ಶೋಚನೀಯ ಬದುಕಿನಲ್ಲಿಯೂ ಅವಿವಾಹಿತ ಸಹೋದರಿಯರ ಗೋ ಪ್ರೀತಿ – ಸ್ವಚ್ಛಂದ ಪರಿಸರದಲ್ಲಿ ಮುಕ್ತವಾಗಿ ಬದುಕುತ್ತಿರುವ ದನ-ಕರುಗಳು

0

ಉಪ್ಪಿನಂಗಡಿ: ಗೋಳಿತೊಟ್ಟು ಗ್ರಾಮದ ತಿರ್ಲೆ ಎಂಬಲ್ಲಿನ ನಾಲ್ವರು ಅವಿವಾಹಿತ ಸಹೋದರಿಯರು ಸುಮಾರು 63ರಷ್ಟು ಮಲೆನಾಡು ಗಿಡ್ಡ ತಳಿಯ ದನಕರುಗಳನ್ನು ಸಾಕುತ್ತಿದ್ದು, ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಸ್ವಚ್ಚಂಧ ಪರಿಸರದಲ್ಲಿ ದನಕರುಗಳನ್ನು ಸಾಗಬಿಟ್ಟು ಸಾಕುವ ಮೂಲಕ ಅಳಿವಿನಂಚಿನಲ್ಲಿರುವ ದೇಶಿ ತಳಿಗಳ ಉಳಿವಿಗೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ.


ಕಳೆದ ಮಾರ್ಚ್ 11 ರಂದು ಪರಿಸರದ ಮಹಿಳೆಯೋರ್ವರು ತನ್ನ ತೋಟಕ್ಕೆ ಬಂದಿದ್ದ ಜಾನುವಾರುಗಳನ್ನು ಓಡಿಸಲೆಂದು ಹೋದಾಗ ಬಿದ್ದು ಸಾವನ್ನಪ್ಪಿದ್ದರೆಂಬ ಸುದ್ದಿಯ ಬೆನ್ನೇರಿ ಹೋದಾಗ ಅನಾವರಣಗೊಂಡಿರುವುದೇ ಈ ನಾಲ್ವರು ಅವಿವಾಹಿತ ಸಹೋದರಿಯರ ಶೋಚನೀಯ ಬದುಕು ಮತ್ತು ಅವರ ಗೋ ಪ್ರೇಮದ ಜೀವನ ಕಥನ. ಗೋಳಿತೊಟ್ಟು ಗ್ರಾಮದ ತಿರ್ಲೆ ಮರಂದೆ ಮನೆ ನಿವಾಸಿಗರಾದ ನಾಗಮ್ಮ ಗೌಡ, ಚೆನ್ನಮ್ಮ ಗೌಡ , ರೇವತಿ ಗೌಡ ಹಾಗೂ ಲಲಿತಾ ಗೌಡ ಎಂಬ ನಾಲ್ವರು ಸಹೋದರಿಯರು ಸುಮಾರು 5 ಎಕ್ರೆ ಪ್ರದೇಶದ ಕೃಷಿ ಭೂಮಿ ಹೊಂದಿದ್ದು, ಅದರಲ್ಲಿರುವ ಚಿಕ್ಕದಾದ ಮನೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಎಷ್ಟಿದೆಯಮ್ಮ ನಿಮ್ಮಲ್ಲಿ ದನಕರುಗಳು ಎಂದು ಅವರಲ್ಲಿ ಪ್ರಶ್ನಿಸಿದರೆ, ಹೆಚ್ಚಿಲ್ಲ ಸುಮಾರು 35 ಇರಬಹುದು ಎಂಬ ಉತ್ತರ ಅವರದ್ದು. ಊರಿನವರಲ್ಲಿ ಕೇಳಿದರೆ ನಮಗೆ ಲೆಕ್ಕಮಾಡುವಾಗ 63 ಸಿಕ್ಕಿದೆ. ಹೆಚ್ಚಲ್ಲದೆ ಕಡಿಮೆಯಲ್ಲ ಎನ್ನುತ್ತಾರೆ.


