







ನೈಋತ್ಯ ಮಾನ್ಸೂನ್ ಮುಕ್ತಾಯಗೊಂಡಿದ್ದರೂ ದೇಶದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕಳವಳಕಾರಿಯಾಗಿ ಕುಸಿದಿದೆ. ಸೆಂಟ್ರಲ್ ವಾಟರ್ ಕಮಿಷನ್ ಅ:15 ರಂದು ಬಿಡುಗಡೆ ಮಾಡಿರುವ ಇತ್ತೀಚಿನ ದತ್ತಾಂಶವು ದೇಶದ ಜಲ ಭದ್ರತೆಯ ಬಗ್ಗೆ ಗಂಭೀರ ಎಚ್ಚರಿಕೆಯನ್ನು ನೀಡಿದೆ. ದೇಶದ 178 ಪ್ರಮುಖ ಜಲಾಶಯಗಳ ಒಟ್ಟು ಸಂಗ್ರಹ ಸಾಮರ್ಥ್ಯದಲ್ಲಿ ಶೇ. 31.42 ರಷ್ಟು ಭಾಗ ಇನ್ನೂ ಖಾಲಿಯಿದ್ದು, ದಕ್ಷಿಣ ಭಾರತದ ರಾಜ್ಯಗಳಲ್ಲಿ ಈ ಬಿಕ್ಕಟ್ಟು ತೀವ್ರರೂಪ ತಾಳಿದೆ.


178 ಜಲಾಶಯಗಳಲ್ಲಿ ಒಟ್ಟು 126.717 ಬಿಲಿಯನ್ ಘನ ಮೀಟರ್ ನೀರು ಮಾತ್ರ ಲಭ್ಯವಿದ್ದು, ಇದು ಒಟ್ಟು ಸಂಗ್ರಹ ಸಾಮರ್ಥ್ಯದ ಶೇ. 68.58 ರಷ್ಟಿದೆ. ಈ ವರ್ಷದ ನೀರು ಸಂಗ್ರಹವು ಕಳೆದ ವರ್ಷದ ಇದೇ ಅವಧಿಗಿಂತ 41.193 ಬಿಸಿಎಂ ಅಥವಾ ಶೇ. 24.53 ರಷ್ಟು ಕಡಿಮೆಯಾಗಿದೆ. ಕಳೆದ ಹತ್ತು ವರ್ಷಗಳ ಸರಾಸರಿ ಸಂಗ್ರಹ ಮಟ್ಟಕ್ಕಿಂತ ಇದು ಶೇ. 16.44 ರಷ್ಟು ಕಡಿಮೆಯಾಗಿದೆ.



ದಕ್ಷಿಣ ಭಾರತದ ಅಣೆಕಟ್ಟುಗಳಲ್ಲಿ ಪರಿಸ್ಥಿತಿ ಅತ್ಯಂತ ಆತಂಕಕಾರಿಯಾಗಿದೆ. ಕೇರಳದ ಇಡುಕ್ಕಿ ಜಲಾಶಯದಲ್ಲಿ ನೀರಿನ ಮಟ್ಟ ಕೇವಲ ಶೇ. 10.62 ಕ್ಕೆ ಕುಸಿದಿದೆ. ತಮಿಳುನಾಡಿನ ಮೇಟ್ಟೂರಿನಲ್ಲಿ ಶೇ. 32.49, ಆಂಧ್ರಪ್ರದೇಶದ ಶ್ರೀಶೈಲಂನಲ್ಲಿ ಶೇ. 33.64 ಮತ್ತು ಸೋಮಶಿಲಾದಲ್ಲಿ ಶೇ. 22.05 ರಷ್ಟು ಮಾತ್ರ ನೀರಿದೆ. ಜಲಾನಯನ ಪ್ರದೇಶಗಳ ಅಂಕಿ ಅಂಶಗಳೂ ಕೂಡ ಪರಿಸ್ಥಿತಿಯ ಗಂಭೀರತೆಯನ್ನು ಸಾರುತ್ತಿದ್ದು, ಕಾವೇರಿ ಜಲಾನಯನ ಪ್ರದೇಶವು ಸಾಮಾನ್ಯ ಮಟ್ಟಕ್ಕಿಂತ ಶೇ. 60.50 ಮತ್ತು ಪೆನ್ನಾರ್ ಜಲಾನಯನ ಪ್ರದೇಶವು ಶೇ. 72.32 ರಷ್ಟು ಕೆಳಮಟ್ಟದಲ್ಲಿದೆ.
