಪಗೊಂಡು ಒಂದು ಗಂಟೆಗೂ ಹೆಚ್ಚು ಸಮಯ ಚರ್ಚೆ ನಡೆಯಿತು. ಗ್ರಾಮಸ್ಥರ ಕೊರತೆ ವಿಚಾರ ಪ್ರಸ್ತಾಪಿಸಿದ ಜಾನ್ಸನ್ ಗಲ್ಬಾವೋ, ಇಸ್ಮಾಯಿಲ್ ಶಾಂತಿಬೆಟ್ಟು, ಮುಸ್ತಫಾ, ವರ್ಗೀಸ್ ಅಬ್ರಹಾಂ, ಅಲೆಕ್ಸ್ ವರ್ಗೀಸ್, ಬಿಜುಕುಮಾರ್, ಸುಜಿತ್ ಸಿ.ಪಿಲಿಫ್ ಮತ್ತಿತರರು ಗ್ರಾಮಸಭೆ ನಡೆಸಲು ಬೇಕಾದಷ್ಟು ಗ್ರಾಮಸ್ಥರ ಸಂಖ್ಯೆ ಇಲ್ಲ. ಗ್ರಾಮಸಭೆ ಬಗ್ಗೆ ಸಮರ್ಪಕ ಪ್ರಚಾರವೂ ನಡೆಸಿಲ್ಲ. ವಾಟ್ಸಫ್ ಗ್ರೂಪ್‌ಗಳಲ್ಲಿ ಸಭೆ ವಿಚಾರ ಪ್ರಚಾರವಾಗಿಲ್ಲ. ಎಲ್ಲರಿಗೂ ಆಮಂತ್ರಣ ತಲುಪಿಸಬೇಕಿತ್ತು. ಸಭೆ ಬಗ್ಗೆ ಗ್ರಾಮಸ್ಥರಿಗೆ ಸರಿಯಾದ ಮಾಹಿತಿ ಇಲ್ಲ ಎಂದರು. ಪಿಡಿಒ ಮೋಹನ್‌ಕುಮಾರ್ ಪ್ರತಿಕ್ರಿಯಿಸಿ, ಗ್ರಾಮಸಭೆ ಬಗ್ಗೆ ಗ್ರಾಮದ 1200 ಮನೆಗಳಿಗೂ ಆಮಂತ್ರಣ ಪತ್ರಿಕೆ ತಲುಪಿಸಬೇಕೆಂಬ ನಿಯಮ ಇಲ್ಲ. ಸಾರ್ವಜನಿಕ ಸ್ಥಳಗಳಲ್ಲಿ ಎದ್ದು ಕಾಣುವಂತೆ ಅಂಟಿಸಬೇಕೆಂದು ಇದೆ. ಇದನ್ನು ಮಾಡಲಾಗಿದೆ. ಅಲ್ಲದೇ ಪತ್ರಿಕೆ, ಮೈಕ್‌ನಲ್ಲಿ ಪ್ರಚಾರ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು. ಈ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆ ಮಾತನಾಡಿದ ಕೆಡಿಪಿ ಸದಸ್ಯ ಗಿರೀಶ್ ಬದನೆ ಅವರು, ಸದಸ್ಯರಿಗೂ ಜವಾಬ್ದಾರಿ ಇದೆ. ಒಬ್ಬ ಸದಸ್ಯ ತಲಾ ಐವರು ಗ್ರಾಮಸ್ಥರನ್ನು ಕರೆತರುತ್ತಿದ್ದರೂ ಗ್ರಾಮಸ್ಥರ ಸಂಖ್ಯೆ 90 ದಾಟುತಿತ್ತು ಎಂದರು.

