






ಬೆಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚಾಗುತ್ತಿದ್ದು,ರೈತರು ಕೋವಿ ಪರವಾನಗಿ ನವೀಕರಣವಾಗದ ಪರಿಣಾಮ ಕೋವಿ ಇಲ್ಲದೆ ಪ್ರಾಣಿಗಳನ್ನು ಹೆದರಿಸಲು ಆಗದೆ,ಕೃಷಿಯನ್ನು ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ ಎಂದು,ಜಿಲ್ಲೆಯ ರೈತರ ಸಮಸ್ಯೆಯನ್ನು ಸರ್ಕಾರದ ಗಮನ ಸೆಳೆದ ಶಾಸಕ ಅಶೋಕ್ ಕುಮಾರ್ ರೈ, ಅರ್ಹ ರೈತರಿಗೆ ಕೂಡಲೇ ಕೋವಿ ಪರವಾನಗಿ ನವೀಕರಣ ಮಾಡುವಂತೆ ಆಗ್ರಹಿಸಿದರು.ಇತರ ಸದಸ್ಯರು ಧ್ವನಿಗೂಡಿಸಿದರು.


ವಿಧಾನಸಭೆ ಅಽವೇಶನದಲ್ಲಿ ಮಾತನಾಡಿದ ಶಾಸಕ ರೈ ಅವರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿ ಪರವಾನಗಿ ನವೀಕರಣ ಮಾಡುತ್ತಿಲ್ಲ.ಕೃಷಿಗೆ ಹಾನಿ ಉಂಟು ಮಾಡುವ ಪ್ರಾಣಿಗಳನ್ನು ಹೆದರಿಸುವ ಸಂಬಂಧವಾಗಿ ಸರ್ಕಾರದ ನಿಯಮ ಮತ್ತು ನಿಬಂಧನೆಗಳನ್ನು ಅಳವಡಿಸಿ ಕೃಷಿಕರಿಗೆ ನೀಡುತ್ತಿದ್ದ ಕೋವಿಗಳನ್ನು ನವೀಕರಿಸದಿರಲು ಕಾರಣವೇನು ಎಂದು ರಾಜ್ಯ ಸರ್ಕಾರವನ್ನು ಪ್ರಶ್ನಿಸಿದರು.ಕೋವಿ ಪರವಾನಗಿ ಬಗ್ಗೆ ಪ್ರಶ್ನೆ ಎತ್ತುವಾಗಲೇ ಗೃಹಸಚಿವ ಡಾ|ಜಿ.ಪರಮೇಶ್ವರ್ ಅವರು ‘ಉತ್ತರ ಒದಗಿಸಲಾಗಿದೆ’ ಎಂದು ಹೇಳಿದರು.ಆದರೆ, ಇದಕ್ಕೆ ತೃಪ್ತರಾಗದ ಅಶೋಕ್ ಕುಮಾರ್ ರೈ, ಸರ್ಕಾರ ನೀಡಿದ ಉತ್ತರ ಅಡ್ಡ ಗೋಡೆಯ ಮೇಲೆ ದೀಪ ಇಟ್ಟ ಹಾಗಿದೆ ಎಂದರು.



ಮಂಗಗಳು ನಮ್ಮನ್ನೇ ಮಂಗ ಮಾಡುತ್ತವೆ:
ಆರ್ಟಿಫಿಶಿಯಲ್ ಗನ್ ತೋರಿಸಿದರೆ ಮಂಗಗಳು ಹೆದರುವುದಿಲ್ಲ.ಅವುಗಳು ನಮ್ಮನ್ನೇ ಮಂಗ ಮಾಡುತ್ತವೆ.ಕಾಡುಹಂದಿಗಳು ತೋಟಕ್ಕೆ ನುಗ್ಗಿದರೆ ಬಾಳೆಗಿಡ ಕೂಡ ಉಳಿಯುವುದಿಲ್ಲ.ಕಾಡಾನೆಗಳ ದಾಳಿಯಿಂದ ಮೂರು ಮಂದಿ ಸಾವನ್ನಪ್ಪಿದ್ದಾರೆ ಎಂದು ಜಿಲ್ಲೆಯಲ್ಲಿನ ಸಮಸ್ಯೆಗಳನ್ನು ಸರ್ಕಾರದ ಗಮನ ಸೆಳೆದ ಅಶೋಕ್ ಕುಮಾರ್ ರೈ ಅವರು,ತಂದೆಗೆ ಪ್ರಾಯ ಆಗಿದ್ದರೆ ಮಗನ ಹೆಸರಿಗೆ ಕೋವಿಯನ್ನು ವರ್ಗಾಯಿಸುವ ಕೆಲಸ ಆಗಬೇಕಿದೆ.