ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ದ.ಕ, ಪುತ್ತೂರು/ಕಡಬ ತಾ|ಘಟಕಗಳ ಆಶ್ರಯದಲ್ಲಿ ಜಿಲ್ಲಾ ಶೈಕ್ಷಣಿಕ ಸಮಾವೇಶ, ಪದಪ್ರದಾನ, ಸಾಧಕರುಗಳಿಗೆ ಸನ್ಮಾನ

0

ಸರಕಾರದ ಗೌರವಾನ್ವಿತ ಸ್ಪೀಕರ್‌ನಾಗಿದ್ದರೆ ನನಗೆ ಕಲಿಸಿದ ಶಿಕ್ಷಕರುಗಳು ಕಾರಣ-ಯು.ಟಿ ಖಾದರ್

*7 ಮಂದಿಗೆ ವಿದ್ಯಾರತ್ನ ಪ್ರಶಸ್ತಿ
*7 ಮಂದಿಗೆ ಸೇವಾಭೂಷಣ ಪ್ರಶಸ್ತಿ
*16 ಮಂದಿಗೆ ಶೈಕ್ಷಣಿಕ ಸೇವಾ ಸಾಧನ ಪ್ರಶಸ್ತಿ
*10 ಮಂದಿಗೆ ಶಿಕ್ಷಣ ರತ್ನ ಪ್ರಶಸ್ತಿ
*ಸ್ಪೀಕರ್ ಯು.ಟಿ ಖಾದರ್ ಸಹಿತ ಹಲವರಿಗೆ ಸನ್ಮಾನ

ಪುತ್ತೂರು: ಭಾರತ ದೇಶ ವಿಶ್ವದಲ್ಲಿ ಬಲಿಷ್ಟವಾಗಬೇಕಾದರೆ ಶಾಸಕರು, ಮಂತ್ರಿಗಳು ಬಲಿಷ್ಟವಾದರೆ ದೇಶ ಬಲಿಷ್ಟವಾಗಲು ಸಾಧ್ಯವಿಲ್ಲ. ಎ.ಸಿ ರೂಮಲ್ಲಿ ಕುಳಿತ ಐಎಎಸ್, ಐಪಿಎಸ್ ಅಧಿಕಾರಿಗಳು, ವ್ಯಾಪಾರಸ್ಥಗಳಿಂದಲೂ ಸಾಧ್ಯವಿಲ್ಲ. ಭಾರತ ದೇಶ ಬಲಿಷ್ಟವಾಗಬೇಕಾದರೆ ತರಗತಿ ಕೊಠಡಿಯಲ್ಲಿ ಹಾಗೂ ಕ್ರೀಡಾಂಗಣದಲ್ಲಿ ಬೆವರು ಹರಿಸಿದ ವಿದ್ಯಾರ್ಥಿಗಳಿಂದ ಸಾಧ್ಯ. ಜೊತೆಗೆ ನಾನಿಂದು ಕರ್ನಾಟಕ ಸರಕಾರದ ಗೌರವಾನ್ವಿತ ಸ್ಪೀಕರ್ ಹುದ್ದೆಯಲ್ಲಿ ಇರಬೇಕಾದ್ರೆ ಅದಕ್ಕೆ ನನಗೆ ಕಲಿಸಿದ ಶಿಕ್ಷಕರುಗಳ ಸಂಸ್ಕಾರಯುತ ಶಿಕ್ಷಣ ಕಾರಣ ಎಂದು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ ಖಾದರ್‌ರವರು ಹೇಳಿದರು.