ಗ್ರಾಮಸ್ಥರಾದ ಇಸ್ಮಾಯಿಲ್, ಮುಸ್ತಫಾ ಅವರು ಮಾತನಾಡಿ, ಈ ದಿನ ಸಭೆ ಮುಂದೂಡಿ. ಬುಧವಾರ ನಡೆಸುವಂತೆ ಹೇಳಿದರು. ಸದಸ್ಯ ಲೋಕೇಶ್ ಬಾಣಜಾಲು ಮಾತನಾಡಿ, ಬುಧವಾರ ಬೇರೆ ಕಡೆಗಳಲ್ಲಿ ಸಭೆ ಇದ್ದರೆ ಅಧಿಕಾರಿಗಳು ಸಭೆಗೆ ಬರಲು ಕಷ್ಟ ಆಗುತ್ತದೆ. ಫೆ.19ಕ್ಕೆ ಈಗಿನ ಆಡಳಿತ ಮಂಡಳಿಯ ಅವಧಿಯೂ ಕೊನೆಗೊಳ್ಳುತ್ತದೆ ಎಂದರು. ಪಿಡಿಒ ಮೋಹನ್‌ಕುಮಾರ್ ಮಾತನಾಡಿ, ಗ್ರಾಮಸಭೆ ನಡೆಸದೇ ಇದ್ದಲ್ಲಿ ಅಭಿವೃದ್ಧಿ ಕೆಲಸಗಳಿಗೂ ತೊಂದರೆಯಾಗಲಿದೆ ಎಂದರು. ಅಧ್ಯಕ್ಷ ಉದಯಕುಮಾರ್, ನೋಡೆಲ್ ಅಧಿಕಾರಿ ಶಿವಪ್ರಕಾಶ್ ಅವರು ಸಭೆ ಮುಂದುವರಿಸುವಂತೆ ಹೇಳಿದರು. ಸಭೆ ಮುಂದುವರಿಸುವುದು ಇಲ್ಲವೇ ಮುಂದೂಡುವ ಬಗ್ಗೆ 1 ತಾಸಿಗೂ ಹೆಚ್ಚು ಸಮಯ ಚರ್ಚೆ ನಡೆದು ಬಳಿಕ ಸಭೆ ಮುಂದುವರಿಸಲಾಯಿತು. ಸಭೆಯಲ್ಲಿ ಕೆಲ ಇಲಾಖೆ ಅಧಿಕಾರಿಗಳ ಗೈರು ಹಾಜರಿ ಬಗ್ಗೆಯೂ ಗ್ರಾಮಸ್ಥರು ಪ್ರಸ್ತಾಪಿಸಿದರು.

ಸದಸ್ಯರ ಗೈರು ಹಾಜರಿಗೂ ಆಕ್ಷೇಪ;
ಕೆಲವೊಂದು ಸದಸ್ಯರು ಪ್ರತಿ ಸಲವೂ ಗ್ರಾಮಸಭೆಗೆ ಗೈರು ಹಾಜರಿಯಾಗುತ್ತಿದ್ದಾರೆ. ಆದ್ದರಿಂದ ಸದಸ್ಯರಿಗೂ ಎ.ಬಿ.ಗ್ರೇಡ್ ಕೊಡಬೇಕು ಎಂದು ಒತ್ತಾಯಿಸಿದ ಗ್ರಾಮಸ್ಥ ಜಾನ್ಸನ್ ಗಲ್ಬಾವೋ ಅವರು, ಸಭೆಗೆ ನಿರಂತರ ಹಾಜರಿಯಾಗುವ ಸದಸ್ಯರು ಮಾತ್ರ ವಿಶೇಷ ಕಾಳಜಿಯಿಂದ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿರುವ ಬಗ್ಗೆ ವರದಿಯಲ್ಲಿ ಉಲ್ಲೇಖಿಸಬೇಕೆಂದು ಹೇಳಿದರು. ಇದಕ್ಕೆ ಇತರೇ ಗ್ರಾಮಸ್ಥರು ಧ್ವನಿಗೂಡಿಸಿದರು. ಗ್ರಾಮಸಭೆಗೆ ಗೈರು ಹಾಜರಿಯಾಗುವ ಸದಸ್ಯರ ಸದಸ್ಯತ್ವ ರದ್ದುಗೊಳಿಸಲು ಚುನಾವಣಾ ಆಯೋಗಕ್ಕೆ ಬರೆಯಬೇಕೆಂದು ಗ್ರಾಮಸ್ಥ ಇಸ್ಮಾಯಿಲ್ ಆಗ್ರಹಿಸಿದರು.

