






ಕಂಬಳ ನಿರ್ದಿಷ್ಟ ಪ್ರದೇಶಕ್ಕೆ ಸೀಮಿತ ಏಕೆ- ಸುಪ್ರೀಂ ಕೋರ್ಟ್ ಪ್ರಶ್ನೆ


ಪುತ್ತೂರು:ಕರಾವಳಿಯ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆ ಹೊರತುಪಡಿಸಿ ಕರ್ನಾಟಕದ ಇತರ ಭಾಗಗಳಲ್ಲಿ ಕಂಬಳ ನಡೆಸುವುದನ್ನು ಪ್ರಶ್ನಿಸಿ ಪೆಟಾ(ಪೀಪಲ್ ಫಾರ್ ದಿ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್)ಸ್ವಯಂ ಸೇವಾ ಸಂಸ್ಥೆ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದೆ.



ದ.ಕ.,ಉಡುಪಿ ಹೊರತು ರಾಜ್ಯದ ಇತರ ಭಾಗಗಳಲ್ಲಿಯೂ ಕಂಬಳ ನಡೆಸಲು ಅವಕಾಶ ನೀಡಿ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶ ಪ್ರಶ್ನಿಸಿ ಪೆಟಾ ಸಲ್ಲಿಸಿದ್ದ ವಿಶೇಷ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠ, ಕಂಬಳ ಕ್ರೀಡೆಯನ್ನು ರಾಜ್ಯದ ಒಂದು ನಿರ್ದಿಷ್ಟ ಪ್ರದೇಶಕ್ಕೆ ಮಾತ್ರ ಏಕೆ ಸೀಮಿತಗೊಳಿಸಬೇಕು ಎಂದು ಪ್ರಶ್ನಿಸಿದೆ.ಕಂಬಳ ಸಮಿತಿಯವರು ರಾಜ್ಯದ ವಿವಿಧ ಭಾಗಗಳಲ್ಲಿ ಸಂಸ್ಕೃತಿ ಪ್ರದರ್ಶಿಸಲು ಬಯಸಿದರೆ ತಪ್ಪೇನು?ರಾಜ್ಯದ ಇತರ ಭಾಗಗಳ ಜನರೂ ಈ ಸಂಸ್ಕೃತಿಯ ಪರಿಚಯ ಹೊಂದಲಿ ಎಂದು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅಭಿಪ್ರಾಯಪಟ್ಟರು.ನಿರ್ದಿಷ್ಟ ಪ್ರದೇಶದ ಹೊರತಾಗಿ ರಾಜ್ಯದ ಇತರ ಭಾಗಗಳಲ್ಲಿ ಕಂಬಳ ಆಯೋಜಿಸುವುದು ಒಪ್ಪುವಂಥದ್ದಲ್ಲ.ಸುಪ್ರೀಂ ಕೋರ್ಟ್ ಮುಂದೆ ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಮಾಣಪತ್ರದ ಅನುಸಾರ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಮಾತ್ರವೇ ಕಂಬಳವನ್ನು ಆಯೋಜಿಸಬೇಕಿದೆ ಎಂದು ಪೆಟಾ ವಕೀಲರು ಹೇಳಿದರು.
ಬೆಂಗಳೂರು ಅರಮನೆ ಮೈದಾನದಲ್ಲಿ ಕಂಬಳ ಸ್ಪರ್ಧೆ ನಡೆಸಲು ಬೆಂಗಳೂರು ಕಂಬಳ ಸಮಿತಿಗೆ ಅನುಮತಿ ನೀಡಬಾರದು.ಈ ದಿಸೆಯಲ್ಲಿ ರಾಜ್ಯ ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಕೋರಿ ಪೆಟಾ ಸಂಸ್ಥೆಯು ಹೈಕೋರ್ಟ್ ಮೆಟ್ಟಿಲೇರಿತ್ತು.ದ.ಕ.,ಉಡುಪಿ ಹೊರತು ಬೇರಾವುದೇ ಜಿಲ್ಲೆಯಲ್ಲಿ ಕಂಬಳ ನಡೆಸುವುದರಿಂದ ಕೋಣಗಳಿಗೆ ಹಿಂಸೆ ನೀಡಿದಂತಾಗಲಿದೆ.ಬೆಂಗಳೂರು ಅರಮನೆ ಮೈದಾನದಲ್ಲಿ ನಡೆಯಲಿರುವ ಕಂಬಳಕ್ಕೆ ಲಕ್ಷಾಂತರ ಜನ ಬರುತ್ತಾರೆ.ಇದಕ್ಕಾಗಿ ವಿಐಪಿ ಪಾಸ್‌ಗಳನ್ನು ವಿತರಿಸಲಾಗುತ್ತಿದೆ.ದೊಡ್ಡ ದೊಡ್ಡ ಉದ್ಯಮಿಗಳು ಇದರ ಪ್ರಾಯೋಜಕತ್ವ ವಹಿಸಿಕೊಂಡಿದ್ದಾರೆ.ಶಿವಮೊಗ್ಗದಲ್ಲೂ ಈ ಕ್ರೀಡೆ ನಡೆಸುವ ಚಿಂತನೆಯನ್ನು ಕಂಬಳ ಆಯೋಜನಾ ಸಮಿತಿ ಹೊಂದಿದೆ ಎಂದು ಪೆಟಾ ಸಲ್ಲಿಸಿದ್ದ ಅರ್ಜಿಯಲ್ಲಿ ದೂರಲಾಗಿತ್ತು.
