ಇಂದು(ಮಾ.8): ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥ ಪುತ್ತೂರು ಪುರಪ್ರವೇಶ

0

ಕೌಡಿಚ್ಚಾರಿನಿಂದ ಬೃಹತ್ ವಾಹನ ಜಾಥಾ, ವಿಶೇಷ ಸಭೆ, ಸಾಂಸ್ಕೃತಿಕ ಕಾರ್ಯಕ್ರಮ


ಪುತ್ತೂರು: ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ ಅವತಾರದ ಶತಮಾನೋತ್ಸವದ ಪ್ರಯುಕ್ತ ಬಾಬಾರವರ ದಿವ್ಯಾವತಾರದ ಸೌರಭವನ್ನು ಪಸರಿಸಲು ಮತ್ತು ದಿವ್ಯ ಸಂದೇಶವನ್ನು ಸಾರಲು ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ಎಂಬ ಹೆಸರಿನಲ್ಲಿ ರಥಯಾತ್ರೆಯು ನಡೆಯುತ್ತಿದೆ. ಆಂಧ್ರಪ್ರದೇಶದ ಪುಟ್ಟಪರ್ತಿಯಿಂದ ಎಪ್ರಿಲ್ 25, 2025 ರಂದು ಹೊರಟು, ಭಾರತದಾದ್ಯಂತ 5 ದಿವ್ಯ ರಥಗಳು ಬೇರೆ ಬೇರೆ ರಾಜ್ಯಗಳ 500 ಗ್ರಾಮಗಳಲ್ಲಿ ಸಂಚರಿಸಿ (ಸುಮಾರು 3,50,೦೦೦ ಕಿ.ಮೀ.) ನವೆಂಬರ್ 23 ,2026 ರಂದು ಮರಳಿ ಪುಟ್ಟಪರ್ತಿಯನ್ನು ಸೇರಲಿವೆ. ಅದರಂತೆ ಒಂದು ರಥವು ಕರ್ನಾಟಕ ರಾಜ್ಯದಲ್ಲಿ ಸಂಚರಿಸುತ್ತಿದ್ದು ಇದೇ ಮಾರ್ಚ್ 7ರಂದು ದಕ್ಷಿಣ ಕನ್ನಡ ಜಿಲ್ಲೆಗೆ ಪ್ರವೇಶಿಸಲಿದೆ. ಈ ರಥವು ಭಗವಾನ್ ಬಾಬಾರವರ ದಿವ್ಯ ಸನ್ನಿಧಿ ಹಾಗೂ ಪಾದುಕೆಗಳನ್ನು ಒಳಗೊಂಡಿರುತ್ತದೆ. ಶ್ರೀ ಸತ್ಯಸಾಯಿ ಪ್ರೇಮ ಪ್ರವಾಹಿನಿ ರಥಯಾತ್ರೆ ಬಾಬಾ ಅವರನ್ನು ಅಥವಾ ಅವರ ದೈವತ್ವವನ್ನು ಪ್ರಚಾರ ಮಾಡುವ ಒಂದು ಉಪಕ್ರಮವಲ್ಲ. ಬದಲಾಗಿ ಭಗವಾನ್ ಬಾಬಾರವರ LOVE ALL, SERVE ALL- HELP EVER, HURT NEVER ಎಂಬ ಶಾಶ್ವತ ಸಂದೇಶವನ್ನು ನಾಡಿನ ಮೂಲೆ ಮೂಲೆಗೂ ತಲುಪಿಸುವ ಉದ್ದೇಶ ಹೊಂದಿದೆ.


ಶ್ರೀ ಸತ್ಯಸಾಯಿ ಬಾಬಾರವರು ತಮ್ಮ ದೈಹಿಕ ರೂಪದ ಅವತಾರವನ್ನು 2011ರಲ್ಲಿ ಮುಗಿಸಿ ಹೋಗಿದ್ದರೂ ಕೂಡ ಲಕ್ಷಾಂತರ ಭಕ್ತರ ಆರಾಧ್ಯ ದೇವರಾಗಿ ಅವರ ಹೃದಯದಲ್ಲಿ ನೆಲೆಸಿದ್ದಾರೆ. ಅವರು ಸ್ಥಾಪಿಸಿದ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ಬಾಬಾರವರು ಹೇಳಿರುವ ಸತ್ಯ ,ಧರ್ಮ, ಶಾಂತಿ, ಪ್ರೇಮ ಮತ್ತು ಅಹಿಂಸೆಗಳೆಂಬ ಆದರ್ಶಗಳೊಂದಿಗೆ ಮತ್ತು ಅವುಗಳನ್ನು ಅಭ್ಯಾಸದ ಮೂಲಕ ಪ್ರಚಾರ ಮಾಡುತ್ತಿವೆ. ಈ ಸಂಸ್ಥೆಯು ಒಂದು ಆಧ್ಯಾತ್ಮಿಕ ಸೇವಾ ಸಂಸ್ಥೆಯಾಗಿದ್ದು , ಭಗವಾನರು ನಿರೂಪಿಸಿದಂತೆ ಮಾನವನಲ್ಲಿ ಅಂತರ್ಗತವಾಗಿರುವ ದೈವತ್ವವನ್ನು ಜಾಗೃತಗೊಳಿಸುವುದು ಈ ಸಂಸ್ಥೆಯ ಮೂಲಭೂತ ಗುರಿಯಾಗಿದೆ. ಶ್ರೀ ಸತ್ಯಸಾಯಿ ಬಾಬಾರವರನ್ನು ಕೇವಲ ಪವಾಡ ಪುರುಷ ಎನ್ನುವವರಿದ್ದಾರೆ. ಬಾಬಾರವರು ಅಸಂಖ್ಯಾತ ಪವಾಡಗಳನ್ನು ಮಾಡಿದ್ದಾರೆ. ಪವಾಡಗಳು ನನ್ನ visiting card ಎಂದಿದ್ದಾರೆ.