ಗ್ರಾಮಸ್ಥನ ಮಾತು, ಕೆರಳಿದ ಪಿಡಿಒ;
ಚರ್ಚೆಯ ಸಂದರ್ಭದಲ್ಲಿ ಗ್ರಾಮಸ್ಥನ ಮಾತಿನಿಂದ ಕೆರಳಿದ ಪಿಡಿಒ ಮೋಹನಕುಮಾರ್ ಅವರು, ಯಾವುದೇ ಪ್ರಶ್ನೆಗಳಿಗೂ ಉತ್ತರಕೊಡಲು ಸಿದ್ಧನಿದ್ದೇನೆ. ಸರಕಾರಿ ಅಧಿಕಾರಿಗೂ ಗೌರವ ಕೊಡಬೇಕು. ನೀವು ಸರಿಯಾಗಿ ಮಾತನಾಡಿ ಎಂದು ಹೇಳಿದರು. ಒಂದು ಹಂತದಲ್ಲಿ ಗ್ರಾಮಸ್ಥರಾದ ಜಾನ್ಸನ್ ಗಲ್ಬಾವೋ, ಇಸ್ಮಾಯಿಲ್, ಸುಜಿತ್ ಸಿ.ಪಿಲಿಫ್, ಬಿಜುಕುಮಾರ್ ಹಾಗೂ ಪಿಡಿಒ ಮಧ್ಯೆ ವೇದಿಕೆ ಪಕ್ಕದಲ್ಲೇ ವಾಗ್ವಾದ ನಡೆಯಿತು. ನೋಡೆಲ್ ಅಧಿಕಾರಿ ಶಿವಪ್ರಕಾಶ್ ಮಾತನಾಡಿ, ಚರ್ಚೆಗೆ ಅವಕಾಶ ಕೊಡುತ್ತೇವೆ. ಗ್ರಾಮಸ್ಥರು ಸಮಾಧಾನದಿಂದ ಮಾತನಾಡುವಂತೆ ಹೇಳಿದರು. ಅಧ್ಯಕ್ಷರೂ ಗ್ರಾಮಸ್ಥರನ್ನು ಸಮಾಧಾನಪಡಿಸಿದರು.

