ಶಿಬಾಜೆ; ದಲಿತ ಯುವಕ ಶ್ರೀಧರ ಕೊಲೆ ಪ್ರಕರಣ: ಮರು ತನಿಖೆಗೆ ಎಸ್‌ಐಟಿ ರಚನೆ

0

ನೆಲ್ಯಾಡಿ: ನಾಲ್ಕು ವರ್ಷದ ಹಿಂದೆ ಬೆಳ್ತಂಗಡಿ ತಾಲೂಕಿನ ಶಿಬಾಜೆಯಲ್ಲಿ ನಡೆದ ಶ್ರೀಧರ ಎಂಬ ಯುವಕನ ಕೊಲೆ ಪ್ರಕರಣದ ಮರು ತನಿಖೆಗೆ ರಾಜ್ಯ ಸರಕಾರ ವಿಶೇಷ ತನಿಖಾ ತಂಡ(ಎಸ್‌ಐಟಿ) ರಚಿಸಿ ಆದೇಶಿಸಿದೆ.


2022ರ ಡಿ.18ರಂದು ಶಿಬಾಜೆಯಲ್ಲಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಿರುಗುಂದ ದಿನ್ನಕರೆ ನಿವಾಸಿ ದಿ| ಬಾಬು ಎಂಬವರ ಪುತ್ರ ಶ್ರೀಧರ(36ವ.) ಎಂಬವರನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ಪ್ರಕರಣದಲ್ಲಿ ಹಲವಾರು ಪ್ರಭಾವಿಗಳು ಭಾಗಿಯಾಗಿದ್ದಾರೆ ಎಂದು ಆರೋಪಗಳು ಕೇಳಿಬಂದಿದ್ದವು. ಪ್ರಕರಣ ನಿಗೂಢವಾಗುತ್ತಿದ್ದಂತೆ ಬೆಳ್ತಂಗಡಿ ಮತ್ತು ಸುತ್ತಮುತ್ತಲಿನ ದಲಿತ ಸಂಘಟನೆಯವರು ಹೋರಾಟ ಮಾಡಿ ತನಿಖೆಗೆ ಒತ್ತಾಯಿಸಿದ್ದರು. ಈ ಮಧ್ಯೆ ಪೊಲೀಸರ ತನಿಖೆ ತೃಪ್ತಿಕರವಾಗಿಲ್ಲವೆಂದು ಆರೋಪಿಸಿ ಹರೀಶ್ ಮುಗೇರ ಎಂಬವರು ರಾಜ್ಯ ಉಚ್ಛ ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಈ ಪ್ರಕರಣವನ್ನು ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸುವಂತೆ ಆದೇಶ ನೀಡಿತ್ತು. ಇದೀಗ ನ್ಯಾಯಾಲಯದ ನಿರ್ದೇಶನದಂತೆ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಡಾ.ಎಂ.ಎ.ಸಲೀಂ ಅವರು ಅಽಕೃತವಾಗಿ ಎಸ್‌ಐಟಿ ರಚಿಸಿ ಆದೇಶ ಹೊರಡಿಸಿದ್ದಾರೆ. ಬೆಂಗಳೂರು ಕೇಂದ್ರ ವಲಯದ ಐಜಿಪಿ ಲಾಭೂ ರಾಮ್ ಅವರ ನೇತೃತ್ವದಲ್ಲಿ ತಂಡ ರಚನೆಯಾಗಿದ್ದು, ತಂಡದಲ್ಲಿ ಉಡುಪಿ ಜಿಲ್ಲಾ ಎಸ್‌ಪಿ ಹರಿರಾಮ್ ಶಂಕರ್ ಹಾಗೂ ಡಿವೈಎಸ್‌ಪಿ ಎಂ.ಆರ್.ಹರೀಶ್ ಅವರನ್ನು ಸೇರಿಸಲಾಗಿದೆ.‌


