ಉಪ್ಪಿನಂಗಡಿ ಭಾಗದ ಈ ಎಂಟು ಗ್ರಾಮಗಳಲ್ಲಿ ಇನ್ನು ವಿದ್ಯುತ್ ಕಣ್ಣುಮುಚ್ಚಾಲೆ ಇಲ್ಲ – ಅಲಂಕಾರ್‌ನಲ್ಲಿ 110 ಕೆ ವಿ ವಿದ್ಯುತ್ ಉಪಕೇಂದ್ರ ಸ್ಥಾಪನೆ ಶೀಘ್ರ: ಶಾಸಕ ಅಶೋಕ್ ರೈ

0

ಪುತ್ತೂರು: ಉಪ್ಪಿನಂಗಡಿ ಹೋಬಳಿ ಮಟ್ಟದ ಎಲ್ಲಾ ಗ್ರಾಮಗಳಿಗೆ ಇನ್ನು ಮುಂದೆ ವಿದ್ಯುತ್ ಸಮಸ್ಯೆ ಇರುವುದಿಲ್ಲ, ಈ ಭಾಗದ ಜನರ ಬಹುಕಾಲದ ಬೇಡಿಕೆಯಾಗಿದ್ದ 110 ಕೆ ವಿ ವಿದ್ಯುತ್ ಉಪಕೇಂದ್ರಕ್ಕೆ ಶಿಲಾನ್ಯಾಸ ನಡೆದಿದ್ದು ಮುಂದಿನ ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಂಡಲ್ಲಿ ಈ ಭಾಗದ ಯಾವುದೇ ಗ್ರಾಮದಲ್ಲೂ ವಿದ್ಯುತ್ ಕಣ್ಣಮುಚ್ಚಾಲೆ ಇಲ್ಲದೆ ಪೂರ್ಣ ವೋಲ್ಟೇಜ್ ಲಭ್ಯವಾಗಲಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ಅವರು ನೆಕ್ಕಿಲಾಡಿ ಗ್ರಾಮದ ಕರ್ವೆಲ್‌ನಲ್ಲಿ ನೂತನವಾಗಿ ನಿರ್ಮಾಣವಾಗಲಿರುವ 110 ಕೆ ವಿ ವಿದ್ಯುತ್ ಉಪಕೇಂದ್ರಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು.


ಕರ್ವೆಲ್‌ನಲ್ಲಿ ವಿದ್ಯುತ್ ಉಪಕೇಂದ್ರ ನಿರ್ಮಾಣವಾಗಬೇಕೆಂದು ಈ ಭಾಗದ ಏಳೆಂಟು ಗ್ರಾಮದ ಜನರು ಕಳೆದ 15 ವರ್ಷಗಳಿಂದ ನಿರಂತರ ಹೋರಾಟ ಪ್ರಯತ್ನವನ್ನು ಮಾಡಿದ್ದರು, ಕೊನೆಗೆ ಸುಮ್ಮನಾಗಿದ್ದರು. ಇಲ್ಲಿನ ಉಪಕೇಂದ್ರ ನಿರ್ಮಾಣದ ಬಗ್ಗೆ ಶಾಸಕ ಅಶೋಕ್ ರೈ ಅವರಲ್ಲಿ ಮನವಿಮಾಡಿದ್ದರು, ಜನರ ಮನವಿಯನ್ನು ಪರಗಣಿಸಿದ ಶಾಸಕರು ನಿರಂತರ ಪ್ರಯತ್ನದ ಮೂಲಕ ಉಪಕೇಂದ್ರ ಸ್ಥಾಪನೆಗೆ ಸರಕಾರದಿಂದ 32 ಕೋಟಿ ರೂ ಅನುದಾನ ಬಿಡುಗಡೆಯಾಗಿತ್ತು.

ಇನ್ನು ವಿದ್ಯುತ್ ಕಣ್ಣಮುಚ್ಚಾಲೆ ಇಲ್ಲ
110 ಕೆ ವಿ ವಿದ್ಯುತ್ ಉಪಕೇಂದ್ರ ನಿರ್ಮಾಣವಾದ ಬಳಿಕ ಉಪ್ಪಿನಂಗಡಿ, ಬಜತ್ತೂರು, ನೆಕ್ಕಿಲಾಡಿ, ರಾಮಕುಂಜ, ಕೊಯಿಲ, ಕೋಡಿಂಬಾಡಿ, ಬೆಳ್ಳಿಪ್ಪಾಡಿ, ಪೆರ್ನೆ ಸೇರಿದಂತೆ ಸುತ್ತಮುತ್ತಲ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದೇ ಇಲ್ಲ. ಮಳೆ ಗಾಳಿ ಬಂದು ವಿದ್ಯುತ್ ಕಂಬ ಮುರಿದು ಏನಾದರೂ ಅನಾಹುತವಾದರೆ ಹೊರತು ಉಳಿದ ದಿನಗಳಲ್ಲಿ ದಿನ ೨೪ ಗಂಠೆಯೂ ವಿದ್ಯುತ್ ನಿರಂತರವಾಗಿರುತ್ತದೆ ಎಂದು ಶಾಸಕರು ತಿಳಿಸಿದರು.