ಮುಂಗಾರು ಮಳೆಯ ವಿತರಣೆಯಲ್ಲಿ ಉಂಟಾದ ವ್ಯತ್ಯಾಸ ಹಾಗೂ ಕೆಲವು ಪ್ರದೇಶಗಳಲ್ಲಿ ಮಳೆಯ ಕೊರತೆಯೇ ಜಲಾಶಯಗಳು ಭರ್ತಿಯಾಗದಿರಲು ಪ್ರಮುಖ ಕಾರಣ. ಜಾಗತಿಕ ತಾಪಮಾನ ಏರಿಕೆಯಿಂದಾಗಿ ಮಳೆಯ ಸ್ವರೂಪದಲ್ಲಿ ಬದಲಾವಣೆಯಾಗಿದ್ದು, ಹಠಾತ್ ಅತಿವೃಷ್ಟಿ ಅಥವಾ ದೀರ್ಘಾವಧಿಯ ಅನಾವೃಷ್ಟಿ ಕಾಣಿಸಿಕೊಳ್ಳುತ್ತಿದೆ. ಮಳೆಯಾಶ್ರಿತ ಮತ್ತು ಅಂತರ್ಜಲದ ಮೇಲಿನ ಅತಿಯಾದ ಅವಲಂಬನೆ ಹಾಗೂ ನೀರಿನ ಅಧಿಕ ಬಳಕೆ ಬೇಡುವ ಬೆಳೆಗಳ ಪದ್ಧತಿ ಜಲಮೂಲಗಳ ಮೇಲೆ ಭಾರೀ ಒತ್ತಡ ಹೇರುತ್ತಿದೆ. ಜಲಾನಯನ ಪ್ರದೇಶಗಳಲ್ಲಿ ಕಾಡಿನ ನಾಶ, ಕಾಂಕ್ರೀಟೀಕರಣ ಮತ್ತು ಮಳೆ ನೀರು ಇಂಗುವ ವ್ಯವಸ್ಥೆಗಳು ಹದಗೆಟ್ಟಿರುವುದು ಮೇಲ್ಮೈ ನೀರು ಜಲಾಶಯಗಳಿಗೆ ಹರಿದುಬರುವುದನ್ನು ತಡೆಯುತ್ತಿದೆ.
ಜಲಾಶಯಗಳಲ್ಲಿನ ಈ ನೀರಿನ ಕೊರತೆಯು ಮುಂಬರುವ ತಿಂಗಳುಗಳಲ್ಲಿ ಅತ್ಯಂತ ಗಂಭೀರ ಪರಿಣಾಮಗಳನ್ನು ಬೀರಲಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ತೀವ್ರ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗುವ ಅಪಾಯವಿದೆ. ಹಿಂಗಾರು ಮತ್ತು ಬೇಸಿಗೆ ಬೆಳೆಗಳಿಗೆ ನೀರು ಸಿಗದೆ ಅನ್ನದಾತರು ಸಂಕಷ್ಟಕ್ಕೀಡಾಗಲಿದ್ದಾರೆ. ಜಲವಿದ್ಯುತ್ ಯೋಜನೆಗಳಿಗೆ ಸಂಬಂಧಿಸಿದ ಪ್ರಮುಖ ಜಲಾಶಯಗಳಲ್ಲಿ ನೀರಿನ ಮಟ್ಟ ಕುಸಿದಿರುವುದರಿಂದ ವಿದ್ಯುತ್ ಉತ್ಪಾದನೆ ಕುಂಠಿತಗೊಂಡು ಪವರ್ ಕಟ್ ಸಮಸ್ಯೆ ತಲೆದೋರಬಹುದು.