ಮಾ.15ರಂದು ಪುತ್ತೂರು ಬಂಟರ ಭವನದಲ್ಲಿ ಜರಗಿದ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ದ.ಕ ಹಾಗೂ ಪುತ್ತೂರು ಮತ್ತು ಕಡಬ ತಾಲೂಕು ಘಟಕಗಳ ಆಶ್ರಯದಲ್ಲಿ ಜಿಲ್ಲೆಯ ಶಿಕ್ಷಣ ಇಲಾಖೆಯ ನೌಕರರ ಜಿಲ್ಲಾ ಶೈಕ್ಷಣಿಕ ಸಮಾವೇಶ, ನೂತನ ಪದಾಧಿಕಾರಿಗಳ ಪದಪ್ರದಾನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು. ಭವಿಷ್ಯದ ಸತ್ಪ್ರಜೆಗಳನ್ನು ನಿರ್ಮಿಸುವಲ್ಲಿ ಶಿಕ್ಷಕರ ಪಾತ್ರ ನಿರ್ಣಾಯಕ. ಅದರಲ್ಲೂ ದಕ್ಷಿಣ ಕನ್ನಡ ಜಿಲ್ಲೆ ಬೆಂಗಳೂರು ಬಿಟ್ರೆ ಬೆಂಚ್ ಮಾರ್ಕ್ ಎನಿಸಿಕೊಂಡಿದೆ. ಇಂದು ಸನ್ಮಾನ ಸ್ವೀಕರಿಸಿದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರು ತಾವು ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ. ಬೆಳೆಯುತ್ತಿರುವ ಜನಸಂಖ್ಯೆಯಲ್ಲಿ ಎಲ್ಲರಿಗೂ ಸರಕಾರದಿಂದ ಶಿಕ್ಷಣ ಕೊಡಲು ಸಾಧ್ಯವಿಲ್ಲ. ಆದರೆ ಖಾಸಗಿ ಸಂಸ್ಥೆಯವರು, ಅನುದಾನರಹಿತ ಸಂಸ್ಥೆಯವರು ಈ ನಿಟ್ಟಿನಲ್ಲಿ ಮುಂದಾಗಿರುವುದು ಒಳ್ಳೆಯ ನಡೆ ಎಂದರು.


ಗೌರವಯುತ ಹುದ್ದೆಯಲ್ಲಿದ್ದಾಗ ಸಂತೋಷ ಪಡುವವರು ಕಲಿಸಿದ ಶಿಕ್ಷಕರು-ಕಿಶೋರ್ ಬೊಟ್ಯಾಡಿ:
ವಿಧಾನಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಬೊಟ್ಯಾಡಿ ಮಾತನಾಡಿ, ನನಗೆ ಶಿಕ್ಷಣ ನೀಡಿದ ಶಿಕ್ಷಕರುಗಳಿಂದ ನಾನೀಗ ಈ ಹಂತಕ್ಕೆ ತಲುಪಲು ಸಾಧ್ಯವಾಗಿದೆ. ಉನ್ನತ ಹುದ್ದೆಗೆ ಏರುವಾಗಲೇ ಹುದ್ದೆಯ ಘನತೆ, ಗೌರವ ತಿಳಿಯುವುದು. ಯಾವುದೇ ವ್ಯಕ್ತಿ ಆಗಲಿ, ಸಮಾಜದಲ್ಲಿ ಉನ್ನತ ಹಂತಕ್ಕೆ ತಲುಪಿದಾಗ ಮೊದಲು ಸಂತೋಷ ಪಡುವವರು ಆತನಿಗೆ ಕಲಿಸಿದ ಶಿಕ್ಷಕರು. ಶಿಕ್ಷಕರ ನ್ಯಾಯಯುತ ಕುಂದುಕೊರತೆಗಳಿಗೆ ಸಂಘವು ಸದಾ ಸ್ಪಂದಿಸಲಿ ಎಂಬುದೇ ಹಾರೈಕೆಯಾಗಿದೆ ಎಂದರು.


ಸಂಘಟನೆಗಳಲ್ಲಿ ಶಿಸ್ತು, ಪ್ರಾಮಾಣಿಕತೆ, ಬದ್ಧತೆ, ದಕ್ಷತೆ ಮುಖ್ಯ-ಹೇಮನಾಥ ಶೆಟ್ಟಿ:
ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲಾ ಸಂಚಾಲಕ ಕಾವು ಹೇಮನಾಥ ಶೆಟ್ಟಿ ಮಾತನಾಡಿ, ಸಂಘಟನೆ ಮಾಡುವುದು ಮುಖ್ಯವಲ್ಲ, ಸಂಘಟನೆಯಲ್ಲಿನ ಸದಸ್ಯರಿಗೆ ಏನಾದರೂ ಸಮಸ್ಯೆಯಾದರೆ ಆವಾಗ ಸಂಘಟನೆ ಸಮಸ್ಯೆ ಪರಿಹಾರಕ್ಕೆ ಸಂಘಟನೆ ಮುಖ್ಯವಾಗುತ್ತದೆ. ಶಿಕ್ಷಕರ ಸಂಘಟನೆಗಳು ಬೆಳೆಯಬೇಕಾದರೆ ಅಂತಹ ಸಂಘಟನೆಗಳಲ್ಲಿ ಶಿಸ್ತು, ಪ್ರಾಮಾಣಿಕತೆ, ಬದ್ಧತೆ, ದಕ್ಷತೆ ಬಹಳ ಮುಖ್ಯವಾಗುತ್ತದೆ. ಪ್ರತಿ ಮನುಷ್ಯನ ಉನ್ನತಿಯಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಆದರೆ ಶಿಕ್ಷಕನಾದವರು ಶಿಕ್ಷಕ ವೃತ್ತಿಯನ್ನು ಬಿಟ್ಟು ರಾಜಕೀಯಕ್ಕೆ ಸೇರಬೇಕೇ ವಿನಹ ವೃತ್ತಿಯೊಂದಿಗೆ ಸಲ್ಲದು ಅಂದರು.


ಸಮಾಜದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸುವವರಿಗೆ ಪ್ರಶಸ್ತಿ ನೀಡಿ-ಚೌಡಪ್ಪ ಎಸ್:
ಬೆಂಗಳೂರು ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ರಾಜ್ಯಾಧ್ಯಕ್ಷ ಚೌಡಪ್ಪ ಎಸ್. ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆ ಪವಿತ್ರ ಕ್ಷೇತ್ರ. ಪ್ರಪಂಚಕ್ಕೆ ಮಾರ್ಗದರ್ಶನ ನೀಡುವ ಕ್ಷೇತ್ರ. ಶಿಕ್ಷಣ ಕಾಶಿಯಾಗಿರುವ ಈ ದಕ್ಷಿಣ ಕನ್ನಡ ಕ್ಷೇತ್ರವು ಕಲೆ, ಸಾಹಿತ್ಯ, ಸಂಗೀತ, ಕ್ರೀಡೆ, ಸಂಸ್ಕೃತಿಯನ್ನು ನಿರಂತರವಾಗಿ ಪ್ರೋತ್ಸಾಹಿಸಿದ ಕ್ಷೇತ್ರವಾಗಿದೆ. ನಾವು ಯಾವಾಗಲೂ ಕರ್ತವ್ಯ ನಿರ್ವಹಿಸುವ ಸಂಘಟನೆ ಹಾಗೂ ವೃತ್ತಿ ಮೇಲೆ ಗೌರವ ಇಡಬೇಕಾಗಿದೆ. ಸಮಾಜದಲ್ಲಿ ಕರ್ತವ್ಯ ನಿರ್ವಹಿಸುವ ಉತ್ತಮ ಶಿಕ್ಷಕ, ಶಿಕ್ಷಕೇತರರನ್ನು ಗುರುತಿಸಿ ಅವರುಗಳಿಗೆ ಪ್ರಶಸ್ತಿ ನೀಡುವುದು ಮುಖ್ಯವಾಗಿದೆ ಎಂದರು.


ಉತ್ತಮ ನಾಗರಿಕನಾಗಬೇಕಾದರೆ ಶಿಕ್ಷಣ ಬಹಳ ಮುಖ್ಯ-ಸದಾಶಿವ ಉಳ್ಳಾಲ್:
ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್ ಮಾತನಾಡಿ, ಓರ್ವ ಮನುಷ್ಯ ಸಮಾಜದಲ್ಲಿ ಉತ್ತಮ ನಾಗರಿಕನಾಗಬೇಕಾದರೆ ಅವನಿಗೆ ನೀಡುವ ಶಿಕ್ಷಣ ಅತೀ ಮುಖ್ಯವಾಗಿರುತ್ತದೆ ಎಂಬುದಕ್ಕೆ ನಾನೇ ಸಾಕ್ಷಿ. ನಾನೀಗ ಒಂದು ಶಿಕ್ಷಣ ಸಂಸ್ಥೆ ಮುನ್ನೆಡೆಸುತ್ತೇನೆಂದರೆ ಅದಕ್ಕೆ ಕಾರಣ ನನಗೆ ಕಲಿಸಿದ ಶಿಕ್ಷಕರ ಶಿಕ್ಷಣ ಹಾಗೂ ಪ್ರೇರಣೆ. ಮಕ್ಕಳ ವಿದ್ಯಾಭ್ಯಾಸ ಸಂದರ್ಭ ಯಾರೂ ಗುಂಪುಗಾರಿಕೆ ಮಾಡದೆ ವಿದ್ಯಾರ್ಥಿ ಶೈಕ್ಷಣಿಕ ಅಭಿವೃದ್ದಿಗೆ ಪ್ರೋತ್ಸಾಹ ನೀಡಿ ಎಂದರು.