ಕೇವಲ ರಸ್ತೆ ನಿರ್ಮಾಣ ಮಾಡುವುದು ಅಭಿವೃದ್ದಿಯಲ್ಲ
ಕೇವಲ ರಸ್ತೆ, ಸೇತುವೆ ನಿರ್ಮಾಣಮಾಡುವುದು ಅಭಿವೃದ್ದಿಯಲ್ಲ, ಜನರ ಮುಖ್ಯ ಬೇಡಿಕೆಯಾದ ವಿದ್ಯುತ್ ನ್ನು ಒದಗಿಸುವುದು ಅಭಿವೃದ್ದಿಯ ಒಂದು ಘಟ್ಟವಾಗಿದೆ ಎಂದು ಹೇಳಿದ ಶಾಸಕರು ಈ ಭಾಗದ ಜನರು ಉಪಕೇಂದ್ರಕ್ಕಾಗಿ 15 ವರ್ಷಗಳಿಂದ ಕಾಯುತ್ತಿದ್ದರು. ಆದರೆ ಇದಕ್ಕೆ ಈಗ ಕಾಲ ಕೂಡಿಬಂದಿದೆ. ಜನರ ಬೇಡಿಕೆಗಳಿಗೆ ಸ್ಪಂದನೆ ಮಾಡುವ ಮೂಲಕ ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಜೋಡಿಸಲಾಗುವುದು ಎಂದು ಹೇಳಿದ ಶಾಸಕರು ಬಹುಜನರ ಬೇಡಿಕೆಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು ಎಂದು ಹೇಳಿದರು.

ಅಲಂಕಾರಿನಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆ
ಮಾಡಾವಿನಿಂದ ಅಲಂಕಾರ್‌ಗೆ ವಿದ್ಯುತ್ ವಾಹನ ನಿರ್ಮಾಣ ಮಾಡುವಲ್ಲಿ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಹಲವು ವರ್ಷಗಳಿಂದ ಇಲ್ಲಿನ 110 ಕೆ ವಿ ವಿದ್ಯುತ್ ಉಪಕೇಂದ್ರ ನಿರ್ಮಾಣಕ್ಕೆ ಸಾಧ್ಯವಾಗಿರಲಿಲ್ಲ. ಮಾಡಾವು ವರೆಗೆ ಕಳೆದ ಹಲವು ವರ್ಷಗಳ ಹಿಂದೆ ಲೈನ್ ಎಳೆಯಲಾಗಿದೆ. ಆದರೆ ಅಲ್ಲಿಂದ ಅಲಂಕಾರಿಗೆ ಸಂಂಪರ್ಕ ಮಾಡುವಲ್ಲಿ ಕೆಲವರಿಂದ ವಿರೋಧ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಯೋಜನೆ ಮೂಲೆಗುಂಪಾಗಿದೆ. ಮುಂದಿನ ಒಂದು ವರ್ಷದೊಳಳಗೆ ಅಲಂಕಾರಿನಲ್ಲಿ 110 ಕೆ ವಿ ವಿದ್ಯುತ್ ಉಪಕೇಂದ್ರವನ್ನು ಪ್ರಾರಂಭ ಮಾಡುವ ಮೂಲಕ ಆ ಭಾಗದ ಜನರಿಗೂ ನಿರಂತರ ವಿದ್ಯುತ್ ನೀಡಲಾಗುವುದು, ಈಗಾಗಲೇ ಇದಕ್ಕೆ ಜಾಗವನ್ನು ಕಾಯ್ದಿರಿಸಲಾಗಿದೆ ಎಂದು ಶಾಸಕರು ಹೇಳಿದರು.

ಜಲಸಿರಿಗೆ ಐಸಿರಿ ಈ ಯೋಜನೆ
ಉಪ್ಪಿನಂಗಡಿಯಿಂದ ಪುತ್ತೂರಿಗೆ ಕುಡಿಯುವ ನೀರು ಸರಬರಾಜು ಆಗುವಲ್ಲಿ ವಿದ್ಯುತ್ ಕೊರತೆ ಉಂಟಾಗಿತ್ತು. ಕರ್ವೆಲ್ ಉಪ ಕೇಂದ್ರ ಪ್ರಾರಂಭವಾದ ಬಳಿಕ ದಿನದ 24 ಗಂಟೆಯೂ ನಿರಂತರ ವಿದ್ಯುತ್ ಲಭ್ಯವಾಗುವ ಕಾರಣ ಕುಡಿಯುವ ನೀರಿನ ಯೋಜನೆ ಜಲಸಿರಿಗೂ ಐಸಿರಿ ಬಂದಂತಾಗುತ್ತದೆ. ಮುಂದೆ ಪುತ್ತೂರು ನಗರಕ್ಕೂ ನಿರಂತರ ಕುಟಿಯುವ ನೀರು ಪೂರೈಕೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸಲಿದೆ ಎಂದು ಶಾಕರು ಹೇಳಿದರು.


ಕಾರ್ಯಕ್ರಮದಲ್ಲಿ ಮಂಗಳೂರು ಕೆಪಿಟಿಸಿಎಲ್ ಅಧಿಕಾರಿಗಳಾದ ಚೈತನ್ಯ, ಶ್ರೀನಾಥ್, ಮೆಸ್ಕಾಂ ಇ ಇ ರಾಮಚಂಧ್ರ, ಅವಿನಾಶ್, ನಿತಿನ್, ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ ಶೆಟ್ಟಿ, ಬ್ಲಾಕ್ ಅಧ್ಯಕ್ಷ ಯು ಟಿ ತೌಸೀಫ್, ಕಾಂಗ್ರೆಸ್ ಪಕ್ಷದ ಮುಖಂಡರಾದ ನಝೀರ್ ಮಠ, ಅನಿಮಿನೇಜಸ್, ಡಾ. ರಘು, ವಿಕ್ರಂ ಶೆಟ್ಟಿ, ಗಣೇಶ್ ರಾಜ್, ತನಿಯಪ್ಪ ಪೂಜಾರಿ, ಮಿತ್ರದಾಸ್ ರೈ, ಕಬೀರ್ ಕರ‍್ವೆಲ್, ಅಸ್ಕರ್ ಆಲಿ, ಅಬ್ದುಲ್ ಶಾಲಿಮಾರ್ ಮೊದಲಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here