







ಯುವ ಸಮೂಹ ಊರಿನ ಅಭಿವೃದ್ಧಿ ಕೆಲಸಗಳಿಗೂ ನೇತೃತ್ವ ವಹಿಸಬೇಕು-ಕೃಷ್ಣಪ್ಪ ರಾಮಕುಂಜ


ಉಪ್ಪಿನಂಗಡಿ: ಊರಿನ ಜನರನ್ನು ಸಂಘಟಿಸುವ ಮತ್ತು ಸಂಪನ್ಮೂಲ ಕ್ರೋಡೀಕರಿಸುವ ವಿಶೇಷ ಶಕ್ತಿ ಯುವ ಸಮೂಹಕ್ಕೆ ಇದೆ. ತಾವುಗಳು ಉತ್ತಮ ಕ್ರೀಡಾಕೂಟ ಆಯೋಜಿಸುವ ರೀತಿಯಲ್ಲಿ ಅದರೊಂದಿಗೆ ತಮ್ಮ ಊರಿನ ಸಮಸ್ಯೆಗಳನ್ನು ಪಟ್ಟಿ ಮಾಡಿಕೊಂಡು ಸರ್ಕಾರದ ವತಿಯಿಂದ ಅದನ್ನು ಪಡೆಯುವಲ್ಲಿಯೂ ನೇತೃತ್ವ ವಹಿಸಬೇಕು, ತನ್ಮೂಲಕ ಊರಿನ ಅಭಿವೃದ್ಧಿಯಲ್ಲಿಯೂ ತಾವುಗಳು ಕೈಜೋಡಿಸಬೇಕು ಎಂದು ಕೆ.ಪಿ.ಸಿ.ಸಿ. ಸಂಯೋಜಕ ಜಿ. ಕೃಷ್ಣಪ್ಪ ರಾಮಕುಂಜ ಹೇಳಿದರು.



ಅವರು ಫೆ.15ರಂದು ಕೆಮ್ಮಾರದಲ್ಲಿ ಯುನೈಟೆಡ್ ಎಫ್.ಸಿ. ಕೆಮ್ಮಾರ ವತಿಯಿಂದ 2 ದಿನಗಳ ಕಾಲ ನಡೆದ ಕ್ರಿಕೆಟ್ ಪಂದ್ಯಾಟ ಸಂದರ್ಭದಲ್ಲಿ ಹಮ್ಮಿಕೊಳ್ಳಲಾದ ಶಿಕ್ಷಣ ಮತ್ತು ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಸಾಧಕರನ್ನು ಸನ್ಮಾನಿಸಿ ಮಾತನಾಡಿದರು. ಕೆ.ಪಿ.ಸಿ.ಸಿ. ಕಾನೂನು ಘಟಕದ ಜಂಟಿ ಕಾರ್ಯದರ್ಶಿ, ವಕೀಲ ಖಲಂದರ್ ಕೊಯಿಲ ಮಾತನಾಡಿ ಗ್ರಾಮೀಣ ಪ್ರದೇಶದಲ್ಲಿ ಬಹಳಷ್ಟು ಪ್ರತಿಭಾವಂತ ಪ್ರತಿಭೆಗಳಿವೆ, ಅವರನ್ನು ಗುರುತಿಸಿ, ಅವರಿಗೆ ಪ್ರೋತ್ಸಾಹ ನೀಡುವ ಕೆಲಸ ಯುವ ಸಂಘಟನೆಗಳಿಂದ ಆಗಬೇಕಾಗಿದ್ದು, ಇಲ್ಲಿನ ಯುವಕರ ಕೆಲಸ ಪ್ರಶಂಸನೀಯವಾಗಿದೆ ಎಂದರು.
ಸಾಧಕರಿಗೆ ಸನ್ಮಾನ:
ಸಮಾರಂಭದಲ್ಲಿ ಕೆಮ್ಮಾರದಂತಹ ತೀರಾ ಗ್ರಾಮೀಣ ಪ್ರದೇಶದಿಂದ ವೈದ್ಯಕೀಯ ಶಿಕ್ಷಣ ಪಡೆಯುತ್ತಿರುವ ಆಯಿಷಾ ಫಿಝ, ಫಾತಿಮತ್ ಶ್ರೀಯ, ಕಳೆದ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ವಿಶಿಷ್ಠ ಶ್ರೇಣಿಯಲ್ಲಿ ತೇರ್ಗಡೆ ಹೊಂದಿರುವ ಮಹಮ್ಮದ್ ಶೆಮಿ, 14 ವರ್ಷದೊಳಗಿನ ವಿದ್ಯಾರ್ಥಿಗಳ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟಕ್ಕೆ ಆಯ್ಕೆಯಾಗಿರುವ ನಿಶಾದ್ ಸುಲೈಮಾನ್ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಮಾರಂಭದಲ್ಲಿ ಕಡಬ ಪಟ್ಟಣ ಪಂಚಾಯಿತಿ ಸದಸ್ಯ ಫಝಲ್ ಕಡಬ, ಕೆಮ್ಮಾರ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಅಝೀಜ್ ಬಿ.ಕೆ., ಸಜ್ಜದ್ ಆತೂರು, ದೇವಿಪ್ರಸಾದ್ ನೀರಾಜೆ, ರಾಮಣ್ಣ ಕೆಮ್ಮಾರ, ನವಾಝ್ ಪುತ್ತೂರು, ಝಕರಿಯಾ ತೋಟ, ಯುನೈಟೆಡ್ ಎಫ್.ಸಿ. ಸಂಘಟನೆಯ ಪದಾಧಿಕಾರಿಗಳಾದ ರಿಯಾಝ್, ಶರೀಫ್ ಮಜಲು, ಜಮಾಲುದ್ದೀನ್ ಎಸ್.ಪಿ., ಲತೀಫ್ ಗಂಡಿಬಾಗಿಲು, ಮನ್ಸೂರ್ ಕೊಯಿಲ, ಜಲೀಲ್ ಕೆಮ್ಮಾರ, ಶೌಕತ್ ಕೆಮ್ಮಾರ, ನಝೀರ್, ಸಂಶುದ್ದೀನ್ ಕೆಮ್ಮಾರ ಮತ್ತಿತರರು ಉಪಸ್ಥಿತರಿದ್ದರು. ಜುನೈದ್ ಕೆಮ್ಮಾರ ಸ್ವಾಗತಿಸಿದರು. ಮುಸ್ತಫ ಕಾರ್ಯಕ್ರಮ ನಿರೂಪಿಸಿದರು.