ನೀರಿನ ಬಿಕ್ಕಟ್ಟನ್ನು ಸಮರ್ಥವಾಗಿ ಎದುರಿಸಲು ಸರ್ಕಾರ, ಆಡಳಿತ ವ್ಯವಸ್ಥೆ ಮತ್ತು ಸಾರ್ವಜನಿಕರು ಒಟ್ಟಾಗಿ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ.ಪ್ರತಿಯೊಂದು ಮನೆ, ಕಚೇರಿ ಮತ್ತು ಸಾರ್ವಜನಿಕ ಕಟ್ಟಡಗಳಲ್ಲಿ ಮಳೆನೀರು ಕೊಯ್ಲು ಪದ್ಧತಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು.
ಕೃಷಿಯಲ್ಲಿ ಸಾಂಪ್ರದಾಯಿಕ ನೀರಾವರಿ ವಿಧಾನಗಳನ್ನು ಬಿಟ್ಟು ಹನಿ ನೀರಾವರಿ ಮತ್ತು ತುಂತುರು ನೀರಾವರಿ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಶೇ. 50 ರಷ್ಟು ನೀರನ್ನು ಉಳಿಸಬಹುದು. ಕೆರೆಗಳು, ಕಟ್ಟೆಗಳು ಮತ್ತು ಕಲ್ಯಾಣಿಗಳನ್ನು ಹೂಳು ತೆಗೆದು ಅಭಿವೃದ್ಧಿಪಡಿಸುವುದರ ಮೂಲಕ ಅಂತರ್ಜಲ ಮಟ್ಟವನ್ನು ಹೆಚ್ಚಿಸಬೇಕು. ನಾಗರಿಕರು ದಿನನಿತ್ಯದ ಬಳಕೆಯಲ್ಲಿ ನೀರನ್ನು ಪೋಲು ಮಾಡುವುದನ್ನು ತಡೆದು ಮಿತಬಳಕೆ ಮಾಡಬೇಕು. ಕೈಗಾರಿಕೆಗಳು ನೀರಿನ ಮರುಬಳಕೆ ತಂತ್ರಜ್ಞಾನವನ್ನು ಕಡ್ಡಾಯವಾಗಿ ಬಳಸಬೇಕು.
ನೀರು ಜೀವದ ಸೆಲೆ ಇಂದಿನ ಜಲ ಸಂರಕ್ಷಣೆಯೇ ನಾಳಿನ ನಮ್ಮ ಅಸ್ತಿತ್ವದ ಭದ್ರತೆ. ಎಚ್ಚೆತ್ತುಕೊಳ್ಳದಿದ್ದರೆ ಭವಿಷ್ಯದಲ್ಲಿ ಬಕೆಟ್ ನಲ್ಲಿ ಹಣ ಕೊಟ್ಟು ಲೋಟದಲ್ಲಿ ನೀರು ತರಬೇಕಾದ, ನೀರಿಗಾಗಿ ಯುದ್ದ ಮಾಡಬೇಕಾದ ಪರಿಸ್ಥಿತಿ ಎದುರಿಸಬೇಕಾದಿತು.
ಜಲಾಶಯಗಳ ನೀರಿನ ಕೊರತೆಯು ಮುಂಬರುವ ದಿನಗಳಲ್ಲಿ ಭೀಕರ ಜಲಸಂಕಟಕ್ಕೆ ಮುನ್ಸೂಚನೆಯಾಗಿದೆ. ಈ ಹಿನ್ನೆಲೆಯಲ್ಲಿ, ಇಸ್ರೇಲ್ ಮತ್ತು ಗಲ್ಫ್ ದೇಶಗಳ ಮಾದರಿಯಲ್ಲಿ ಭಾರತವೂ ಕಡಲ ನೀರನ್ನು ಸಿಹಿನೀರಾಗಿಸುವ ಯೋಜನೆಗಳಿಗೆ ಆದ್ಯತೆ ನೀಡಬೇಕು. ನೀರಿಲ್ಲದೆ ಪರದಾಡುವ ಪರಿಸ್ಥಿತಿ ಬರುವ ಮುನ್ನವೇ ಸಮುದ್ರದ ಅಪಾರ ನೀರನ್ನು ತಂತ್ರಜ್ಞಾನದ ಮೂಲಕ ನಂದನವನವಾಗಿಸುವ ದೂರದೃಷ್ಟಿಯ ನೀತಿಯನ್ನು ಸರ್ಕಾರಗಳು ಜಾರಿಗೆ ತರಬೇಕಿದೆ.ಇಂದಿನ ನೀರಿನ ಕೊರತೆಗೆ ಕಡಲ ನೀರೇ ನಾಳಿನ ಅಮೃತ ಸಿಂಧುವಾಗಬಲ್ಲದು.