ಅರಿವು ಕೇಂದ್ರ ಉದ್ಘಾಟನೆ ವಿಚಾರ-ಚರ್ಚೆ;
ಅರಿವು ಕೇಂದ್ರ ಉದ್ಘಾಟನೆಯ ಬಗ್ಗೆ ಯಾರಿಗೂ ಮಾಹಿತಿ ನೀಡಿಲ್ಲ ಎಂದು ಬಿಜುಕುಮಾರ್, ವರ್ಗೀಸ್ ಅಬ್ರಹಾಂ, ಅಲೆಕ್ಸ್, ರಾಜನ್ ಕೆ.ಮ್ಯಾಥ್ಯು ಹಾಗೂ ಇತರೇ ಗ್ರಾಮಸ್ಥರು ವಿಚಾರ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಉದಯಕುಮಾರ್ ಅವರು, ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ದಿನ ನಿಗದಿಗೊಳಿಸಿದ್ದೇವೆ. ಎಲ್ಲರನ್ನೂ ಕರೆದಿದ್ದೇವೆ. ಎನೌನ್ಸ್ ಮಾಡಿದ್ದೇವೆ. ಸದಸ್ಯರು ಬಂದಿದ್ದರು ಎಂದರು. ಚರ್ಚೆ ನಡೆಯುತ್ತಿದ್ದಂತೆ ಮಾತನಾಡಿದ ಪಿಡಿಒ ಅವರು, ಸಮಯದ ಅಭಾವ ಇದ್ದ ಹಿನ್ನೆಲೆಯಲ್ಲಿ ಸರಕಾರಿ ಕಾರ್ಯಕ್ರಮ ಮುಂದೂಡಿದ್ದೇವೆ. ದಿನ ನಿಗದಿಯಾಗಿದ್ದರಿಂದ ಪೂಜೆ ನಡೆದಿದೆ ಎಂದರು. ಸದಸ್ಯ ಹನೀಫ್ ಪ್ರತಿಕ್ರಿಯಿಸಿ, ಸಾಮಾನ್ಯ ಸಭೆಯಲ್ಲಿ ಉಸ್ತುವಾರಿ ಸಚಿವರು, ಶಾಸಕರನ್ನು ಕರೆಸಿ ಉದ್ಘಾಟಿಸುವುದು ಎಂದು ನಿರ್ಣಯಿಸಲಾಗಿದೆ. ಎಲ್ಲರ ಹೆಸರು ಹಾಕಿ ಆಮಂತ್ರಣ ಆಗಿದೆ. ಆದರೆ ಯಾರಿಗೂ ಆಮಂತ್ರಣ ಪತ್ರಿಕೆ ಹಂಚಿಕೆಯಾಗಿಲ್ಲ. ಸರಕಾರಿ ಅನುದಾನದ ಕಟ್ಟಡ ಈ ರೀತಿ ಉದ್ಘಾಟಿಸಿರುವುದು ಸರಿಯಲ್ಲ ಎಂದರು. ಈ ಬಗ್ಗೆ ಚರ್ಚೆ ನಡೆದು ಗ್ರಾಮಸ್ಥರ ಒತ್ತಾಯದಂತೆ ಉಸ್ತುವಾರಿ ಸಚಿವರನ್ನು ಕರೆಸಿ ಅಧಿಕೃತವಾಗಿ ಕಟ್ಟಡ ಉದ್ಘಾಟಿಸಲು ನಿರ್ಣಯಿಸಲಾಯಿತು.

ಹಕ್ಕುಪತ್ರ ಕೊಡಿ;
ಇಚ್ಲಂಪಾಡಿ ಗ್ರಾಮದ ಬದನೆ ಕಾಲೋನಿಯಲ್ಲಿ ಹಲವು ಫಲಾನುಭವಿಗಳಿಗೆ ಮನೆ ನಿವೇಶನ, ಹಕ್ಕುಪತ್ರ ಹಂಚಿಕೆಯಾಗಿದೆ. ಆದರೆ ಅಲ್ಲಿ ಅವರು ಯಾರೂ ವಾಸ್ತವ್ಯವಿಲ್ಲ. ಹಕ್ಕು ಪತ್ರ ಇಲ್ಲದೇ ಇರುವವರು ವಾಸ್ತವ್ಯವಿದ್ದಾರೆ. ಆದ್ದರಿಂದ ವಾಸ್ತವ್ಯವಿರುವವರಿಗೆ ಹಕ್ಕುಪತ್ರ ನೀಡಲು ಗ್ರಾಮ ಪಂಚಾಯತ್‌ನಿಂದ ಕ್ರಮ ಕೈಗೊಳ್ಳಬೇಕೆಂದು ರಾಜನ್ ವಿ.ಮ್ಯಾಥ್ಯು ಒತ್ತಾಯಿಸಿದರು.

