ಉಪ್ಪಿನಂಗಡಿ: ಶಾಲೆ ಬಳಿ ಶೇಖರಣೆಗೊಂಡಿರುವ ಮಲೀನ ನೀರು : ವಿದ್ಯಾರ್ಥಿಗಳ ಆರೋಗ್ಯದ ಮೇಲೆ ಪರಿಣಾಮ- ಒಂದು ತಿಂಗಳೊಳಗೆ ಸರಿಪಡಿಸದಿದ್ದಲ್ಲಿ ಪ್ರತಿಭಟನೆಯ ಎಚ್ಚರಿಕೆ

0

ಉಪ್ಪಿನಂಗಡಿ: 500 ಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿರುವ ವಿದ್ಯಾ ಸಂಸ್ಥೆಯ ಬಳಿ ಚರಂಡಿ ತ್ಯಾಜ್ಯ ನೀರು ಸಂಗ್ರಹಣೆಗೊಂಡು ಬಗೆ ಬಗೆಯ ಸೊಳ್ಳೆ ಉತ್ಪಾದನಾ ಕೇಂದ್ರವಾಗಿ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ದುಷ್ಪ್ಪರಿಣಾಮ ಬೀಳುತ್ತಿದ್ದು, ಸಮಸ್ಯೆ ನಿವಾರಣೆಗೆ ಸಂಬಂಧಿಸಿ ಮಾಡಿದ ಸತತ ಮನವಿಗಳು ಯಾವುದೇ ಸ್ಪಂದನೆಯಿಲ್ಲ. ಮುಂದಿನ ಒಂದು ತಿಂಗಳೊಳಗೆ ಸಮಸ್ಯೆ ಪರಿಹಾರವಾಗದಿದ್ದಲ್ಲಿ ವಿದ್ಯಾರ್ಥಿಗಳನ್ನು ಶಾಲೆಗೆ ಕಳುಹಿಸದೇ ವಿದ್ಯಾರ್ಥಿ ಪೋಷಕರನ್ನು ಒಗ್ಗೂಡಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಯ ಕುಮಾರ್ ಕಲ್ಲಳಿಕೆ ಎಚ್ಚರಿಸಿದ್ದಾರೆ.


ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, 190 ವರ್ಷಗಳ ಇತಿಹಾಸವನ್ನು ಹೊಂದಿರುವ ಉಪ್ಪಿನಂಗಡಿ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಪಾರ್ಶ್ವದಲ್ಲಿ ಹರಿಯುತ್ತಿರುವ ಪೇಟೆಯ ಪ್ರಧಾನ ಚರಂಡಿ ನೀರು ಚರಂಡಿಯಲ್ಲಿ ಸರಾಗವಾಗಿ ಹರಿಯದೆ ಶಾಲಾ ಬಳಿಯಲ್ಲಿಯೇ ಸಂಗ್ರಹಣೆಗೊಂಡು ದುರ್ನಾತ ಪ್ರಸಹರಿಸಲ್ಪಡುತ್ತಿದೆ. ಮಾತ್ರವಲ್ಲದೆ ವಿಪರೀತ ಪ್ರಮಾಣದಲ್ಲಿ ಸೊಳ್ಳೆ ಉತ್ಪತ್ತಿಗೊಂಡು ಶಾಲಾ ವಿದ್ಯಾರ್ಥಿಗಳ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರಲು ಕಾರಣವಾಗಿದೆ ಎಂದರು.


ನಮ್ಮೂರ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಜನಾಕರ್ಷಣೆಯ ಶಾಲೆ. ಇಲ್ಲಿ 500 ಕ್ಕೂ ಹೆಚ್ಚಿನ ಮಕ್ಕಳು ಕಲಿಯುತ್ತಿದ್ದರೂ ಶಾಲಾ ಪರಿಸರದ ಸನಿಹದಲ್ಲೇ ರೋಗಕಾರಕ ಚರಂಡಿ ಸಮಸ್ಯೆ ಸುದೀರ್ಘ ಸಮಯದಿಂದ ಜೀವಂತವಾಗಿರುವುದು ಖೇದಕರ ಸಂಗತಿ. ಅಧಿಕಾರಿಗಳಿಂದ ಮೊದಲುಗೊಂಡು ಜನಪ್ರತಿನಿಧಿಗಳವರೆಗೆ ದೂರು, ಮನವಿ ಕೊಟ್ಟರೂ ಯಾರೊಬ್ಬರಿಗೂ ಸಮಸ್ಯೆಯ ಗಂಭೀರತೆ ಅರ್ಥವಾಗದಿರುವುದು ಪ್ರಶ್ನಾರ್ಹವಾಗಿದೆ. ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಪೋಷಕರು ಕೈಗೊಳ್ಳುವ ಯಾವುದೇ ತೀರ್ಮಾನಕ್ಕೆ ಶಾಲಾಹಿರಿಯ ವಿದ್ಯಾರ್ಥಿ ಸಂಘ ಸಂಪೂರ್ಣ ಬೆಂಬಲವನ್ನು ನೀಡಲಿದೆ ಎಂದರು.


