






ಉಪ್ಪಿನಂಗಡಿ: ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿರುವ, ಈ ಬಾರಿ ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಉಬಾರ್ ಸ್ಪೋರ್ಟಿಂಗ್ ಕ್ಲಬ್‌ನ ಅಂಗ ಸಂಸ್ಥೆಯಾದ ಉಬಾರ್ ಡೋನರ್ಸ್ ಹೆಲ್ಫ್ ಲೈನ್ ಉಪ್ಪಿನಂಗಡಿಯ ವತಿಯಿಂದ ಪ್ರತಿ ವರ್ಷದಂತೆ ಈ ಬಾರಿಯೂ ರಂಜಾನ್ ಸಮಯದಲ್ಲಿ ಅರ್ಹರಿಗೆ ಆಹಾರ ಸಾಮಗ್ರಿಗಳನ್ನೊಳಗೊಂಡ ಕಿಟ್ ಅನ್ನು ಹಾಗೂ ಎರಡನೇ ಹಂತದ ಹೊಲಿಗೆ ಯಂತ್ರವನ್ನು ವಿತರಿಸಲಾಯಿತು.



ಉಪ್ಪಿನಂಗಡಿಯ ಕೆಂಪಿಮಜಲಿನಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಮಾಲೀಕುದ್ದಿನಾರ್ ಜುಮಾ ಮಸೀದಿ ಉಪ್ಪಿನಂಗಡಿ ಇದರ ಅಧ್ಯಕ್ಷ ಎಚ್. ಯೂಸುಫ್ ಹಾಜಿ ಮಾತನಾಡಿ, ರಂಝಾನ್ ಸಮಯದಲ್ಲಿ ಅರ್ಹರಿಗೆ ಆಹಾರವನ್ನು ತಲುಪಿಸುತ್ತಿರುವ ಉತ್ತಮವಾದ ಕಾರ್ಯ. ಈ ಸಂಸ್ಥೆಯು ಕ್ರೀಡೆಯನ್ನು ಸಂಘಟಿಸುತ್ತಿರುವುದಲ್ಲದೆ, ಹಲವು ಸಮಾಜಮುಖಿ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದೆ. ಇದರ ಜೊತೆಗೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಬಡ ಹೆಣ್ಣು ಮಕ್ಕಳ ಮದುವೆಯನ್ನು ಸಹ ಮುಂದಕ್ಕೆ ನೀವು ಮಾಡಿ ಅಲ್ಲಾಹುನ ಕೃಪೆಗೆ ಪಾತ್ರರಾಗಬೇಕೆಂದು ಅವರು ಹೇಳಿದರು.



ಹಿರಿಯ ಸಹಕಾರಿ, ನಿವೃತ್ತ ಶಿಕ್ಷಕ ವಿನ್ಸೆಂಟ್ ಫೆರ್ನಾಂಡಿಸ್ ಮಾತನಾಡಿ, ಸಂಸ್ಥೆಯ ಸೇವಾ ಕಾರ್ಯವನ್ನು ಶ್ಲಾಘಿಸಿದರಲ್ಲದೆ, ಇಂತಹ ಕಾರ್ಯಕ್ಕೆ ದೇವರ ಅನುಗ್ರಹ ಸದಾ ಇರುತ್ತದೆ ಎಂದರು. ಸಂಸ್ಥೆಯ ಸದಸ್ಯ ನಝೀರ್ ಹೊಸಮೊಗ್ರು ಮಾತನಾಡಿ, ಶೈಕ್ಷಣಿಕ ಕಾರ್ಯಾಗಾರದ ಮೂಲಕ ವಿದ್ಯಾರ್ಥಿಗಳಿಗೆ ಮುಂದಿನ ಶಿಕ್ಷಣಕ್ಕೆ ಅನುಕೂಲವಾಗುವಂತೆ ಮಾಹಿತಿ ಶಿಬಿರವನ್ನು ಆಯೋಜಿಸಲು ಸಂಸ್ಥೆ ಹಾಕಿಕೊಂಡ ಯೋಜನೆಯ ಬಗ್ಗೆ ವಿವರಿಸಿದರು.
