






ನೆಲ್ಯಾಡಿ: ಮನೆಯಲ್ಲಿ ತಂದಿರಿಸಿದ್ದ ಮದ್ಯದ ಬಾಟಲಿ ತೆಗೆಯುವ ವೇಳೆ ಕಣ್ತಪ್ಪಿನಿಂದ ಕೀಟನಾಶಕ ಸೇವಿಸಿದ ಪರಿಣಾಮ ಶಿಬಾಜೆ ನಿವಾಸಿ ಹರೀಶ್ ಮುಗೇರ ಎಂಬವರು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.


ಹರೀಶ್ ಮುಗೇರ ಅವರು ಮಾ.11ರಂದು ರಾತ್ರಿ ತಾವು ವಾಸವಿದ್ದ ಶಿಬಾಜೆ ಸಾರಾಫಾರ್ಮ್ ತೋಟದ ಮನೆಯಲ್ಲಿ ತಂದಿರಿಸಿದ್ದ ಮದ್ಯವನ್ನು ಸೇವಿಸುವುದಕ್ಕಾಗಿ ತೆಗೆಯುವಾಗ ಕಣ್ತಪ್ಪಿನಿಂದ ಮದ್ಯದ ಬಾಟಲಿಯ ಬಳಿಯಿದ್ದ ಕೀಟನಾಶಕ ಸೇವಿಸಿದ್ದರು. ಇದರಿಂದಾಗಿ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು ಅವರ ಪತ್ನಿ ಹಾಗೂ ಜೊತೆಯಲ್ಲಿ ಕೆಲಸ ಮಾಡುತ್ತಿದ್ದವರು ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ತಾನು ಮದ್ಯದ ಬದಲು ಆಕಸ್ಮಿಕವಾಗಿ ಕೀಟನಾಶಕ ಸೇವಿಸಿದ್ದು, ಯಾವುದೇ ಕಾನೂನುಕ್ರಮದ ಅಗತ್ಯವಿರುವುದಿಲ್ಲ ಎಂದು ಹರೀಶ್ ಮುಗೇರ ಅವರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಇನ್ನಷ್ಟು ಹೆಚ್ಚಿನ ವಿಚಾರಣೆ ನಡೆಸುವ ಸಲುವಾಗಿ ಸದ್ರಿ ವ್ಯಕ್ತಿಗೆ ತಜ್ಞರಿಂದ ಆಪ್ತ ಸಮಾಲೋಚನೆ ನಡೆಸುವಂತೆ ಜಿಲ್ಲಾ ವೈದ್ಯಾಧಿಕಾರಿಯವರನ್ನು ಕೋರಲಾಗಿದ್ದು ಆತನ ಮುಂದಿನ ಹೇಳಿಕೆಯ ಬಳಿಕ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.



ಶ್ರೀಧರ ಸಾವಿನ ದೂರುದಾರ;
ಕೀಟನಾಶಕ ಸೇವಿಸಿ ಅಸ್ವಸ್ಥರಾದ ಹರೀಶ್ ಮುಗೇರ ಅವರು ಮೂರು ವರ್ಷದ ಹಿಂದೆ ಶಿಬಾಜೆಯ ಸಾರಾ ಫಾರ್ಮ್ನಲ್ಲಿ ನಡೆದ ಶ್ರೀಧರ ಎಂಬವರ ಸಂಶಯಾಸ್ಪದ ಸಾವಿನ ಕುರಿತ ದೂರುದಾರರು. ಅಲ್ಲದೇ ಇವರು ಶ್ರೀಧರ ಅವರ ಸಾವಿನ ಕುರಿತ ತನಿಖೆ ಸಮರ್ಪಕವಾಗಿ ನಡೆದಿಲ್ಲ ಎಂದು ಆರೋಪಿಸಿ ಹೈಕೋರ್ಟ್ ಮೆಟ್ಟಿಲೇರಿ ಮರು ತನಿಖೆಗೆ ವಿಶೇಷ ತನಿಖಾ ತಂಡ ರಚನೆಗೂ ಕಾರಣಕರ್ತರಾಗಿದ್ದಾರೆ. ಎಸ್ಐಟಿ ಅಧಿಕಾರಿಗಳ ತಂಡ ಈ ಪ್ರಕರಣದ ಮರುತನಿಖೆ ಆರಂಭಿಸಿರುವ ಬೆನ್ನಲ್ಲೇ ಹರೀಶ್ ಮುಗೇರ ಅವರು ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದು, ಅವರು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದೇ ಸುದ್ದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಹರೀಶ್ ಅವರ ವಿಡಿಯೋ ಹೇಳಿಕೆ ದಾಖಲಿಸಿಕೊಂಡಿದ್ದು ಕಣ್ತಪ್ಪಿನಿಂದ ಮದ್ಯದ ಬಾಟಲಿ ಬದಲು ಕೀಟನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.









