






ಪ್ರತಿಯೊಬ್ಬರು ನೀಡಿದ ಸಹಕಾರವೇ ಅಭಿವೃದ್ಧಿಗೆ ಪ್ರೇರಣೆ; ಸುಜಾತ ಮುಳಿಗದ್ದೆ


ಪುತ್ತೂರು: ಜನ ಪ್ರತಿನಿಧಿಗಳಿಂದ ಹಿಡಿದು ಅಧಿಕಾರಿ ವರ್ಗದವರು ಹಾಗೇ ಗ್ರಾಮಸ್ಥರು ನೀಡಿದ ಸಹಕಾರದಿಂದಲೇ ಗ್ರಾಮದ ಅಭಿವೃದ್ಧಿ ಸಾಧ್ಯವಾಗಿದೆ. ಸಹಕಾರವಿಲ್ಲದೇ ಯಾವುದೇ ಕೆಲಸ ಸಾಧ್ಯವಿಲ್ಲ ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಗ್ರಾಮ ಪಂಚಾಯತ್ನ ಅಭಿವೃದ್ಧಿ ಕೆಲಸಗಳಲ್ಲಿ ಸಹಕಾರ ನೀಡಿದ್ದೀರಿ ಮುಂದೆಯೂ ಗ್ರಾಮದ ಅಭಿವೃದ್ದಿಯಲ್ಲಿ ಸರ್ವರ ಸಹಕಾರ ಇರಲಿ ಎಂದು ಕೆದಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಜಾತ ಮುಳಿಗದ್ದೆ ಕೃತಜ್ಞತೆ ಸಲ್ಲಿಸಿದರು.