ಜೆಜೆಎಂ ಹಸ್ತಾಂತರಕ್ಕೆ ಆಕ್ಷೇಪ;
ಕಾಪಿನಬಾಗಿಲು ಭಾಗದಲ್ಲಿ ಜೆಜೆಎಂ ಕಾಮಗಾರಿ ಅಪೂರ್ಣ ಆಗಿದೆ. ಆದರೂ ಗ್ರಾ.ಪಂ.ಗೆ ಹಸ್ತಾಂತರ ಪಡೆದುಕೊಳ್ಳಲಾಗಿದೆ. ಜೆಜೆಎಂ ಕಾಮಗಾರಿ ವಿಚಾರ ಪ್ರತಿ ಗ್ರಾಮಸಭೆಯಲ್ಲೂ ಚರ್ಚೆಗೆ ಬರುತ್ತಿದ್ದು ಹಸ್ತಾಂತರ ಪಡೆಯುವುದಕ್ಕೆ ಮೊದಲು ಗ್ರಾಮಸ್ಥರಿಗೆ ಮಾಹಿತಿ ನೀಡಬೇಕೆಂದು ನಿರ್ಣಯಿಸಲಾಗಿದೆ. ಇದೀಗ ಗ್ರಾಮಸ್ಥರಿಗೆ ಮಾಹಿತಿ ನೀಡದೇ ಹಸ್ತಾಂತರ ಪಡೆದುಕೊಂಡಿರುವುದು ಯಾಕೆ ? ಎಂದು ಗ್ರಾಮಸ್ಥ ಜಾನ್ಸನ್ ಗಲ್ಬಾವೋ, ಸುಜಿತ್ ಸಿ.ಪಿಲಿಫ್ ಮತ್ತಿತರರು ಪ್ರಶ್ನಿಸಿದರು. ಗ್ರಾ.ಪಂ.ಕಚೇರಿ ಸಮೀಪವೇ ಶಾಂತಿಬೆಟ್ಟು ಎಂಬಲ್ಲಿ ನೀರಿನ ಟ್ಯಾಂಕ್ ನಿರ್ಮಾಣಗೊಂಡಿದೆ. ಇದಕ್ಕೆ ನೀರು ಪೂರೈಕೆಯಾಗುತ್ತಿಲ್ಲ. ಈ ಭಾಗದಲ್ಲಿ ನೀರಿನ ಸಮಸ್ಯೆ ಉಂಟಾಗಿದೆ ಎಂದು ಇಸ್ಮಾಯಿಲ್, ರಫೀಕ್ ಅವರು ಹೇಳಿದರು. ಈ ವಿಚಾರದಲ್ಲೂ ಸಾಕಷ್ಟು ಚರ್ಚೆ ನಡೆಯಿತು. ಗುತ್ತಿಗೆದಾರರಿಗೆ ಮಾಹಿತಿ ನೀಡಿ ಸರಿಪಡಿಸುತ್ತೇವೆ ಎಂದು ಅಧ್ಯಕ್ಷ ಉದಯಕುಮಾರ್ ಭರವಸೆ ನೀಡಿದರು.

ಅಪೂರ್ಣ ಅಂಬೇಡ್ಕರ್ ಭವನ;
ಕೌಕ್ರಾಡಿ ಗ್ರಾಮದ ನೇತ್ರಾಳದಲ್ಲಿ ಅಂಬೇಡ್ಕರ್ ಭವನ ನಿರ್ಮಾಣಗೊಂಡು 10 ವರ್ಷ ಕಳೆದಿದೆ. ಕಾಮಗಾರಿ ಪೂರ್ಣಗೊಂಡಿಲ್ಲ. ಈ ಕಟ್ಟಡವೇ ನಿಷ್ಪ್ರಯೋಜಕವಾಗಿದೆ. ಸಂಚಾರಿ ಪಡಿತರ ವಿತರಣೆಗಾದರೂ ಕಟ್ಟಡ ಬಳಕೆ ಮಾಡುವಂತೆ ಕಳೆದ ಗ್ರಾಮಸಭೆಯಲ್ಲಿ ಒತ್ತಾಯಿಸಿದ್ದೇವೆ. ಈ ಬಗ್ಗೆ ನಿರ್ಣಯವೂ ಆಗಿದೆ. ಆದರೆ ಅನುಷ್ಠಾನ ಆಗಿಲ್ಲ ಎಂದು ಜಾನ್ಸನ್ ಆರೋಪಿಸಿದರು. ಸದಸ್ಯ ಕೆ.ಎಂ.ಹನೀಫ್ ಮಾತನಾಡಿ, ಸದ್ರಿ ಕಟ್ಟಡ 2016ರಲ್ಲಿ ಗ್ರಾಮವಿಕಾಸ ಯೋಜನೆ ಹಾಗೂ 15ನೇ ಹಣಕಾಸು ಯೋಜನೆ ಅನುದಾನದಲ್ಲಿ ನಿರ್ಮಾಣಗೊಂಡಿದೆ. ಅನುದಾನದ ಕೊರತೆಯಿಂದ ಕಾಮಗಾರಿ ಬಾಕಿ ಇದೆ ಎಂದು ಹೇಳಿದರು. ಈ ಬಗ್ಗೆ ಚರ್ಚೆಯಾಗುತ್ತಿದ್ದಂತೆ ಸದಸ್ಯ ಲೋಕೇಶ್ ಬಾಣಜಾಲು ಮಾತನಾಡಿ, ಪಿಡಿಒ ಅವರು ಈ ಕಟ್ಟಡದ ಬಗ್ಗೆ ಮಾಹಿತಿ ಪಡೆದುಕೊಂಡು ಜನರಿಗೆ ಉಪಯೋಗ ಆಗುವಂತೆ ಮಾಡಬೇಕೆಂದು ಹೇಳಿದರು. ಕ್ರೀಯಾಯೋಜನೆಯಲ್ಲಿ ಸೇರಿಸಿಕೊಂಡು ಆಗಬೇಕಾದ ಕಾಮಗಾರಿ ಮಾಡುವುದಾಗಿ ಪಿಡಿಒ ಹೇಳಿದರು.