ಕಾಡು ಪ್ರಾಣಿಗಳಂತೆ ಮುಕ್ತ ಜೀವನ:
ಇಲ್ಲಿ ಜಾನುವಾರುಗಳಿಗೆಂದು ಪ್ರತ್ಯೇಕ ಹಟ್ಟಿಯಿಲ್ಲ. ಕಾಡಿನಲ್ಲಿನ ಪ್ರಾಣಿಗಳು ಕಾಡಿನೊಳಗೆ ಹೇಗೆ ಜೀವನ ನಡೆಸುತ್ತಿದೆಯೋ ಅಂತೆಯೇ ಇವರ ಜಾನುವಾರುಗಳು ಜೀವನ ನಡೆಸುತ್ತಿರುತ್ತದೆ. ಇವರ ಗದ್ದೆ, ತೋಟ, ರಬ್ಬರ್ ತೋಟದ ವಿಶಾಲ ಪರಿಸರದಲ್ಲಿ ಮನಸೋ ಇಚ್ಚೆ ಅಲೆದಾಡುತ್ತಿರುವ ದನಕರುಗಳು ಮನಸ್ಸಾದರೆ ಮನೆಯೊಳಗೆ ಬಂದು ಮಲಗುತ್ತದೆ. ಮನಸ್ಸಾದರೆ ತಂಡೋಪತಂಡವಾಗಿ ಊರಿನ ಪರಿಸರದಲ್ಲಿ ಮೇಯಲು ಹೋಗುತ್ತದೆ. ಕಾಂಪೌಂಡ್, ಬೇಲಿ ಇದ್ಯಾವುದೂ ಇದಕ್ಕೆ ಅಡೆತಡೆ ಎನಿಸದು. ತೋಟಕ್ಕೆ ನುಗ್ಗಬೇಕೆನಿಸಿದರೆ ತಡೆಬೇಲಿಯನ್ನು ಹಾರಿಯಾದರೂ ನುಗ್ಗುತ್ತದೆ. ಈ ಮಟ್ಟದ ಸ್ವಾತಂತ್ರ್ಯಭರಿತ ಜೀವನ ಇವುಗಳದ್ದು. ಗುಂಪಿನ ಹೋರಿಗಳು ಉಳಿದೆಲ್ಲಾ ದನಕರುಗಳ ರಕ್ಷಣೆಗೆ ಸದಾ ಸಿದ್ದ. ಗುಂಪಿನ ಯಾವುದಾದರೂ ಕರು ರಕ್ಷಣೆಗಾಗಿ ಕೂಗಿತ್ತೆಂದರೆ ಹೋರಿಗಳು ತಕ್ಷಣ ಆಕ್ರಮಣಕಾರಿಯಾಗಿ ಮುಂದೆಜ್ಜೆ ಇರಿಸುತ್ತದೆ. ಈ ಕಾರಣಕ್ಕೆ ಇವರ ದನಕರುಗಳು ಬೇರಾವ ರಕ್ಷಣೆ ಇಲ್ಲದಿದ್ದರೂ ಸುರಕ್ಷಿತವಾಗಿದೆ.


ಹಾಲಿಗಾಗಿ ಸಾಕಿಲ್ಲ:
ಈ ಪ್ರಮಾಣದ ದನಕರುಗಳು ಮನೆಯಲ್ಲಿ ಇರುವಾಗ ದಿನಂಪ್ರತಿ ಎಷ್ಟು ಹಾಲು ಸಿಗುತ್ತದೆ ಎಂದು ಪ್ರಶ್ನಿಸಿದರೆ, ಮನೆಯ ಹಿರಿಯರಾದ ನಾಗಮ್ಮ ನೀಡಿದ ಉತ್ತರ ಗಮನಾರ್ಹವಾಗಿತ್ತು. ಮಳೆಗಾಲದ ಸಮಯದಲ್ಲಿ ನಾವು ಮೇವುಗಳನ್ನು ತಂದು ಹಾಕುತ್ತಿದ್ದೆವು. ಈಗ ಬೇಸಿಗೆ ಕಾಲ ನಮಗೆ ಮೇವುಗಳು ಸಿಗುತ್ತಿಲ್ಲ. ಹೀಗಾಗಿ ನೀರನ್ನಷ್ಟೇ ಇಡುತ್ತಿದ್ದೇವೆ. ಅವುಗಳೇ ಪರಿಸರದಲ್ಲಿ ಮೇಯಲು ಹೋಗಿ ತಿಂದುಂಡು ಬರುತ್ತಿವೆ. ನಾವು ಮೇವು ಕೊಡದೆ ಇರುವಾಗ ಅದರ ಹಾಲನ್ನು ತೆಗೆಯುವುದು ಸರಿಯಾ? ಗುಂಪಿನ ಕರುಗಳಿಗೆಲ್ಲಾ ಅದರ ಹಾಲು ಬೇಕಾಗುತ್ತದೆ . ಹೀಗಾಗಿ ಬೇಸಗೆ ಪ್ರಾರಂಭವಾದಂದಿನಿಂದ ನಾವು ಹಾಲು ತೆಗೆಯುತ್ತಿಲ್ಲ ಇಷ್ಟೊಂದು ದನಕರುಗಳ ಸೆಗಣಿ , ಮೂತ್ರದಿಂದ ಭೂಮಿಯ ಫಲವತ್ತತೆ ಹೆಚ್ಚಾಗುತ್ತಿದೆಯಲ್ವ ? ಅದೇ ನಮಗೆ ಈಗ ಸಿಗುತ್ತಿರುವ ಪ್ರಯೋಜನ ಎಂದು ಉತ್ತರಿಸಿದ್ದಾರೆ.


