ಬೆಟ್ಟಂಪಾಡಿ ಗ್ರಾ,ಪಂ. ಮಾಜಿ ಅಧ್ಯಕ್ಷ, ಹಿರಿಯ ಯಕ್ಷಗಾನ ಕಲಾವಿದ ಬಿ. ವೆಂಕಟ್ರಾವ್‌ ನಿಧನ

0

ಬೆಟ್ಟಂಪಾಡಿ: ಬೆಟ್ಟಂಪಾಡಿ ಗ್ರಾಮ ಪಂಚಾಯತ್‌ ಮಾಜಿ ಅಧ್ಯಕ್ಷ, ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಮಾಜಿ ಅಧ್ಯಕ್ಷ, ಹಿರಿಯ ಹವ್ಯಾಸಿ ಯಕ್ಷಗಾನ ಕಲಾವಿದ ಬೆಟ್ಟಂಪಾಡಿ ʻದೇವಿಕೃಪಾʼ ಬಿ. ವೆಂಕಟ್ರಾವ್‌ (86ವ.) ರವರು ಅಲ್ಪಕಾಲದ ಅಸೌಖ್ಯದಿಂದ ಮಾ.2 ರಂದು ಮುಂಜಾನೆ ವಿಧಿವಶರಾದರು. ಮೃತರ ಅಂತ್ಯ ಸಂಸ್ಕಾರ ಇಂದು (ಮಾರ್ಚ್ 2) ಬೆಳಿಗ್ಗೆ 11.30 ರ ಸುಮಾರಿಗೆ ಬೆಟ್ಟಪಾಡಿ ಮನೆಯಲ್ಲಿ ನಡೆಯಲಿದೆ.


ಬೆಟ್ಟಂಪಾಡಿ ಗ್ರಾಮದ ಪ್ರಸಿಧ್ಧ ಸ್ನಾನಿಕ ಮನೆತನದ ಸುಬ್ರಾಯ ಮತ್ತು ಶ್ರೀಮತಿ ಗಿರಿಜಮ್ಮ ದಂಪತಿಯ ಪುತ್ರರಾಗಿ 1941 ರಲ್ಲಿ ಜನಿಸಿದ ಬಿ. ವೆಂಕಟ್ರಾವ್‌ ರವರು ತನ್ನ ವಿದ್ಯಾಭ್ಯಾಸದ ಬಳಿಕ 1960-63ರ ತನಕ ಪಾಣಾಜೆ-ಪುತ್ತೂರು ಮಾರ್ಗದ ಏಕೈಕ ಬಸ್‌ ಶಂಕರ ವಿಠಲ್ ಬಸ್ಸಿನಲ್ಲಿ ಏಜೆಂಟರಾಗಿಯೂ 1964 ರಿಂದ 1989ರ ವರೆಗೆ ಅದೇ ಕಂಪೆನಿಯಲ್ಲಿ ನಿರ್ವಾಹಕರಾಗಿಯೂ ಕರ್ತವ್ಯ  ನಿರ್ವಹಿಸಿದ್ದರು. 1990 ರಲ್ಲಿ ಸೇವೆಯಿಂದ ನಿವೃತ್ತರಾಗಿ ಕೃಷಿಯೊಂದಿಗೆ ಗ್ರಾಮದಲ್ಲಿ ಸಕ್ರೀಯವಾಗಿರುವ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾ ಸಂಘ, ಶ್ರೀ ಮಹಾಲಿಂಗೇಶ್ವರ ಭಜನಾ ಸಂಘ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ನಗರ ಭಜನೆ, ಇವುಗಳಲ್ಲಿ ಸದಸ್ಯರಾಗಿ ಅಧ್ಯಕ್ಷರಾಗಿ, ಕಾರ್ಯದರ್ಶಿಗಳಾಗಿ ಸೇವೆ ಮಾಡಿ ದುಡಿದ ಅನುಭವ ಮತ್ತು ಇರ್ದೆ ಬೆಟ್ಟಂಪಾಡಿ ಪಂಚಾಯತ್ ಗೆ ಒಳಪಟ್ಟ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಸಮಿತಿಗಳಲ್ಲಿ  ಸೇವೆ ಸಲ್ಲಿಸಿದ್ದಾರೆ. ಬೆಟ್ಟಂಪಾಡಿ ಜಲಾನಯನ ಸಂಘದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.


ಬೆಟ್ಟಂಪಾಡಿ ಗ್ರಾ.ಪಂ. ಅಧ್ಯಕ್ಷರಾಗಿ:
1993 ರಲ್ಲಿ ಇರ್ದೆ ಬೆಟ್ಟಂಪಾಡಿ ಪಂಚಾಯತ್ ಸದಸ್ಯರಾಗಿ ಪ್ರಥಮ ಬಾರಿಗೆ ಆಯ್ಕೆಯಾಗಿ 1998 ರವರೆಗೆ ಸೇವೆ ಸಲ್ಲಿಸಿ, ಮುಂದೆ 1999 ರಲ್ಲಿ ದ್ವಿತೀಯ  ಬಾರಿ ಆಯ್ಕೆಯಾಗಿ ಪಂಚಾಯತ್ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದರು.