ಆದರೆ ಇದಕ್ಕೂ ಅನುಮತಿಯನ್ನು ನೀಡಲಾಗುತ್ತಿಲ್ಲ.ತಂದೆಯ ಹೆಸರಿನಲ್ಲೇ ನವೀಕರಣ ಮಾಡಲು ಕೇಳಿದಾಗ,ಪ್ರಾಣಿಗಳು ಕೃಷಿ ಜಾಗಕ್ಕೆ ಬಂದು ಹಾನಿ ಮಾಡಿರಬೇಕು.ಬಳಿಕ ನೀವು ಅರಣ್ಯ ಇಲಾಖೆಯಿಂದ ಪರಿಹಾರ ಪಡೆದುಕೊಂಡಿದ್ದರೆ ಕೋವಿ ನವೀಕರಣ ಮಾಡಲಾಗುತ್ತದೆಎಂದು ಪೊಲೀಸ್ ವರಿಷ್ಠಾಧಿಕಾರಿಯವರು ಹೇಳುತ್ತಿದ್ದಾರೆ.ಕೋವಿ ನವೀಕರಣ ಆಗದ ಹಿನ್ನೆಲೆ ರೈತರು ನಮ್ಮನ್ನು ಕುಳಿತುಕೊಳ್ಳಲು ಬಿಡುತ್ತಿಲ್ಲ ಎಂದು ಹೇಳಿದ ಅಶೋಕ್ ಕುಮಾರ್ ರೈ,ಕ್ರಿಮಿನಲ್ ಪ್ರಕರಣ ದಾಖಲಾದವರಿಗೆ ಕೋವಿ ಪರವಾನಿಗೆ ನೀಡಬೇಡಿ.ಆದರೆ,ನಿಜವಾದ ರೈತನ ಕೋವಿ ನವೀಕರಣ ಮಾಡಲು ಸಾಧ್ಯವಿಲ್ಲವೇ?ಈ ಬಗ್ಗೆ ಜಿಲ್ಲಾಧಿಕಾರಿ ಸೇರಿದಂತೆ ಸಂಬಂಧಪಟ್ಟವರ ಜೊತೆ ಮಾತನಾಡಿದ್ದೇನೆ.ಆದರೆ, ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದರು.
ಶಾಸಕರಾದ ತಮ್ಮಯ್ಯ, ಹರೀಶ್ ಪೂಂಜ ಧ್ವನಿಗೂಡಿಸಿದರು.ಪ್ರತಿಕ್ರಿಯಿಸಿದ ಗೃಹಸಚಿವ ಡಾ|ಜಿ.ಪರಮೇಶ್ವರ್ ಅವರು,ಜಿಲ್ಲಾಽಕಾರಿಯವರು ಕೋವಿಗೆ ಲೈಸನ್ಸ್ ನೀಡುತ್ತಾರೆ.ಪೊಲೀಸರು ಎನ್ಒಸಿ ನೀಡುತ್ತಾರೆ.ಕೋವಿ ಲೈಸನ್ಸ್ಗೆ ಅರ್ಜಿ ಸಲ್ಲಿಸಿದವರು ದೈಹಿಕವಾಗಿ, ಮಾನಸಿಕವಾಗಿ ಗಟ್ಟಿಯಾಗಿರಬೇಕು.ಯಾವುದೇ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರಬಾರದು.ಇಂತಹ ಹತ್ತಾರು ನಿಯಮಗಳು ಇವೆ.ಕೃಷಿ ಭೂಮಿ ಇರುವಲ್ಲಿಯೇ ಇದ್ದವರಿಗೆ ಕೋವಿ ನೀಡಲಾಗುತ್ತದೆ.ಆದರೆ, ಜಮೀನು ಒಂದುಕಡೆ ಇದ್ದು, ಮಾಲಕರು ತಾಲೂಕಿನಿಂದ ಹೊರಗಿದ್ದರೆ ಅಥವಾ ಪಟ್ಟಣದಲ್ಲಿದ್ದರೆ ಅಂಥವರಿಗೆ ಕೋವಿ ಲೈಸನ್ಸ್ ನೀಡಲಾಗುವುದಿಲ್ಲ.ಇದಕ್ಕೆ ಕಾನೂನಿನಲ್ಲಿ ಅವಕಾಶ ಇಲ್ಲ.ಇಂತಹ ಅನೇಕ ನಿಬಂಧನೆಗಳಿಂದಾಗಿ ಕೋವಿ ಪರವಾನಗಿ ನವೀಕರಣ ತಡವಾಗಬಹುದು.ಮಂಗಳೂರು ನಗರದಲ್ಲಿ 2023ರಲ್ಲಿ 34 ಅರ್ಜಿಗಳು ಸಲ್ಲಿಕೆಯಾಗಿದ್ದವು.2024ರಲ್ಲಿ 97 ಅರ್ಜಿಗಳು ಸಲ್ಲಿಕೆಯಾದರೆ, 2025ರಲ್ಲಿ 298 ಅರ್ಜಿಗಳು ಸಲ್ಲಿಕೆಯಾಗಿವೆ.