ಅಧ್ಯಕ್ಷತೆ ವಹಿಸಿದ ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ದಕ್ಷಿಣ ಕನ್ನಡ ಜಿಲ್ಲೆಯ ಅಧ್ಯಕ್ಷ ಪ್ರೇಮನಾಥ ಶೆಟ್ಟಿ ಮಾತನಾಡಿ, ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಪ್ರತಿನಿಧಿಗಳು ಭಾಗವಹಿಸಿರುವುದು ಗೌರವ ತಂದಿದೆ. ನೂತನ ಸಂಘ ಕಟ್ಟಲು ತುಂಬಾ ಒತ್ತಡ ಹಾಕಿದರೂ ನನಗೆ ಅದು ಪ್ರಯೋಜನವಾಗಿಲ್ಲ. ಸದಸ್ಯರ ಒತ್ತಡಕ್ಕೆ ಮಣಿದು ನಾನು ಈ ಜವಾಬ್ದಾರಿಯನ್ನು ಹೊತ್ತುಕೊಂಡಿರುವೆ. ನಮ್ಮ ಸಂಘದಲ್ಲಿ ಅನುಭವವಿರುವವರು ತುಂಬಾ ಮಂದಿ ಇದ್ದಾರೆ. ಅವರ ಅನುಭವವನ್ನು ಪಡೆದುಕೊಂಡು ನಾನು ಮುಂದಿನ ದಿನಗಳಲ್ಲಿ ಸಂಘವನ್ನು ಮುನ್ನೆಡೆಸುತ್ತೇನೆ. ನಮ್ಮ ಸಂಘವು ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಕಾಲೇಜಿನ ಶಿಕ್ಷಕ ಹಾಗೂ ಬೋಧಕೇತರ ವೃಂದ ಒಳಗೊಂಡಿದ್ದು ಸಂಘದ ಸದಸ್ಯರ ಸಮಸ್ಯೆಗಳಿಗೆ ಸ್ಪಂದಿಸಲಿದ್ದೇನೆ ಜೊತೆಗೆ ಸರಕಾರವು ನಮ್ಮ ಸಮಸ್ಯೆಗಳಿಗೆ ಕಿವಿಗೊಡಲಿದೆ ಎಂದರು.


7 ಮಂದಿಗೆ ವಿದ್ಯಾರತ್ನ ಪ್ರಶಸ್ತಿ:
ಬೋಧಕರ ವಿಭಾಗದಲ್ಲಿ ಅತ್ತ್ಯುತ್ತಮ ಕರ್ತವ್ಯ ನಿರ್ವಹಿಸಿದ ಪುತ್ತೂರು ತಾಲೂಕಿನ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ವಿಷ್ಣುಪ್ರಸಾದ್ ಸಿ, ಮೂಡಬಿದ್ರೆ ತಾಲೂಕು ನೆಲ್ಲಿಕಾರು ಸರಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಣ ಶಿವಾನಂದ ಕಾಯ್ಕಿಣಿ, ಬೆಳ್ತಂಗಡಿ ತಾಲೂಕು ಗುರುವಾಯನಕೆರೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಉಮಾ ಎಸ್, ಮಂಗಳೂರು ಉತ್ತರ ಬಲ್ಮಠ ಸರಕಾರಿ ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಉಮೇಶ್ ಕೆ.ಆರ್, ಮಂಗಳೂರು ಉತ್ತರ ಎಡಪದವು ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯಗುರು ವಾಸು ಕೆ, ಬಂಟ್ವಾಳ ತಾಲೂಕಿನ ಮುಡಿಪು ಕುರ್ನಾಡು ಸರಕಾರಿ ಪದವಿ ಪೂರ್ವ ಕಾಲೇಜಿನ ಮುಖ್ಯಗುರು ಫ್ರಾನ್ಸಿಸ್ ಲ್ಯಾನ್ಸಿ ಮಿನೇಜಸ್, ಸುಳ್ಯ ತಾಲೂಕು ಅಜ್ಜಾವರ ಸರಕಾರಿ ಪ್ರೌಢಶಾಲೆಯ ಸಹ ಶಿಕ್ಷಕ ಚಂದ್ರಶೇಖರ್ ಭಟ್ ಎ.ಇವರುಗಳಿಗೆ ವಿದ್ಯಾರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.


