






ನೆಲ್ಯಾಡಿ: ತೋಟಕ್ಕೆ ಮೇಯಲು ಬಂದ ಜಾನುವಾರುಗಳನ್ನು ಓಡಿಸಲು ಹೋದ ವೇಳೆ ಆಕಸ್ಮಿಕವಾಗಿ ಬಿದ್ದು ಮಹಿಳೆ ಮೃತಪಟ್ಟ ಘಟನೆ ಕಡಬ ತಾಲೂಕಿನ ಕೊಣಾಲು ಗ್ರಾಮದಲ್ಲಿ ನಡೆದಿದೆ.


ಕೊಣಾಲು ಗ್ರಾಮದ ಪಾತೃಮಾಡಿ ನಿವಾಸಿ ಲೀಲಾವತಿ ಶೆಟ್ಟಿ (64ವ.) ಮೃತಪಟ್ಟವರು. ಇವರು ಮಾ. 11 ರಂದು ಸಂಜೆ ತಮ್ಮ ತೋಟಕ್ಕೆ ಮೇಯಲು ಬಂದ ಜಾನುವಾರುಗಳನ್ನು ಓಡಿಸಲು ಹೋದವರು ಆಕಸ್ಮಿಕವಾಗಿ ನೆಲಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.



ಲೀಲಾವತಿ ಅವರ ಪುತ್ರ ಹರೀಶ್ ಲಾರಿ ಚಾಲಕರಾಗಿದ್ದು ಮಾ.11 ರಂದು ರಾತ್ರಿ ಮನೆಗೆ ಬಂದ ವೇಳೆ ಮನೆ ಬಾಗಿಲು ತೆರೆದುಕೊಂಡಿದ್ದು ತಾಯಿ ಮನೆಯಲ್ಲಿ ಇರಲಿಲ್ಲ. ಬಳಿಕ ಅವರು ನೆರೆ ಮನೆಯವರ ಜೊತೆ ಹುಡುಕಾಟ ನಡೆಸಿದಾಗ ತಮ್ಮ ತೋಟದಲ್ಲಿ ತಾಯಿ ಲೀಲಾವತಿ ಅವರು ಬಿದ್ದು ಸಾವನ್ನಪ್ಪಿರುವುದು ಕಂಡು ಬಂದಿದೆ.
ಲೀಲಾವತಿ ಅವರ ಒಂದು ಕೈಯಲ್ಲಿ ಕಲ್ಲು ಹಾಗೂ ಇನ್ನೊಂದು ಕೈಯಲ್ಲಿ ದೊಣ್ಣೆ ಆಗೆಯೇ ಇದ್ದು ಜಾನುವಾರು ಓಡಿಸುವ ವೇಳೆ ಆಕಸ್ಮಿಕವಾಗಿ ಬಿದ್ದ ಸಂದರ್ಭದಲ್ಲಿ ಕೈಯ್ಯಲ್ಲಿದ್ದ ಕಲ್ಲು ಅವರ ಹಣೆಗೆ ತಾಗಿ ಗಂಭೀರ ಗಾಯಗೊಂಡು ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಪುತ್ತೂರು ಸರಕಾರಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.

ಜಾನುವಾರುಗಳ ಉಪಟಳ:
ಕೊಣಾಲು ಗ್ರಾಮದ ತಿರ್ಲೆ ಪರಿಸರದಲ್ಲಿ ಒಂದೇ ಮನೆಯವರಿಗೆ ಸೇರಿದ 50 ಕ್ಕೂ ಹೆಚ್ಚು ಜಾನುವಾರುಗಳು ಬಿಡಾಡಿಯಾಗಿ ತಿರುಗುತ್ತಿದ್ದು ಸ್ಥಳೀಯರ ಕೃಷಿ ತೋಟಗಳಿಗೆ ನುಗ್ಗಿ ಹಾನಿಗೊಳಿಸುತ್ತಿರುವ ಬಗ್ಗೆ ಹಾಗೂ ನಡೆದುಕೊಂಡು ಹೋಗುವ ಸಾರ್ವಜನಿಕರಿಗೆ, ಶಾಲಾ ಮಕ್ಕಳಿಗೆ ತೊಂದರೆ ನೀಡುತ್ತಿವೆ ಎಂಬ ದೂರುಗಳು ಕೇಳಿ ಬಂದಿವೆ.ಈ ಬಗ್ಗೆ ಅಧಿಕಾರಿಗಳು ಗಮನ ಹರಿಸುವಂತೆ ಯೂ ಸಾರ್ವಜನಿಕರು ಒತ್ತಾಯಿಸಿದ್ದಾರೆ.