ಯಕ್ಷಗಾನ ಕಲಾಸಂಘದಲ್ಲಿ ದುಡಿಮೆ:
ಬೆಟ್ಟಂಪಾಡಿ ಶ್ರೀ ಮಹಾಲಿಂಗೇಶ್ವರ ಯಕ್ಷಗಾನ ಕಲಾಸಂಘದ ಅಧ್ಯಕ್ಷರಾಗಿ, ಗೌರವಾಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ, ಅರ್ಥಧಾರಿಯಾಗಿ, ವೇಷಧಾರಿಯಾಗಿ ಸಂಘದ ಏಳಿಗೆಗಾಗಿ  ತೊಡಗಿಸಿಕೊಂಡ ಕಲಾಪೋಷಕರಾಗಿದ್ದರು. ಯಕ್ಷಗಾನ ಕಲಾ ಸಂಘದ ಬಗ್ಗೆ ಅತಿಯಾದ ಗೌರವವಿದ್ದ ಅವರು ಸಂಘದ ಏಳಿಗೆಗಾಗಿ ಅತಿಯಾಗಿ ದುಡಿದು ಸಂಘದ ಶ್ರೇಯೋಭಿವೃದ್ಧಿಗೆ ಶ್ರಮಿಸಿದ್ದಾರೆ.. ವೇಷಧಾರಿಯಾಗಿ ಅಕ್ರೂರ, ಸಂಜಯ, ರಾಮ, ಧರ್ಮರಾಯ ಮುಂತಾದ ಸಾತ್ವಿಕ ಪಾತ್ರಗಳನ್ನು ಪಾತ್ರೋಚಿತವಾಗಿ ನಿರ್ವಹಿಸುತ್ತಿದ್ದ ಅವರು ಯಕ್ಷಗಾನ ಕೂಟದಲ್ಲಿಯೂ ಅರ್ಥಧಾರಿಯಾಗಿ ಹಲವಾರು ಪಾತ್ರಗಳಿಗೆ ಜೀವ ಧ್ವನಿ ನೀಡಿದವರು. ಇವರ ಸಜ್ಜನಿಕೆಯ ಪ್ರತಿರೂಪವಾಗಿ ಹಿರಿಯ ವಿದ್ವಾಂಸರಾದ ಪಳ್ಳು ಡಾ| ಸದಾಶಿವ ಭಟ್ಟರು ಇವರ ಬಗೆಗಿನ ʻಬದುಕಿನ ಚಿತ್ತಾರʼ ಎನ್ನುವ ಕೃತಿಯನ್ನು ಬರೆದಿದ್ದಾರೆ. ಹಲವಾರು ಸಂಘ ಸಂಸ್ಥೆಯಲ್ಲಿ ಗೌರವ ಸನ್ಮಾನಗಳು ದೊರೆತಿದೆ.


ಎಲ್ಲರ ಪ್ರೀತಿ ಗೌರವಕ್ಕೆ ಪಾತ್ರರಾಗಿದ್ದರು:
ಬೆಟ್ಟಂಪಾಡಿಯಲ್ಲಿ ವೆಂಕಟ್ರಾವ್‌ ಅಂದರೆ ಗೊತ್ತಿಲ್ಲದವರಿಲ್ಲ. ಹಿರಿಯ ಕಿರಿಯ ಎನ್ನದೇ ಎಲ್ಲರನ್ನೂ ಪ್ರೀತಿ ಗೌರವದಿಂದ ಕಾಣುತ್ತಿದ್ದರು. ಯಾರಿಗೂ ನೋವುಂಟು ಮಾಡದೆ ಒಂದು ರೀತಿಯಲ್ಲಿ ಸಮಾಜದಲ್ಲಿ ಅಜಾತಶತ್ರುವಾಗಿ ಗುರುತಿಸಿಕೊಂಡಿದ್ದರು. ತನ್ನ ಮನೆಯಲ್ಲಿ ವಾರ್ಷಿಕವಾಗಿ ಹಲವು ಧಾರ್ಮಿಕ ಕಾರ್ಯಕ್ರಮಗಳನ್ನು ನಿರ್ವಹಿಸಿ ಅನ್ನದಾನ ಮಾಡಿ, ಕಲಾಪೋಷಣೆ ಮಾಡುತ್ತಿದ್ದರು.
ಮೃತರು ಪತ್ನಿ ಶಾರದಾ, ಪುತ್ರ ವೈದ್ಯರಾದ ಡಾ. ಸತೀಶ್‌ ರಾವ್‌ ಹಾಗೂ ವಿವೇಕಾನಂದ ಆಂಗ್ಲಮಾಧ್ಯಮ ಶಾಲೆಯ ಶಿಕ್ಷಕಿ ವೀಣಾ ರಾವ್‌ ರನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here