







ಪುತ್ತೂರು:ಕಟ್ಟಡ ನಿರ್ಮಾಣ ಮಾಡುವ ವೇಳೆ ಭೂ ಅತಿಕ್ರಮಣ ಮಾಡಿ, ಸಾರ್ವಜನಿಕ ಕೆರೆಯನ್ನು ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಿ ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ದೂರು(ಪಿಐಎಲ್)ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಮಾ.17ರಂದು ಪುತ್ತೂರು ನಗರಸಭೆ ಮತ್ತು ಸರ್ವೆ ಇಲಾಖೆಯಿಂದ ಜಂಟಿ ಸರ್ವೆ ನಡೆದಿದೆ.ಎಫ್ ಎಮ್ಬಿ ನಕ್ಷೆ ಪ್ರಕಾರ ಕೆರೆ ಇತ್ತೆನ್ನಲಾದ ಸ್ಥಳವನ್ನು ಗುರುತಿಸಿ ಮಾರ್ಕ್ ಮಾಡಲಾಗಿದೆ.


ಪುತ್ತೂರು ಹೋಬಳಿಯ ಪುತ್ತೂರು ಕಸಬಾ ಗ್ರಾಮದ ಸ.ನಂ.133/9 ಎ ೦.೦2 ಎಕ್ರೆ ಸರಕಾರಿ ಸ್ಥಳದಲ್ಲಿ ಇದ್ದ ಬಾವಿ ಅನಾದಿ ಕಾಲದಿಂದ ಸ್ಥಳೀಯ ದೇವಿಯ ಆರಾಧನೆಗೆ ನೀರು ಮತ್ತು ಈ ಭಾಗದಲ್ಲಿ ಪುತ್ತೂರು ಮಹಾಲಿಂಗೇಶ್ವರ ದೇವರ ಪೇಟೆ ಸವಾರಿಗೆ ಬೇಕಾದ ನೀರು ಮತ್ತು ಸ್ಥಳೀಯ ವಾಸಿಗಳ ಗೃಹೋಪಯೋಗಿ ಮತ್ತು ದನಕರು ಇತ್ಯಾದಿಗಳಿಗೆ ಅನಾದಿ ಕಾಲದಿಂದ ಸುಮಾರು 800 ವರ್ಷಗಳ ಹಿಂದಿನಿಂದ ಉಪಯೋಗಿಸುತ್ತಿದ್ದ, ಆಯತಾಕಾರದ ಕಲ್ಲು ಘಟನೆ ಮತ್ತು 15 ಅಡಿ ಅಗಲದ ಕಲ್ಲಿನ ತಡೆಗೋಡೆ ಇದ್ದ ಮತ್ತು ಸುಮಾರು 900 ಚದರ ಅಡಿಯ ಆಯತಾಕಾರದ ಕೆರೆ ಇದ್ದು ಸದ್ರಿ ಕೆರೆಗೆ ತಾಗಿಕೊಂಡ ಸ್ಥಳವಾದ ಸ.ನ. 133/9ಬಿ-೦.೦6 ಎಕ್ರೆ ಸ್ಥಳವನ್ನು ಸ್ಥಳೀಯ ನಿವಾಸಿ ಅರುಣಾ ಕೋಂ ದಿನಕರ ರೈ ಎಂಬವರು ಕ್ರಯಪತ್ರದ ಮೂಲಕ ಖರೀದಿ ಮಾಡಿ ಮೇಲಿನ ಬಾವಿಯನ್ನು ಮುಚ್ಚಿ ಸಮತ್ತಟ್ಟು ಮಾಡಿ,ತಾವು ಖರೀದಿ ಮಾಡಿದ ಸ್ಥಳವನ್ನು ತೋರಿಸಿ ನಗರಸಭೆಯಿಂದ ಬಿಲ್ಡಿಂಗ್ ನಕ್ಷೆ ಪರವಾನಿಗೆ ಮಾಡಿಸಿ ಭಾಗಶಃ ಕೆರೆಯ ಜಾಗವನ್ನು