ಸಂಸ್ಥೆಯ ಅಧ್ಯಕ್ಷ ಶಬೀರ್ ಕೆಂಪಿ ಮಾತನಾಡಿ, ಉಬಾರ್ ಸ್ಪೋರ್ಟಿಂಗ್ ಕ್ಲಬ್‌ನ ಮೂಲಕ ವಿವಿಧ ಕ್ರೀಡೆಗಳನ್ನು ಆಯೋಜಿಸಿ ಕ್ರೀಡಾ ಪ್ರತಿಭೆಗಳನ್ನು ಬೆಳಕಿಗೆ ತರುವ ಕೆಲಸ ನಡೆಸಲಾಗುತ್ತಿದ್ದರೆ, ಉಬಾರ್ ಡೋನರ್ಸ್ ಮೂಲಕ ಕಳೆದ 11 ವರ್ಷಗಳಿಂದ ವಿವಿಧ ಸಮಾಜಮುಖಿ ಕೆಲಸಗಳನ್ನು ನಡೆಸಿಕೊಂಡು ಬರುತ್ತಿದೆ. ಈ ಸಂಸ್ಥೆಯ ಸಮಾಜಮುಖಿ ಕಾರ್ಯಗಳಿಗೆ ಅನಿವಾಸಿ ಭಾರತೀಯರು ಸೇರಿದಂತೆ ಎಲ್ಲರೂ ಸಹಕಾರ ನೀಡುತ್ತಿದ್ದಾರೆ. ನಮ್ಮ ಸಂಸ್ಥೆಯ ಸಮಾಜಸೇವಾ ಚಟುವಟಿಕೆಗಳನ್ನು ಪರಿಗಣಿಸಿ ಕಳೆದ ಬಾರಿ ಸಂಸ್ಥೆಯು ದ.ಕ. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನವಾಗಿದೆ. ಬಡವರು ಆರ್ಥಿಕವಾಗಿ ಸಬಲರಾಗಬೇಕು. ಅವರಲ್ಲಿ ಉದ್ಯೋಗ ಸೃಷ್ಟಿಸಬೇಕು ಎಂಬ ನಿಟ್ಟಿನಲ್ಲಿ ಕಳೆದ ಬಾರಿ ನಾವು ಅರ್ಹರಿಗೆ ಉಚಿತವಾಗಿ ಟೈಲರಿಂಗ್ ಮೆಷಿನ್ ನೀಡುವ ಯೋಜನೆಯನ್ನು ಹಮ್ಮಿಕೊಂಡಿದ್ದು, ಎರಡನೇ ಹಂತವಾಗಿ ಈ ಬಾರಿಯೂ ಅರ್ಹರಿಗೆ ಅದನ್ನು ನೀಡಲಿದ್ದೇವೆ ಎಂದರು.
ಬಿಲಾಲ್ ಮಸೀದಿ ಕಡವಿನಬಾಗಿಲು ಇದರ ಖತೀಬ್ ಇಸ್ಮಾಯಿಲ್ ರಿಝ್ವಿಯವರು ದುವಾಶೀರ್ವಚನಗೈದರು. ಕಾರ್ಯಕ್ರಮದಲ್ಲಿ ಉಪ್ಪಿನಂಗಡಿ ಗ್ರಾಮ ಪಂಚಾಯತ್‌ನ ನಿಕಟಪೂರ್ವ ಉಪಾಧ್ಯಕ್ಷೆ ವಿದ್ಯಾಲಕ್ಷ್ಮಿ ಪ್ರಭು, ಮಾಲೀಕುದ್ದೀನಾರ್ ಮಸೀದಿಯ ಕಾರ್ಯದರ್ಶಿ ಶುಕೂರ್ ಹಾಜಿ, ಪ್ರಮುಖರಾದ ಇಸುಬು ಪೆದಮಲೆ, ಹಮೀದ್ ಎಂ.ಜಿ. ಸಿಟಿ ಸೆಂಟರ್, ಮುಸ್ತಫಾ ಡಬಲ್ ಫೋರ್, ಇಸ್ಮಾಯಿಲ್ ತಂಙಳ್, ಅಶ್ರಫ್ ಹಾಜಿ ಸಿಟಿ, ಹಾರೂನ್ ಅಗ್ನಾಡಿ, ರವೂಫ್ ಹಾಜಿ ಯು.