ಪ್ರಕರಣದ ಹಿನ್ನೆಲೆ;
ಶಿಬಾಜೆ ಗ್ರಾಮದ ಗುತ್ತುಮನೆ ಎಂಬಲ್ಲಿರುವ ಎ.ಸಿ.ಕುರಿಯನ್ ಎಂಬವರ ಮಾಲಿಕತ್ವದ ಸಾರ ಫಾರ್ಮ್‌ನಲ್ಲಿ ಕೆಲಸಕ್ಕಿದ್ದ ಶ್ರೀಧರ(36ವ.)ಎಂಬವರು 2022ರ ಡಿ.18ರಂದು ತೋಟದಲ್ಲಿ ಅರೆಬೆತ್ತಲೆಯಾಗಿ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಸಂಬಂಧ ಇದೇ ಫಾರ್ಮ್‌ನಲ್ಲಿ ಮೇಲ್ವಿಚಾರಕರಾಗಿದ್ದ ಹರೀಶ್ ಮೊಗೇರ ಎಂಬವರು ಧರ್ಮಸ್ಥಳ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಡಿ.17ರಂದು ಸಂಜೆ 5.30ಕ್ಕೆ ತೋಟದ ಆಫೀಸ್‌ನ ಎದುರು ಇರುವ ಸಾರ್ವಜನಿಕ ಡಾಮಾರು ರಸ್ತೆಯ ಬದಿಯಲ್ಲಿ ಜೋರಾಗಿ ಬೊಬ್ಬೆ ಕೇಳಿ ಹೊರಗೆ ಬಂದು ನೋಡಿದಾಗ ಶ್ರೀಧರ ಎಂಬವರು ಅಂಗಾತ ಬಿದ್ದುಕೊಂಡಿದ್ದು, ತಿಮ್ಮಪ್ಪ ಪೂಜಾರಿ, ಲಕ್ಷ್ಮಣ ಪೂಜಾರಿ, ಕೆ.ಕೆ.ಆನಂದ ಗೌಡ ಹಾಗೂ ಮಹೇಶ್ ಎಂಬವರು ಅವರನ್ನು ಕೈಯಿಂದ ಹೊಡೆಯುತ್ತಿದ್ದರು. ಅಷ್ಟರದಲ್ಲಿ ಅದೇ ತೋಟದಲ್ಲಿ ಕೆಲಸಕ್ಕೆ ಇದ್ದ ಟಿ.ಸಿ.ಅಬ್ರಹಾಂ ಮತ್ತು ಪರಮೇಶ್ವರ ಗೌಡರವರು ಅಲ್ಲಿಗೆ ಬರುವುದನ್ನು ನೋಡಿದ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ನಂತರ ಶ್ರೀಧರ ಅವರನ್ನು ಉಪಚರಿಸಿ ತೋಟದ ಮನೆಗೆ ಕರೆದುಕೊಂಡು ಬಂದು ಊಟ ನೀಡಿ ಆತನನ್ನು ರಾತ್ರಿ ಉಳಿದುಕೊಳ್ಳುವ ವಿಶ್ರಾಂತಿ ಕೊಠಡಿಗೆ ಕಳುಹಿಸಿಕೊಟ್ಟಿದ್ದೇವೆ. ಮರುದಿನ ಡಿ.18ರಂದು ಬೆಳಿಗ್ಗೆ 6.30ಕ್ಕೆ ವಿಶ್ರಾಂತಿಯಲ್ಲಿದ್ದ ಶ್ರೀಧರರನ್ನು ಕೂಗಿ ಕರೆದಾಗ ಯಾವುದೇ ರೀತಿಯ ಪ್ರತಿಕ್ರಿಯೆ ಬರಲಿಲ್ಲ. ಒಳಹೋಗಿ ನೋಡಿದಾಗ ಶ್ರೀಧರರವರು ವಿಶ್ರಾಂತಿ ಕೊಠಡಿಯಲ್ಲಿ ಇರಲಿಲ್ಲ. ಸುತ್ತಮುತ್ತಲು ಹುಡುಕಾಡಿದಾಗ ಕೊಠಡಿಯಿಂದ ಸುಮಾರು 250-300 ಮೀ.ದೂರದಲ್ಲಿ ಅಡಿಕೆ ತೊಟದಲ್ಲಿ ಬೆತ್ತಲೆಯಾಗಿ ಅಂಗಾತನೆ ಬಿದ್ದುಕೊಂಡಿರುವುದು ಕಂಡು ಬಂದಿತ್ತು. ನಂತರ ತೋಟದ ಮಾಲೀಕರಿಗೆ ದೂರವಾಣಿ ಮೂಲಕ ತಿಳಿಸಿ ತೋಟವನ್ನು ಪರಿಶೀಲಿಸಿದಾಗ ತೋಟಕ್ಕೆ ಅಳವಡಿಸಿದ ತಂತಿ ಬೇಲಿಯನ್ನು ಕತ್ತರಿಸಿರುವುದು ಪತ್ತೆಯಾಗಿದೆ. ಆರೋಪಿಗಳು ವಿಶ್ರಾಂತಿ ಕೊಠಡಿಯ ಬಳಿ ಬಂದು ಶ್ರೀಧರರನ್ನು ಕೊಲೆ ಮಾಡಿ ತೋಟದ ಮಧ್ಯೆ ಹಾಕಿ ಆತನ ಬಳಿ ಇದ್ದ 9500 ರೂ.ದೋಚಿಕೊಂಡು ಹೋಗಿದ್ದಾರೆ ಎಂದು ದೂರಿನಲ್ಲಿ ಆಪಾದಿಸಿದ್ದರು. ಧರ್ಮಸ್ಥಳ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿತ್ತು.