ಹೆದ್ದಾರಿಗಡ್ಡವಾಗಿ ನಿರ್ಮಿಸಲಾದ ಹೊಸ ಚರಂಡಿಯು ರಾಜಕಾಲುವೆಯಿಂದ ಎತ್ತರವಿದ್ದ ಕಾರಣ ರಾಜಕಾಲುವೆಯಲ್ಲಿನ ನೀರು ಈ ಹೊಸ ಚರಂಡಿಯಲ್ಲಿ ಹರಿಯದೇ ಹಳೆಯ ಕಿರಿದಾದ ಚರಂಡಿಯಲ್ಲಿ ಹರಿಯುತ್ತಿತ್ತಾದರೂ ತಕ್ಕ ಮಟ್ಟಿಗೆ ಸಮಾಧಾನ ತಂದಿತ್ತು. ಆದರೆ ಹೆದ್ದಾರಿ ಅಗಲೀಕರಣದ ಕಾಮಗಾರಿ ನಿರತ ಮಂದಿ ಕಾಮಗಾರಿಯಲ್ಲಿ ಉಳಿಕೆಯಾದ ಕಾಂಕ್ರೀಟ್ ಮಿಶ್ರಣವನ್ನು ವಿಲೇವಾರಿ ಮಾಡಲು ಸುಲಭವಾಗುತ್ತದೆ ಎಂಬ ಕಾರಣಕ್ಕೆ ಹೆದ್ದಾರಿ ಬದಿಯ ಚರಂಡಿಗೆ ಸುರಿದ ಕಾರಣ ಮಂದಗತಿಯಲ್ಲಿ ಹರಿದುಹೋಗುತ್ತಿದ್ದ ತ್ಯಾಜ್ಯ ನೀರು ಇದೀಗ ಹರಿದು ಹೋಗಲಾಗದೆ ಚರಂಡಿಯಲ್ಲಿಯೇ ಸಂಗ್ರಹಗೊಂಡಂತಾಗಿ ದುರ್ನಾತ ಹಾಗೂ ಸೊಳ್ಳೆಗಳ ಉತ್ಪಾದನೆಗೆ ಕಾರಣವಾಗಿದೆ ಎಂದರು.


ಬಡವರ ಮಕ್ಕಳಿಗೆ ಆರೋಗ್ಯ ಭಾಗ್ಯ ನೀಡಿ: ಎಲ್ಲೆಡೆ ಸರಕಾರಿ ಶಾಲೆ ಮುಚ್ಚುತ್ತಿದ್ದರೆ ಉಪ್ಪಿನಂಗಡಿಯ ಸರಕಾರಿ ಶಾಲೆ ದಿನೇ ದಿನೇ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಾ ಗಮನ ಸೆಳೆಯುತ್ತಿದೆ. ಆದರೆ ನಮ್ಮ ಶಾಲಾ ಬಳಿಯ ಚರಡಿಯಲ್ಲಿ ಮಲೀನ ನೀರು ಶೇಖರಣೆಗೊಂಡು ರೋಗಾಣುಗಳು ಉತ್ಪಾದನೆಗೊಳ್ಳುತ್ತಿರುವುದರಿಂದ ಶಾಲಾ ಮಕ್ಕಳು ಅನಾರೋಗ್ಯಕ್ಕೆ ತುತ್ತಾಗುತ್ತಿರುವುದು ಕಳವಳಕಾರಿಯಾಗಿದೆ. ನಾವೆಲ್ಲಾ ಬಡವರು. ನಮ್ಮ ಮಕ್ಕಳು ದಿನ ನಿತ್ಯ ಅನಾರೋಗ್ಯಕ್ಕೆ ತುತ್ತಾಗುತ್ತಿರುವುದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಬಡವರ ಮಕ್ಕಳಿಗೂ ಆರೋಗ್ಯ ಭಾಗ್ಯವನ್ನು ನೀಡಿ ಎಂದು ಕಂಡ ಕಂಡವರಲ್ಲಿ ಮನವಿ ಕೊಟ್ಟು ಯಾಚಿಸಿದ್ದೇವೆ. ಯಾರಿಂದಲೂ ಸ್ಪಂದನವಿಲ್ಲ. ಇನೂ ಬೀದಿಗಿಳಿಯುವುದೇ ನಮಗಿರುವ ಏಕೈಕ ಹಾದಿ ಎಂದು ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಬ್ದುಲ್ ಮಜೀದ್ ಎಚ್ಚರಿಸಿದ್ದಾರೆ.


ಪತ್ರಿಕಾಗೋಷ್ಟಿಯಲ್ಲಿ ಹಿರಿಯ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಝಕಾರಿಯಾ ಕೊಡಿಪ್ಪಾಡಿ, ಉಪಾಧ್ಯಕ್ಷ ಅಬ್ದುರ್ರಹ್ಮಾನ್ ಯುನಿಕ್, ಕಲಂದರ್ ಶಾಫಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here