ಟಿ., ಅದ್ದು ಬಜಾರ್, ಮಹಮ್ಮದ್ ಕೆಂಪಿ, ಅಶ್ರಫ್ ಡಿಸೈನ್, ಬಶೀರ್ ಪೆರಿಯಡ್ಕ, ಸಿದ್ದೀಕ್ ನಿರಾಜೆ, ಶುಕೂರ್ ಕುಪ್ಪೆಟ್ಟಿ, ಇಸಾಕ್ ಹಳೆಗೇಟು, ಆಚಿ ಇಬ್ರಾಹಿಂ, ಖಲಂದರ್ ಕೊಳ್ಳೆಜಾಲ್, ರಹಿಮಾನ್ ಪೊರುಂಕಾಜೆ, ಮುನೀರ್ ಎನ್ಮಾಡಿ, ಜಮಾಲ್ ಕೆಂಪಿ, ಸಿದ್ದೀಕ್ ಕೆಂಪಿ, ಫೌಝರ್ ಯು.ಟಿ., ಇಕ್ಬಾಲ್ ಹಳೆಗೇಟು, ಅನೀಸ್ ಗಾಂಧಿಪಾರ್ಕ್, ಶಾನಿಲ್ ಬಸ್ತಿಕ್ಕಾರ್, ಮನ್ಸೂರ್ ಕುದ್ಲೂರ್, ರಫೀಕ್ ಮಾಸ್ಟರ್, ಸಿದ್ದೀಕ್ ಹ್ಯಾಪಿ ಟೈಮ್ಸ್, ಶುಕೂರ್ ಮೇದರಬೆಟ್ಟು, ಇಬ್ರಾಹಿಂ ಸಿಟಿ, ಸಮದ್ ಕೆಂಪಿ, ಲತೀಫ್ ಕುದ್ಲೂರ್, ಫಯಾಝ್ ಯು.ಟಿ., ಮಹಮ್ಮದ್ ಕಡವಿನಬಾಗಿಲು ಮತ್ತಿತರರು ಪಾಲ್ಗೊಂಡಿದ್ದರು. ಸಂಸ್ಥೆಯ ಗೌರವ ಸಲಹೆಗಾರ ಮಹಮ್ಮದ್ ತೌಸೀಫ್ ಯು.ಟಿ. ಮತ್ತು ಇರ್ಷಾದ್ ಯು.ಟಿ. ಹಾಗೂ ಜಲೀಲ್ ಮುಕ್ರಿಯವರು ವಿವಿಧ ಕಾರ್ಯಕ್ರಮಗಳನ್ನು ನಿರ್ವಹಿಸಿದರು.
ಈ ಬಾರಿ ಉಪ್ಪಿನಂಗಡಿ, ಮಠ, ಬೆದ್ರೋಡಿ, ಗೋಳಿತ್ತೊಟ್ಟು, ಪೆರಿಯಡ್ಕ, ಕೆಮ್ಮಾರ, ಕೊಯಿಲ, ಆತೂರು, 34 ನೆಕ್ಕಿಲಾಡಿ, ಶಾಂತಿನಗರ, ಕೋಡಿಂಬಾಡಿ, ಕರ್ವೇಲು, ಬಿಳಿಯೂರು, ಕರಾಯ, ಕಲ್ಲೇರಿ, ತಣ್ಣೀರುಪಂಥ, ಕಳೆಂಜಿಬೈಲು, ತೆಕ್ಕಾರು, ಇಳಂತಿಲ, ಬಂದಾರು, ಅಂಡೆತ್ತಡ್ಕ, ಬಟ್ಲಡ್ಕ ಪ್ರದೇಶದ 624 ಅರ್ಹ ಮನೆಗಳಿಗೆ ತೆರಳಿ ಆಹಾರ ಸಾಮಗ್ರಿಗಳನ್ನೊಳಗೊಂಡ ಕಿಟ್ ಅನ್ನು ವಿತರಿಸಲಾಯಿತು. ಎರಡನೇ ಹಂತವಾಗಿ ಈ ಬಾರಿ 24 ಮಂದಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು.