ದಲಿತ ಸಂಘಟನೆಗಳಿಂದ ಪ್ರತಿಭಟನೆ;
ಶ್ರೀಧರ ಕೊಲೆ ಪ್ರಕರಣದ ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ ವಾದ ತಾಲೂಕು ಶಾಖೆ ಬೆಳ್ತಂಗಡಿ ಮತ್ತು ದ.ಕ.ಜಿಲ್ಲೆಯ ಸಮಸ್ತ ದಲಿತ ಸಂಘಟನೆಗಳ ನೇತೃತ್ವದಲ್ಲಿ 2022ರ ಜ.23ರಂದು ಧರ್ಮಸ್ಥಳ ಪೊಲೀಸ್ ಠಾಣೆ ಚಲೋ ಪ್ರತಿಭಟನೆ ನಡೆಸಲಾಗಿತ್ತು. ನೇತ್ರಾವತಿಯಿಂದ ಧರ್ಮಸ್ಥಳ ಪೊಲೀಸ್ ಠಾಣೆಯ ತನಕ ಮೆರವಣಿಗೆ ಸಹ ನಡೆಸಲಾಗಿತ್ತು.


ಡಿವೈಎಸ್‌ಪಿ ತನಿಖೆ;
ಪ್ರಕರಣ ತನಿಖೆಯನ್ನು ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ಅವರು ನಡೆಸಿದ್ದರು. ಮೃತ ಶ್ರೀಧರ ಅವರು ವಿಶ್ರಾಂತಿ ಪಡೆಯುತ್ತಿದ್ದ ಕೊಠಡಿಯಲ್ಲಿ ಪತ್ತೆಯಾದ ಮದ್ಯದ ಬಾಟಲಿಯಲ್ಲಿ ಕಡು ನೀಲಿ ಬಣ್ಣದ ವಿಷದ ಅಂಶವಿದ್ದು ಮತ್ತು ಅಲ್ಲಿ ವಾಂತಿ ಮಾಡಿದ ಪದಾರ್ಥದ ಅಂಶದಲ್ಲಿ ವಿಷದ ಅಂಶವಿದ್ದುದರಿಂದ ಈ ಮದ್ಯದೊಂದಿಗೆ ವಿಷ ಕುಡಿದ ಕಾರಣ ಆತನು ಮೇಲಿಂದ ಬಿದ್ದು ಹೊರಳಾಟ ನಡೆಸಿದಾಗ ತಲೆಯ ಭಾಗಕ್ಕೆ ಗಾಯವಾಗಿರುವ ಸಾಧ್ಯತೆ ಇದೆ. ಈ ಪ್ರಕರಣದಲ್ಲಿ ಹೆಸರಿಸಲಾಗಿರುವ ನಾಲ್ಕು ಜನ ಆರೋಪಿಗಳು ಶ್ರೀಧರನನ್ನು ಕೊಲೆ ಮಾಡಿ ಹಣ ದೋಚಿರುತ್ತಾರೆಂದು ಸಾಬೀತು ಪಡಿಸುವತೆ ಸಾಕ್ಷ್ಯಾಧಾರವಿಲ್ಲವಾಗಿದ್ದುದರಿಂದ ಸದ್ರಿ ಪ್ರಕರಣ ದಾಖಲಾದ ಸಮಯ ಹಾಕಿದ ಕಲಂ: 3022, 392, ಬಾ.ದಂ.ಸ.ಮತ್ತು ಕಲಂ 3(2)(ವಿ), ಎಸ್‌ಸಿ/ಎಸ್.ಟಿ.ಕಾಯ್ದೆ 2025 ಕೈಬಿಟ್ಟು ಕಲಂ; 323 ಜೊತೆಗೆ 34 ಐಪಿಸಿ ಮತ್ತು ಕಲಂ03(2)(ವಿಎ), ಎಸ್‌ಸಿ/ಎಸ್‌ಟಿ ಕಾಯ್ದೆ 2015ರಂತೆ ಪ್ರಕರಣದ ತನಿಖೆ ಮುಂದುವರಿಸುತ್ತಿರುವುದಾಗಿ ಜ.19, 2023ರಂದು ಬಂಟ್ವಾಳ ಉಪವಿಭಾಗದ ಡಿವೈಎಸ್‌ಪಿ ಅವರು ನ್ಯಾಯಾಲಯಕ್ಕೆ ವರದಿ ನೀಡಿದ್ದರು. ಪೊಲೀಸ್ ತನಿಖೆ ತೃಪ್ತಿಕರವಾಗಿಲ್ಲ ಎಂದು ಆರೋಪಿಸಿ ದೂರುದಾರ ಹರೀಶ್ ಮೊಗೇರ ಅವರು ಹೈಕೋರ್ಟ್ ಮೊರೆ ಹೋಗಿದ್ದರು.