7 ಮಂದಿಗೆ ಸೇವಾಭೂಷಣ ಪ್ರಶಸ್ತಿ:
ಬೋಧಕೇತರ ವಿಭಾಗದಲ್ಲಿ ಉತ್ತಮ ಕೆಲಸವನ್ನು ನಿರ್ವಹಿಸಿ ಜಿಲ್ಲಾಮಟ್ಟದ ಪ್ರಶಸ್ತಿಗೆ ಆಯ್ಕೆಯಾದ ನೌಕರರಾದ ಮಂಗಳೂರು ಉಪನಿರ್ದೇಶಕರ ಕಛೇರಿಯ ಲೆಕ್ಕಾಧೀಕ್ಷಕ ಬಾಲು ಡಿ.ಎಂ, ಪುತ್ತೂರು ತಾಲೂಕು ಉದನೆ ಸೈಂಟ್ ಅಂತೋನಿ ಪ್ರೌಢಶಾಲೆಯ ದ್ವಿತೀಯ ದರ್ಜೆ ಸಹಾಯಕ ರೇಗಪ್ಪ ಎಂ, ಮಂಗಳೂರು ದಕ್ಷಿಣ ಅಭ್ಯಾಸಿ ಪ್ರೌಢಶಾಲೆಯ ಪರಿಚಾರಕಿ ನಾಗವೇಣಿ ಜೋಗಿ, ಮೂಡಬಿದ್ರೆ ತಾಲೂಕು ಧರೆಗುಡ್ಡೆ ಸರಕಾರಿ ಪ್ರೌಢಶಾಲೆಯ ಪ್ರಥಮ ದರ್ಜೆ ಸಹಾಯಕ ಎ.ಶ್ರೀರಂಗ ಮಯ್ಯ, ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಪ್ರಥಮ ದರ್ಜೆ ಸಹಾಯಕ ಶ್ರೀಧರ್, ಸುಳ್ಯ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಪ್ರಥಮ ದರ್ಜೆ ಸಹಾಯಕ ಶಿವಪ್ರಸಾದ್ ಕೆ.ವಿ, ಬೆಳ್ತಂಗಡಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಅಟೆಂಡರ್ ವಾರಿಜ ಬಿ. ಇವರುಗಳಿಗೆ ಸೇವಾಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


16 ಮಂದಿಗೆ ಶೈಕ್ಷಣಿಕ ಸೇವಾ ಸಾಧಕ ಪ್ರಶಸ್ತಿ:
ಪುತ್ತೂರು ಹಾಗೂ ಕಡಬ ತಾಲೂಕಿನಲ್ಲಿ ಶೈಕ್ಷಣಿಕವಾಗಿ ಇಲಾಖೆಯ ವಿವಿಧ ಕಾರ್ಯಕ್ರಮಗಳನ್ನು ಅತ್ತ್ಯುತ್ತಮ ರೀತಿಯಲ್ಲಿ ಹಮ್ಮಿಕೊಂಡು ಮಾದರಿ ಸಂಸ್ಥೆಗಳಾಗಿ ರೂಪುಗೊಳ್ಳುವಲ್ಲಿ ಅವಿರತ ಶ್ರಮ ವಹಿಸಿದ ಸಂಸ್ಥೆಯ ಮುಖ್ಯಸ್ಥರು/ಸಂಚಾಲಕರುಗಳಾದ ವಿವೇಕಾನಂದ ವಿದ್ಯಾವರ್ಧಕ ಸಂಘದ ಡಾ.ಕೃಷ್ಣ ಭಟ್ ಕೊಂಕೋಡಿ, ಸುದಾನ ವಿದ್ಯಾ ಸಂಸ್ಥೆಗಳ ರೆ.ವಿಜಯ ಹಾರ್ವಿನ್, ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಗಳ ಕೆ.ಸೀತಾರಾಮ ರೈ ಸವಣೂರು, ನರಿಮೊಗರು ಸಾಂದೀಪನಿ ವಿದ್ಯಾಸಂಸ್ಥೆಗಳ ಜಯರಾಮ ಕೆದಿಲಾಯ, ಮರ್ದಾಳ ಬೆಥನಿ ಜೀವನ್‌ಜ್ಯೋತಿ ಸ್ಪೆಷಲ್ ಸ್ಕೂಲ್‌ನ ವಂ|ಸಕರಿಯಾಸ್ ನಂದಿಯಾಟ್, ಪುತ್ತೂರು ಬೆಥನಿ ಸಮೂಹ ಶಿಕ್ಷಣ ಸಂಸ್ಥೆಗಳ ಭಗಿನಿ ಪ್ರಶಾಂತಿ ಬಿ.ಎಸ್, ಕಾವು ಬುಶ್ರಾ ಆಂಗ್ಲ ಮಾಧ್ಯಮ ಶಾಲೆಯ ಅಬ್ದುಲ್ ಅಜೀಜ್, ಪುತ್ತೂರು ರಾಮಕೃಷ್ಣ ಪ್ರೌಢಶಾಲೆಯ ಹೇಮನಾಥ ಶೆಟ್ಟಿ ಕಾವು, ಪಂಜಳ ಶಾಂತಿಗಿರಿ ವಿದ್ಯಾನಿಕೇತನ ವಿದ್ಯಾಸಂಸ್ಥೆಯ ವಂ|ಬಿಜು ಕೆ.ಜೆ, ಕಾಣಿಯೂರು ಪ್ರಗತಿ ವಿದ್ಯಾಸಂಸ್ಥೆಗಳ ಜಯಸೂರ್ಯ ರೈ ಮಾದೋಡಿ, ಕಡಬ ಸೈಂಟ್ ಆನ್ಸ್ ವಿದ್ಯಾಸಂಸ್ಥೆಯ ವಂ|ಪೌಲ್ ಪ್ರಕಾಶ್, ಕಡಬ ಸರಸ್ವತಿ ವಿದ್ಯಾಲಯದ ವೆಂಕಟರಮಣ ರಾವ್ ಮಂಕುಡೆ, ಕಡಬ ಕಾನ್ನಾಯ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಮರಿಯ, ನರಿಮೊಗರು ಸರಸ್ವತಿ ವಿದ್ಯಾಲಯದ ಅವಿನಾಶ್ ಕೊಡಂಕೇರಿ, ಬೆಳಂದೂರು ಈಡನ್ ಗ್ಲೋಬಲ್ ಸ್ಕೂಲ್‌ನ ಬಶೀರ್, ಮುರ ಎಂಪಿಎಂ ವಿದ್ಯಾಲಯದ ಸಂಚಾಲಕ ಅಬೂಬಕ್ಕರ್ ಇವರುಗಳಿಗೆ ಶೈಕ್ಷಣಿಕ ಸೇವಾ ಸಾಧಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.