ಜಂಟಿ ಸರ್ವೆ ನಡೆಸಿ;
ಆರ್‌ಟಿಸಿಯಲ್ಲಿ ಭಾಗಶ: ಅರಣ್ಯ ಎಂದು ನಮೂದು ಆಗಿರುವುದರಿಂದ ಯಾವುದೇ ಸವಲತ್ತು ಸಿಗುತ್ತಿಲ್ಲ. ಆದ್ದರಿಂದ ಅರಣ್ಯ ಹಾಗೂ ಕಂದಾಯ ಇಲಾಖೆ ಜಂಟಿ ಸರ್ವೆ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಈ ಬಗ್ಗೆ ಇಲಾಖೆಗೆ ಮನವಿ ಮಾಡಲು ನಿರ್ಣಯಿಸಲಾಯಿತು. ಪೆರಿಯಶಾಂತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಬೇಕು. ಅಪಾಯಕಾರಿ ಮರಗಳ ತೆರವುಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು.

ಶಾಂತಿಬೆಟ್ಟುಗೆ ಅಂಗನವಾಡಿ ಕೊಡಿ;
ಕೌಕ್ರಾಡಿ ಗ್ರಾಮದ ಶಾಂತಿಬೆಟ್ಟುನಲ್ಲಿ ಅಂಗನವಾಡಿ ಕೇಂದ್ರ ಇಲ್ಲ. ಇಲ್ಲಿನ ಮಕ್ಕಳು ನೆಲ್ಯಾಡಿ ಅಂಗನವಾಡಿ ಕೇಂದ್ರಕ್ಕೆ ಹೋಗುತ್ತಿದ್ದಾರೆ. ಆದ್ದರಿಂದ ಶಾಂತಿಬೆಟ್ಟುನಲ್ಲಿ ಪ್ರತ್ಯೇಕ ಅಂಗನವಾಡಿ ಮಾಡಬೇಕೆಂದು ಇಸ್ಮಾಯಿಲ್ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಂಗನವಾಡಿ ವಲಯ ಮೇಲ್ವಿಚಾರಕಿ ನಾಗವೇಣಿ ಅವರು, ಪ್ರಸ್ತುತ ಹೊಸ ಅಂಗನವಾಡಿ ಕೇಂದ್ರ ತೆರೆಯಲು ಅವಕಾಶವಿಲ್ಲ. ಇಲಾಖೆಗೆ ಅರ್ಜಿ ಕೊಡಿ. ಅವಕಾಶ ಸಿಕ್ಕಿದಾಗ ಸರ್ವೆ ನಡೆಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದರು. ಶಾಂತಿಬೆಟ್ಟುನಲ್ಲಿ ಅಂಗನವಾಡಿ ಕೇಂದ್ರಕ್ಕೆ ನಿರ್ಣಯ ಬರೆಯುವಂತೆ ರಫೀಕ್ ಸಲಹೆ ನೀಡಿದರು. ಅಧ್ಯಕ್ಷ ಉದಯಕುಮಾರ್ ಮಾತನಾಡಿ, ಗ್ರಾ.ಪಂ.ನಿಂದ ಈಗಾಗಲೇ ಮನವಿ ಮಾಡಿದ್ದೇವೆ. ಮತ್ತೊಮ್ಮೆ ಮನವಿ ಮಾಡುವುದಾಗಿ ಹೇಳಿದರು.