ಒತ್ತುವರಿ ಮಾಡಿ ಮತ್ತು ಬಿಲ್ಡಿಂಗ್ ಕಾಮಗಾರಿ ಮುಗಿದ ಬಳಿಕ ಉಳಿಕೆ ಸರಕಾರಿ ಬಾವಿ ಇದ್ದ ಸ್ಥಳವನ್ನು ಪಾರ್ಕಿಂಗ್ ಮಾಡುವ ಇರಾದೆ ಇಟ್ಟುಕೊಂಡು ವಾಣಿಜ್ಯ ಮಳಿಗೆಯನ್ನು ನಿರ್ಮಿಸುತ್ತಿದ್ದಾರೆ ಎಂದು ಆರೋಪಿಸಿ ನೆಹರುನಗರ ನಿವಾಸಿ ಸಂತೋಷ್ ಶೆಟ್ಟಿ ಎಂಬವರು ಪುತ್ತೂರು ತಹಸೀಲ್ದಾರ್, ಸಹಾಯಕ ಕಮಿಷನರ್, ತಹಸೀಲ್ದಾರ್, ನಗರಸಭೆ, ನಗರಯೋಜನಾ ಪ್ರಾಧಿಕಾರ ಮತ್ತು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದರಲ್ಲದೆ,ಹೈಕೋರ್ಟ್ನಲ್ಲಿ ಪಿಐಎಲ್ ಕೂಡಾ ದಾಖಲಿಸಿದ್ದರು.ಅದರಂತೆ ನಗರಸಭೆ ಮತ್ತು ಸರ್ವೆ ಇಲಾಖೆಗೆ ಹೈಕೋರ್ಟ್ ನೋಟಿಸ್ ಮಾಡಿತ್ತು.ಮಾ.17ರಂದು ನಗರಸಭೆಯಿಂದ ಇಂಜಿನಿಯರ್ ಕೃಷ್ಣಮೂರ್ತಿ ರೆಡ್ಡಿ ಮತ್ತು ಸರ್ವೆ ಇಲಾಖೆ ಅಧಿಕಾರಿಗಳು ಬಂದು ಕಟ್ಟಡದ ಮಾಲಕರಾಗಿರುವ ಅರುಣಾ ದಿನಕರ್ ರೈ ಮತ್ತು ದಿನಕರ್ ರೈ ಹಾಗು ದೂರದಾರ ಸಂತೋಷ್ ಶೆಟ್ಟಿ ಅವರ ಪರ ವಕೀಲರಾದ ಚಿದಾನಂದ ರೈ ಕೋಡಿಂಬಾಡಿಯವರ ಉಪಸ್ಥಿತಿಯಲ್ಲಿ ಸರ್ವೆ ಕಾರ್ಯ ನಡೆಯಿತು.



ಅಳತೆಯ ವೇಳೆ ಅರುಣಾ ದಿನಕರ್ ರೈ ಅವರ 6 ಸೆಂಟ್ಸ್ ಜಾಗವನ್ನು ಗುರುತಿಸಿ,ಉಳಿದ ಭಾಗದಲ್ಲಿದ್ದ 2 ಸೆಂಟ್ಸ್ ಜಾಗಕ್ಕೆ ಸರ್ವೆ ಇಲಾಖೆಯಿಂದ ಕಬ್ಬಿಣದ ರಾಡ್ ಹಾಕಿ ಮಾರ್ಕ್ ಮಾಡಿದ್ದಾರೆ.ಅರುಣಾ ಕೋಂ ದಿನಕರ್ ರೈಯವರು ಕ್ರಯವರಿಸಿದ ಸ್ಥಳ ಮತ್ತು ಲಗ್ತಾ ಕೆರೆ ಇರುವ ಸ್ಥಳ ಒಂದೇ ಆವರಣದೊಳಗೆ ಕಂಡು ಬಂದಿದ್ದು ಕೆರೆ ಇರುವ ಸ್ಥಳದಲ್ಲಿ ಅರುಣಾ ಕೋಂ ದಿನಕರ್ ರೈ ಯವರು ಜಲ್ಲಿ ಕಲ್ಲು ಹೊಯಿಗೆ ಇತ್ಯಾದಿ ಶೇಖರಣೆ ಮಾಡಿದ್ದು ಮುಂದೆ ಇದನ್ನು ಪಾರ್ಕಿಂಗ್ ಉಪಯೋಗ ಮಾಡುವ ಹುನ್ನಾರ ಇದೆ ಎಂದು ನಾವು ಹೈಕೋರ್ಟ್ನಲ್ಲಿ ಪಿ.