ಉಪ್ಪಿನಂಗಡಿ: ರಿಕ್ಷಾ- ಕಾರು ಡಿಕ್ಕಿ: ಐವರು ಮಕ್ಕಳು, ಚಾಲಕ ತಂದೆಗೆ ಗಾಯ- ಮೂವರಿಗೆ ಗಂಭೀರ

0

ಉಪ್ಪಿನಂಗಡಿ: ಕಾರು ಹಾಗೂ ರಿಕ್ಷಾವೊಂದರ ನಡುವೆ ಡಿಕ್ಕಿ ಸಂಭವಿಸಿ ರಿಕ್ಷಾದಲ್ಲಿದ್ದ ಒಂದೇ ಕುಟುಂಬದ ಐವರು ಮಕ್ಕಳು ಹಾಗೂ ಚಾಲಕರಾಗಿದ್ದ ಅವರ ತಂದೆ ಗಂಭೀರ ಗಾಯಗೊಂಡ ಘಟನೆ ಉಪ್ಪಿನಂಗಡಿಯಲ್ಲಿ ಮಾ.9ರಂದು ಸಂಜೆ ನಡೆದಿದೆ.


ಅಟೋ ರಿಕ್ಷಾ ಚಾಲಕ ಕಲಂದರ್ ಶಾಫಿ, ಅವರ ಮಕ್ಕಳಾದ ಮಹಮ್ಮದ್ ಜಾಝೀರ್ (13), ಮಹಮ್ಮದ್ ಇರ್ಷಾದ್ (11), ಮಹಮ್ಮದ್ ರಾಝೀಕ್ (9), ಮಹಮ್ಮದ್ ನೂರ್ (5), ಸಝ್ಮಾ (4) ಗಾಯಗೊಂಡವರು. ಇವರಲ್ಲಿ ಕಲಂದರ್ ಶಾಫಿ, ಸಝ್ಮಾ ಹಾಗೂ ಮಹಮ್ಮದ್ ಜಾಝೀರ್ ಅವರು ಗಂಭೀರ ಗಾಯಗೊಂಡಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.


ಘಟನೆಯ ವಿವರ:
ಅಟೋ ಚಾಲಕರಾಗಿರುವ ಕಲಂದರ್ ಶಾಫಿಯವರು ಉಪ್ಪಿನಂಗಡಿಯ ಸರಕಾರಿ ಮಾದರಿ ಉನ್ನತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವ ತನ್ನ ಮಕ್ಕಳನ್ನು ಸಂಜೆ ಅಟೋ ರಿಕ್ಷಾದಲ್ಲಿ ಶಾಲೆಯಿಂದ 34 ನೆಕ್ಕಿಲಾಡಿಯ ತನ್ನ ಮನೆಗೆ ಕರೆದುಕೊಂಡು ಬರುತ್ತಿದ್ದ ಸಂದರ್ಭ ಮಂಗಳೂರಿನಿಂದ ಉಪ್ಪಿನಂಗಡಿ ಕಡೆ ಬರುತ್ತಿದ್ದ ಕಾರು ಮಂಗಳೂರು- ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಿಂದ ಸರ್ವೀಸ್ ರಸ್ತೆಗೆ ಪ್ರವೇಶಿಸುವಲ್ಲಿ ಕಾರು ಮತ್ತು ರಿಕ್ಷಾ ನಡುವೆ ಡಿಕ್ಕಿ ಹೊಡಿದಿದೆ. ಡಿಕ್ಕಿಯ ರಭಸಕ್ಕೆ ಅಟೋ ರಿಕ್ಷಾ ಮಗುಚಿ ಬಿದ್ದಿದ್ದು ಅದರಲ್ಲಿದ್ದ ಒಂದೇ ಮನೆಯ ಆರು ಮಂದಿಯೂ ಗಾಯಗೊಂಡಿದ್ದಾರೆ.


ಮರಣ ಮೃದಂಗದ ಹೆದ್ದಾರಿ:
ಬಿ.ಸಿ.ರೋಡ್ – ಅಡ್ಡಹೊಳೆ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಪೂರ್ಣ ಸ್ಥಿತಿಯಲ್ಲಿದ್ದು, ಅಲ್ಲಲ್ಲಿ ಕಾಮಗಾರಿಗಾಗಿ ಹೆದ್ದಾರಿ ಹಾಗೂ ಸವೀಸ್ ರಸ್ತೆಗಳನ್ನು ಬಂದ್ ಮಾಡಿರುವುದು, ಏಕ ಪಥದಲ್ಲಿ ಹೋಗಲು ಬರಲು ಅನುವು ಮಾಡಿಕೊಟ್ಟಿರುವುದು, ಕಾಮಗಾರಿ ಸಂದರ್ಭ ಹೆದ್ದಾರಿಯಲ್ಲೆಲ್ಲಾ ಧೂಳು ಆವರಿಸಿರುವುದು ಕಂಡು ಬರುತ್ತಿದೆ. ಚತುಷ್ಪಥ ಹೆದ್ದಾರಿಯೆಂದು ವಾಹನ ಸವಾರರು ಅತೀ ವೇಗದಲ್ಲಿ ಸಾಗುತ್ತಿದ್ದು, ಅಲ್ಲಲ್ಲಿ ಕಾಮಗಾರಿಗಾಗಿ ಗುತ್ತಿಗೆದಾರರು ಹೆದ್ದಾರಿಯಲ್ಲಿ ತಡೆ ನೀಡಿರುವುದರಿಂದ ಹಾಗೂ ಅವೈಜ್ಞಾನಿಕ ಕ್ರಾಸಿಂಗ್ ನೀಡಿದ್ದರಿಂದ ಈ ಹೆದ್ದಾರಿಯು ಹಲವು ಅಪಘಾತಗಳಿಗೆ ಕಾರಣವಾಗಿದ್ದು, ಮರಣ ಮೃದಂಗ ಬಾರಿಸುತ್ತಿದೆ ಎನ್ನುವ ದೂರುಗಳು ಕೇಳಿ ಬರುತ್ತಿದೆ.

LEAVE A REPLY

Please enter your comment!
Please enter your name here