ಮನೆಯ ಬೆಡ್ ರೂಂ ಕೂಡಾ ಜಾನುವಾರುಗಳಿಗೆ ಮೀಸಲು:
ಸಹೋದರಿಯರ ಮನೆಯನ್ನು ವೀಕ್ಷಿಸಲು ಮುಂದಾದಾಗ ಮನೆಯ ಬೆಡ್ ರೂಂ ನಲ್ಲಿ ನೆಲಕ್ಕೆ ಸಿಮೆಂಟ್ ಸಾರಣೆಯಾಗದೆ ಗುಂಡಿಗಳು ಬಿದ್ದಿರುವುದನ್ನು ಕಂಡು ಇದೇಕೆ ಹೀಗೆಂದು ಪ್ರಶ್ನಿಸಿದರೆ. ಅದರಲ್ಲಿ ಕರುಗಳು ಬಂದು ಮಲಗುತ್ತವೆ. ಮನೆಯ ಬಚ್ಚಲು ಮನೆಯಲ್ಲಿಯೂ ದನಕರುಗಳು ಬಂದು ಮಲಗುತ್ತಿರುವುದರಿಂದ ನಾವು ಮನೆಯ ಹೊರಗಡೆ ಸ್ನಾನ ಮಾಡುತ್ತೇವೆ. ಅಡುಗೆ ಮನೆಯಲ್ಲಿ ಸಿದ್ಧಪಡಿಸಿದ ಆಹಾರವನ್ನು ದನಕರುಗಳು ಬಂದು ಸೇವಿಸಿದರೂ ಇವರ ಆಕ್ಷೇಪವಿಲ್ಲ. ಮನೆ ಮಕ್ಕಳಂತೆ ದನಕರುಗಳನ್ನು ಸಾಕುತ್ತಿದ್ದಾರೆ ಇವರು.


ಆಸರೆಯಾಗಿದ್ದವರು ತೀರಿಹೋದ ಬಳಿಕ ಬದುಕು ಹೀಗಾಯಿತು:
ಅವರ ಈಗಿನ ಬದುಕಿನ ಬಗ್ಗೆ ಪ್ರಶ್ನಿಸಿದಾಗ, ಮನೆಯಲ್ಲಿ ನಮಗೆ ಇಬ್ಬರು ಸಹೋದರರಿದ್ದರು. ಅನಾರೋಗ್ಯ ಪೀಡಿತರಾಗಿ ಅವರು ಸಾವನ್ನಪ್ಪಿದರು. ನಮ್ಮ ಹೆತ್ತವರು ತೀರಿದ ಬಳಿಕ ನಮಗೆ ಮುಂದೆ ನಿಲ್ಲುವವರು ಯಾರೂ ಇಲ್ಲದೆ ನಮ್ಮ ಬದುಕು ಹೀಗಾಯಿತು ಎಂದು ನೆಲವನ್ನು ನೋಡುತ್ತಾ ಈ ಸಹೋದರಿಯರು ನುಡಿಯುತ್ತಾರೆ.
ಒಂದೆಡೆ ದೇಶಿ ತಳಿಯನ್ನು ಉಳಿಸುವ ಇವರ ಪ್ರಯತ್ನ. ಗೋ ಪ್ರೀತಿ ಮಾದರಿಯಾದರೂ, ಎಲ್ಲೆಂದರಲ್ಲಿ ಸುತ್ತಲು ಬಿಡಲು ಅವಕಾಶ ಕೊಟ್ಟಿದ್ದರಿಂದಾಗಿ ಪರಿಸರದ ಕೃಷಿಕರಿಗೆ ಮಾತ್ರ ಸಂಕಟ ತಂದಿದೆ.