ಐ.ಎಲ್ ಸಲ್ಲಿಸಿದ್ದೇವೆ.ಇವತ್ತು ಜಂಟಿ ಸರ್ವೆಯಿಂದ ಹಿಂದೆ ಕೆರೆ ಇದ್ದ 2 ಸೆಂಟ್ಸ್ ಜಾಗ ದೊರಕಿದೆ ಮತ್ತು ಅರುಣಾ ಕೋಂ ದಿನಕರ್ ರೈಯವರು 2 ಸೆಂಟ್ಸ್ ಸ್ಥಳವನ್ನು ಬಿಟ್ಟುಕೊಡಲು ಒಪ್ಪಿಗೆ ಇದೆ ಎಂದು ನಗರಸಭೆಗೆ ಮಹಜರು ಬರೆದು ಕೊಟ್ಟಿರುತ್ತಾರೆ
-ಸಂತೋಷ್ ಶೆಟ್ಟಿ, ದೂರುದಾರರು
ಬಾವಿಯಿದ್ದ ಜಾಗ ಒತ್ತುವರಿ ಮಾಡಿಲ್ಲ
ಕಟ್ಟಡದ ಬಳಿಯ 2 ಸೆಂಟ್ಸ್ ಜಾಗ ಒತ್ತುವರಿಯಾಗಿಲ್ಲ.ಸರಕಾರಿ ಬಾವಿ ಇತ್ತು.ಅದು ನಗರಸಭೆಗೆ ಹಸ್ತಾಂತರ ಆಗಿದೆ ಎಂದು ಸರ್ವೆಯಲ್ಲಿ ಹೇಳಿದ್ದಾರೆ.ಜಾಗ ಒತ್ತುವರಿ ಮಾಡಿದ್ದಾರೆಂಬ ಆರೋಪ ಇರುವವರು ಅವರ ಜಾಗದಲ್ಲಿ ಮಾತ್ರ ಕಟ್ಟಡ ನಿರ್ಮಾಣ ಮಾಡುತ್ತಿದ್ದಾರೆ ಹೊರತು ಬಾವಿ ಇದ್ದ ಜಾಗ ಒತ್ತುವರಿ ಮಾಡಿಲ್ಲ ಎಂದು ಸರ್ವೆ ಪ್ರಕಾರ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ತಿಳಿಸಿದ್ದಾರೆ
-ವಿದ್ಯಾ ಎಂ ಕಾಳೆ, ಪೌರಾಯುಕ್ತರು, ನಗರಸಭೆ ಪುತ್ತೂರು
ನಮ್ಮ ಜಾಗದಲ್ಲಿ ಯಾವುದೇ ಬಾವಿಯಿಲ್ಲ-ಒತ್ತುವರಿಯೂ ಇಲ್ಲ
ಇವತ್ತು ಅಳತೆಯ ಸಮಯ ಯಾವುದೇ ಜಾಗದ ಒತ್ತುವರಿ ಕಂಡು ಬಂದಿಲ್ಲ.ನಮ್ಮ 6 ಸೆಂಟ್ಸ್ ಜಾಗದಲ್ಲಿ ಯಾವುದೇ ಕೆರೆ/ಬಾವಿ ಇರುವುದಿಲ್ಲ.ನಾವು ಯಾವುದೇ ಜಾಗ ಒತ್ತುವರಿ ಮಾಡಿಲ್ಲ.ಅನಧಿಕೃತ ಕಟ್ಟಡವನ್ನೂ ಕಟ್ಟಿಲ್ಲ ಎನ್ನುವುದು ದೃಢಪಟ್ಟಿದೆ.ಅಳತೆಯಿಂದ ನಮಗೆ ಒಂದು ಮೀಟರ್ ಜಾಗ ಹೆಚ್ಚುವರಿಯಾಗಿಯೇ ದೊರೆತಿದೆ.2 ಸೆಂಟ್ಸ್ ಜಾಗದ ಮಾಲೀಕರ ಕುಟುಂಬಸ್ಥರಿದ್ದಾರೆ.ಆದರೆ ಅವರು ಅವರ ಹೆಸರಲ್ಲಿ ಆರ್ಟಿಸಿ ಮಾಡಿಸಿಕೊಳ್ಳದ ಕಾರಣ ಅದು ಸರಕಾರ ಅಂತ ಆದದ್ದು.ನಮ್ಮಲ್ಲಿ ಎಲ್ಲ ದಾಖಲೆಗಳೂ ಇವೆ
-ಎ.ದಿನಕರ ರೈ,ವಕೀಲರು










