







ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ… ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ.. ಯುಗಾದಿ ಅಂದಾಕ್ಷಣ ನೆನಪಾಗುವುದು ಕೇವಲ ಕ್ಯಾಲೆಂಡರ್ ಬದಲಾವಣೆ ಅಲ್ಲ, ಪ್ರಕೃತಿಯಲ್ಲಿನ ಹೊಸ ಚೈತನ್ಯ… ಯುಗ ಎಂದರೆ ‘ಕಾಲ’, ಆದಿ ಎಂದರೆ ‘ಆರಂಭ’. ಅಂದರೆ ಹೊಸ ಹಾದಿಯ ಆರಂಭವೆಂದು ಹೇಳಬಹುದು. ಯುಗದ ಪ್ರಾರಂಭ ಎಂಬ ಅರ್ಥವನ್ನು ಹೊಂದಿರುವ ಯುಗಾದಿಯು ಪ್ರಕೃತಿಯಲ್ಲಿ ಹೊಸತನದ ಸಂಕೇತವಾಗಿ ನಿಲ್ಲುತ್ತದೆ. ‘ಯುಗಾದಿ’ ಬಂದಿತೆಂದರೆ ಎಲ್ಲೆಡೆಯಲ್ಲಿ ಸಂತೋಷ, ಸಂಭ್ರಮ ತುಂಬಿ ತುಳುಕುತ್ತಿರುತ್ತದೆ. ಚೈತ್ರಮಾಸದಿಂದ ವಸಂತ ಋತು ಶುರುವಾಗುತ್ತದೆ. ವನಗಳೆಲ್ಲ ಚಿಗುರಿ ಹೂ ಬಿಟ್ಟು ಯುಗಾದಿಯ ಹರ್ಷವನ್ನು ಬೀರುತ್ತದೆ. ಎಲ್ಲಿ ನೋಡಿದರೂ ಮರಗಿಡಬಳ್ಳಿಗಳು ಹಸಿರಾಗಿ ನಳನಳಿಸುತ್ತಿರುತ್ತದೆ.


ಭಾರತೀಯ ಸಂಸ್ಕೃತಿಯಲ್ಲಿ ಯುಗಾದಿ ಹಬ್ಬಕ್ಕೆ ಅಗ್ರಮಾನ್ಯ ಸ್ಥಾನವಿದೆ. ಹೊಸ ವರ್ಷದ ಆರಂಭವನ್ನು ಸೂಚಿಸುವ ಈ ಹಬ್ಬವನ್ನು ಕರ್ನಾಟಕ, ಆಂಧ್ರ, ತಮಿಳುನಾಡು ಸೇರಿದಂತೆ ಹಲವು ರಾಜ್ಯಗಳಲ್ಲಿ ವಿಭಿನ್ನತೆಯಿಂದ ಆಚರಿಸಲಾಗುತ್ತದೆ. ಹಳೆಯ ಚಿಗುರನ್ನು ಬಿಟ್ಟು, ಹಳೆಯ ಎಲೆಗಳನ್ನು ಉದುರಿಸಿ ಹೊಸ ಚಿಗುರಿನಿಂದ ಪ್ರಕೃತಿ ಕಂಗೊಳಿಸುವ ವಸಂತ ಋತುವಿನಲ್ಲಿ ಯುಗಾದಿ ಬರುತ್ತದೆ. ಮರಗಿಡಗಳು ಚಿಗುರಿ, ಹೂವು ಅರಳಿ, ಕೋಗಿಲೆ ಇಂಪಾದ ಗಾಯನದಿಂದ ವಾತಾವರಣವನ್ನು ತುಂಬುತ್ತದೆ. ಇದು ಸಮೃದ್ಧಿ ಮತ್ತು ಯಶಸ್ಸಿನ ಸಂಕೇತವಾಗಿದೆ.



ಬೇವು-ಬೆಲ್ಲ ನೋವು-ನಲಿವನ್ನು ಸಂಕೇತಿಸುತ್ತದೆ
ಕಹಿ ಬೇವು ಮತ್ತು ಸಿಹಿ ಬೆಲ್ಲವು ಜೀವನದ ದ್ವಂದ್ವ ಸ್ವಭಾವವನ್ನು ಸಂಕೇತಿಸುತ್ತದೆ. ಸಂತೋಷ ಮತ್ತು ದುಃಖ, ಸವಾಲುಗಳು ಮತ್ತು ಯಶಸ್ಸು ಎಲ್ಲವನ್ನು ಬೇವು ಬೆಲ್ಲದಂತೆ ಸಮಾನವಾಗಿ ಸ್ವೀಕರಿಸಬೇಕು. ಜೀವನವು ಕಹಿ ಮತ್ತು ಸಿಹಿ ಅನುಭವಗಳ ಮಿಶ್ರಣವಾಗಿದ್ದು, ಈ ಎರಡನ್ನೂ ಸಮಾನವಾಗಿ ಸ್ವೀಕರಿಸುವುದರಿಂದ ಜೀವನವು ಸಂತೋಷದಿಂದ ಸಾಗುತ್ತದೆ ಎಂಬುದನ್ನು ಸಂಕೇತಿಸುತ್ತದೆ. ಬೇವು-ಬೆಲ್ಲವು ಸುಖ-ದುಃಖ, ರಾತ್ರಿ-ಹಗಲು ಇವುಗಳ ಸಂಕೇತಗಳಾಗಿವೆ. ಮಾನವರ ಬದುಕಿನಲ್ಲಿ ಸುಖ-ದುಃಖಗಳು ಅವಿಭಾಜ್ಯ ಅಂಶಗಳು. ಇವೆಲ್ಲವುಗಳೊಂದಿಗೆ ಸಮತೋಲನ ಕಾಯ್ದುಕೊಂಡೇ ಮನುಷ್ಯ ಬದುಕಬೇಕು. ಜೀವನ ಕಷ್ಟ-ಸುಖ, ನೋವು-ನಲಿವುಗಳ ಸಮ್ಮಿಶ್ರಣವಾಗಿದೆ. ಇವೆರಡೂ ಒಟ್ಟಿಗೆ ಇರುತ್ತವೆ.