ಸ್ಥಳೀಯಾಡಳಿತ ಯೋಜನೆ ರೂಪಿಸಬೇಕಾಗಿದೆ:
ಸ್ಥಳಕ್ಕೆ ಭೇಟಿ ನೀಡಿ ಸಹೋದರಿಯರೊಂದಿಗೆ ಮಾತುಕತೆಯನ್ನಾಡಿದ ವಿಶ್ವಹಿಂದೂ ಪರಿಷತ್ ಮುಂದಾಳು ನವೀನ್ ನೆರಿಯಾರವರು ಮಾಧ್ಯಮದೊಂದಿಗೆ ಮಾತನಾಡಿ, ಈ ಮನೆಯ ಸಹೋದರಿಯರು ದನಕರುಗಳೊಂದಿಗೆ ಬದುಕು ಬೆಸೆದುಕೊಂಡಿದ್ದಾರೆ. ಮುಕ್ತವಾಗಿ ಬದುಕುತ್ತಿರುವ ದನಕರುಗಳನ್ನು ಕಟ್ಟಿಹಾಕಿ ಸಾಕುವುದು ತ್ರಾಸದಾಯಕ. ಇವರಿಗೆ ಬೇಕಾದಷ್ಟು ಭೂಮಿಯಿದೆ. ಇರುವ ಭೂಮಿಯಲ್ಲೇ ಸ್ಥಳಿಯಾಡಳಿತ ಮುತುವರ್ಜಿ ವಹಿಸಿ ದನಕರುಗಳು ಮುಕ್ತವಾಗಿ ಬದುಕುವಂತೆ ಹಾಗೂ ಹೊರಗಡೆ ಹೋಗದಂತೆ ಯೋಜನೆ ರೂಪಿಸಿದರೆ ಪ್ರಯೋಜನಕಾರಿಯಾಗಬಹುದೆಂದು ಅಭಿಪ್ರಾಯಿಸಿದರು.

ನಾಗರಿಕ ಸಮಾಜ ಕಣ್ತೆರೆಯಬೇಕಾಗಿದೆ:
ನಮ್ಮಲ್ಲಿ ಎಲ್ಲಾ ಸಂಘಟನೆಗಳಿಗಿಂತಲೂ ಜಾತಿ ಸಂಘಟನೆಗಳು ಬಲವಾಗಿದೆ. ಆದರೆ ಸಮಾಜದ ಕಟ್ಟಕಡೆಯ ಇಂತಹ ಅಗತ್ಯವುಳ್ಳ ಜನರ ಸಹಾಯಕ್ಕೆ ಯಾವ ಸಂಘಟನೆಗಳೂ ಕೆಲಸ ಮಾಡುವುದಿಲ್ಲ ಎಂದಾಗ ನೋವು ಕಾಡುತ್ತದೆ. ಅಪ್ಪ ಅಮ್ಮನನ್ನು ಕಳೆದುಕೊಂಡ ಬಳಿಕ ಈ ಸಹೋದರಿಯರಿಗೆ ಯಾರೊಬ್ಬರೂ ಸಹಾಯಕ್ಕೆ ಮುಂದಾಗದಿರುವುದು ನಾಗರಿಕ ಸಮಾಜಕ್ಕೆ ಶೋಭೆಯಲ್ಲ. ಖಂಡಿತವಾಗಿಯೂ ಇಂತಹ ವಿಚಾರದಲ್ಲಿ ನಾಗರಿಕ ಸಮಾಜ ಕಣ್ತೆರೆಯಬೇಕಾಗಿದೆ. ಸಹಕಾರದ ಮನೋಭಾವ ಬೆಳೆಸಬೇಕಾಗಿದೆ ಎಂದು ಯುವ ಸಾಮಾಜಿಕ ಕಾರ್ಯಕರ್ತ ಮೂಲಚಂದ್ರ ಕಾಂಚನ ಅಭಿಪ್ರಾಯಿಸಿದ್ದಾರೆ.

LEAVE A REPLY

Please enter your comment!
Please enter your name here