ಕುಕ್ಕಿನಡ್ಕ ಶ್ರೀಸುಬ್ರಾಯ ದೇವಸ್ಥಾನದಲ್ಲಿ ಜಾತ್ರೋತ್ಸವ, ದೇವರ ದರ್ಶನ ಬಲಿ, ದೈವಗಳ ನೇಮೋತ್ಸವ

0

ಪುತ್ತೂರು: ಮುಂಡೂರು ಗ್ರಾಮದ ಕುಕ್ಕಿನಡ್ಕ ಶ್ರೀ ಸುಬ್ರಾಯ ದೇವಸ್ಥಾನದಲ್ಲಿ ವರ್ಷಾವಧಿ ಜಾತ್ರೋತ್ಸವ, ದೇವರ ದರ್ಶನ ಬಲಿ ಹಾಗೂ ದೈವಗಳ ನೇಮೋತ್ಸವವು ಮಾ.8ರಂದು ನೆರವೇರಿತು.


ಕ್ಷೇತ್ರದ ತಂತ್ರಿಗಳಾದ ವೇ.ಮೂ. ಸುಬ್ರಹ್ಮಣ್ಯ ಬಳ್ಳಕ್ಕುರಾಯರವರ ನೇತೃತ್ವದಲ್ಲಿ ನಡೆದ ಜಾತ್ರೋತ್ಸವದಲ್ಲಿ ಮಾ.7ರಂದು ಹೊರೆಕಾಣಿಕೆ ಸಮರ್ಪಣೆ, ಉಗ್ರಾಹ ಮುಹೂರ್ತ, ಶ್ರೀದೇವರಿಗೆ ರಂಗಪೂಜೆ, ಪ್ರಸಾದ ವಿತರಣೆ, ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರವೇರಿತು.


ಮಾ.೮ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಆಚಾರ್ಯವರಣ, ಗಣಪತಿಹೋಮ, ಕಲಶಪೂಜೆ, ಕಲಶಾಭಿಷೇಕ, ನಾಗಸನ್ನಿಧಿಯಲಿ ಆಶ್ಲೇಷ ಬಲಿ ಪೂಜೆ, ನಾಗ ತಂಬಿಲ, ದೈವಗಳಿಗೆ ತಂಬಿಲ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಧೀಶಕ್ತಿ ಮಹಿಳಾ ಯಕ್ಷಬಳಗ ತೆಂಕಿಲ ಇವರಿಂದ ಯಕ್ಷಗಾನ ತಾಳಮದ್ದಳೆ ನಡೆಯಿತು. ಸಂಜೆ ದೈವಗಳ ಭಂಡಾರ ತೆಗೆದ ನಂತರ ಶ್ರೀದೇವರ ಬಲಿ ಹೊರಟು ಉತ್ಸವ, ವಸಂತ ಕಟ್ಟೆಪೂಜೆ, ಬೆಡಿಮದ್ದು ಪ್ರದರ್ಶನ, ಶ್ರೀದೇವರ ದರ್ಶನ ಬಲಿ, ಬಟ್ಟಲುಕಾಣಿಕೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆದ ಬಳಿಕ ಕ್ಷೇತ್ರದ ದೈವಗಳಾದ ಉಳ್ಳಾಕುಲು, ವ್ಯಾಘ್ರಚಾಮುಂಡಿ, ರಕ್ತೇಶ್ವರಿ, ವರ್ಣಾರ ಪಂಜುರ್ಲಿ, ಬೊಟ್ಟಿಭೂತ ಹಾಗೂ ಗುಳಿಗ ದೈವಗಳ ನೇಮೋತ್ಸವ ನಡೆಯಿತು.


ಮಾ.೯ರಂದು ಕಲಶ ಆರಾಧನೆ, ಮಧ್ಯಾಹ್ನ ಮಂತ್ರಾಕ್ಷತೆ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆಯೊಂದಿಗೆ ಜಾತ್ರೋತ್ಸವ ಸಂಪನ್ನಗೊಂಡಿತು. ಮೂರು ದಿನಗಳ ಕಾಲ ನಡೆದ ಜಾತ್ರೋತ್ಸವದಲ್ಲಿ ಸುಮಾರು 3000ಕ್ಕೂ ಅಧಿಕ ಮಂದಿ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು.


ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕಳ, ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ, ಕಾವು ಹೇಮನಾಥ ಶೆಟ್ಟಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ಲಯನ್ಸ್ ಕ್ಲಬ್ ಪುತ್ತೂರ‍್ದ ಮುತ್ತು ಇದರ ಅಧ್ಯಕ್ಷ ವೇದಾವತಿ, ದೇವಸ್ಥಾನದ ಜಾತ್ರೋತ್ಸವ ಸಮಿತಿ ಮಾಜಿ ಅಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಸುಪ್ರಿತ್ ಕಣ್ಣಾರಾಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಲಕೃಷ್ಣ ಕಣ್ಣಾರಾಯ ಬನೇರಿ, ಸದಸ್ಯರಾದ ಶಾರದಾ ಬಂಡಿಕಾನ, ಪದ್ಮಯ್ಯ ಗೌಡ ಗುತ್ತಿನಪಾಲು, ಗಣೇಶ್ ಸಾಲಿಯಾನ್ ಪಜಿಮಣ್ಣು, ಧನಂಜಯ ಕುಲಾಲ್ ಕಂಪ, ರಘುನಾಥ ಶೆಟ್ಟಿ ಪೊನೋನಿ, ಪದ್ಮಯ್ಯ ನಾಯ್ಕ, ಅರ್ಚಕ ನಾಗೇಶ್ ಕುದ್ರೆತ್ತಾಯ, ವ್ಯವಸ್ಥಾಪನಾ ಸಮಿತಿ, ಜಾತ್ರೋತ್ಸವ ಸಮಿತಿ ಮಾಜಿ ಸದಸ್ಯರು ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಜಾತ್ರೋತ್ಸವದಲ್ಲಿ ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here