4 ತಿಂಗಳೊಳಗೆ ವರದಿ ನೀಡುವಂತೆ ಆದೇಶ
ಪ್ರಕರಣದ ಮರು ತನಿಖೆ ಮಾಡಲು ವಿಶೇಷ ತನಿಖಾ ತಂಡವನ್ನು ರಚಿಸಿ 4 ತಿಂಗಳೊಳಗಾಗಿ ಮರು ತನಿಖೆ ಪೂರ್ಣಗೊಳಿಸಿ ವರದಿ ನೀಡುವಂತೆ ಉಚ್ಚ ನ್ಯಾಯಾಲಯ 9-9-2025ರಂದು ಆದೇಶ ನೀಡಿತ್ತು. ಈ ಆದೇಶದಂತೆ ಮರು ತನಿಖೆಗೆ ಬೆಂಗಳೂರು ಕೇಂದ್ರ ವಲಯ ಐಜಿಪಿ ಲಾಭೂ ರಾಮ್, ಉಡುಪಿ ಜಿಲ್ಲಾ ಎಸ್‌ಪಿ ಹರಿರಾಮ್ ಶಂಕರ್ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೆನ್ ಪೊಲೀಸ್ ಠಾಣೆ ಡಿವೈಎಸ್‌ಪಿ ಎಂ.ಆರ್.ಹರೀಶ್ ಅವರನ್ನೊಳಗೊಂಡ ವಿಶೇಷ ತನಿಖಾ ತಂಡವನ್ನು ರಚಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ| ಎಂ.ಎ.ಸಲೀಂ ಅವರು 20-2-2026ರಂದು ಆದೇಶಿಸಿದ್ದಾರೆ.


5 ತಿಂಗಳು ಕಳೆದರೂ ರಚನೆಯಾಗದಿದ್ದ ಎಸ್‌ಐಟಿ-ಹೈಕೋರ್ಟ್ ಅಸಮಾಧಾನ
ಶ್ರೀಧರ್ ಅವರ ಸಾವಿನ ಪ್ರಕರಣದ ಮರು ತನಿಖೆಗೆ ವಿಶೇಷ ತನಿಖಾ ತಂಡ ರಚನೆ ಮಾಡುವಂತೆ ಹೈಕೋರ್ಟ್ ಆದೇಶ ಹೊರಡಿಸಿ ಐದು ತಿಂಗಳು ಕಳೆದರೂ ವಿಶೇಷ ತನಿಖಾ ತಂಡ (ಎಸ್‌ಐಟಿ)ರಚಿಸಲಾಗಿಲ್ಲ ಎಂದು ಹರೀಶ್ ಮುಗೇರ ಅವರು ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದರು.ಅರ್ಜಿಯನ್ನು ಫೆ.20ರಂದು ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ,ಈ ಕುರಿತು ವಿವರಣೆ ನೀಡಲು ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ ಫೆ.21ರಂದು ಮಧ್ಯಾಹ್ನ 2.30ಕ್ಕೆ ಖುದ್ದು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು ನಿರ್ದೇಶಿಸಿದೆ.ಈ ನಡುವೆ ಸರ್ಕಾರ ಎಸ್‌ಐಟಿ ರಚನೆ ಮಾಡಿ ಆದೇಶಿಸಿದೆ.

LEAVE A REPLY

Please enter your comment!
Please enter your name here