ಕೊಕ್ಕಡ ಚರ್ಚ್ ಅಂಗನವಾಡಿ ಶೌಚಾಲಯ ವಿಚಾರ ಚರ್ಚೆ;
ಕೊಕ್ಕಡ ಚರ್ಚ್ ಅಂಗನವಾಡಿ ಕೇಂದ್ರದಲ್ಲಿ ಗ್ರಾ.ಪಂ. ಅನುದಾನದಲ್ಲಿ ಶೌಚಾಲಯ ಆಗಿದೆ. ಇಲಾಖೆಯಿಂದಲೂ ಶೌಚಾಲಯ ನಿರ್ಮಾಣಕ್ಕೆ 48 ಸಾವಿರ ರೂ.ಅನುದಾನ 2020ರಲ್ಲಿ ಮಂಜೂರು ಆಗಿದೆ. ಆದರೆ ಕೆಲಸ ಆಗಿಲ್ಲ ಎಂದು ಜಾನ್ಸನ್ ಗಲ್ಬಾವೋ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಲ್ವಿಚಾರಕಿ ನಾಗವೇಣಿ ಅವರು, ಹ್ಯಾಬಿಟ್ಯುಡ್ ಸಂಸ್ಥೆಯವರು ಶೌಚಾಲಯ ನಿರ್ಮಾಣ ಮಾಡುತ್ತಿದ್ದಾರೆ. ದ.ಕ.ಜಿಲ್ಲೆಯ 40 ಅಂಗನವಾಡಿಗಳ ಪೈಕಿ 15 ಅಂಗನವಾಡಿಗಳಲ್ಲಿ ಶೌಚಾಲಯ ನಿರ್ಮಾಣ ಆಗಿದೆ. ಹಂತ ಹಂತವಾಗಿ ಮಾಡುತ್ತಿದ್ದಾರೆ ಎಂದರು. ಅಂಗನವಾಡಿಯಲ್ಲಿ ಸಾಂಬಾರು ತಯಾರಿಗೆ ತರಕಾರಿ ವ್ಯವಸ್ಥೆ ಸರಕಾರದಿಂದಲೇ ಆಗಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.

ಸರಕಾರಿ ಜಾಗ ಗ್ರಾ.ಪಂ.ಗೆ ಹಸ್ತಾಂತರಿಸಿ;
ಹೊಸಮಜಲುನಲ್ಲಿ ಅಗ್ನಿಶಾಮಕ ದಳಕ್ಕೆ 70 ಸೆಂಟ್ಸ್ ಜಾಗ ಕಾದಿರಿಸಲಾಗಿತ್ತು. ಆದರೆ ಅಗ್ನಿಶಾಮಕ ದಳಕ್ಕೆ ಈಗ ಮರ್ದಾಳದಲ್ಲಿ ಜಾಗ ಮಂಜೂರು ಆಗಿದೆ. ಆದ್ದರಿಂದ ಸದ್ರಿ ಜಾಗ ಹಾಗೂ ಅದರ ಪಕ್ಕದಲ್ಲಿ ಅಂದಾಜು 50 ಸೆಂಟ್ಸ್ ಸರಕಾರಿ ಜಾಗವಿದೆ. ಅದನ್ನು ಗ್ರಾ.ಪಂ.ಗೆ ಹಸ್ತಾಂತರಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಗ್ರಾಮಾಡಳಿತಾಧಿಕಾರಿ ಸಂತೋಷ್ ಅವರು, ಅಗ್ನಿಶಾಮಕ ಇಲಾಖೆಯಿಂದ ಅಭಿಪ್ರಾಯ ಪಡೆದು ಸದ್ರಿ ಜಾಗ ಗ್ರಾ.ಪಂ.ಗೆ ಹಸ್ತಾಂತರಕ್ಕೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು.