ಪವಾಡಗಳ ಮೂಲಕ ಭಕ್ತರನ್ನು ಆಕರ್ಷಿಸಿ ಅವರ ಮನ: ಪರಿವರ್ತನೆಗೊಳಿಸಿ ಸಂಸ್ಕಾರ ನೀಡಿದ್ದಾರೆ . ಅಂತಹ ಅನೇಕರು ಪರೋಪಕಾರದಂತಹ ಸೇವಾಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದೈವ ಪಿತೃತ್ವ – ಮಾನವ ಬ್ರಾತೃತ್ವದ ಉದಾತ್ತ ಸಂದೇಶವನ್ನು ಬಾಬಾರವರಷ್ಟು ಪರಿಣಾಮಕಾರಿಯಾಗಿ ಪ್ರಚುರಪಡಿಸಿದವರು ಅತ್ಯಂತ ವಿರಳ. ವೈದ್ಯಕೀಯ ಕ್ಷೇತ್ರದಲ್ಲಿ ಬಾಬಾರವರ ಕೊಡುಗೆ ಮಹತ್ತರವಾದದ್ದು . ಪುಟ್ಟಪರ್ತಿ ಯಲ್ಲಿ ಮತ್ತು ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಸಂಪೂರ್ಣ ಉಚಿತ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಿವೆ. ಅಲ್ಲದೆ ಹಲವು ರಾಜ್ಯಗಳಲ್ಲಿ ಸತ್ಯಸಾಯಿ ಸೇವಾ ಸಮಿತಿಗಳು ಉಚಿತ ವೈದ್ಯಕೀಯ ಶಿಬಿರ ನಡೆಸುತ್ತಿವೆ. ಬಾಬಾರವರ ಅವತಾರದ ಕಾಲದಲ್ಲಿ ಆಂಧ್ರಪ್ರದೇಶದ ಹಲವು ಗ್ರಾಮಗಳಿಗೆ ಮತ್ತು ಚೆನ್ನೈ ನಗರಕ್ಕೆ ತೆಲಂಗಾಣದ 2 ಜಿಲ್ಲೆಗಳಿಗೆ ಕುಡಿಯುವ ನೀರಿನ ಯೋಜನೆಯನ್ನು ಕಾರ್ಯಗತಗೊಳಿಸಿದ್ದಾರೆ. ಹಸಿದವರಿಗೆ ಅನ್ನ ನೀಡುವ ನಾರಾಯಣ ಸೇವೆ ಜಗತ್ತಿನಾದ್ಯಂತ ಹರಡಿರುವ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳು ನಡೆಸುತ್ತಿವೆ. ಶಿಕ್ಷಣ ಕ್ಷೇತ್ರದಲ್ಲಿ ಬಾಬಾರವರು ಮಾಡಿರುವ ಸೇವೆ ಅಪಾರ. ಇಂದು ಭಾರತದಾದ್ಯಂತ ಹಲವಾರು ಸತ್ಯ ಸಾಯಿ ಶಿಕ್ಷಣ ಸಂಸ್ಥೆಗಳಿವೆ.ಇಲ್ಲಿ ಆಧುನಿಕ ಶಿಕ್ಷಣದೊಂದಿಗೆ ಆಧ್ಯಾತ್ಮಿಕ ತಿಳುವಳಿಕೆಯನ್ನು ಮಾನವೀಯ ಮೌಲ್ಯಗಳ ಮೂಲಕ ಸಂಸ್ಕಾರ ನೀಡುವುದು ವಿಶೇಷ. ಇಂದು ಕರ್ನಾಟಕ ರಾಜ್ಯದಲ್ಲಿ 33 ಜಿಲ್ಲೆಗಳಲ್ಲಿ 251 ಸೇವಾ ಸಮಿತಿಗಳಿವೆ. ಇವುಗಳು ಭಗವಾನರ ತತ್ವಗಳ ಅಡಿಯಲ್ಲಿ ಆಧ್ಯಾತ್ಮಿಕ, ಸೇವಾ ಹಾಗೂ ಶೈಕ್ಷಣಿಕ ಎಂಬ 3 ವಿಭಾಗಗಳಲ್ಲಿ ಚಟುವಟಿಕೆಗಳನ್ನು ನಡೆಸುತ್ತಿವೆ.