ಅವರು ಫೆ.೧೯ ರಂದು ಕೆದಂಬಾಡಿ ಗ್ರಾಮ ಪಂಚಾಯತ್ ಹಮ್ಮಿಕೊಂಡಿದ್ದ ಕೃತಜ್ಞತ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಪಂ ಸದಸ್ಯ ರತನ್ ರೈ ಕುಂಬ್ರ ಮಾತನಾಡಿ, ಎಲ್ಲರ ಸಹಕಾರದಿಂದ ಬಹಳಷ್ಟು ಅಭಿವೃದ್ಧಿ ಕಾರ್ಯಗಳು ಗ್ರಾಮದಲ್ಲಿ ನಡೆದಿದೆ. ವಿಶೇಷವಾಗಿ ಎಂಆರ್ಎಫ್ ಘಟಕ, ಮುಂಡಾಲ ಬೋಳೋಡಿ ಸಂಪರ್ಕ ರಸ್ತೆ ನಿರ್ಮಾಣ ಸೇರಿದಂತೆ ಹಲವು ಶಾಶ್ವತ ಅಭಿವೃದ್ಧಿ ಕೆಲಸಗಳು ನಡೆದಿರುವುದು ನಮಗೆಲ್ಲರಿಗೂ ಹೆಮ್ಮೆ ತಂದಿದೆ. ಸಹಕಾರ ನೀಡಿದ ಸರ್ವರಿಗೂ ಕೃತಜ್ಞತೆ ಸಲ್ಲಿಸುತ್ತಾ ಮುಂದೆಯೂ ತಮ್ಮೆಲ್ಲರ ಸಹಕಾರ ಇರಲಿ ಎಂದು ಹೇಳಿದರು. ಸದಸ್ಯ ಕೃಷ್ಣ ಕುಮಾರ್ ಇದ್ಯಪೆ ಮಾತನಾಡಿ, ಗ್ರಾಮದ ಅಭಿವೃದ್ಧಿ ವಿಷಯದಲ್ಲಿ ಪ್ರತಿಯೊಬ್ಬರು ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು. ಸದಸ್ಯ ಪ್ರವೀಣ್ ಶೆಟ್ಟಿ ತಿಂಗಳಾಡಿ ಮಾತನಾಡಿ, ಎಲ್ಲರ ಸಹಕಾರದಿಂದ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಹಕಾರಿಯಾಗಿದೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು. ಗ್ರಾಮಸ್ಥರ ಪರವಾಗಿ ಕೃಷಿಕ ಸಮಾಜದ ಅಧ್ಯಕ್ಷ ವಿಜಯ ಕುಮಾರ್ ರೈ ಕೋರಂಗರವರು ಮಾತನಾಡಿ, ಒಂದು ಒಳ್ಳೆಯ ಆಡಳಿತವನ್ನು ನೀಡಿದ ಹೆಗ್ಗಳಿಕೆ ಈ ಸಲದ ಗ್ರಾಪಂ ಆಡಳಿತ ಮಂಡಳಿಗೆ ಸಲ್ಲಬೇಕಾಗಿದೆ. ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ಮೂಲಕ ಉತ್ತಮ ಆಡಳಿತ ಕಾರ್ಯವೈಖರಿಯ ಪಂಚಾಯತ್ ಎಂದು ಕರೆಸಿಕೊಂಡಿರುವುದು ಖುಷಿ ತಂದಿದೆ ಎಂದರು. ಸನ್ಯಾಸಿಗುಡ್ಡೆ ಶ್ರೀರಾಮ ಮಂದಿರ ಆಡಳಿತ ಸಮಿತಿಯ ಕೋಶಾಧಿಕಾರಿ ಮುಂಡಾಳಗುತ್ತು ಮೋಹನ ಆಳ್ವರವರು ಮಾತನಾಡಿ, ರಾಜಕೀಯ ಬಿಟ್ಟು ಎಲ್ಲರ ಒಗ್ಗಟ್ಟಿನಿಂದ ಗ್ರಾಮದ ಅಭಿವೃದ್ಧಿ ತೊಡಗಿಸಿಕೊಳ್ಳುವ ಮೂಲಕ ಬಹಳಷ್ಟು ಶಾಶ್ವತ ಅಭಿವೃದ್ಧಿ ಕೆಲಸಗಳನ್ನು ಮಾಡಿದ ಕೀರ್ತಿ ಗ್ರಾಪಂಗೆ ಸಲ್ಲುತ್ತದೆ ಎಂದರು. ತಿಂಗಳಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಭವ್ಯರವರು ಮಾತನಾಡಿ, ಕೋವಿಡ್ ಸಂದರ್ಭ ಸೇರಿದಂತೆ ಪ್ರತಿಯೊಂದು ಕಾರ್ಯದಲ್ಲೂ ಗ್ರಾಪಂ ಒಳ್ಳೆಯ ಸಹಕಾರ ನೀಡಿದೆ.ವಿಶೇಷವಾಗಿ ಆರೋಗ್ಯ ಕೇಂದ್ರಕ್ಕೆ ಸಿಇಜಿ ಯಂತ್ರ ಹಾಗೇ ಸೋಲಾರ್ ರೂಪ್ಟಾಪ್ಗಳನ್ನು ನೀಡಿದೆ ಎಂದರು. ಅಂಗನವಾಡಿ ಶಿಕ್ಷಕಿ ತಾರಾ ಬಲ್ಲಾಳ್ರವರು ಮಾತನಾಡಿ, ಅಂಗನವಾಡಿ ಕೇಂದ್ರಗಳ ಬಹಳಷ್ಟು ಸಮಸ್ಯೆಗಳಿದ್ದರೂ ಎಲ್ಲವನ್ನು ಆಲಿಸಿಕೊಂಡು ನಮಗೆ ಉತ್ತಮ ಸಹಕಾರ ನೀಡಿದ ಪಂಚಾಯತ್ ಆಗಿದೆ ಎಂದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಹರಿಣಾಕ್ಷಿಯವರು ಗ್ರಾಪಂ ಕಾರ್ಯ ವೈಖರಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಸಾಮಾಜಿಕ ಕಾರ್ಯಕರ್ತ ಚಂದ್ರ ಇದ್ಪಾಡಿ, ರೋಟರ್ಯಾಕ್ಟ್ನ ಹರೀಶ್ ರೈ ಮಿತ್ತೋಡಿ, ಆರೋಗ್ಯ ಸಹಾಯಕಿ ವಿದ್ಯಾ, ತಿಂಗಳಾಡಿ ಶಾಲಾ ಮುಖ್ಯಗುರು ವಿಜಯರವರುಗಳು ಗ್ರಾಪಂ ಆಡಳಿತ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಾವಣ್ಯ ಪಿ.ರವರು ಮಾತನಾಡಿ, ಕೆದಂಬಾಡಿ ಗ್ರಾಪಂಗೆ ಪಿಡಿಓ ಆಗಿ ಬಂದು ನಾಲ್ಕು ತಿಂಗಳು ಕಳೆದಿದೆ ಇಲ್ಲಿನ ಒಗ್ಗಟ್ಟು ನೋಡಿ ತುಂಬಾ ಖುಷಿ ಆಗಿದೆ. ಗ್ರಾಮಸ್ಥರು ಕೂಡ ಬಹಳ ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದ್ದಾರೆ ಎಂದರು. ವೇದಿಕೆಯಲ್ಲಿ ಗ್ರಾಪಂ ಉಪಾಧ್ಯಕ್ಷೆ ಜಯಲಕ್ಷ್ಮೀ ಬಲ್ಲಾಳ್ ಕೆದಂಬಾಡಿಬೀಡು, ಸದಸ್ಯರುಗಳಾದ ವಿಠಲ ರೈ ಮಿತ್ತೋಡಿ, ಸುಜಾತ ರೈ, ರೇವತಿ ಬೋಳೋಡಿ ಉಪಸ್ಥಿತರಿದ್ದರು. ಗ್ರಾಪಂ ಕಾರ್ಯದರ್ಶಿ ಸುರೇಂದ್ರ ರೈ ಇಳಂತಾಜೆ ಸ್ವಾಗತಿಸಿ, ವಂದಿಸಿ ಕಾರ್ಯಕ್ರಮ ನಿರೂಪಿಸಿದರು. ಸಿಬ್ಬಂದಿಗಳಾದ ಜಯಂತ ಮೇರ್ಲ, ಮೃದುಳ ಬಾಲಯ, ಗಣೇಶ್, ಶಶಿಪ್ರಭಾ ರೈ, ವಿದ್ಯಾಪ್ರಸಾದ್ ಸಹಕರಿಸಿದ್ದರು.