ಆಲಂಪಾಡಿ ಎಂಬಲ್ಲಿ ಕೊಳಚೆ ನೀರು ಹರಿಯುತ್ತಿದ್ದು ಈ ಬಗ್ಗೆ ಕ್ರಮ ಕೈಗೊಳ್ಳಬೇಕು, ಕೌಕ್ರಾಡಿ ಗ್ರಾಮಕ್ಕೆ ಪ್ರತ್ಯೇಕ ಪಡಿತರ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು. ಬೆಳಿಗ್ಗೆ 11.15 ಗಂಟೆಗೆ ಆರಂಭಗೊಂಡ ಗ್ರಾಮಸಭೆ ಸಂಜೆ 5 ಗಂಟೆಯ ತನಕವೂ ನಡೆದು ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.

ನೆಲ್ಯಾಡಿ ಹೊರಠಾಣೆಯ ಹೆಡ್‌ಕಾನ್ಸ್‌ಸ್ಟೇಬಲ್ ಪ್ರವೀಣ್, ಜಿ.ಪಂ.ಇಂಜಿನಿಯರ್ ಹೊಳೆಬಸಪ್ಪ, ಗಸ್ತು ಅರಣ್ಯಪಾಲಕ ದೇವಿಪ್ರಸಾದ್, ಕೃಷಿ ಇಲಾಖೆಯ ಚಂದ್ರಕಲಾ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ನಾಗವೇಣಿ, ಗ್ರಾಮಾಡಳಿತಾಧಿಕಾರಿ ಸಂತೋಷ್, ಸಿಹೆಚ್‌ಒ ಶ್ಯಾಮಲ, ಕಿರಿಯ ಪಶುವೈದ್ಯ ಪರೀಕ್ಷಕ ವೀರೇಶ್, ಮೆಸ್ಕಾಂ ಜೆಇ ರಾಮಣ್ಣ, ಸಿಆರ್‌ಪಿ ಪ್ರಕಾಶ್ ಅವರು ಇಲಾಖಾವಾರು ಮಾಹಿತಿ ನೀಡಿದರು. ಉಪಾಧ್ಯಕ್ಷೆ ವನಿತಾ, ಸದಸ್ಯರಾದ ಲೋಕೇಶ್ ಬಿ., ಹನೀಫ್ ಎಂ., ಕುರಿಯಾಕೋಸ್ ಯಾನೆ ರೋಯಿ ಟಿ.ಎಂ., ಭವಾನಿ, ಡೈಸಿವರ್ಗೀಸ್, ಸವಿತಾ, ಶೈಲಿ, ಸುಧಾಕರ ಗೌಡ, ಜನಾರ್ದನ ಗೌಡ, ರತ್ನಾವತಿ, ಪುಷ್ಪಾ, ಸಂಧ್ಯಾ, ಕೆಡಿಪಿ ಸದಸ್ಯ ಗಿರೀಶ್ ಸಾಲಿಯಾನ್ ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಿಬ್ಬಂದಿ ಕಸ್ತೂರಿ ವರದಿ ವಾಚಿಸಿದರು. ಪಿಡಿಒ ಮೋಹನ್‌ಕುಮಾರ್ ಸ್ವಾಗತಿಸಿದರು. ಕಾರ್ಯದರ್ಶಿ ದೇವಿಕಾ ವಂದಿಸಿದರು.

LEAVE A REPLY

Please enter your comment!
Please enter your name here