10 ಮಂದಿಗೆ ಶಿಕ್ಷಣ ರತ್ನ ಪ್ರಶಸ್ತಿ:
ಪುತ್ತೂರು ತಾಲೂಕಿನ ಶಿಕ್ಷಣ ಇಲಾಖೆಯಲ್ಲಿ ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಅತ್ಯುತ್ತಮವಾಗಿ ಕರ್ತವ್ಯ ನಿರ್ವಹಿಸಿ ಉತ್ತಮ ಶಿಕ್ಷಕರಾಗಿ ಗುರುತಿಸಲ್ಪಟ್ಟ ಶಿಕ್ಷಕರುಗಳಾದ ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿ(ಪ್ರೌಢಶಾಲಾ ವಿಭಾಗ)ನ ಉಪ ಪ್ರಾಂಶುಪಾಲ ವಸಂತ ಮೂಲ್ಯ, ಪುತ್ತೂರು ಸರಕಾರಿ ಮಹಿಳಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲೆ ಪ್ರಮೀಳಾ ಕ್ರಾಸ್ತಾ, ಕೊಂಬೆಟ್ಟು ಸರಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಸುಬ್ರಮಣ್ಯ ಎಂ, ಸವಣೂರು ಸರಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲಾ ವಿಭಾಗದ ಹಿರಿಯ ಪದವೀಧರ ಮುಖ್ಯಗುರು ರಘು ಬಿ ಆರ್, ಕಡಬ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯಗುರು ಶಾಂತಪ್ಪ ಗೌಡ, ಪಾಪೆಮಜಲು ಸರಕಾರಿ ಪ್ರೌಢಶಾಲೆಯ ಪ್ರವೀಣಾ ರೈ, ಕಾಂಚನ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಮೇಶ್ ಮಯ್ಯ, ಸರ್ವೆ ಹಿರಿಯ ಪ್ರಾಥಮಿಕ ಶಾಲೆಯ ಸತೀಶ್, ಕಡಬ ಕೊಣಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ, ಎಕ್ಕಡ್ಕ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯ ಸಹ ಶಿಕ್ಷಕ ರಾಕೇಶ್‌ರವರುಗಳಿಗೆ ಶಿಕ್ಷಣ ರತ್ನ ಪ್ರಶಸ್ತಿಯನ್ನು ನೀಡಿ ಅಭಿನಂದಿಸಲಾಯಿತು.