ಭಾರತವು ಸಾವಿರಾರು ಕಿಲೋಮೀಟರ್ಗಳಷ್ಟು ವಿಶಾಲವಾದ ಕಡಲ ತೀರವನ್ನು ಹೊಂದಿದ್ದರೂ, ಈ ಅಪಾರ ಜಲಸಂಪನ್ಮೂಲವನ್ನು ಕುಡಿಯುವ ನೀರು ಮತ್ತು ಕೃಷಿ ಉದ್ದೇಶಗಳಿಗಾಗಿ ಬಳಸಿಕೊಳ್ಳುವಲ್ಲಿ ಇನ್ನೂ ಹಿಂದುಳಿದಿದೆ. ಪ್ರಸ್ತುತ ಜಲಾಶಯಗಳ ಒಣಗುತ್ತಿರುವ ಪರಿಸ್ಥಿತಿಗೆ ಕಡಲ ನೀರನ್ನು ಸಿಹಿನೀರಾಗಿಸುವ ಯೋಜನೆಗಳೇ ಭವಿಷ್ಯದ ಭದ್ರತೆಯಾಗಬಲ್ಲವು.
ಸಮುದ್ರದ ಉಪ್ಪುನೀರನ್ನು ಕುಡಿಯಲು ಮತ್ತು ಬಳಕೆಗೆ ಯೋಗ್ಯವಾದ ಸಿಹಿನೀರನ್ನಾಗಿ ಮಾಡಲು ಜಾಗತಿಕ ಮಟ್ಟದಲ್ಲಿ ಎರಡು ಪ್ರಮುಖ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಲಾಗುತ್ತದೆ.
ರಿವರ್ಸ್ ಆಸ್ಮೋಸಿಸ್, ಇದು ಅತ್ಯಂತ ಜನಪ್ರಿಯ ಮತ್ತು ಪರಿಣಾಮಕಾರಿ ವಿಧಾನವಾಗಿದೆ. ಅತಿ ಹೆಚ್ಚಿನ ಒತ್ತಡವನ್ನು ಬಳಸಿ, ಸಮುದ್ರದ ನೀರಿನಲ್ಲಿರುವ ಉಪ್ಪು ಮತ್ತು ಇತರೆ ಕಲ್ಮಶಗಳನ್ನು ವಿಶೇಷ ಪೊರೆಗಳ ಮೂಲಕ ಶೋಧಿಸಿ ಸಿಹಿನೀರನ್ನು ಬೇರ್ಪಡಿಸಲಾಗುತ್ತದೆ. ಜಗತ್ತಿನಾದ್ಯಂತ ಹೆಚ್ಚಿನ ಡಿಸಾಲಿನೇಷನ್ ಘಟಕಗಳು ಈ ತಂತ್ರಜ್ಞಾನವನ್ನೇ ಅವಲಂಬಿಸಿವೆ.