ಸುಮಾರು 300 ಕಿ.ಮೀ ದೂರದಿಂದ ತರಲಾಗುವ ದಣಿದ ಕೋಣಗಳನ್ನು ಸ್ಪರ್ಧೆಗೆ ಇಳಿಸಲಾಗುತ್ತದೆ.ಇದು ಪ್ರಾಣಿ ಹಿಂಸೆಯಾಗುತ್ತದೆ.ಆದ್ದರಿಂದ,ನ್ಯಾಯಾಲಯ ನಿರ್ಧರಿಸುವವರೆಗೆ ಕೋಣಗಳನ್ನು ಬೆಂಗಳೂರುಗೆ ಟ್ರಕ್‌ನಲ್ಲಿ ತರದಂತೆ ಕಂಬಳ ಆಯೋಜನಾ ಸಮಿತಿಗೆ ಆದೇಶಿಸಬೇಕು ಎಂದೂ ಅರ್ಜಿಯಲ್ಲಿ ಕೋರಲಾಗಿತ್ತು.ಬೆಂಗಳೂರಿನಲ್ಲಿ ಕಂಬಳ ಆಯೋಜನೆ ಮಾಡುವುದರಿಂದ ಕೋಣಗಳನ್ನು ಮಂಗಳೂರು-ಉಡುಪಿಯಿಂದ ಬೆಂಗಳೂರಿಗೆ ತರಬೇಕಾಗುತ್ತದೆ.ಇದರಿಂದ ಕೋಣಗಳಿಗೆ ಹಿಂಸೆಯಾಗಲಿದೆ ಎನ್ನುವುದು ಪೆಟಾದ ಆಕ್ಷೇಪವಾಗಿದೆ.ಆದರೆ ಕುದುರೆ ರೇಸ್‌ಗೆ ಬೇರೆ ರಾಜ್ಯಗಳಿಂದ ಕುದುರೆಗಳನ್ನು ತರಲಾಗುತ್ತದೆ.ಈಗ ಕಂಬಳವನ್ನು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಾತ್ರ ನಡೆಸಬೇಕೇ ಎಂಬ ಪ್ರಶ್ನೆ ನ್ಯಾಯಾಲಯದ ಮುಂದಿದೆ.ಕಂಬಳ ಕ್ರೀಡೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಮಾತ್ರ ಸೀಮಿತವಲ್ಲ. ಅದು ಇಡೀ ಕರ್ನಾಟಕದ ಸಂಸ್ಕೃತಿ.ಅದನ್ನು ಈಗ ಇಡೀ ದೇಶಕ್ಕೆ ಪರಿಚಯಿಸುವ ಸಂದರ್ಭ ಬಂದಿದೆ ಎಂದು ರಾಜ್ಯ ಸರ್ಕಾರದ ಪರ ಅಡ್ವಕೇಟ್ ಜನರಲ್ ಶಶಿಕಿರಣ್ ಶೆಟ್ಟಿಯವರು ನ್ಯಾಯಪೀಠದ ಗಮನ ಸೆಳೆದಿದ್ದರು.ವಾದ-ಪ್ರತಿವಾದ ಆಲಿಸಿದ್ದ ಹೈಕೋರ್ಟ್,
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಹೊರತು ರಾಜ್ಯದ ಇತರ ಯಾವುದೇ ಸ್ಥಳಗಳಲ್ಲಿ ಕಂಬಳ ನಡೆಸಲು ಕರ್ನಾಟಕ ಸರಕಾರ ಅಧಿಸೂಚನೆ ಹೊರಡಿಸುವುದನ್ನು ತಡೆಯುವಂತೆ ಕೋರಿ ಸಲ್ಲಿಸಿದ ಅರ್ಜಿಯನ್ನು ಉಚ್ಚ ನ್ಯಾಯಾಲಯ ಕಳೆದ ನ.14ರಂದು ವಜಾಗೊಳಿಸಿತ್ತು.ಇದರ ವಿರುದ್ಧ ಪೆಟಾದವರು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು.ಇದೀಗ ಸುಪ್ರೀಂ ಕೋರ್ಟ್ ಕೂಡಾ ಪೆಟಾದ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿ,ರಾಜ್ಯದ ಯಾವುದೇ ಭಾಗದಲ್ಲಿ ಕಂಬಳ ನಡೆಸುವುದಕ್ಕೆ ಅವಕಾಶ ನೀಡಿದೆ.