ಹಲವರಿಗೆ ಸನ್ಮಾನ:
ಕರ್ನಾಟಕ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ ಖಾದರ್, ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಬೆಂಗಳೂರು ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ರಾಜ್ಯಾಧ್ಯಕ್ಷ ಚೌಡಪ್ಪ ಎಸ್, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸದಾಶಿವ ಉಳ್ಳಾಲ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮಂಗಳೂರು ದಕ್ಷಿಣದ ಎಚ್.ಆರ್ ಈಶ್ವರ್, ಬಂಟ್ವಾಳದ ಶ್ರೀಮತಿ ಮಾಲತಿ, ಮೈಸೂರು ವಿಭಾಗದ ವಿಭಾಗೀಯ ಕಾರ್ಯಾಧ್ಯಕ್ಷೆ ಶ್ರೀಮತಿ ಸುಮಂಗಲ, ಬೆಂಗಳೂರು ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ರವಿಪ್ರಕಾಶ್ ಎಂ.ಎಸ್, ದಕ್ಷಿಣ ಕನ್ನಡ ಪದವಿ ಪೂರ್ವ ವಿಭಾಗ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೆಶಕರಾದ ಶ್ರೀಮತಿ ರಾಜೇಶ್ವರಿ ಎಚ್.,ಎಸ್, ಆನಂದ ಪಿ, ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಮಮತಾ ಬೆಟ್ಟಂಪಾಡಿ, ರಶ್ಮಿತಾ ಪುಣ್ಚಪ್ಪಾಡಿ, ಮರಿಯಾ ಸಾಮೆತ್ತಡ್ಕ, ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ದಯಾಮಣಿರವರುಗಳನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.


ಕರ್ನಾಟಕ ರಾಜ್ಯ ಶಾಲಾ ಶಿಕ್ಷಣ ಇಲಾಖಾ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ರಾಜಾರಾಮ್ ಶೆಟ್ಟಿ, ಸಂಘಟನಾ ಕಾರ್ಯದರ್ಶಿ ಶ್ರೀಮತಿ ಶರ್ಲಿ ಸುಮಾಲಿನಿ, ದಕ್ಷಿಣ ಕನ್ನಡ ಜಿಲ್ಲೆ ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷೆ ಶ್ರೀಮತಿ ಜಯಶ್ರೀ, ಕರ್ನಾಟಕ ರಾಜ್ಯ ಸರಕಾರಿ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಕರುಣಾಕರ, ದಕ್ಷಿಣ ಕನ್ನಡ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ದಿಲೀಪ್ ಕುಮಾರ್, ದಕ್ಷಿಣ ಕನ್ನಡ ಕರ್ನಾಟಕ ರಾಜ್ಯ ಆಂಗ್ಲ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಅಂಬರೀಶ್ ಲಮಾನಿ ಸಹಿತ ಹಲವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪವಿತ್ರಾ ರೂಪೇಶ್ ಮತ್ತು ಬಳಗ ನಾಡಗೀತೆ ಹಾಡಿದರು. ಪುತ್ತೂರು ತಾಲೂಕು ಘಟಕದ ಅಧ್ಯಕ್ಷ ಹಾಗೂ ಜಿಲ್ಲಾ ಘಟಕದ ಉಪಾಧ್ಯಕ್ಷ ಮಾಮಚ್ಚನ್ ಎಂ ಸ್ವಾಗತಿಸಿ, ರಾಜ್ಯ ಪರಿಷತ್ ಸದಸ್ಯ ಉದಯ ಎಸ್ ವಂದಿಸಿದರು. ರಾಜ್ಯ ಕಾರ್ಯದರ್ಶಿ ತ್ಯಾಗಮ್ ಹರೇಕಳ ಪ್ರಾಸ್ತಾವಿಕವಾಗಿವಾಗಿ ಮಾತನಾಡಿದರು. ಶಿಕ್ಷಕರಾದ ಸುಚಿತ್ರಾ, ರೋಸ್ಲಿನ್, ದೇವಕಿ ಜೆ.ಜೆ ಸನ್ಮಾನಿತರ ಪರಿಚಯ ಮಾಡಿದರು. ಜಿಲ್ಲಾ ಉಪಾಧ್ಯಕ್ಷೆ ಡಾ.ಮಂಜುಳಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