ಶಾಖ ಆಧಾರಿತ ಡಿಸಾಲಿನೇಷನ್,ಈ ವಿಧಾನದಲ್ಲಿ ಸಮುದ್ರದ ನೀರನ್ನು ಕಾಯಿಸಿ ಆವಿಯನ್ನಾಗಿ ಮಾಡಿ, ನಂತರ ಆ ಆವಿಯನ್ನು ತಣ್ಣಗಾಗಿಸುವ ಮೂಲಕ ಶುದ್ಧವಾದ ಸಿಹಿನೀರನ್ನ ಪಡೆಯಲಾಗುತ್ತದೆ. ಸೌರಶಕ್ತಿಯನ್ನು ಬಳಸಿ ಈ ಪ್ರಕ್ರಿಯೆ ನಡೆಸಿದರೆ ವೆಚ್ಚವನ್ನು ಗಣನೀಯವಾಗಿ ತಗ್ಗಿಸಬಹುದು. ಮಳೆ ಹಾಗೂ ಜಲಾಶಯಗಳ ನೀರಿನ ಲಭ್ಯತೆಯು ಹವಾಮಾನ ವೈಪರೀತ್ಯ ಮತ್ತು ಮುಂಗಾರಿನ ವ್ಯತ್ಯಾಸಕ್ಕೆ ಒಳಪಟ್ಟಿರುತ್ತದೆ. ಆದರೆ ಸಮುದ್ರದ ನೀರಿನ ಮೂಲ ಎಂದಿಗೂ ಬತ್ತುವುದಿಲ್ಲ. ಚೆನ್ನೈ, ಮುಂಬೈ, ವಿಶಾಖಪಟ್ಟಣಂ ನಂತಹ ದೊಡ್ಡ ಕರಾವಳಿ ನಗರಗಳಲ್ಲಿ ಈಗಾಗಲೇ ಡಿಸಾಲಿನೇಷನ್ ಘಟಕಗಳು ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿವೆ. ಸಾಮರ್ಥ್ಯವನ್ನು ಹೆಚ್ಚಿಸುವುದರ ಜೊತೆಗೆ ಒಳನಾಡಿನ ಬರಪೀಡಿತ ಪ್ರದೇಶಗಳಿಗೂ ಪೈಪ್ಲೈನ್ ಮೂಲಕ ನೀರು ಪೂರೈಸುವ ವಿಸ್ತೃತ ಯೋಜನೆಗಳನ್ನು ರೂಪಿಸಬಹುದು.ಬೋರ್ವೆಲ್ ಹಾಗೂ ನದಿ ನೀರಿನ ಮೇಲೆ ಮಾತ್ರ ಅವಲಂಬಿತವಾಗಿರುವ ಕೈಗಾರಿಕೆಗಳು ಮತ್ತು ಮಹಾನಗರಗಳಿಗೆ ಈ ಸಿಹಿನೀರು ಪೂರೈಸಿದರೆ, ನೈಸರ್ಗಿಕ ಅಂತರ್ಜಲ ಮಟ್ಟವನ್ನು ಸಂರಕ್ಷಿಸಬಹುದು.

ಈ ಯೋಜನೆಗಳಿಗೆ ಹಲವು ಸಕಾರಾತ್ಮಕ ಅಂಶಗಳಿದ್ದರೂ, ಕೆಲವು ಪ್ರಮುಖ ಸವಾಲುಗಳನ್ನು ಎದುರಿಸಬೇಕಾಗುತ್ತದೆ.ಸಮುದ್ರ ನೀರನ್ನು ಶುದ್ಧೀಕರಿಸಲು ಹೆಚ್ಚಿನ ಪ್ರಮಾಣದ ವಿದ್ಯುತ್ ಬೇಕಾಗುತ್ತದೆ. ಇದಕ್ಕೆ ಪರಿಹಾರವಾಗಿ ಸೌರಶಕ್ತಿ ಮತ್ತು ಪವನ ಶಕ್ತಿ ಆಧರಿಸಿದ ಡಿಸಾಲಿನೇಷನ್ ಘಟಕಗಳನ್ನು ಸ್ಥಾಪಿಸಬೇಕು. ಶುದ್ಧೀಕರಣದ ನಂತರ ಉಳಿಯುವ ಅತಿ ಉಪ್ಪಿನ ನೀರನ್ನು ಸಮುದ್ರಕ್ಕೆ ಮರುಬಿಡುವಾಗ ಪರಿಸರಕ್ಕೆ ಹಾನಿಯಾಗದಂತೆ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಬೇಕು. ಸರ್ಕಾರದ ಬಜೆಟ್ ಮೇಲಿನ ಹೊರೆ ತಗ್ಗಿಸಲು ಜನಪ್ರಿಯ ಉಚಿತ ಯೋಜನೆಗಳಲ್ಲಿ ಕೆಲವನ್ನು ಕೈ ಬಿಟ್ಟು ಖಾಸಗಿ ಹೂಡಿಕೆದಾರರ ಸಹಯೋಗದೊಂದಿಗೆ ಬೃಹತ್ ಮತ್ತು ಮಧ್ಯಮ ಗಾತ್ರದ ಘಟಕಗಳನ್ನು ನಿರ್ಮಿಸುವುದು ಸೂಕ್ತ.