ಕಂಬಳಕ್ಕಾಗಿ ನಿರಂತರ ಕಾನೂನು ಹೋರಾಟ ನಡೆಸಿ ಯಶಸ್ವಿಯಾಗಿದ್ದ,ಉಪ್ಪಿನಂಗಡಿ ವಿಜಯ-ವಿಕ್ರಮ ಜೋಡುಕರೆ ಕಂಬಳ ಸಮಿತಿಯ ಅಧ್ಯಕ್ಷರೂ ಆಗಿರುವ ಶಾಸಕ ಅಶೋಕ್ ಕುಮಾರ್ ರೈಯವರ ನೇತೃತ್ವದಲ್ಲಿ 2023ರ ನವೆಂಬರ್ 25,26ರಂದು ರಾಜ್ಯ ರಾಜಧಾನಿಯಲ್ಲಿ ‘ಬೆಂಗಳೂರು ಕಂಬಳ’ ಅರಮನೆ ಮೈದಾನದಲ್ಲಿ ಯಶಸ್ವಿಯಾಗಿ ನಡೆದಿತ್ತು.ರಾಜ್ಯ,ದೇಶ-ಹೊರದೇಶಗಳಿಂದಲೂ ಕಂಬಳ ವೀಕ್ಷಣೆಗೆ ಲಕ್ಷಾಂತರ ಮಂದಿ ಆಗಮಿಸಿದ್ದರು.೨೦೨೪ರಲ್ಲಿಯೂ ಬೆಂಗಳೂರು ಕಂಬಳ ನಡೆಯಲಿರುವ ಮಾತುಗಳು ಕೇಳಿಬರುತ್ತಿದ್ದಂತೆ ಪೆಟಾದವರು ಹೈಕೋರ್ಟ್ ಮೊರೆ ಹೋಗಿದ್ದರು.ಕರಾವಳಿಯ ದ.ಕ.ಮತ್ತು ಉಡುಪಿ ಜಿಲ್ಲೆ ಹೊರತುಪಡಿಸಿ ರಾಜ್ಯದ ಬೇರೆಲ್ಲೂ ಕಂಬಳ ನಡೆಸಲು ಅವಕಾಶ ನೀಡಬಾರದು ಎಂದು ಪೆಟಾದಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು.ಈ ಅರ್ಜಿಗೆ ಸಂಬಂಽಸಿ ಶಾಸಕ ಅಶೋಕ್ ಕುಮಾರ್ ರೈ ಅವರು, ಕಂಬಳ ನಡೆಸಲು ಅನುಮತಿ ಕೋರಿ ವೈಯಕ್ತಿಕ ನೆಲೆಯಲ್ಲಿ ಅಫಿದಾವತ್ ಸಲ್ಲಿಸಿದ್ದರು.ಪೆಟಾದ ಆಕ್ಷೇಪದ ಅರ್ಜಿಯಲ್ಲಿ ತಮ್ಮನ್ನೂ ಪಾರ್ಟಿ ಮಾಡಬೇಕೆಂದು ವಕೀಲರ ಮೂಲಕ ಅವರು ನ್ಯಾಯಪೀಠಕ್ಕೆ ಮನವಿ ಸಲ್ಲಿಸಿದ್ದರು.ಕಂಬಳಕ್ಕೆ ಎಲ್ಲಿಯ ತನಕ ಕುತ್ತು ಬರುತ್ತದೆಯೋ ಅಲ್ಲಿಯ ತನಕ ತಾನು ಹೋರಾಟ ಮಾಡುತ್ತೇನೆ ಎಂದು ಅಶೋಕ್ ಕುಮಾರ್ ರೈ ಆ ಸಂದರ್ಭ ಪ್ರತಿಕ್ರಿಯೆ ನೀಡಿದ್ದರು.ವಾದ-ಪ್ರತಿವಾದ ಆಲಿಸಿದ್ದ ಹೈಕೋರ್ಟ್ ಪೆಟಾದವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತ್ತು.ಇದರ ವಿರುದ್ಧ ಪೆಟಾ ಸುಪ್ರೀಂ ಕೋರ್ಟ್ ಗೆ ವಿಶೇಷ ಮೇಲ್ಮನವಿ ಸಲ್ಲಿಸಿತ್ತು.ಇದೀಗ ಸುಪ್ರೀಂ ಕೋರ್ಟ್ ಈ ವಿಶೇಷ ಮೇಲ್ಮನವಿಯನ್ನು ವಜಾಗೊಳಿಸಿ ರಾಜ್ಯದ ಯಾವುದೇ ಭಾಗದಲ್ಲಿ ಕಂಬಳ ನಡೆಸುವುದಕ್ಕೆ ಅವಕಾಶ ನೀಡಿದೆ.