ಇವೆಲ್ಲವನ್ನು ಜಿಲ್ಲಾಧಿಕಾರಿಯವರು ಪರಿಶೀಲನೆ ನಡೆಸಿ ಸಂಬಂಧಪಟ್ಟವರಿಗೆ ಕೋವಿ ಪರವಾನಗಿ ನೀಡಿದ್ದಾರೆ.ಈ ವರ್ಷ 32 ಅರ್ಜಿಗಳು ಸಲ್ಲಿಕೆಯಾಗಿವೆ.ಉಡುಪಿಯಲ್ಲಿ 2023ರಲ್ಲಿ 750 ಅರ್ಜಿಗಳು, 2024ರಲ್ಲಿ 1050 ಹಾಗೂ 2025ರಲ್ಲಿ 500 ಅರ್ಜಿಗಳು ಸಲ್ಲಿಕೆಯಾಗಿವೆ ಎಂದರು.ಯಾರು ಅರ್ಜಿಗಳನ್ನು ಹಾಕುತ್ತಾರೋ ನಿಯಮಾನುಸಾರ ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿಯವರು ಕೋವಿ ಪರವಾನಗಿ ನವೀಕರಿಸುತ್ತಾರೆ.ಪೊಲೀಸರು ಕೇವಲ ಎನ್ಒಸಿ ನೀಡುತ್ತಾರೆ.ಪರವಾನಗಿ ನೀಡುವವರು ಜಿಲ್ಲಾಧಿಕಾರಿಯವರಾಗಿರುತ್ತಾರೆ.ಹೀಗಾಗಿ ಜಿಲ್ಲಾಽಕಾರಿ ಕಚೇರಿಯಲ್ಲಿ ವಿಳಂಬವಾದರೆ ಜಿಲ್ಲಾಧಿಕಾರಿಯವರನ್ನು ಪ್ರಶ್ನಿಸಬೇಕು. ಪೊಲೀಸ್ ಇಲಾಖೆಯಲ್ಲಿ ಯಾವುದೇ ಅರ್ಜಿಗಳು ಬಾಕಿ ಇಲ್ಲ ಎಂದು ಗೃಹಸಚಿವರು ಉತ್ತರಿಸಿದರು.
ಮುಂದುವರಿದು ಮಾತನಾಡಿದ ಅಶೋಕ್ ಕುಮಾರ್ ರೈ,ಹೊರಗಿದ್ದವರಿಗೆ ಲೈಸನ್ಸ್ ನೀಡಿ ಎಂದು ನಾನು ಹೇಳುತ್ತಿಲ್ಲ.ಖುದ್ದು ನಾನೇ 250 ರೈತರ ಹೆಸರನ್ನು ನೀಡುತ್ತೇನೆ.ಈ ರೈತರ ಹೆಸರಿನಲ್ಲಿ ಕೋವಿ ಪರವಾನಗಿ ನವೀಕರಿಸುವಲ್ಲಿ ಯಾವುದೇ ತೊಂದರೆ ಇಲ್ಲ.ಜಮೀನು ಮಾಲಕರಿಗೆ ವಯಸ್ಸಾಗಿದ್ದರೆ ಅವರ ಮಗನಿಗೆ ನೀಡಿ ಎಂದು ಮನವಿ ಮಾಡಿದರು.
ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಕಳ್ಳತನ ಪ್ರಕರಣಗಳು ಹೆಚ್ಚಾಗಿವೆ.ಈ ಮೊದಲು ದಾರಿ ತಿಳಿಯದೆ ನಮ್ಮ ಭಾಗದಲ್ಲಿ ಕಳ್ಳತನಕ್ಕೆ ಬರಲು ಹೆದುರುತ್ತಿದ್ದರು.ಇತ್ತೀಚೆಗೆ ಬಂದೂಕುಗಳ ಪರವಾನಗಿಗಳ ನವೀಕರಣಕ್ಕೆ ಕಡಿವಾಣ ಹಾಕಲಾಗಿದೆ.ಇದರಿಂದಾಗಿ ಕಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ತೀರ್ಥಹಳ್ಳಿ ಕ್ಷೇತ್ರದ ಶಾಸಕ ಅರಗ ಜ್ಞಾನೇಂದ್ರ ಹೇಳಿದರು.ಬಂದೂಕು ಪರವಾನಿಗೆ ನವೀಕರಣ ವಿಚಾರದಲ್ಲಿ ಹರೀಶ್ ಪೂಂಜ,ಭಾಗೀರಥಿ ಮುರುಳ್ಯ,ಚೆನ್ನಬಸಪ್ಪ,ಸಿಮೆಂಟ್ ಮಂಜು ಸೇರಿ ಹಲವು ಶಾಸಕರು ಸರ್ಕಾರದ ಮೇಲೆ ಒತ್ತಡ ಹೇರಿದರು.