ಧರ್ಮ/ರಾಜಕೀಯ ಲೇಪವಿಲ್ಲದಿದ್ದರೆ ಭಾರತ ವಿಶ್ವಗುರು..
ಹೇಗೆ ಕಲ್ಲೊಂದನ್ನು ಶಿಲ್ಪಿಯು ಸುಂದರ ಮೂರ್ತಿಯನ್ನಾಗಿಸುತ್ತಾನೆಯೋ ಹಾಗೆಯೇ ಮಾನವನನ್ನು ಶಿಕ್ಷಕ ತನ್ನ ಶಿಕ್ಷಣದ ಮೂಲಕ ವಿದ್ಯಾರ್ಥಿಗಳ ತಪ್ಪುಗಳನ್ನು ತಿದ್ದಿ ತೀಡಿ ಸಮಾಜದಲ್ಲಿ ಉತ್ತಮ ವ್ಯಕ್ತಿಯನ್ನಾಗಿಸಿ ರೂಪಿಸಿಕೊಳ್ಳುವುದೇ ಶಿಕ್ಷಣವಾಗಿದೆ. ದೇಶ ವಿಶ್ವಗುರು ಆಗಬೇಕಾದರೆ ಧಾರ್ಮಿಕ ಕೇಂದ್ರಗಳಲ್ಲಿ ಧರ್ಮವನ್ನು ತರಬಾರದು ಹಾಗೆಯೇ ಸಮಾನ ಶಿಕ್ಷಣವನ್ನು ಕಲಿಸುವ ಶಾಲೆಗಳಲ್ಲಿ ರಾಜಕೀಯವನ್ನು ತರಬಾರದು. ನಮ್ಮ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟು ಮೆಡಿಕಲ್ ಕಾಲೇಜು, ಅದೆಷ್ಟೋ ಖಾಸಗಿ, ಸರಕಾರಿ ಶಾಲೆಗಳು ಇವೆ. ಶೀಘ್ರವೇ ಸರಕಾರ ೧೫ ಸಾವಿರ ಶಿಕ್ಷಕರನ್ನು ನೇಮಕ ಮಾಡುವಲ್ಲಿ ಮುಂದಾಗಿದೆ ಜೊತೆಗೆ ಪ್ರತಿ ಗ್ರಾಮದಲ್ಲಿ ಆಂಗ್ಲ ಮಾಧ್ಯಮವನ್ನೊಳಗೊಂಡ ಕೆಪಿಎಸ್ ಶಾಲೆಗಳನ್ನು ಆರಂಭಿಸಲು ಅನುಮೋದಿಸಿ ಶಿಕ್ಷಣ ಹಾಗೂ ಆರೋಗ್ಯಕ್ಕೆ ಒತ್ತು ನೀಡುತ್ತಿದೆ. ಸರಕಾರ ಶಿಕ್ಷಕರ ಪರ ಇದೆ. ಶಿಕ್ಷಕರ ಕುಂದುಕೊರತೆಗಳಿಗೆ ನಾನಾಗಲಿ ಹಾಗೂ ಸರಕಾರ ಸದಾ ಸ್ಪಂದಿಸುತ್ತಿದೆ.
-ಅಶೋಕ್ ರೈ, ಶಾಸಕರು, ಪುತ್ತೂರು

ಪದಪ್ರದಾನ..
ಈ ಸಂದರ್ಭದಲ್ಲಿ ಮುಂದಿನ ಐದು ವರ್ಷಗಳ ಜಿಲ್ಲಾ ಸಂಘದ ನೂತನ ಪದಾಧಿಕಾರಿಗಳು ಹಾಗೂ ಪುತ್ತೂರು, ಮಂಗಳೂರು ದಕ್ಷಿಣ, ಮಂಗಳೂರು ಉತ್ತರ, ಮೂಡಬಿದ್ರೆ, ಬೆಳ್ತಂಗಡಿ, ಸುಳ್ಯ ತಾಲೂಕಿನ ನೂತನ ಪದಾಧಿಕಾರಿಗಳ ಮತ್ತು ಸರ್ವ ಸದಸ್ಯರ ಪದಪ್ರದಾನ ನೆರವೇರಿತು. ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ನೌಕರರ ಸಂಘ ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ರವಿಪ್ರಕಾಶ್ ಎಂ.ಎಸ್‌ರವರು ಜಿಲ್ಲೆಯ ಹಾಗೂ ತಾಲೂಕುಗಳ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಪದಪ್ರದಾನ ನೆರವೇರಿಸಿದರು.

LEAVE A REPLY

Please enter your comment!
Please enter your name here