ಉಪಕಾರ ಸ್ಮರಣೆಯೊಂದಿಗೆ ಗೌರವಾರ್ಪಣೆ
ಗ್ರಾಮ ಪಂಚಾಯತ್ ಆಡಳಿತದ ಅವಧಿಯಲ್ಲಿ ಗ್ರಾಪಂನೊಂದಿಗೆ ವಿಶೇಷವಾಗಿ ಸಹಕರಿಸಿದ ಸರ್ವರನ್ನು ಈ ಸಂದರ್ಭದಲ್ಲಿ ಹೂ ಹಾಗೂ ಸ್ಮರಣಿಕೆಯೊಂದಿಗೆ ಗೌರವಿಸಲಾಯಿತು. ವಿಶೇಷವಾಗಿ ಗ್ರಾಪಂ ನೀರು ನಿರ್ವಾಹಕರವರುಗಳನ್ನು, ಸ್ವಚ್ಛತಾ ಸೇನಾನಿಗಳನ್ನು, ಸಂಜೀವಿನಿ ಒಕ್ಕೂಟದವರನ್ನು, ಗ್ರಾಮ ಆಡಳಿತ ಅಧಿಕಾರಿ ವರ್ಗದವರನ್ನು, ಅಂಗನವಾಡಿ, ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರನ್ನು, ಶಿಕ್ಷಣ ಸಂಸ್ಥೆ ಸೇರಿದಂತೆ ಸಂಘ ಸಂಸ್ಥೆಯವರನ್ನು, ಗ್ರಾಪಂ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರನ್ನು ಹಾಗೇ ಗ್ರಾಪಂ ಆಡಳಿತ ಮಂಡಳಿ ಸದಸ್ಯರುಗಳನ್ನು ಈ ಸಂದರ್ಭದಲ್ಲಿ ಹೂ ಹಾಗೂ ಸ್ಮರಣಿಕೆ ನೀಡುವ ಮೂಲಕ ಉಪಕಾರ ಸ್ಮರಣೆಯೊಂದಿಗೆ ಗೌರವಿಸಿ ಕೃತಜ್ಞತೆ ಸಲ್ಲಿಸಲಾಯಿತು.

ಒಗ್ಗಟ್ಟಿನೊಂದಿಗೆ ಅಭಿವೃದ್ಧಿಗೆ ನಾಂದಿ ಹಾಡಿದ ಪಂಚಾಯತ್
ಒಂದು ಕಾಲದಲ್ಲಿ ಕೆದಂಬಾಡಿ ಗ್ರಾಮ ಪಂಚಾಯತ್ ಎಂದರೆ ಗಲಾಟೆ ಗೊಂದಲಗಳ ಮೂಲಕ ತಾಲೂಕಿನಲ್ಲೇ ಸದ್ದು ಮಾಡಿದ ಪಂಚಾಯತ್ ಆಗಿತ್ತು. ಆದರೆ ಇದೀಗ ಅದೆಲ್ಲಾ ದೂರವಾಗಿ ಒಗ್ಗಟ್ಟಿನೊಂದಿಗೆ ಗ್ರಾಮದ ಅಭಿವೃದ್ಧಿಗೆ ನಾಂದಿ ಹಾಡಿದ ಪಂಚಾಯತ್ ಎಂದೇ ಹೇಳಬಹುದಾಗಿದೆ. ಗ್ರಾಪಂನ 5 ವರ್ಷಗಳ ಅವಧಿಯಲ್ಲಿ ಅಧ್ಯಕ್ಷರುಗಳಾದ ಯುವ ನೇತಾರ ರತನ್ ರೈ ಕುಂಬ್ರ ಮತ್ತು ಸುಜಾತ ಮುಳಿಗದ್ದೆಯವರ ನೇತೃತ್ವ, ಆಡಳಿತ ಮಂಡಳಿ ಸದಸ್ಯರ, ಅಧಿಕಾರಿ ವರ್ಗದವರ ಸಹಕಾರದೊಂದಿಗೆ ಗ್ರಾಮದಲ್ಲಿ ಎಂಆರ್ಎಫ್ ಘಟಕದಂತಹ ಬಹಳಷ್ಟು ಶಾಶ್ವತ ಅಭಿವೃದ್ಧಿಗಳು ಆಗಿರುವುದು ವಿಶೇಷವಾಗಿದೆ.