ಬೇವು ಬೆಲ್ಲದ ಸೇವನೆಯ ವೈಜ್ಞಾನಿಕ ಮಹತ್ವವೇನು?
ಯುಗಾದಿ ಹಬ್ಬದ ದಿನದಿಂದ ವಸಂತ ಕಾಲ ಆರಂಭವಾಗುತ್ತದೆ. ಈ ಸಮಯದಲ್ಲಿ ಸೂರ್ಯನ ಪ್ರಖರತೆ ಹೆಚ್ಚಾದಂತೆ ವಾತಾವರಣವು ಒಣಗಿ, ಬಿಸಿಲಿನಿಂದ ಕೂಡಿ, ಬೆಚ್ಚಗಾಗುತ್ತದೆ ಮತ್ತು ಸೂರ್ಯನ ಶಾಖದ ಪ್ರಭಾವದಿಂದಾಗಿ ದೇಹದಲ್ಲಿ ಪಿತ್ತರದ ಅಂಶವೂ ಹೆಚ್ಚಾಗುತ್ತದೆ. ಇದರಿಂದಾಗಿ ಹೊಟ್ಟೆ ಸಂಬಂಧಿ ಕಾಯಿಲೆಗಳು, ಬಾಯಿ ಹುಣ್ಣು, ವಾಂತಿ, ಎದೆಯುರಿ, ಅತಿಯಾದ ಬೆವರುವಿಕೆ, ತುರಿಕೆ ಇತ್ಯಾದಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಈ ಕಾಯಿಲೆಗಳನ್ನು ತಡೆಗಟ್ಟಲು, ಅತಿಯಾದ ಪಿತ್ತರಸದ ಅಂಶವನ್ನು ಕಡಿಮೆ ಮಾಡಲು ಮತ್ತು ರೋಧನಿರೋಧಕ ಶಕ್ತಿಯನ್ನು ಹೆಚ್ಚಿಸಲು ಯುಗಾದಿ ಹಬ್ಬದಂದು ಬೇವು ಬೆಲ್ಲವನ್ನು ಸೇವನೆ ಮಾಡಲಾಗುತ್ತದೆ.
ಯುಗಾದಿಯು ಕೇವಲ ಆಚರಣೆಯಲ್ಲ, ಅದು ಪ್ರಕೃತಿಯಲ್ಲಿನ ಬದಲಾವಣೆಯನ್ನು ಸ್ವಾಗತಿಸುವ ಮತ್ತು ಹೊಸ ನಿರ್ಧಾರಗಳೊಂದಿಗೆ ಹೊಸ ಜೀವನವನ್ನು ಆರಂಭಿಸುವ ಮಹತ್ತರದ ಘಟ್ಟವಾಗಿದೆ. ಯುಗಾದಿಯು ಹೊಸ ಭರವಸೆ ಮತ್ತು ಉತ್ಸಾಹವನ್ನು ನೀಡುವ ಹಬ್ಬ. ಹಳೆಯ ಕಹಿ ನೆನಪುಗಳನ್ನು ಮರೆತು, ಹೊಸ ನಿರ್ಧಾರಗಳೊಂದಿಗೆ ಮುನ್ನಡೆಯಲು ಇದು ಪ್ರೇರಣೆ ನೀಡುತ್ತದೆ. ಪ್ರಕೃತಿ ಮತ್ತು ಮಾನವನ ನಡುವಿನ ಸಂಬಂಧವನ್ನು ಗಟ್ಟಿಗೊಳಿಸುವ ಯುಗಾದಿ ಎಲ್ಲರ ಜೀವನದಲ್ಲಿ ಸುಖ-ಶಾಂತಿಯನ್ನು ತರಲಿ ಎಂಬುದು ನಮ್ಮ ಹಾರೈಕೆ….
ಯುಗಾದಿ ಹಬ್ಬದ ಹಾರ್ದಿಕ ಶುಭಾಶಯಗಳು










