







ಪುತ್ತೂರು: ತೋಟದಲ್ಲಿ ಹುಲ್ಲು ಕತ್ತರಿಸುತ್ತಿದ್ದ ವೇಳೆ ಹೃದಯಾಘಾತಕ್ಕೀಡಾಗಿ ದರ್ಬೆತ್ತಡ್ಕ ಸರಕಾರಿ ಶಾಲಾ ಎಸ್ಡಿಎಂಸಿ ಅಧ್ಯಕ್ಷ ಶುಭಕರ ನಾಯಕ್ರವರ ಪತ್ನಿ ನವ್ಯ (45ವ)ರವರು ನಿಧನರಾದ ಘಟನೆ ಫೆ.18ರಂದು ಸಂಜೆ ನಡೆದಿದೆ.


ನವ್ಯರವರು ಫೆ.18ರಂದು ಸಂಜೆ ವೇಳೆ ದರ್ಬೆತ್ತಡ್ಕ ಸರಕಾರಿ ಶಾಲಾ ಆವರಣದಲ್ಲಿರುವ ತೋಟಕ್ಕೆ ಹುಲ್ಲು ಕೊಯ್ಯಲೆಂದು ಬಂದಿದ್ದರು. ಹುಲ್ಲು ಕತ್ತರಿಸುತ್ತಿದ್ದ ವೇಳೆಯೇ ಹೃದಯಾಘಾತಕ್ಕೀಡಾಗಿದ್ದು, ತಕ್ಷಣವೇ ಅವರನ್ನು ಸ್ಥಳೀಯರ ಯುವಕರು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆತಂದಿದ್ದರು. ಈ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.



ಮೃತರು ಪತ್ನಿ ಶುಭಕರ ನಾಯಕ್ ಮತ್ತು ಮೂವರು ಪುತ್ರಿಯರನ್ನು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಅಮ್ಮನನ್ನು ಹುಡುಕಿಕೊಂಡು ಬಂದಿದ್ದರು ಪುತ್ರಿಯರು…!
ನವ್ಯರವರು ಎಂದಿನಂತೆ ಫೆ.18ರಂದು ಕೂಡ ಮನೆಯ ದನಗಳಿಗೆ ಹುಲ್ಲು ತರಲೆಂದು ದರ್ಬೆತ್ತಡ್ಕ ಶಾಲಾ ತೋಟಕ್ಕೆ ಬಂದಿದ್ದರು. ಸಂಜೆ ವೇಳೆ ಗಂಡ ಶುಭಕರ ನಾಯಕ್ರವರು ತನ್ನ ರಿಕ್ಷಾದಲ್ಲಿ ಪತ್ನಿಯನ್ನು ಶಾಲಾ ಬಳಿ ಇಳಿಸಿ ಬಾಡಿಗೆಗೆ ಹೋಗಿದ್ದರು. ಹುಲ್ಲಿಗಾಗಿ ಬಂದಿದ್ದ ಅಮ್ಮ ಬಹಳ ಹೊತ್ತು ಕಳೆದರು ಮನೆಗೆ ಬರಲಿಲ್ಲ ಯಾಕೆ ಎಂದು ಇತ್ತ ಮನೆಯಲ್ಲಿದ್ದ ಮೂವರು ಹೆಣ್ಣು ಮಕ್ಕಳಲ್ಲಿ ಇಬ್ಬರು ಅಮ್ಮನನ್ನು ಹುಡುಕಿಕೊಂಡು ಶಾಲಾ ಬಳಿಗೆ ಬಂದಿದ್ದರು. ಈ ವೇಳೆ ಅಮ್ಮ ಎಲ್ಲೂ ಕಾಣಲಿಲ್ಲ ಎಂದು ತಿರುಗಿ ಮನೆ ಕಡೆ ತೆರಳಿದ್ದರು ಮನೆಗೆ ಬಂದು ನೋಡಿದಾಗ ಅಮ್ಮ ಕಾಣಲಿಲ್ಲ ಮತ್ತೆ ಈ ಮಕ್ಕಳು ಶಾಲಾ ಬಳಿಗೆ ಬಂದಿದ್ದು ಶಾಲಾ ಅಂಗಳದ ಬಳಿ ಅಳುತ್ತಾ ನಿಂತಿದ್ದನ್ನು ಶಾಲಾ ಮೈದಾನದಲ್ಲಿ ಆಟವಾಡುತ್ತಿದ್ದ ಸ್ಥಳೀಯ ಯುವಕರು ನೋಡಿ ವಿಚಾರಿಸಿ ಏನಾಯಿತು ಎಂದು ಪ್ರಶ್ನಿಸಿದಾಗ ಅಮ್ಮ ಹುಲ್ಲಿಗೆ ಬಂದವರು ಮನೆಗೆ ಬಂದಿಲ್ಲ ಎಂದು ತಿಳಿಸಿದ್ದರು. ಈ ವೇಳೆ ಯುವಕರು ಸೇರಿಕೊಂಡು ತೋಟದಲ್ಲಿ ಹುಡುಕಾಡಿದಾಗ ನವ್ಯರವರು ಅಡಿಕೆ ಗಿಡದ ಗುಂಡಿಯಲ್ಲಿ ಬಿದ್ದಿರುವುದು ಕಂಡು ಬಂದಿತ್ತು ತಕ್ಷಣವೇ ಶುಭಕರ ನಾಯಕ್ರವರಿಗೆ ವಿಷಯ ತಿಳಿಸಿದ ಯುವಕರು ನವ್ಯರವರನ್ನು ರಿಕ್ಷಾದಲ್ಲಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆ ತಂದಿದ್ದರು. ಆದರೆ ಈ ವೇಳೆಗಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ.