ಪುತ್ತೂರಿನಲ್ಲಿ ನಡೆಯುವ ಸಭೆಯ ಅಧ್ಯಕ್ಷತೆಯನ್ನು ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯಾಧಕ್ಷರಾದ ಯಂ.ಪದ್ಮನಾಭ ಪೈ ಯವರು ವಹಿಸಲಿದ್ದಾರೆ. ಜಗನ್ನಾಥ ನಾಡಿಗೇರ ,ದಾವಣಗೆರೆ ಇವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಸಭೆಯಲ್ಲಿ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಮಹಿಳಾ ಸೇವಾ ಆಯೋಜಕರಾದ ಪ್ರಿಯಾ.ಪಿ ಪೈ, ವಿದ್ಯಾರಶ್ಮಿ ಸಮೂಹ ಸಂಸ್ಥೆಗಳ ಸಂಚಾಲಕರಾದ ಸವಣೂರು ಸೀತಾರಾಮ ರೈ, ಹಾಗೂ ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷರಾದ ಪ್ರಸನ್ನ ಯನ್. ಭಟ್ ಇವರು ಭಾಗವಹಿಸಲಿದ್ದಾರೆ ಎಂದು ಪುತ್ತೂರು ಸತ್ಯಸಾಯಿ ಸೇವಾ ಸಮಿತಿ ಪ್ರಕಟಣೆ ತಿಳಿಸಿದೆ.

ಕೌಡಿಚ್ಚಾರಿನಿಂದ ವಾಹನ ಜಾಥಾ
ಮಾ.7ರಂದು ಜಿಲ್ಲೆಗೆ ಪ್ರವೇಶಿಸಲಿರುವ ಪ್ರೇಮ ಪ್ರವಾಹಿನಿ ದಿವ್ಯ ರಥವು ಮಾ.8 ರಂದು ಪುತ್ತೂರಿಗೆ ಆಗಮಿಸಲಿದೆ. ಮಧ್ಯಾಹ್ನ 2.30ಕ್ಕೆ ಕೌಡಿಚಾರು ಶ್ರೀ ಕೃಷ್ಣ ಭಜನಾ ಮಂದಿರದ ಎದುರು ರಥವನ್ನು ಸ್ವಾಗತಿಸಲಾಗುತ್ತದೆ. ಬಳಿಕ ಬೃಹತ್ ವಾಹನ ಜಾಥಾದೊಂದಿಗೆ ಪುತ್ತೂರಿನ ಕೋರ್ಟ್ ರಸ್ತೆಯ ಶ್ರೀ ಸತ್ಯಸಾಯಿ ಮಂದಿರಕ್ಕೆ ರಥ ಆಗಮಿಸಲಿದೆ. ಅಲ್ಲಿಂದ ಮಂಗಳವಾದ್ಯಗಳು, ಭಜನೆ ಮತ್ತು ಭಕ್ತ ಸಮೂಹದ ಮೆರವಣಿಗೆಯಲ್ಲಿ ರಥವನ್ನು ಮಹಾಮಾಯ ದೇವಸ್ಥಾನಕ್ಕೆ ಕರೆತರಲಾಗುತ್ತದೆ. ಬಳಿಕ ವಿಶೇಷ ಸಭಾ ಕಾರ್ಯಕ್ರಮ ನಡೆಯಲಿದೆ.


ಸಾಂಸ್ಕೃತಿಕ ಕಾರ್ಯಕ್ರಮ
ಪುತ್ತೂರು ಸಮಿತಿಯ ಯುವ ಕಲಾವಿದರಿಂದ ಭರತನಾಟ್ಯ, ಶಿಶುವಿಕಾಸ ಕೇಂದ್ರದ ಮಕ್ಕಳಿಂದ ನೃತ್ಯ ಮತ್ತು ಯುವ ಕಲಾವಿದರಿಂದ ಭಕ್ತಿ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಮಂಗಳಾರತಿಯ ನಂತರ ಪ್ರಸಾದ ವಿತರಣೆ ನಡೆಯಲಿದೆ. ಮಾ.9 ರಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಎದುರು ಮಂಗಳಾರತಿ ಸ್ವೀಕರಿಸಿದ ಬಳಿಕ ರಥವು ಉಪ್ಪಿನಂಗಡಿಯತ್ತ ಸಾಗಲಿದೆ.

LEAVE A REPLY

Please enter your comment!
Please enter your name here